ವೃಕ್ಷಮಾತೆ ಸಾಲು ಮರದ ತಿಮ್ಮಕ್ಕ

ವೃಕ್ಷಮಾತೆ ಸಾಲು ಮರದ ತಿಮ್ಮಕ್ಕ

ಕಳೆದ ಮೂರು ನಾಲ್ಕು ದಿನಗಳ ಹಿಂದೆ ಸಾಲು ಮರದ ತಿಮ್ಮಕ್ಕ ಅನಾರೋಗ್ಯದಿಂದ ಆಸ್ಪತ್ರೆಗೆ ಸೇರಿದಾಗ ಆತುರಗೆಟ್ಟ ಸ್ವಯಂ ಘೋಷಿತ ಮೇಧಾವಿಗಳು ತಮ್ಮ ವದಂತಿಗಳಲ್ಲೇ ಅವರನ್ನು ಸಾಯಿಸಿಬಿಟ್ಟಿದ್ದರು. ತಿಮ್ಮಕ್ಕನವರ ಆರೋಗ್ಯದ ಕಾಳಜಿಗಿಂತ ಅವರು ಕೊನೆಯುಸಿರೆಳೆದರು ಎಂಬ ಸುದ್ದಿಯನ್ನು ನಾವೇ ಮೊದಲು ಪಸರಿಸಬೇಕೆಂಬ ಹಪಾಹಪಿ ಅವರುಗಳಲ್ಲಿದ್ದಂತೆ ಭಾಸವಾಯಿತು. ಕೊನೆಗೂ ತಿಮ್ಮಕ್ಕನವರ ಅರೋಗ್ಯ ಚೇತರಿಸಿಕೊಂಡಿದೆ ಎಂಬ ಸುದ್ಧಿಯನ್ನು ಅವರ ಸಮೀಪವರ್ತಿಗಳು ಹಾಗು ಕುಟುಂಬದವರು ಪತ್ರಿಕಾ ಪ್ರಕಟಣೆ ಕೊಡುವಷ್ಟರಲ್ಲಿ ಸಾಕಾಯಿತು.

ಹೆದ್ದಾರಿಯ ರಸ್ತೆಗಳಲ್ಲಿ ಎಂತಹ ಐಷಾರಾಮಿ ಹವಾನಿಯಂತ್ರಿತ ಕಾರಿನಲ್ಲಿ ಕೂತು ಹೊರಟರು ಪ್ರಯಾಣದುದ್ದಕ್ಕೂ ಮರಗಳಿಲ್ಲದಿದ್ದರೆ ಆ ಪ್ರಯಾಣ ಮರುಗಾಡಿನಲ್ಲಿ ಸಂಚರಿಸಿದಂತೆಯೇ! ಆಲದ ಮರಗಳ ಉಪಸ್ಥಿತಿ ಅತಿ ಮುಖ್ಯ. ಆ ಮರಗಳನ್ನು ಪ್ರಯಾಣಿಕರಷ್ಟೇ ಅಲ್ಲದೇ ಅನೇಕ ಪ್ರಾಣಿ ಪಕ್ಷಿ ಸಂಕುಲವು ತಮ್ಮ ಸೂರಿಗಾಗಿ ಅವಲಂಬಿಸಿರುತ್ತವೆ. ಇಂತಹದೊಂದು ರಾಜ್ಯ ಹೆದ್ದಾರಿಯಾದ ಕುದೂರಿನಿಂದ ಹುಲಿಕಲ್ ಮದ್ಯದಲ್ಲಿ 300 ಕ್ಕೂ ಹೆಚ್ಚು ಆಲದ ಸಸಿಗಳನ್ನು ನೆಟ್ಟು ಹೆಮ್ಮರಗಳನ್ನಾಗಿ ಮಾಡಿದ ಸಾಧನೆ ತಿಮ್ಮಕ್ಕನವರದು. ಆಲದ ಮರಗಳಸ್ಟೇ ಅಲ್ಲದೆ 8000 ದಷ್ಟು ಇತರೆ ಜಾತಿಯ ಸಸಿಗಳನ್ನು ನೆಟ್ಟು ನೆರಳಿನ ಮರಗಳಾಗುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

