ವ್ಯಂಗ್ಯಚಿತ್ರ ಉತ್ಸವ-2022 (ಜನವರಿ 1 ರಿಂದ 22 ರವರೆಗು)

2022ರ ಹೊಸ ವರ್ಷದ ಮೊದಲ ದಿನವೇ ಬೆಂಗಳೂರಿನ ಟ್ರಿನಿಟಿ ವೃತ್ತದಲ್ಲಿರುವ ಭಾರತೀಯ ವ್ಯಂಗ್ಯಚಿತ್ರ ಗ್ಯಾಲರಿಯಲ್ಲಿ ಈ ವ್ಯಂಗ್ಯಚಿತ್ರ ಉತ್ಸವವು ಬೆಳಗ್ಗೆ 11ಕ್ಕೆ ಉದ್ಘಾಟನೆಯಾಗಲಿದೆ. ಇಲ್ಲಿ ಪ್ರದರ್ಶನವಾಗುತ್ತಿರುವ ದೊಡ್ಡ ಅಳತೆಯ ಕ್ಯಾರಿಕೇಚರ್ (ವ್ಯಂಗ್ಯ ಭಾವಚಿತ್ರ) ಗಳ ಪ್ರದರ್ಶನವು ಜನವರಿ 22ರವರೆಗೂ ಸಾರ್ವಜನಿಕರ ವೀಕ್ಷಣೆಗಾಗಿ ತೆರೆದಿರುತ್ತದೆ.
ಭಾರತೀಯ ವ್ಯಂಗ್ಯಚಿತ್ರಕಾರರ ಸಂಸ್ಥೆ ಹಾಗೂ ಚತ್ತೀಸ್‍ಗಢದ ‘ಕಾರ್ಟೂನ್ ವಾಚ್’ ಮಾಸಪತ್ರಿಕೆಯ ಸಹಯೋಗದಲ್ಲಿ ಈ ‘ವ್ಯಂಗ್ಯಚಿತ್ರ ಉತ್ಸವ-2022’ ನಡೆಯುತ್ತಿದೆ. ಇದರ ಉದ್ಘಾಟನೆಯನ್ನು ‘ಕಾರ್ಟೂನ್ ವಾಚ್’ ಕಾರ್ಟೂನ್ ಪತ್ರಿಕೆಯ ಸಂಪಾದಕರಾದ ತ್ರಿಯಂಬಕ ಶರ್ಮ ಅವರು ನಡೆಸಿ ಕೊಡಲಿದ್ದಾರೆ. ಇದೇ ಸಂದರ್ಭದಲ್ಲಿ ನಾಡಿನ ನಾಲ್ಕು ಹಿರಿಯ ವ್ಯಂಗ್ಯಚಿತ್ರಕಾರರಿಗೆ ಜೀವನಮಾನದ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುತ್ತಿದೆ.

ದೊಡ್ಡ ಅಳತೆಯ ಕ್ಯಾರಿಕೇಚರ್‍ಗಳ ಪ್ರದರ್ಶನ!

ಈ ವ್ಯಂಗ್ಯಚಿತ್ರ ಉತ್ಸವದ ಅಂಗವಾಗಿ ದೇಶದಲ್ಲೇ ಅಪರೂಪದ ಒಂದು ಪ್ರಯೋಗಕ್ಕೆ ನಾಡಿನ ವ್ಯಂಗ್ಯಚಿತ್ರಕಾರರು ಮುಂದಾಗಿದ್ದಾರೆ. ಎರಡು ಅಡಿ ಅಗಲ ಹಾಗೂ 3 ಅಡಿ ಉದ್ದದ ಕಪ್ಪು-ಬಿಳುಪಿನ ಕ್ಯಾರಿಕೇಚರ್‍ಗಳು ಪ್ರದರ್ಶನಗೊಳ್ಳಲಿವೆ. ಇದರಲ್ಲಿ ನಾಡಿನ ಹೆಸರಾಂತ 21 ವ್ಯಂಗ್ಯಚಿತ್ರಕಾರರಾದ ಬಿ ಜಿ ಗುಜ್ಜಾರಪ್ಪ, ವೈ ಎಸ್ ನಂಜುಂಡಸ್ವಾಮಿ, ರಾ ಸೂರಿ, ಸತೀಶ್ ಆಚಾರ್ಯ, ಚಂದ್ರನಾಥ್ ಆಚಾರ್ಯ, ಜಿ ಎಸ್ ನಾಗನಾಥ್, ರಘುಪತಿ ಶೃಂಗೇರಿ, ಮನೋಹರ್ ಆಚಾರ್ಯ, ಜೈರಾಮ್ ಉಡುಪ, ಜೀವನ್ ಶೆಟ್ಟಿ, ಜೇಮ್ಸ್‍ವಾಜ್, ಸುಭಾಶ್‍ಚಂದ್ರ, ರವಿ ಪೂಜಾರಿ, ಯತೀಶ್ ಸಿದ್ದನಕಟ್ಟೆ, ಚಂದ್ರಗಂಗೊಳ್ಳಿ, ಸಂಕೇತ್ ಗುರುದತ್ತ, ಸತೀಶ್ ಬಾಬು, ಶೈಲೇಶ್ ಉಜಿರೆ, ಗೀಚಾ ಬೋಳ್ಕಟ್ಟೆ, ಪ್ರಸನ್ನ ಕುಮಾರ್, ಎಂ ಎನ್ ದತ್ತಾತ್ರಿ ಭಾಗವಹಿಸುತ್ತಿದ್ದು ಒಟ್ಟು 42 ಕ್ಯಾರಿಕೇಚರ್‍ಗಳು ಇಲ್ಲಿ ಪ್ರದರ್ಶನಗೊಳ್ಳುತ್ತಿವೆ.

