ನಾನು ವಸಂತನಗರದ ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದಾಗ ಮಧ್ಯಾಹ್ನ ನಮ್ಮ ಊಟ ಮುಗಿಸಿ ಇನ್ನು ಉಳಿದ ಅರ್ಧ ಗಂಟೆ ಒಂದು ಮರದ ಕೆಳಗೆ ನಿಂತು ಹರಟೆ ಹೊಡೆಯುವುದು ನಮ್ಮ ದಿನನಿತ್ಯದ ಹವ್ಯಾಸವಾಗಿತ್ತು. ಅಲ್ಲಿಗೆ ಹೆಚ್ಚು ಕಡಿಮೆ ಅರ್ಧ ಕಚೇರಿಯೇ ಬಂದು ಸೇರುತಿತ್ತು. ಸುಮಾರು ನಾಲ್ಕೈದು ದಿನದಿಂದ ನಮ್ಮ ಟೀಮಿನ ‘ಸುನಿಲ್’ ಕಾಣಿಸುತ್ತಿರಲಿಲ್ಲ. ಆಶ್ಚರ್ಯವೆಂದರೆ ಆಫೀಸಿಗೆ ಬಂದು ಕೂಡ ನಮ್ಮ ಜೊತೆ ಬರದೇ ಆಫೀಸಿನ ಕೆಳಗೇ ನಿಂತು ಕಾಲಕಳೆಯುತಿದ್ದ. ಇದರ ಬಗ್ಗೆ ಜೊತೆಗಿರುವವರನ್ನು ವಿಚಾರಿಸಿದಾಗ ಯಾರ ಮೇಲೋ ಮುನಿಸಿಕೊಂಡಿರಬೇಕು ಎಂದು ಸಂಶಯಪಟ್ಟರೆ ಹೊರತು ನಿಜ ಸಂಗತಿ ಗೊತ್ತಾಗಲಿಲ್ಲ. ನಾನು ನೇರವಾಗಿ ಅವನ ಕೂಡ ವಿಚಾರಿಸಿದಾಗ ಗೊತ್ತಾದ ವಿಷಯವೇನೆಂದರೆ ಒಂದು ಕಾಗೆ ಇವನಿದ್ದಲ್ಲಿ ಬಂದು ನೇರವಾಗಿ ಇವನ ತಲೆಯ ಮೇಲೆ ದಾಳಿ ಮಾಡುತಿತ್ತು. ಅದರ ಭಯದಿಂದ ನಾವು ಇದ್ದ ಕಡೆ ಇವನು ಬರುತ್ತಿರಲಿಲ್ಲ.

ನಾವು ಸುತ್ತಲೂ ಪರಿಶೀಲಿಸಿದಾಗ ನಮ್ಮ ಕಣ್ಣಿಗೆ ಯಾವ ಕಾಗೆಯು ಕಾಣಿಸಲಿಲ್ಲ, ಅವನ ಮನ ಒಲಿಸಿ ಧೈರ್ಯ ಕೊಟ್ಟು ನಮ್ಮ ಜೊತೆಗೆ ಕರೆದುಕೊಂಡು ಹೋಗಿ ಒಂದೈದು ನಿಮಿಷವೂ ಹಾಗಿರಲಿಲ್ಲ ಒಂದು ಕಾಗೆ ನಾವು ನಿಂತಿದ್ದ ಮರದ ಮೇಲೆ ಕುಳಿತು