ವ್ಯಕ್ತಿಚಿತ್ರ ಕಲಾವಿದೆ ಪಾವನಾ ಬೈಲೂರು

ಪಾವನಾ ಬೈಲೂರು

ಪ್ರತಿಯೊಬ್ಬರಲ್ಲೂ ಒಂದಲ್ಲ ಒಂದು ಪ್ರತಿಭೆಯು ಸುಪ್ತವಾಗಿ ಅಡಗಿರುತ್ತದೆ. ಕೆಲವರು ಅವುಗಳನ್ನು ಬಾಹ್ಯ ಜಗತ್ತಿಗೆ ತೋರ್ಪಡಿಸಿದರೆ ಇನ್ನೊಂದಷ್ಟು ಮಂದಿ ಬಾಹ್ಯ ಜಗತ್ತಿಗೆ ತಮ್ಮ ಕಲೆಯನ್ನು ಪರಿಚಯಿಸುತ್ತಾರೆ. ಕಲೆ ಎನ್ನುವುದು ಎಲ್ಲರಿಗೂ ಸುಲಭದಲ್ಲಿ ಒಲಿಯುವುದಿಲ್ಲ. ಅದಕ್ಕಾಗಿ ಕಠಿಣ ಪರಿಶ್ರಮ ಮತ್ತು ಬದ್ಧತೆ ಅತೀ ಮುಖ್ಯ. ಕೆಲವೇ ಕೆಲವರಿಗೆ ಕೆಲವೊಂದು ಕಲೆಗಳು ಒಲಿಯುತ್ತವೆ. ಅವುಗಳ ಪೈಕಿ ಸಂಗೀತ, ನೃತ್ಯ, ಯಕ್ಷಗಾನ, ಚಿತ್ರಕಲೆ ಇತ್ಯಾದಿ ಪ್ರಮುಖವಾದವುಗಳು. ಚಿತ್ರಕಲೆಗೆ ಇಂದು ಹೆಚ್ಚಿನ ಅವಕಾಶಗಳಿದ್ದು, ಅವುಗಳ ಪೈಕಿ ತೈಲ ವರ್ಣ ಚಿತ್ರ, ಪ್ರಕೃತಿ ಚಿತ್ರ ಕಲಾವಿದರು ಎಲ್ಲೆಡೆ ಕಾಣ ಸಿಗುತ್ತಾರೆ. ಆದರೆ ಇಲ್ಲೊಬ್ಬಳು ವಿಭಿನ್ನವಾದ ವ್ಯಕ್ತಿ ಚಿತ್ರ ಕಲಾವಿದೆಯೊಬ್ಬಳಿದ್ದು, ಆಕೆಯ ಹೆಸರು ಪಾವನಾ ಬೈಲೂರು.

ಕುಂದಾಪುರ ತಾಲೂಕು ಬೈಲೂರಿನ ಮಂಜಪ್ಪ ಬಿ ಹಾಗೂ ಗೀತಾ ಕುಮಾರಿ ದಂಪತಿಗಳ ಮಗಳಾದ ಈಕೆ ತನ್ನ ಪ್ರಾರ್ಥಮಿಕ ಶಿಕ್ಷಣವನ್ನು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬೈಲೂರು, ಪ್ರೌಢ ಶಿಕ್ಷಣವನ್ನು ಸಂಜಯ ಗಾಂಧಿ ಪ್ರೌಢ ಶಾಲೆ ಅಂಪಾರು, ಪದವಿ ಪೂರ್ವ ಶಿಕ್ಷಣವನ್ನು ಸೈಂಟ್ ಮೇರಿಸ್ ಸ್ಕೂಲ್ ಕುಂದಾಪುರ, ಪದವಿ ಶಿಕ್ಷಣವನ್ನು ಭಂಡಾರ್ಕರ್ಸ್ ಕಾಲೇಜು ಮತ್ತು ಸಮಾಜ ಶಾಸ್ತçದಲ್ಲಿ ಸ್ನಾತಕೋತ್ತರ ಪದವಿಯನ್ನು ತೆಂಕನಿಡಿಯೂರು ಕಾಲೇಜಿನಲ್ಲಿ ಪಡೆದಿದ್ದಾಳೆ. ಇಂದು ವೃತ್ತಿಯಲ್ಲಿ ಈಕೆ ವ್ಯಕ್ತಿಚಿತ್ರ ಕಲಾವಿದೆ. ಅಂದರೆ ಯಾವುದಾದರೂ ಒಬ್ಬರು ವ್ಯಕ್ತಿಯ ಫೋಟೋವನ್ನು ತನ್ನ ವಿಭಿನ್ನ ಕೈಚಳಕದಿಂದ ಪೆನ್ಸಿಲ್ ಮೂಲಕ ಚಿತ್ರವಾಗಿ ಮೂಡಿಸುವ ನಿಪುಣತೆ. ಇದಕ್ಕಾಗಿ ಚಿತ್ರಕಲಾ ಮಂದಿರ ಉಡುಪಿಯಲ್ಲಿ ಒಂದು ವರ್ಷಗಳ ಕಾಲ ಡ್ರಾಯಿಂಗ್ ಸಂಬಂದಿಸಿದ ಕೋರ್ಸ್ ಮಾಡಿದ್ದಾಳೆ.