ನಮ್ಮ ನಿಮ್ಮೆಲ್ಲರ ಪರಿಸರ ದೇವತೆ ಸಾಲು ಮರದ ತಿಮ್ಮಕ್ಕ ಅಥವಾ ಆಲದ ಮರದ ತಿಮ್ಮಕ್ಕ ಎಂದೇ ಚಿರಪರಿಚಿತರಾದ ತಿಮ್ಮಕ್ಕ ಹುಟ್ಟಿದ್ದು ಕರ್ನಾಟಕದ ತುಮಕೂರು ಜಿಲ್ಲೆಯ ಗುಬ್ಬಿ ಎಂಬ ಸಣ್ಣ ಊರಿನಲ್ಲಿ, ಸಾಲು ಮರದ ತಿಮ್ಮಕ್ಕ ಅಥವಾ ಆಲದ ಮರದ ತಿಮ್ಮಕ್ಕ ಎಂದೇ ಚಿರಪರಿಚಿತ. ಮದುವೆಯ ನಂತರ ಮಕ್ಕಳಿಲ್ಲದ ಕೊರತೆಯನ್ನು ತಿಮ್ಮಕ್ಕ ಅನೇಕ ಜಾತಿಯ ಸಸಿಗಳನ್ನು ನೆಡುತ್ತ ಅವುಗಳನ್ನೇ ತಮ್ಮ ಮಕ್ಕಳೆಂದು ತಿಳಿಯುತ್ತಾ ಅವುಗಳ ಪೋಷಣೆಯನ್ನೇ ಕಾಯಕ ಮಾಡಿಕೊಂಡರು. ತಮ್ಮ ಪತಿಯ ಸಹಾಯದಿಂದ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಸಿಗುವ ಆಲದ ಮರಗಳಿಂದ ಕಸಿ ಮಾಡಿಕೊಂಡು ಹೆದ್ದಾರಿಯಲ್ಲಿ ನೆಡುತ್ತಾ ಬಂದರು. ಸಸಿಗಳನ್ನು ನೆಡೆವುದಷ್ಟೇ ಅಲ್ಲದೆ ಪ್ರಾಥಮಿಕ ಹಂತದಲ್ಲಿ ಅವುಗಳಿಗೆ ಪತಿ ಪತ್ನಿಯರು ಬಹು ದೂರದಿಂದ ನೀರನ್ನು ತಂದು ಸಸಿಗಳಿಗೆ ಹಾಕುತ್ತ ದನಕರುಗಳು, ಆಡುಗಳು ಅವನ್ನು ತಿನ್ನದಂತೆ ನೋಡಿಕೊಂಡರು. ಅವುಗಳೆಲ್ಲ ಈಗ ಹೆಮ್ಮರವಾಗಿ ಪ್ರಕೃತಿ ಮಾತೆಯ ಒಡಳಾಗಿವೆ.

ಸಸಿಗಳನ್ನು ನೆಡುವದನ್ನೇ ಕಾಯಕ ಮಾಡಿಕೊಂಡ ತಿಮ್ಮಕ್ಕನವರಿಗೆ ಅನೇಕ ಪ್ರಶಸ್ತಿಗಳು ಒದಗಿಬಂದಿವೆ ಹಾಗು ವೃಕ್ಷ ದೇವತೆ, ಪರಿಸರ ದೇವತೆ ಎಂಬಿತ್ಯಾದಿ ಹೆಸರುಗಳಿಂದ ಜನಮಾನಸದಲ್ಲಿ ನೆಲೆ ನಿಂತಿದ್ದಾರೆ. ಯಾವುದೇ ಸರ್ಕಾರ ಸಂಘ ಸಂಸ್ಥೆಗಳು ಕೂಡ ಮಾಡಲಾಗದ ಕೆಲಸವನ್ನು ತಿಮ್ಮಕ್ಕನವರು ಮಾಡಿದ್ದಾರೆ. ಇವರು ತಮ್ಮ ಹಳ್ಳಿಯಲ್ಲಿ ಬಡವರಿಗಾಗಿ ಒಂದು ಆಸ್ಪತ್ರೆಯನ್ನು ಸಹ ಕಟ್ಟಿಸುವ ಗುರಿಯನ್ನು ಹೊಂದಿದ್ದಾರೆ. ಇವರ ಈ ಸಾಧನೆಗೆ ಸಂದ ಪ್ರಶಸ್ತಿಗಳು ಅನೇಕ. ಅದರಲ್ಲಿ ಪ್ರಮುಖವಾದವು ರಾಷ್ಟ್ರೀಯ ಪೌರ ಪ್ರಶಸ್ತಿ, ಪ್ರಿಯದರ್ಶಿನಿ ವೃಕ್ಷ ಮಿತ್ರ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ನಾಡೋಜ ಪ್ರಶಸ್ತಿ, 2019 ರ ಪದ್ಮಶ್ರೀ ಪ್ರಶಸ್ತಿ ಹಾಗು ಇನ್ನೂ ಅನೇಕ.

ತಮ್ಮ ಜೀವನವನ್ನೇ ವೃಕ್ಷ ಮಾತೆಗೆ ಅರ್ಪಿಸಿದ ಈ ತಾಯಿಗೆ ಕೆಲ ದಿನಗಳಿಂದ ಅನಾರೋಗ್ಯ ಕಾಡಿದ್ದು ಈಗ ಚೇತರಿಸಿಕೊಳ್ಳುತ್ತಿದ್ದಾರೆ. ಭಗವಂತ ಅವರಿಗೆ ಇನ್ನಷ್ಟು ಕಾಲ ಆರೋಗ್ಯ ಕೊಡಲೆಂದು ನಾವೆಲ್ಲರೂ ಪ್ರಾರ್ಥಿಸೋಣ. ಪರಿಸರ ಬಳುವಳಿಯಾಗಿ ಕೊಟ್ಟ ತಾಯಿಗೆ ನಾವು ಚಿರಋಣಿಯಾಗಿರೋಣ. ಅವರಿಂದ ಸ್ಪೂರ್ತಿ ಪಡೆದು ನಾವು ಕೂಡ ಮುಂದಿನ ಪೀಳಿಗೆಗೆ ಪರಿಸರ ಬೆಳೆಸಿ ಉಳಿಸಿ ಪರಿಸರಕ್ಕಾಗಿ ಜೀವನವನ್ನು ಮುಡಿಪಾಗಿ ಇಡೋಣ.

ಶೈಲಾ

Related post

2 Comments

  • ಪರಿಸರ ಬೆಳೆಸಿ ಉಳಿಸಿ

  • ಚೆನ್ನಾಗಿ ಮೂಡಿ ಬಂದಿದೆ. ಶುಭವಾಗಲಿ 💐

Leave a Reply

Your email address will not be published. Required fields are marked *