ಕಾವ್ ಕಾವ್ ಎನ್ನತೊಡಗಿತು. ಅದನ್ನು ನೋಡಿದೊಡನೆ ಭಯಭೀತನಾದ ನಮ್ಮ ಸುನಿಲ್ ನಾನು ಹೇಳಲಿಲ್ಲವಾ ಎಂದು ಗೊಣಗಿ ಆಫೀಸಿಗೆ ಓಡಿಹೋದ. ಆದರೆ ಆ ಕಾಗೆ ಅಲ್ಲಿ ಯಾರಿಗೇನು ಮಾಡಲಿಲ್ಲ. ಎರಡು ಮೂರು ದಿನದ ನಂತರ ಅವನಾಗೆ ನಾವಿದ್ದಲ್ಲಿ ಬಂದ. ಆಶ್ಚರ್ಯವೆಂದರೆ ಆ ಕಾಗೆ ಕೂಡ ನಾವು ನಿಂತಿದ್ದ ಮರದ ಮೇಲೆ ಬಂದು ಕುಳಿತುಕೊಂಡಿತು ಆದರೆ ಈ ಬಾರಿ ಇವನು ಓಡಿಹೋಗದೆ ದೈರ್ಯದಿಂದ ನಿಂತಿದ್ದು ನೋಡಿ ನಮಗೆ ಆಶ್ಚರ್ಯ! ಎರಡು ದಿನದ ಹಿಂದೆ ಶನಿದೇವರ ಗುಡಿಯಲ್ಲಿ ಇವನ ಅತ್ತೆ ಒಂದು ಸಣ್ಣ ಹೋಮವನ್ನೇ ನೆಡೆಸಿದ್ದು ಹತ್ತಾರು ಜನಕ್ಕೆ ಅನ್ನಸಂತರ್ಪಣೆ ಕೂಡ ನೆಡಿಸಿದ್ದು ತಿಳಿಸಿದ. ಅದು ಏನೇ ಇರಲಿ ನನಗೆ ತಿಳಿದ ವಿಷಯವೇನೆಂದರೆ ದಿನಕ್ಕೆ ನಾಲ್ಕೈದು ಬಾರಿ ಸಿಗರೇಟು ಸೇದಲು ಕೆಳಕ್ಕಿಳಿಯುತಿದ್ದ ಇವನು ಒಂದು ದಿನ ಮರದ ಕೆಳಗೆ ಅಕಸ್ಮಾತಾಗಿ ಬಿದ್ದಿದ ಒಂದು ಪುಟ್ಟ ಕಾಗೆ ಮರಿಯ ಬಳಿ ಹೋಗಿದ್ದೆ ಇವನ ಮೇಲಿನ ಕಾಗೆ ದಾಳಿಗೆ ಕಾರಣವಾಗಿತ್ತು. ಮರಿಯ ರಕ್ಷಣೆಗೆ ಆ ಕಾಗೆ ಇವನನ್ನು ಅಲೆಲ್ಲಾ ಅಟ್ಟಾಡಿಸಿಬಿಟ್ಟಿತ್ತು.
ಕಾಗೆಗಳಷ್ಟೇ ಅಲ್ಲ ಜಗತ್ತಿನ ಸರ್ವ ಜೀವಿಗಳು ತಮ್ಮ ಸಂತತಿಯನ್ನು ಉಳಿಸಲು ಮಾರಣಾಂತಿಕ ದಾಳಿಗಳನ್ನೇ ಮಾಡುತ್ತವೆ ಅದು ಮನುಷ್ಯರಾಗಿರಲಿ ಅಥವಾ ಇನಿತ್ತರೆ ಜೀವಿಗಳಿರಲಿ.