ನಾಲ್ವರು ವ್ಯಂಗ್ಯಚಿತ್ರಕಾರರಿಗೆ ಜೀವನಮಾನದ ಪ್ರಶಸ್ತಿ ಪ್ರದಾನ

ನಾಡಿನ ಪ್ರಸಿದ್ಧ ವ್ಯಂಗ್ಯಚಿತ್ರಕಾರರಾದ ಕೆ ಆರ್ ಸ್ವಾಮಿ, ವಿ ಜಿ ನರೇಂದ್ರ, ಬಿ ಜಿ ಗುಜ್ಜಾರಪ್ಪ (ಗುಜ್ಜಾರ್) ಹಾಗೂ ಜಿ ಎಸ್ ನಾಗನಾಥ್ ಅವರುಗಳು ಈ ಜೀವನಮಾನದ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಈ ನಾಲ್ವರು ಹಿರಿಯ ಕಲಾವಿದರ ಕಿರು ಪರಿಚಯವು ಹೀಗಿವೆ.

ಕೆ ಆರ್ ಸ್ವಾಮಿ

ಕೆ ಆರ್ ಸ್ವಾಮಿ

ಕನ್ನಡ ನಾಡು ಕಂಡ ಖ್ಯಾತ ವ್ಯಂಗ್ಯಚಿತ್ರಕಾರರಲ್ಲಿ ಕೆ ಆರ್ ಸ್ವಾಮಿ ಅವರು ಅಗ್ರಪಂಕ್ತಿಯಲ್ಲಿದ್ದಾರೆ. ಇವರು ಇತ್ತೀಚಿಗಷ್ಟೇ 82ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಈ ವಯೋಮಾನದಲ್ಲೂ ತಮ್ಮ ನೆಚ್ಚಿನ ಹವ್ಯಾಸವಾದ ಕಾರ್ಟೂನ್ ರಚನೆಯನ್ನು ಮಾತ್ರ ಬಿಟ್ಟಿಲ್ಲ. ವೃತ್ತಿಯಲ್ಲಿ ಇಂಜಿನಿಯರ್, ಕರ್ನಾಟಕ ವಿದ್ಯುನ್ಮಂಡಲಿಯಲ್ಲಿ 32 ವರ್ಷಗಳು ಸೇವೆ ಸಲ್ಲಿಸಿದ್ದಾರೆ. ವೃತ್ತಿಯಿಂದ ನಿವೃತ್ತಿ ಹೊಂದಿದ್ದರೂ ಪ್ರವೃತ್ತಿಯಲ್ಲಿನ ಉತ್ಸಾಹ ಮಾತ್ರ ಇಮ್ಮಡಿಗೊಂಡಿದೆ. ಸತತ ನಾಲ್ಕೈದು ದಶಕಗಳಿಂದ ಕಾರ್ಟೂನ್ ರಚನೆಯಲ್ಲಿ ತೊಡಗಿರುವ ಸ್ವಾಮಿ ಅವರು ಈಗಲೂ ಲವಲವಿಕೆಯಿಂದ ಇದ್ದಾರೆಂದರೆ ಅದಕ್ಕೆ ಈ ನಗೆ ಗುಳಿಗೆಯೆ ಸಿದ್ಧೌಷಧಿ ಎನ್ನಡ್ಡಿಯಿಲ್ಲ. ನಾಡಿನ ಎಲ್ಲಾ ಪತ್ರಿಕೆಗಳಲ್ಲೂ ಇವರ ಕಾರ್ಟೂನಗಳು ಪ್ರಕಟಗೊಂಡಿವೆ. ಆಗಿನ ಕಾಲದಿಂದ ಹಿಡಿದು ಈ ಕಾಲಘಟ್ಟದವರಗೂ ಇವರು ವ್ಯಂಗ್ಯಚಿತ್ರಗಳನ್ನು ರಚಿಸುತ್ತಿದ್ದಾರೆ. ಪೆನ್ನು-ಪೇಪರ್‍ನಿಂದ ಆರಂಭಗೊಂಡ ಇವರ ವ್ಯಂಗ್ಯಚಿತ್ರದ ಅಭ್ಯಾಸ ತಂತ್ರಜ್ಞಾನ ಯುಗದಲ್ಲೂ ಅಷ್ಟೇ ಸ್ಪಷ್ಟ ಹಾಗೂ ವಿಭಿನ್ನವಾಗಿ ಮೂಡಿ ಬರುತ್ತಿದೆ. ಇವರ ಕಾರ್ಟೂನ್‍ಗಳಲ್ಲಿ ಮಾತಿಗಿಂತ ಚಿತ್ರಕ್ಕೆ ಹೆಚ್ಚಿನ ಪ್ರಮುಖ್ಯತೆಯಿರುವುದು ಇವರ ವಿಶೇಷತೆ. ಈಗಲೂ ತರಂಗಕ್ಕಾಗಿ ವ್ಯಂಗ್ಯಚಿತ್ರಗಳನ್ನು ರಚಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲೂ ಇವರ ವ್ಯಂಗ್ಯಚಿತ್ರಗಳು ನಿರಂತರವಾಗಿ ಹರಿದು ಬರುತ್ತಿವೆ.