ವ್ಯಕ್ತಿಚಿತ್ರ ರಚನೆಯ ಕ್ಷೇತ್ರದಲ್ಲಿ ಹೆಚ್ಚು ಆಸಕ್ತಿ ಮತ್ತು ಕೌಶಲ ಹೊಂದಿರುವ ಈಕೆ ತನ್ನ ಬಿಡುವಿನ ವೇಳೆಯಲ್ಲಿ ಸಾಧಕರು ಮತ್ತು ಇತಿಹಾಸ ಪ್ರಸಿದ್ಧ ವ್ಯಕ್ತಿಗಳ ಚಿತ್ರವನ್ನು ಬಿಡಿಸಿ ಅವುಗಳನ್ನು ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್ ಮತ್ತು ವಾಟ್ಸಾಪ್‌ಗಳಲ್ಲಿ ಹಂಚಿಕೊಳ್ಳುತ್ತಿದ್ದಳು. ಇದನ್ನು ನೋಡಿದ ವೀಕ್ಷಕರು ಮೆಚ್ಚಿ ಹೆಚ್ಚಿನ ಅವಕಾಶಗಳನ್ನು ಈಕೆಗೆ ನೀಡಲಾರಂಭಿಸಿದರು. ಈ ರೀತಿ ಇದುವರೆಗೆ ಸುಮಾರು ೭೬ಕ್ಕೂ ಹೆಚ್ಚು ವ್ಯಕ್ತಿಗಳ ವ್ಯಕ್ತಿಚಿತ್ರವನ್ನು ತನ್ನ ಕೈಚಳಕದ ಮೂಲಕ ಪೆನ್ಸಿಲ್‌ನಿಂದ ಪೇಪವರ್ ಮೇಲೆ ಮೂಡಿಸಿದ್ದಾಳೆ. ತನ್ನ ಎಡಗೈ ಮೂಲಕ ಚಿತ್ರ ಬಿಡಿಸುವ ಈಕೆಯ ಕೈಯಲ್ಲಿ ಅದೆಷ್ಟೋ ಸೆಲೆಬ್ರಿಟಿಗಳ ಚಿತ್ರಗಳು ಅರಳಿರುವುದು ವಿಶೇಷ.