ಕಾಗೆಗಳು ‘ಕೋರ್ವಿಡೇ’ ಎಂಬ ಪಕ್ಷಿ ಸಂತತಿಗೆ ಸೇರಿದ್ದು ಸಾಮಾನ್ಯವಾಗಿ ಮದ್ಯ ಏಷ್ಯಾದಲ್ಲಿ ಬೆಳೆದು ನಂತರ ಉತ್ತರ ಅಮೇರಿಕಾ, ಆಫ್ರಿಕಾ, ಯುರೋಪ್, ಆಸ್ಟ್ರೇಲಿಯಾ ಮತ್ತಿತರ ಖಂಡಗಳಲ್ಲಿ ಬೆಳವಣಿಗೆ ಹೊಂದಿರುತ್ತವೆ. ಕೋರ್ವಿಡೇ (ಎಂದರೆ ಕಪ್ಪು ಪಕ್ಷಿಯ ಜಾತಿ ) ಸಂಕುಲದ ಪಕ್ಷಿಗಳು ಅಪಾರ ಸಂಕುಲದಿಂದ, ಅಧುನಿಕ ಜಯ್ಸ್ (ಚಿಲಿಪಿಲಿಗುಟ್ಟುವ), ದೊಂಬ ಕಾಗೆಗಳು ಮತ್ತು ದೊಡ್ಡ ಕಪ್ಪು ಕೊರ್ವುಸ್ ಗಳು ಪ್ರಧಾನ ವರ್ಗ ವಾಗಿದ್ದು, ಇದೀಗ ಆಸ್ಟ್ರೇಲಿಯಾದಿಂದ ತೆರಳಿ ಏಷ್ಯಾದಲ್ಲಿ ತಮ್ಮ ವಿಕಸನ ಕಂಡು ಕೊಂಡಿವೆ. ‘ಕೊರ್ವುಸ್’ ಎಂಬ ವರ್ಗವು ಆಸ್ಟ್ರೇಲಿಯಾದಲ್ಲಿ ಮರುಪ್ರವೇಶ ಪಡೆದಿದ್ದು (ಇತ್ತೀಚೆಗಷ್ಟೆ) ಇದೇ ವರ್ಗವು ಐದು ಇತರ ತಳಿಗಳ ಹುಟ್ಟಿಗೆ ಕಾರಣವಾಗಿದ್ದು ಇದನ್ನು ಉಪ-ಜಾತಿ ಎನ್ನಬಹುದಾಗಿದೆ. ಕಾಗೆಗಳಲ್ಲಿ ಕ್ರೋ (ಭಾರತದ ಕಾಗೆ), ರೂಕ್, ಜಾಕ್ ಡಾ, ಜೇ, ಮ್ಯಾಗ್ ಪೈ, ಟ್ರೀ ಪೈ ಇತ್ಯಾದಿ… ಒಟ್ಟು ನೂರಿಪ್ಪತ್ತು ಪ್ರಭೇದಗಳಿವೆ. ಪ್ರತಿ ಖಂಡದಲ್ಲಿ ಸುಮಾರು ಹತ್ತು ಪ್ರಭೇದಗಳು ಕಾಣಸಿಕ್ಕರೆ, ಇಥಿಯೋಪಿಯಾದ ಮೇಲ್ಭಾಗದ ಪಕ್ಷಿಗಳ ತಾಣ ರೆವೆನ್ ನಲ್ಲಿ ೪೦ಕ್ಕೂ ಹೆಚ್ಚಿನ ಪ್ರಬೇಧಗಳು ಇಲ್ಲಿ ವಾಸಿಸುತ್ತವೆ. ಈ ಸಂತತಿ ಅಂಟಾರ್ಟಿಕಾ ಬಿಟ್ಟರೆ ಇನ್ನಿತರೇ ಪ್ರದೇಶಗಳಲ್ಲಿ ತಮ್ಮ ವಂಶವಾಹಿನಿಗಳನ್ನು ಬೆಳೆಸಿವೆ.
ಕಾಗೆಗಳು ಕಪ್ಪು ಬಣ್ಣದ ಪ್ರಬೇದವಿದ್ದರೂ ಕರಿ / ಬಿಳಿ, ನೀಲಿ / ಹಸಿರು, ಅಥವಾ ಕಂದು ಬಣ್ಣದ ಕಾಗೆಗಳೂ ಇವೆ (ಉದಾ: ಮ್ಯಾಗ್ ಪೈ, ಟ್ರೀ ಪೈ). ಜೇ ಎನ್ನುವ ಪ್ರಭೇದದ ಬಣ್ಣ ನೀಲಿ / ಬಿಳಿ. ಬುದ್ದಿವಂತ ಪಕ್ಷಿಗಳಾದ ಇವು ಸಾಮಾನ್ಯವಾಗಿ ಜನವಸತಿ ಪ್ರದೇಶಗಳಲ್ಲೇ ವಾಸಿಸುತ್ತವೆ. ಕಾಡಿನ ಪ್ರದೇಶದಲ್ಲಿ ಸಿಗುವುದು ಟ್ರೀ ಪೈ.