ಇವರೇ ಹೇಳುವಂತೆ ‘ನಗದವರಿಗೆ ನಗೆ ಟಾನಿಕ್’ ಹಂಚುವ ಕೆಲಸವನ್ನು ನಿಲ್ಲಿಸಲು ಸಾಧ್ಯವೇ ಇಲ್ಲವಂತೆ! ಅಲ್ಲದೇ ಫೇಸ್‍ಬುಕ್‍ನಲ್ಲಿ ಜೀವಾನುಭವವನ್ನು ಲೇಖನದ ಮೂಲಕ ಪ್ರಕಟಿಸುತ್ತಿದ್ದು ಬರಹಗಾರರರೂ ಆಗಿ ಹೆಸರು ಮಾಡಿದ್ದಾರೆ. ಈ ಕೆ ಆರ್ ಸ್ವಾಮಿ ಅವರು ಖ್ಯಾತ ಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ ಅವರಿಗೆ ಮಾವ(ಅಮ್ಮನ ತಮ್ಮ). ಸ್ವಾಮಿ ಅವರ ಕತೆ ಹೇಳುವ ಶೈಲಿಯನ್ನು ಕಾಸರವಳ್ಳಿ ಅವರು ಮೆಚ್ಚುತ್ತಾರೆ ಅಲ್ಲದೆ ತಮ್ಮ ಕೆಲವು ಚಿತ್ರಗಳಲ್ಲಿ ಸ್ವಾಮಿ ಅವರ ವ್ಯಂಗ್ಯಚಿತ್ರದ ವಸ್ತುಗಳನ್ನು ಬಳಸಿಕೊಂಡಿದ್ದಾರಂತೆ!
ಇಳಿವಯಸ್ಸಲ್ಲೂ ಉತ್ಸಾಹದ ಚಿಲುಮೆಯಂತೆ ಸದಾ ಚಟುವಟಿಕೆಯಲ್ಲಿರುವ ಸ್ವಾಮಿ ಅವರು ತಮ್ಮ ಕ್ಷೇತ್ರದಲ್ಲಿ ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಈ ದಿನಮಾನಕ್ಕೂ ಹೊಂದಿಕೊಂಡಿದ್ದಾರೆ.