ಕುಂದಾಪುರ ನಗರದ ಸುತ್ತಮುತ್ತಲಿನ ಹಲವು ಶಾಲೆಗಳಲ್ಲಿ ಈಕೆ ತನ್ನ ಕೌಶಲದ ಮೂಲಕ ವಾಲ್ ಪೈಂಟಿಂಗ್ ನ್ನೂ ಮಾಡಿದ್ದಾಳೆ. ೨೦೧೯ರ ನವರಾತ್ರಿ ಸಂದರ್ಭದಲ್ಲಿ ಬೈಲೂರಿನಲ್ಲಿ ನಡೆದ ವಿಶೆಷ ಕಾರ್ಯಕ್ರಮದಲ್ಲಿ ಲೈವ್ ರೀತಿ (ಸ್ಥಳದಲ್ಲೇ, ಎಲ್ಲರೆದುರಲ್ಲೇ) ಚಿತ್ರವನ್ನು ಬರೆದು ವೀಕ್ಷಕರ ಮೆಚ್ಚುಗೆಗೆ ಪಾತ್ರಳಾಗಿದ್ದಾಳೆ. ಈಕೆಯ ಪ್ರತಿಭೆ ಕೇವಲ ವ್ಯಕ್ತಿ ಚಿತ್ರ‍್ಕಷ್ಟೇ ಸೀಮಿತವಾಗಿರದೇ ನೃತ್ಯ, ಹಾಡುಗಾರಿಕೆ, ಆಟೋಟ ಸ್ಪರ್ಧೆ ಮುಂತಾದ ಕ್ಷೇತ್ರಗಳಿಗೂ ಪಸರಿಸಿರುವುದು ಗಮನಾರ್ಹ. ಪ್ರಶಸ್ತಿ ಮತ್ತು ಪುರಸ್ಕಾರಗಳ ಕುರಿತು ಅಭಿಪ್ರಾಯವನ್ನು ಇಕೆಯ ಬಳಿ ಕೇಳಿದಾಗ ಆ ಆಸೆಯು ನನಗಿಲ್ಲ, ಅವಕಾಶ, ಜನರ ಪ್ರೀತಿ ಮತ್ತು ಪ್ರೋತ್ಸಾಹ ನನಗೆ ಅಗತ್ಯ ಎಂದು ಮುಗ್ದವಾಗಿ ಹೇಳುತ್ತಾಳೆ.

ವಿಶಿಷ್ಟ ಕಲೆ ಕೈಹಿಡಿದಿದ್ದು ಹೇಗೆ?

ನನ್ನ ಬಿಡುವಿನ ಸಮಯವನ್ನು ಮೊಬೇಲ್ ನೋಡುತ್ತಾ, ಹಾಡು ಕೇಳುತ್ತಾ ಅಥವಾ ಹರಟುತ್ತಾ ಕಳೆಯುವ ಬದಲು ಪುಸ್ತಕದ ಪುಟಗಳಲ್ಲಿ ಪ್ರಸಿದ್ಧ ವ್ಯಕ್ತಿಗಳ ಮುಖವನ್ನು ನೋಡುತ್ತಾ ಅದೇ ರೀತಿ ಸ್ಕೆಚ್ ಹಾಕುತ್ತಿದ್ದಳು. ಈಕೆ ಮಾಡಿದ ಎಲ್ಲಾ ವ್ಯಕ್ತಿ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೊಡ್ ಮಾಡುತ್ತಿದ್ದಳು. ಈಕೆಯ ಕೈಚಳಕ ಮತ್ತು ವಿಶಿಷ್ಟ ಕೌಶಲವನ್ನು ನೋಡಿದ ಆಸಕ್ತರು ತಮಗಿಷ್ಟವಾದ ವ್ಯಕ್ತಿಗಳ ವ್ಯಕ್ತಿ ಚಿತ್ರವನ್ನು ರಚಿಸಿ ಕೊಡಲು ಬೇಡಿಕೆ ನೀಡಲು ಪ್ರಾರಂಭಿಸಿದರು. ಅಲ್ಲಿಂದ ಇಲ್ಲಿಯರೆಗೂ ಈಕೆ ಸರಿಸುಮಾರು ೭೬ ವ್ಯಕ್ತಿಚಿತ್ರಗಳನ್ನು ಮಾಡಿದ್ದಾಳೆ ಪಾವನಾ.