ಕಾಗೆಗಳು ಸಮೂಹ ಜೀವಿಗಳು “ಕಾಗೆ ಒಂದಗುಳ ಕಂಡಡೆ ಕರೆಯದೆ ತನ್ನ ಬಳಗವನು” ಎಂದು ಶ್ರೀ ಬಸವಣ್ಣನವರೇ ಹೇಳುತ್ತಾರೆ. ಇವುಗಳ ಕೂಡುಕುಟುಂಬದ ಪದ್ಧತಿ ಮತ್ತು ಇವುಗಳ ಒಗ್ಗಟ್ಟು ಮನುಷ್ಯರನ್ನು ಕೂಡ ನಾಚಿಸುತ್ತವೆ.
ಕಾಗೆಗಳು ಎಲ್ಲಾ ತರಹದ ಮರಗಳಲ್ಲಿ ಒಣಗಿದ ಮರದ ಟೊಂಗೆಗಳಿಂದ ಸಾಮಾನ್ಯ ಗೂಡು ಕಟ್ಟುತ್ತವೆ ಹಾಗೂ ಒಂದು ಬಾರಿಗೆ 3 ರಿಂದ 8 ರವರೆಗೂ ಮೊಟ್ಟೆಗಳನ್ನು ಇಡುತ್ತವೆ. ಇವುಗಳ ಜಾಣ್ಮೆ ಬಗ್ಗೆ ಅನೇಕ ಕಥೆಗಳೇ ಇವೆ (ಉದಾ : ಕಾಗೆ ಮತ್ತು ಹೂಜಿ), ಇಸ್ರೇಲಿನ ಕಾಡು ಕಾಗೆಗಳು ಮೀನುಗಳ ಬೇಟೆಯಾಡಲು ಕೆಲವು ಬಾರಿ ರೊಟ್ಟಿ ತುಣುಕುಗಳನ್ನು ಬಳಸುತ್ತವೆ. ‘ನಿವ್ ಕ್ಯಾಲೆಡೊನಿಯನ್’ ಎಂಬ ಪ್ರಭೇದದ ಕಾಗೆಯು ಬಿರುಸಾದ ಕಾಯಿಗಳನ್ನು ರಸ್ತೆ ಮದ್ಯದಲ್ಲಿ ಹಾಕಿ ವಾಹನಗಳು ಅದರ ಮೇಲೆ ಹರಿದು ಅವು ಒಡೆದು ಚೂರಾದ ನಂತರ ತಮ್ಮ ಗೂಡಿಗೆ ಕೊಂಡೊಯುತ್ತವೆ ಹಾಗೂ ಇವುಗಳು ಚೂಪಾದ ಹುಲ್ಲು, ಗರಿ ಹಾಗೂ ಕಡ್ಡಿಗಳನ್ನು ಉಪಯೋಗಿಸಿ ತಮ್ಮ ಆಹಾರವಾದ ಕ್ರಿಮಿ ಕೀಟಗಳನ್ನು ಮರದ ಪೊಟರೆಗಳಿಂದ ಹೆಕ್ಕಿ ತಿನ್ನುತ್ತವೆ. ಕ್ವೀನ್ಸ್ ಲ್ಯಾಂಡ್ ಮತ್ತು ಆಸ್ಟ್ರೇಲಿಯಾದಲ್ಲಿನ ಕಾಗೆಗಳಿಗೆ ವಿಷಕಾರಿಯಾದ ನೆಲಗಪ್ಪೆಯನ್ನು ಹೇಗೆ ತಿನ್ನಬೇಕೆಂಬ ಸಂಪೂರ್ಣ ಅರಿವಿದೆ. ನೆಲಗಪ್ಪೆಯ ಗಂಟಲಿನ ತೆಳುಚರ್ಮವನ್ನು ಹುಷಾರಾಗಿ ಬಗೆದು, ಅದರಲ್ಲಿನ ವಿಷಕಾರಿಯಲ್ಲದ ಕರುಳನ್ನು ತಿನ್ನುತ್ತವೆ.