ವಿ.ಜಿ. ನರೇಂದ್ರ

ವಿ.ಜಿ. ನರೇಂದ್ರ


ಭಾರತೀಯ ವ್ಯಂಗ್ಯಚಿತ್ರಕಾರರ ಸಂಸ್ಥೆಯ ರೂವಾರಿ ವಿ.ಜಿ. ನರೇಂದ್ರ ಅವರಿಗೆ ಶಾಲಾ ದಿನಗಳಲ್ಲೇ ವ್ಯಂಗ್ಯಚಿತ್ರ ಕಲೆಯ ಗೀಳು ಅಂಟಿಕೊಂಡಿತ್ತು. ಇವರನ್ನು ಮೊದಲು ಆಕರ್ಷಿಸಿದ್ದು ಖ್ಯಾತ ವ್ಯಂಗ್ಯಚಿತ್ರಕಾರ ಶಂಕರ್ ಅವರ
ವ್ಯಂಗ್ಯಚಿತ್ರಗಳು. 1965ರಲ್ಲಿ ಇವರ ಮೊದಲ ವ್ಯಂಗ್ಯಚಿತ್ರವು `ಕರ್ಮವೀರ’ ವಾರಪತ್ರಿಕೆಯಲ್ಲಿ ಪ್ರಕಟವಾಯ್ತು. ಅಲ್ಲಿಂದ ವ್ಯಂಗ್ಯಚಿತ್ರ ರಚನೆಯು ಆರಂಭವಾಯ್ತು.
ವಿಜ್ಞಾನದ ಪದವಿಯ ನಂತರ ವೃತ್ತಿಗಾಗಿ ಮುಂಬೈ ಸೇರಿದರು. ಅಲ್ಲಿ ಇಲ್ಲಸ್ಟ್ರೇಡೆಡ್ ವೀಕ್ಲಿ ಆಫ್ ಇಂಡಿಯಾ, ಧರ್ಮಯುಗ ಮತ್ತಿತರ ಪತ್ರಿಕೆಗೆ ವ್ಯಂಗ್ಯಚಿತ್ರಗಳನ್ನು ಬರೆದರು. ಆನಂತರ ಭಾರತದ ಪ್ರಥಮ ಕಾಮಿಕ್ ಫೀಚರ್ ಸಿಂಡಿಕೇಟ್, `ರಂಗ ರೇಖಾ ಫೀಚರ್ಸ್’ ಸೇರಿದರು. ಇವರ `ರಿಪೋರ್ಟರ್ ಸಂಜು’ ಉದಯವಾಣಿ ಸೇರಿದಂತೆ ಭಾರತದ ಬೇರೆ ಬೇರೆ ಭಾಷೆಗಳ 15 ದಿನಪತ್ರಿಕೆಗಳಲ್ಲಿ ಪ್ರಕಟವಾಗಲು ಪ್ರಾರಂಭವಾಯ್ತು.
ಮುಂದೆ `ಫ್ರೀ ಪ್ರೆಸ್ ಜರ್ನಲ್’ ಪತ್ರಿಕೆಯಲ್ಲಿ ರಾಜಕೀಯ ವ್ಯಂಗ್ಯಚಿತ್ರ ಬರೆಯಲು ಅವಕಾಶವಾಯ್ತು. ಅಲ್ಲಿ ಬರೆದ ವ್ಯಂಗ್ಯಚಿತ್ರಗಳು ಭಾರತದ ವ್ಯಂಗ್ಯಚಿತ್ರ ಪಿತಾಮಹ ಶಂಕರ್ ಅವರ ಗಮನ ಸೆಳೆದವು ಅಲ್ಲದೇ ಮೆಚ್ಚಿಕೊಂಡು ನರೇಂದ್ರ ಅವರನ್ನು ‘ಶಂಕರ್ಸ್  ವೀಕ್ಲಿ’ ಸೇರಲು ಅಹ್ವಾನಿಸಿದರು. 1973ರಲ್ಲಿ ಅವರು ‘ಶಂಕರ್ಸ್  ವೀಕ್ಲಿ’ ಸೇರಿದರು. ಇದು ಅವರ ಬದುಕಿನಲ್ಲಿ ದೊರೆತ ದೊಡ್ಡ ತಿರುವು.