ಈಕೆ ರಚಿಸಿರುವ ವ್ಯಕ್ತಿಚಿತ್ರಗಳ ಪೈಕಿ ಮದರ್ ತೆರೆಸಾ, ನರೇಂದ್ರ ಮೋದಿ, ದೀಪಿಕಾ ಪಡುಕೋಣೆ, ವೀರೇಂದ್ರ ಹೆಗ್ಗಡೆ, ರಚಿತಾ ರಾಮ್, ರಾಧಿಕಾ ಪಂಡಿತ್, ದಿ.ಇಂದಿರಾ ಗಾಂಧಿ, ಅಲ್ಲು ಅರ್ಜುನ್, ಉಸೇನ್ ಬೋಲ್ಟ್, ಇಂದ್ರಿತಾ ರೇ, ದರ್ಶೀಲ್ ಸಫಾರಿ ಇತ್ಯಾದಿ ಪ್ರಮುಖವಾದ್ದು. ಕಾಲೇಜು ದಿನಗಳಲ್ಲಿ ಈಕೆಯ ಹಿರಿಯ ವಿದ್ಯಾರ್ಥಿಗಳ ಪೈಕಿ ಒಂದಿಬ್ಬರು ವ್ಯಕ್ತಿ ಚಿತ್ರ ಕಲಾವಿದರಿದ್ದು, ಅವರು ನೀಡಿರುವ ಟಿಪ್ಸ್ಗಳನ್ನು ತನ್ನ ಕಲೆಯಲ್ಲಿ ಮೈಗೂಡಿಸಿಕೊಂಡಿದ್ದಾಳೆ. ಈ ಕಲೆಯ ಇನ್ನೂ ಕೆಲವು ತಂತ್ರಗಳನ್ನು ಯೂಟ್ಯೂಬ್ ಮೂಲಕ ಕಲಿತಿದ್ದಾಳೆ. ವಿದ್ಯಾಭ್ಯಾಸ ಮತ್ತು ಓದಿನ ಸಮಯದಲ್ಲಿ ಚಿತ್ರ ಬಿಡಿಸುವ ಬದಲು ಸಮಯ ಸಿಕ್ಕಿದಾಗ ಮಾತ್ರ ಮಾಡುತ್ತ್ತಿದ್ದಳು. ಇದೀಗ ತನ್ನ ಸ್ನಾತಕೋತ್ತರ ಪದವಿಯ ನಂತರ ಎರಡು ವರ್ಷಗಳಿಂದ ಚಿತ್ರಕಲಾ ಕ್ಷೇತ್ರದಲ್ಲೇ ಪೂರ್ಣಕಾಲಿಕವಾಗಿ ಈಕೆ ಕೆಲಸ ಮಾಡುತ್ತಿದ್ದಾಳೆ. ಕೊರೋನಾ ಹಾವಳಿಯ ಕಾರಣದಿಂದ ಚಿತ್ರಗಳಿಗೆ ಬೇಡಿಕೆ ಬರುವುದು ತುಸು ಕಡಿಮೆ ಎಂದು ಪಾವನಾ ಹೇಳುತ್ತಾರೆ.

ಬಹುಮುಖ ಪ್ರತಿಭೆ

ವಾಲ್ ಪೈಂಟಿಂಗ್ ನಲ್ಲೂ ಈಕೆಗೆ ಪರಿಣತಿಯಿದ್ದು, ಮದರ್ ತೆರೇಸಾ ಸ್ಕೂಲ್ ಶಂಕರನಾರಾಯಣ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬೈಲೂರು ಮತ್ತು ವಿನಾಯಕ ಶಾಲೆ ಕುಂದಾಪುರ ಇಲ್ಲಿನ ಗೋಡೆಗಳಲ್ಲಿ ಈಕೆಯ ವಾಲ್ ಪೈಂಟಿಂಗ್ ಗಳನ್ನು ಇಂದಿಗೂ ಕಾಣಬಹುದು. ಶಾಲೆ, ಕಾಲೇಜು ಮತ್ತಿತರ ಕಾರ್ಯಕ್ರಮಗಳಲ್ಲಿ ಗುಂಪು ನೃತ್ಯ ದರ್ಶನವನ್ನೂ ಈಕೆ ನೀಡಿದ್ದು, ಹಾಡುಗಾರ್ತಿಯೂ ಹೌದು. ಆಟೋಟಗಳಲ್ಲೂ ಈಕೆ ಒಂದು ಹೆಜ್ಜೆ ಮುಂದಿದ್ದು, ಕಾಲೇಜು ದಿನಗಳಲ್ಲಿ ಉದ್ದ ಜಿಗಿತ, ಓಟ, ರಿಲೇನಲ್ಲಿ ಪ್ರಥಮ ಬಹುಮಾನ ಪಡೆದಿದ್ದಾಳೆ.