ಮಾತೃಹೃದಯದ ಕಾಗೆಗಳು ಪರಪುಟ್ಟ ಹಕ್ಕಿಗಳಾದ ಕೋಗಿಲೆಯ ಮೊಟ್ಟೆಗಳಿಗೆ ಕಾವನ್ನು ಕೊಟ್ಟು ಮರಿಮಾಡುತ್ತವೆ. ಇದಕ್ಕೆ ಕಾರಣ ತನ್ನ ಮೊಟ್ಟೆಗಳಿಗೆ ಕಾವನ್ನು ಕೊಡುವ ಸಾಮರ್ಥ್ಯ ಕೋಗಿಲೆಯ ದೇಹಕ್ಕೆ ಇಲ್ಲದಿರುವುದು ಹಾಗೂ ಮಳೆ ಗಾಳಿಗಳಿಂದ ತನ್ನ ಮರಿಗಳಿಗೆ ರಕ್ಷಣೆ ಕೊಡಲು ಅದರ ರೆಕ್ಕೆಗಳು ದಟ್ಟವಾಗಿಲ್ಲದ ಕಾರಣ ಕಾಗೆಗಳ ಗೂಡಿನಲ್ಲಿ ಮೊಟ್ಟೆ ಇಟ್ಟು ತನ್ನ ವಂಶವಾಹಿನಿಯನ್ನು ಮುಂದುವರಿಸುತ್ತವೆ. ಮೊಟ್ಟೆಗಳು ತನ್ನವಲ್ಲವೆಂದು ಗೊತ್ತಿದು ಕಾವು ಕೊಟ್ಟು ಮರಿಗಳನ್ನು ಮಾಡುವ ಕಾಗೆಗಳು ಮಾತೃಸ್ವರೂಪಿಯಲ್ಲದೆ ಮತ್ತೇನು? ಸೃಷ್ಟಿಕರ್ತನ ಇಂತ ಎಷ್ಟೋ ನಿರ್ದೇಶನಗಳು ಪ್ರಾಣಿ ಪಕ್ಷಿಗಳ ಸಂತತಿಯ ಉಳಿಯುವುದ್ದಕ್ಕೆ ಕಾರಣವಾಗಿದೆ.
ಇನ್ನು ನಮ್ಮ ಪುರಾಣಗಳ ಪ್ರಕಾರ ಕಾಗೆಗೆ ದೈವ ಸಮಾನವಿದ್ದು ಶನಿದೇವರ ವಾಹನವಾಗಿದೆ. ಮನುಷ್ಯ ತನ್ನ ಪೂರ್ವಜರನ್ನು ಕಾಗೆಗಳ ಮೂಲಕ ಗುರುತಿಸಿ ವರ್ಷಕ್ಕೊಮ್ಮೆ ಪಿಂಡ ಪ್ರದಾನ ಮಾಡುತ್ತಾನೆ. ಕಾಗೆ ಶಕುನವನ್ನು ನಂಬುತ್ತಾನೆ.