‘ಶಂಕರ್ಸ್ ವೀಕ್ಲಿ’ ಪ್ರಕಟಣೆ ನಿಂತ ನಂತರ ನರೇಂದ್ರ ಅವರು ಬೆಂಗಳೂರಿಗೆ ಬಂದು `ಸಂಯುಕ್ತ ಕರ್ನಾಟಕ’ದಲ್ಲಿ 11 ವರ್ಷಗಳು ಸ್ಟಾಫ್ ವ್ಯಂಗ್ಯಚಿತ್ರಕಾರರಾದರು. ನಂತರದಲ್ಲಿ `ಕನ್ನಡ ಪ್ರಭ’ ಸೇರಿ 20 ವರ್ಷಗಳು ಸುದೀರ್ಘ ಸೇವೆಯ ನಂತರ 2007ರಲ್ಲಿ ನಿವೃತ್ತಿಯಾದರು.
1977ರಲ್ಲಿ ಕರ್ನಾಟಕ ವ್ಯಂಗ್ಯಚಿತ್ರಕಾರರ ಸಂಘ ಸ್ಥಾಪನೆಯಾದಾಗ ಕಾರ್ಯಕಾರಿ ಸಮಿತಿಯಲ್ಲಿ ಸ್ಥಾನ ಪಡೆದ ನರೇಂದ್ರ ಅವರು 1978ರಲ್ಲಿ ಅದರ ಅಧ್ಯಕ್ಷರೂ ಆದರು. 2001ರಿಂದ ಅವರು ಭಾರತೀಯ ವ್ಯಂಗ್ಯಚಿತ್ರಕಾರರ ಸಂಸ್ಥೆಯ ವ್ಯವಸ್ಥಾಪಕ ಟ್ರಸ್ಟೀಯಾಗಿ ವ್ಯಂಗ್ಯಚಿತ್ರಕಲೆಯ ಸರ್ವತೋಮುಖ ಬೆಳವಣಿಗೆಗಾಗಿ ಶ್ರಮಿಸುತ್ತಿದ್ದಾರೆ. ದೇಶ=ವಿದೇಶದ ವ್ಯಂಗ್ಯಚಿತ್ರಕಾರರನ್ನು ಗುರುತಿಸಿ ಅವರಿಗೆ ತಮ್ಮ ಸಂಸ್ಥೆಯ ಮೂಲಕ ಪ್ರದರ್ಶನಕ್ಕೆ ಅವಕಾಶ ಮಾಡಿ ಕೊಟ್ಟು ವ್ಯಂಗ್ಯಚಿತ್ರ ಕ್ಷೇತ್ರವನ್ನು ವಿಸ್ತಾರಗೊಳಿಸುತ್ತಿದ್ದಾರೆ. ನರೇಂದ್ರ ಅವರು ಯಾವುದೇ ವಯೋಮಾನದ ಹಂಗಿಲ್ಲದೇ ಈ ನಿಟ್ಟಿನಲ್ಲಿ ಅವಿರತವಾಗಿ ಶ್ರಮಿಸುತ್ತಿದ್ದಾರೆ.

ಬಿ ಜಿ ಗುಜ್ಜಾರಪ್ಪ(ಗುಜ್ಜಾರ್)

ಗುಜ್ಜಾರ್

ತುಮಕೂ ಜಿಲ್ಲೆಯ ಬಾಣಗೆರೆಯ ಗುಜ್ಜಾರ್ ಅವರು ತಮ್ಮ ವಿದ್ಯಾಭ್ಯಾಸದ ದಿನಗಳಿಂದಲೇ ಚಿತ್ರ ರಚನೆ ಹಾಗೂ ಕಾರ್ಟೂನ್ ಸ್ಟ್ರಿಪ್‍ಗಳನ್ನು ಅಭ್ಯಾಸಿಸುತ್ತಾ ಬಂದಿದ್ದಾರೆ. ಇತಿಹಾಸದಲ್ಲಿ ಎಂಎ ಮಾಡಿ ಹಲವೆಡೆ ಕೆಲಸ ಮಾಡಿದ್ದಲ್ಲದೇ ಪ್ರಶಿಕ್ಷಕರಾಗಿಯೂ ಕೆಲಸ ನಿರ್ವಹಿಸಿದ್ದಾರೆ. ಆದರೆ ಚಿತ್ರ ರಚನೆಯ ಸೆಳೆತವು ವೃತ್ತಿಯನ್ನು ಬದಲಿಸುವಂತೆ ಮಾಡಿತು. ಲಂಕೇಶ್ ಪತ್ರಿಕೆಯಿಂದ ಕಾರ್ಟೂನ್ ಕ್ಷೇತ್ರಕ್ಕೆ ಬಂದರು. ಅಲ್ಲಿಂದ ಡೆಕ್ಕನ್ ಹೆರಾಲ್ಡ್, ಪ್ರಜಾವಾಣಿ, ಸುಧಾ ಹಾಗೂ ಮಯೂರ ಪತ್ರಿಕೆಗಳಿಗೆ ಮುಖ್ಯ ಕಲಾವಿದರಾಗಿ ಸೇರ್ಪಡೆಯಾದರು. ಅಲ್ಲಿ ಹಲವಾರು ವರ್ಷಗಳು ನಿರಂತರವಾಗಿ ಸಾಂದರ್ಭಿಕ ಚಿತ್ರ ಹಾಗೂ ಕಾರ್ಟೂನ್ ರಚನೆಯಲ್ಲಿ ತೊಡಗಿದರು.
ನಂತರದಲ್ಲಿ ಬೆಂಗಳೂರಿನ ಕಿರ್ಲೋಸ್ಕರ್ ಮಲ್ಟಿ ಮೀಡಿಯಾದಲ್ಲಿ ಹಿರಿಯ ಕಲಾವಿದರಾಗಿ ಅನಿಮೇಶನ್ ಕಾರ್ಯವನ್ನು ನಿರ್ವಹಿಸಿದರು ಹಾಗೂ ದೆಹಲಿಯ ಎನ್‍ಐಐಟಿಯಲ್ಲಿ ಕೆಲಸ ಮಾಡಿದ್ದಾರೆ. ಅನಿಮೇಶನ್ ಕ್ಷೇತ್ರದಲ್ಲೂ ತೊಡಗಿದ್ದಾರೆ.
ಅಲ್ಲದೇ ನಾಡಿನ ದಿಗ್ಗಜರ ಪುಸ್ತಕಗಳಿಗೆ ಮುಖಪುಟ, ಒಳಪುಟಗಳಿಗೆ ಚಿತ್ರ ರಚನೆ ಮಾಡುವ ಮೂಲಕ ಪ್ರಸಿದ್ಧರಾಗಿದ್ದಾರೆ. ಸರ್ಕಾರ ಹಾಗೂ ಸರ್ಕಾರೇತರದ ಹಲವಾರು ಕಾರ್ಯಕ್ರಮಗಳಿಗೆ ಕಲಾವಿದರಾಗಿ ಸೇವೆ ಸಲ್ಲಿಸಿದ್ದಾರೆ. ರೈಲ್ವೆ ಇಲಾಖೆಯ ಹಲವಾರು ಯೋಜನೆಗಳಿಗೆ ಮುಖ್ಯ ಚಿತ್ರಕಾರರಾಗಿ ಗುರುತಿಸಿಕೊಂಡಿದ್ದಾರೆ.