ವ್ಯಕ್ತಿಚಿತ್ರವನ್ನು ಬಿಡಿಸುವುದು ಬಹಳ ಕಷ್ಟವಿದ್ದು, ಒಂದು ವ್ಯಕ್ತಿ ಚಿತ್ರವನ್ನು ಪೂರ್ಣಗೊಳಿಸಲು ಕನಿಷ್ಟವೆಂದರೂ ೪ ರಿಂದ ೫ ದಿನ ಬೇಕಾಗುತ್ತದೆ. ಬೇಡಿಕೆ ನೀಡುವವರು ನೀಡುವ ಫೋಟೋದಲ್ಲಿ ಕ್ಲಿಷ್ಟಕರ ಚಿತ್ರಗಳಿದ್ದರೆ ಅಂತವುಗಳನ್ನು ಸಂಪೂರ್ಣಗೊಳಿಸಲು ೧-೨ ವಾರಗಳೇ ಬೇಕಾಗುತ್ತದೆ ಎನ್ನುತ್ತಾಳೆ ಪಾವನಾ. ಒಬ್ಬ ವ್ಯಕ್ತಿಚಿತ್ರ ಕಲಾವಿದನಿಗೆ ಮುಖ್ಯವಾಗಿ ಬೇಕಾಗಿರುವುದು ತಾಳ್ಮೆ. ತಾಳ್ಮೆ ಇಲ್ಲವೆಂದರೆ ಯಾವುದೇ ಚಿತ್ರವನ್ನು ಮಾಡಲು ಸಾಧ್ಯವಿಲ್ಲ. ನಿರಂತರವಾಗಿ ೨-೩ ದಿನ ಚಿತ್ರ ಬಿಡಿಸುವ ಕೆಲಸವನ್ನೇ ಮಾಡುತ್ತಿದ್ದರೆ ಬೆನ್ನು ನೋವು ಬರುತ್ತದೆ, ಇದು ಚಿತ್ರ ಕಲಾವಿದರ ಬಹುದ ದೊಡ್ಡ ಸಮಸ್ಯೆ. ಆದರೂ ಛಲಕ್ಕೆ ಬಿದ್ದು ನಾನು ಚಿತ್ರ ಸಂಪೂರ್ಣಗೊಳ್ಳುವವರೆಗೂ ವಿರಮಿಸುವುದಿಲ್ಲ ಎಂದು ಹೇಳುತ್ತಾ ಮುಗುಳ್ನಗೆ ಬೀರುತ್ತಾಳೆ ಪಾವನಾ. ನನ್ನ ಕುಟುಂಬದ ಎಲ್ಲಾ ಸದಸ್ಯರು ನನ್ನ ಕಲೆಗೆ ಬೆಂಬಲವಾಗಿ ನಿಂತಿದ್ದು, ಚಿತ್ರ ಬಿಡಿಸಲು ಅಗತ್ಯವಿರುವ ಪರಿಕರಗಳನ್ನು ನನ್ನ ತಮ್ಮ ಆಲ್‌ಲೈನ್ ಮೂಲಕ ತರಿಸಿ ಕೊಡುತ್ತಾನೆ. ಅಪ್ಪ ಅಮ್ಮನೂ ಹಾಗೆ ಪರಿಕರಗಳ ಖರೀದಿಗೆ ಹಣ ಕೊಟ್ಟು ಸಹಕಾರ ನೀಡುತ್ತಾರೆ ಎಂದು ಹೆಮ್ಮೆಯಿಂದ ಹೇಳುತ್ತಾಳೆ ಪಾವನಾ ಬೈಲೂರು.

ಇವಳ ಸಾಧನೆಗೆ ಹಾಟ್ಸಾಫ್ ಎನ್ನೋಣ. ವ್ಯಕ್ತಿಚಿತ್ರದ ಬೇಡಿಕೆ ನೀಡುವುದಿದ್ದರೆ ಸಂಪರ್ಕಕ್ಕಾಗಿ Email:Pavana227@gmail.com ಗೆ ಬರೆಯಿರಿ.

ಸಂತೋಷ್ ರಾವ್ ಪೆರ್ಮುಡ
ಪೆರ್ಮುಡ ಮನೆ, ಪಟ್ರಮೆ ಗ್ರಾಮ ಮತ್ತು ಅಂಚೆ
ಬೆಳ್ತಂಗಡಿ ತಾಲೂಕು, ದ.ಕ ಜಿಲ್ಲೆ-574198
ದೂ: 9742884160

Related post

1 Comment

  • ಸುಂದರವಾದ ಕಲೆ

Leave a Reply

Your email address will not be published. Required fields are marked *