ಕಾಗೆಗಳ ಸಂತತಿ ನಾಶಕ್ಕೆ ಮನುಷ್ಯನೇ ನೇರ ಕಾರಣವಾಗಿದ್ದು ಯುನೈಟೆಡ್ ಸ್ಟೇಟ್ಸನಲ್ಲಿ ಸಾರ್ವಜನಿಕರಿಗೆ ತೊಂದರೆ ಕೊಡುವ ಆರೋಗ್ಯಕ್ಕೆ ಹಾನಿಯುಂಟು ಮಾಡುವ ಕಾಗೆಗಳನ್ನು ಎಲ್ಲಾ ರಾಜ್ಯಗಳಲ್ಲಿ ಬೇಟೆಯಾಡಲು ಕಾನೂನು ರೀತ್ಯ ಅನುಮತಿ ಇದ್ದು, “ಕಾಗೆಗಳ ಬೇಟೆ” ಸಾಮಾನ್ಯವಾಗಿ ಆಗಸ್ಟ್ ನಿಂದ ಮಾರ್ಚ್ ವರೆಗೆ ನಡೆಯುತ್ತದೆ.
US ನ ಕೋಡ್ ಆಫ್ ಫೆಡರಲ್ ರೆಗ್ಯುಲೇಶನ್ಸ್ ಪ್ರಕಾರ ಯಾವುದೇ ಸಂದರ್ಭದಲ್ಲಿ ಕಾಗೆಗಳನ್ನು ಯಾವುದೇ ಅನುಮತಿ ಇಲ್ಲದೇ ಕೊಲ್ಲಬಹುದಾಗಿದೆ. USFWS 50 CFR 21.43 (ಸಾರ್ವಜನಿಕ ವಸ್ತು ನಾಶ ಮಾಡುವ ಕಪ್ಪು ಪಕ್ಷಿಗಳು, ಗೋಕಾಗೆಗಳು, ದೊಂಬ ಕಾಗೆಗಳು ಮತ್ತು ಅಮೆರಿಕನ್ ಕಾಗೆಗಳು) ಇಂತಹ ಕಾಗೆಗಳು ಸಾರ್ವಜನಿಕರಿಗೆ ತೊಂದರೆ ಕೊಟ್ಟರೆ ಇವುಗಳನ್ನು ಕೊಲ್ಲಲು ಯಾವುದೇ ಪರವಾನಿಗೆ ಬೇಡ. ಒಂದು ವೇಳೆ ಧ್ವಂಸ ಕಾರ್ಯದಲ್ಲಿ ತೊಡಗಿದರೆ ಅಂದರೆ ಅಲಂಕಾರಿಕ ಅಥವಾ ನೆರಳಿನ ಗಿಡಗಳು, ಕೃಷಿ ಬೆಳೆಗಳು, ಪಶು-ಪ್ರಾಣಿಗಳು ಅಥವಾ ವನ್ಯ ಜೀವಿಗಳಿಗೆ ತೊಂದರೆ ನೀಡಿದರೆ ಅಥವಾ ಆರೋಗ್ಯಕ್ಕೆ ಹಾನಿ ಮಾಡುವ ಇಲ್ಲವೆ ಗದ್ದಲ ಎಬ್ಬಿಸುವ ಕಾಗೆಗಳನ್ನು ನಿರ್ಧಾಕ್ಷಿಣ್ಯವಾಗಿ ಕೊಲ್ಲಬಹುದಾಗಿದೆ.
ಇನ್ನು ಹಲವಾರು ಅಚ್ಚರಿಯ ಸಂಗತಿಗಳು ಕಾಗೆ ಹಾಗೂ ಇನ್ನಿತರ ಪಕ್ಷಿ ಸಂಕುಲದ ಬಗ್ಗೆ ಅಂತರ್ಜಾಲದಲ್ಲಿ ಸಾಕಷ್ಟು ಮಾಹಿತಿ ಇದೆ. ಬಿಡುವಾದಾಗೊಮ್ಮೆ ಓದಿ ತಮ್ಮ ಜ್ಞಾನರ್ಜನೆ ಮಾಡಿಕೊಳ್ಳಿ ಹಾಗೂ ಪಕ್ಷಿ ಸಂಕುಲದ ಬಗ್ಗೆ ಪ್ರೀತಿಯನ್ನು ಬೆಳೆಸಿಕೊಳ್ಳಿ.

ಕು ಶಿ ಚಂದ್ರಶೇಖರ್