ವ್ಯಂಗ್ಯಚಿತ್ರವನ್ನಷ್ಟೇ ಅಲ್ಲದೇ ಪೇಟಿಂಗ್ ಅನ್ನು ಮಾಡುತ್ತಿದ್ದು ಅವು ದೇಶ-ವಿದೇಶಗಳ ಆನ್ಲೈನ್ ತಾಣಗಳಲ್ಲಿ ದೊಡ್ಡ ಹೆಸರು ಮಾಡಿವೆ. ಇವರ ವಿಭಿನ್ನ ಶೈಲಿಯ ಕ್ಯಾರಿಕೇಚರ್‍ಗಳೂ ಸಹ ದೇಶ-ವಿದೇಶಗಳ ಆನ್ಲೈನ್ ತಾಣಗಳಲ್ಲಿ ಇವೆ. ವ್ಯಂಗ್ಯಚಿತ್ರ ಕ್ಷೇತ್ರಕ್ಕೆ ಅಪಾರವಾದ ಸೇವೆ ಸಲ್ಲಿಸಿದ್ದಲ್ಲದೇ ಹೊಸ ಪೀಳಿಗೆ ಚಿತ್ರಕಲಾ ಉತ್ಸಾಹಿ ಯುವಕರನ್ನು ಪ್ರೋತ್ಸಾಹಿಸುತ್ತಾ ಹುರಿದುಂಬಿಸುತ್ತಾ ಬಂದಿದ್ದಾರೆ. ಈ ಕಾರ್ಟೂನ್ ಕ್ಷೇತ್ರಕ್ಕೆ ಬರಲು ಡೆಕ್ಕನ್ ಹೆರಾಲ್ಡ್ ಗ್ರೂಪ್‍ನ ಬಿ.ವಿ. ರಾಮಮೂರ್ತಿ ಅವರು ನನಗೆ ಸ್ಪೂರ್ತಿ ಎನ್ನುತ್ತಾರೆ. ಗುಜ್ಜಾರ್ ಅವರು ಬರೆದ ಮಾಜಿ ಪ್ರಧಾನಿ ಎ. ಬಿ. ವಾಜಪೇಯಿ ವ್ಯಂಗ್ಯ ಭಾವ ಚಿತ್ರವು ಪ್ರಧಾನಿಯವರ ಮನೆಯ ಗೋಡೆಯಲ್ಲಿದೆ.
ಪುಸ್ತಕ ಮಾಲಿಕೆಯಲ್ಲಿ 16 ರಾಷ್ಟ್ರೀಯ, ಅಂತರಾಷ್ಟ್ರೀಯ ಭಾಷೆಗಳಲ್ಲಿ ಪ್ರಕಟಣೆಗೊಂಡಿದೆ. ಅಲ್ಲದೇ ಬಾಪು ಹಾಗೂ ಬುದ್ಧನ ಸಂದೇಶ ಸಾರುವ ಚಿತ್ರ ಸಹಿತ ಪುಸ್ತಕಗಳ ಪ್ರಕಟಣೆಯನ್ನು ಮಾಡಿದ್ದು ಕಾಮಿಕ್ಸ್ ಲೋಕಕ್ಕೂ ಹೆಚ್ಚಿನ ಕೊಡುಗೆ ಕೊಟ್ಟಿದ್ದಾರೆ. ನಿರಂತರ ಚಿತ್ರರಚನೆಯಲ್ಲಿ ತೊಡಗಿರುವ ಗುಜ್ಜಾರ್ ಸದಾ ಹೊಸತನದ ಹುಡುಕುವಿಕೆಯತ್ತ ಚಿಂತಿಸುತ್ತಾರಲ್ಲದೇ ಹೊಸ ಹೊಸ ತಂತ್ರಜ್ಞಾನದ ತಿಳುವಳಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ. ಅಷ್ಟೇ ಅಲ್ಲದೇ ತಾವು ಕಲಿತದ್ದನ್ನು ಆಸಕ್ತರಿಗೂ ಪರಿಚಯಿಸುತ್ತಾರೆ.

ಜಿ ಎಸ್ ನಾಗನಾಥ್

ಜಿ ಎಸ್ ನಾಗನಾಥ್

ಬಾಲ್ಯದಿಂದಲೂ ಚಿತ್ರಕಲೆಯಲ್ಲಿ ಆಸಕ್ತಿಯಿದ್ದ ಕಾರಣ ದಾವಣಗೆರೆಯಲ್ಲಿ ವಾಣಿಜ್ಯಕಲೆಯನ್ನು ಅಭ್ಯಾಸಿಸಿದರು. ಆನಂತರ ಖ್ಯಾತ ಆ್ಯಡ್ ಏಜೆಂನ್ಸಿಯಲ್ಲಿ ಕಲಾವಿದರಾಗಿ ಸೇವೆ ಸಲ್ಲಿಸಿದರು. ಅಲ್ಲಿಂದ ಮುಂದೆ ಬೆಂಗಳೂರಿನ ಕಿರ್ಲೋಸ್ಕರ್ ಮಲ್ಟಿಮೀಡಿಯಾದಲ್ಲಿ ಹಿರಿಯ ಕಲಾವಿದರಾಗಿ ಅನಿಮೇಶನ್ ಕಾರ್ಯವನ್ನು ನಿರ್ವಹಿಸಿದರಲ್ಲದೇ ಮುಂದುವರಿದು ಹಲವಾರು ಪ್ರತಿಷ್ಠಿತ ಮಾಹಿತಿ ತಂತ್ರಜ್ಞಾನ ಸಂಸ್ಥೆಗಳಲ್ಲಿ ಹಿರಿಯ ಕಲಾವಿದರಾಗಿ ಕಾರ್ಯನಿರ್ವಹಿಸಿದ್ದಾರೆ. ವೃತ್ತಿಯಲ್ಲಿ ವೆಬ್ ಡಿಸೈನರ್, ಅನಿಮೇಟರ್, ಇಲ್ಲಸ್ಟ್ರೇಟರ್‍ಗಳನ್ನೂ ಪ್ರವೃತ್ತಿಯಲ್ಲಿ ವ್ಯಂಗ್ಯಚಿತ್ರವನ್ನೂ ಮಾಡುತ್ತಾ ಬಂದಿದ್ದಾರೆ. ನಾಡಿನ ಹಲವಾರು ಪತ್ರಿಕೆಗಳಿಗೆ ವ್ಯಂಗ್ಯಚಿತ್ರಗಳನ್ನು ರಚಿಸಿದ್ದಾರೆ.


ಪಿಯುಸಿ ಓದುವಾಗಲೇ ವ್ಯಂಗ್ಯಚಿತ್ರ ರಚನೆಯಲ್ಲಿ ತೊಡಗಿದ್ದು. ಮೊದಲ ವ್ಯಂಗ್ಯಚಿತ್ರವು 1985ರಲ್ಲಿ ‘ಸುಧಾ’ ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಅಲ್ಲಿಂದ ಈವರೆಗೆ ಹತ್ತು ಸಾವಿರಕ್ಕೂ ಹೆಚ್ಚು ವ್ಯಂಗ್ಯಚಿತ್ರಗಳನ್ನು ರಚಿಸಿದ್ದು ನಾಡಿನ ಎಲ್ಲಾ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಕ್ಯಾರಿಕೇಚರ್‍ಗಳಲ್ಲೂ ಪರಿಣತಿ ಪಡೆದಿದ್ದು ಸ್ಪಾಟ್ ಕ್ಯಾರಿಕೇಚರ್ ರಚನೆಯನ್ನೂ ರೂಡಿಸಿಕೊಂಡಿದ್ದಾರೆ.
ಪ್ರಸಿದ್ಧ ವ್ಯಂಗ್ಯಚಿತ್ರಕಾರರಾದ ಆರ್ ಕೆ ಲಕ್ಷ್ಮಣ್ ಅವರ ಮುಂದಾಳತ್ವದಲ್ಲಿ 1996ರಲ್ಲಿ ಮಹಾರಾಷ್ಟ್ರದ ನಾಗಪುರದಲ್ಲಿ ನಡೆದ ವ್ಯಂಗ್ಯಚಿತ್ರ ಕಾರ್ಯಗಾರದಲ್ಲಿ ಕರ್ನಾಟಕದ ಪ್ರತಿನಿಧಿಯಾಗಿ ಭಾಗವಹಿಸಿದ್ದರು.
ಕರ್ನಾಟಕ ವ್ಯಂಗ್ಯಚಿತ್ರಕಾರರ ಸಂಘದಲ್ಲಿ ಉಪಾಧ್ಯಕ್ಷರಾಗಿದ್ದಾರೆ. ಭಾರತೀಯ ವ್ಯಂಗ್ಯಚಿತ್ರಕಾರರ ಸಂಸ್ಥೆಯಲ್ಲಿ ಟ್ರಸ್ಟಿಯಾಗಿದ್ದಾರೆ. ದೇಶವಿದೇಶದ ವ್ಯಂಗ್ಯಚಿತ್ರ ಸ್ಪರ್ಧೆಯಲ್ಲಿ ಹಾಗೂ ಪ್ರದರ್ಶನಗಳಲ್ಲಿ ನಿರಂತರವಾಗಿ ಭಾಗವಹಿಸುತ್ತಿದ್ದಾರೆ.
ಸಂಪನ್ಮೂಲ ವ್ಯಕ್ತಿಯಾಗಿ ಕಾಸರಗೋಡು, ಮಂಗಳೂರು, ಧಾರವಾಡ, ಮೈಸೂರು ಹಾಗೂ ಬೆಂಗಳೂರು ಮತ್ತಿತರ ನಗರಗಳಲ್ಲಿ ಡಿಜಿಟಲ್ ಕಾರ್ಟೂನ್ ರಚನೆಯ ಕುರಿತಾದ ಎಲ್ಲಾ ವಯೋಮಾನದವರಿಗೆ ಪ್ರಾತ್ಯಕ್ಷಿಕೆ ಹಾಗೂ ತರಬೇತಿಯನ್ನು ಕೊಟ್ಟಿದ್ದಾರೆ. ಚಿತ್ರಕಲಾ ವಿದ್ಯಾಲಯಗಳಲ್ಲೂ ವಿದ್ಯಾರ್ಥಿಗಳಿಗಾಗಿ ಪ್ರಾತ್ಯಕ್ಷಿಕೆಗಳನ್ನು ಕೊಟ್ಟದ್ದಾರೆ.
ಶಾಲಾ ಪುಸ್ತಕ ಹಾಗೂ ಹಲವಾರು ಪುಸ್ತಕಗಳಿಗೆ ಸಾಂದರ್ಭಿಕ ಚಿತ್ರಗಳನ್ನು ರಚಿಸುತ್ತಾ ಬಂದಿದ್ದಾರೆ. ಕತೆ-ಕಾದಂಬರಿಗಳಿಗೆ ಮುಖಪುಟ ರಚನೆಯನ್ನೂ ಮಾಡುತ್ತಿದ್ದಾರೆ. ಅನಿಮೇಷನ್ ಕ್ಷೇತ್ರದಲ್ಲೂ ಇವರ ಕೊಡುಗೆ ಸಾಕಷ್ಟಿದೆ. ಸದಾ ಚಟುವಟಿಯಲ್ಲಿರುವ ನಾಗನಾಥ್ ತಾವು ಕಲಿತದ್ದನ್ನು ಪ್ರಾತ್ಯಕ್ಷಿಕೆಯ ಮೂಲಕ ಮತ್ತೊಬ್ಬರಿಗೂ ಹಂಚುವ ಕೆಲಸವನ್ನು ಮಾಡುತ್ತಾ ಬಂದಿದ್ದಾರೆ.

ಹೊಸ ವರ್ಷದ ಮೊದಲ ದಿನದಿಂದ ಆರಂಭವಾಗುವ ಈ ವ್ಯಂಗ್ಯಚಿತ್ರ ಉತ್ಸವವು ಯಶಸ್ವಿಯಾಗಿ ಹೆಚ್ಚು ಜನರನ್ನು ಆಕರ್ಷಿಸಲಿ ಎಂದು ಸಾಹಿತ್ಯಮೈತ್ರಿ ತಂಡ ಹಾರೈಸುತ್ತದೆ.

ತುಂಕೂರ್ ಸಂಕೇತ್

Related post

Leave a Reply

Your email address will not be published. Required fields are marked *