ವ್ಯಾಸ ಗುಟ್ಟು
ಒಂದು ದಿನ ಮುಸ್ಸಂಜೆಯಲಿ ಹಳ್ಳಿದಾರಿಯಲ್ಲಿ ಸೈಕಲ್ ಸವಾರಿ ಮಾಡುತ್ತಾ ಹೋಗುತ್ತಿದ್ದೆ. ನೇಸರನು ತನ್ನ ತಾಪವನ್ನಿಳಿಸಿಕೊಂಡು ಪಡುವಣದ ಕಡೆ ಜಾರುತ್ತಿದ್ದ. ಎತ್ತ ನೋಡಿದರೂ ಹಸಿರು ರಾಶಿಯಾಗಿ ಸುರಿಯುತ್ತಿದೆ. ಕಾಲುವೆಗಳಲ್ಲಿ ಸಮೃದ್ಧ ಜಲಧಾರೆ ಹರಿಯುತ್ತಿದೆ. ಮನಸ್ಸನಲ್ಲಿ ತುಂಬಾ ದೂರದವರೆಗೂ ಸೈಕಲ್‌ನಲ್ಲೇ ಹೋಗಿ ಬರೋಣ ಅಂತ ತೀರ್ಮಾನಿಸಿದೆ. ಪ್ರಶಾಂತ ವಾತಾವರಣದ ಸವಿ ನನ್ನಂತಹ ನಗರವಾಸಿಗೆಲ್ಲಿ ಸಿಗಬೇಕು? ಕಳೆದ ಮೂರ್ನಾಲ್ಕು ದಿನಗಳಿಂದ ಸೈಕಲ್ ಅಭ್ಯಾಸವಾಗಿಬಿಟ್ಟಿದೆ. ಹೀರೋ ಕಂಪನಿಯ ಗಟ್ಟಿಯಾದ ಸೈಕಲ್ ಎಪ್ಪತ್ತನೇ ಇಸವಿಯ ಸೈಕಲ್ ಇನ್ನೂ ಸದೃಢವಾಗಿದೆ. ಅದರ ಮೇಲೆ ಕುಳಿತು ಸವಾರಿ ಮಾಡುವುದೊಂದು ಆನಂದವೇ ಸರಿ.
ಹೀಗೇ ಯಾವುದೋ ಹಳೆಯ ಹಾಡೊಂದನ್ನು ಮನಸ್ಸಿನಲ್ಲೇ ಗುನುಗುತ್ತಾ ಆ ಹಳ್ಳಿಯ ದಾರಿಯಲ್ಲಿ ಸಾಗುತ್ತಿದ್ದಾಗ ಎದುರುಗಡೆ ನನ್ನ ಬಾಲ್ಯ ಸ್ನೇಹಿತ ಮುಕುಂದ ಎದುರಾದ. ಏನಪ್ಪಾ ಹೀರೋ ಸೈಕಲ್ ಸವಾರಿ ಹೊರಟೆ ಏನ್ಕಥೆ ಅಂತ ವಿಚಾರಿಸಿದ. ಏನಿಲ್ಲ ಮಾರಾಯ ನೀನೂ ಬಾ ಸುಮ್ನೇ ಹಾಗೇ ಒಂದು ಸುತ್ತು ಹೋಗಿಬರೋಣ ಅಂದೆ. ಸರಿ ನಡಿ ಹೊರಡೋಣ ಅಂದೆ. ನನ್ನ ಸೈಕಲ್‌ನ ಹಿಂದಿನ ಕ್ಯಾರಿಯರ್‌ನಲ್ಲಿ ಕುಳಿತುಕೊಂಡ. ನಾನೂ ಸಂಭ್ರಮದಿಂದಲೇ ಸೈಕಲ್ ತುಳಿಯಹತ್ತಿದೆ. ಹಳ್ಳಿಯು ಹಿಂದೆ ಸಾಗಿತು. ಮಣ್ಣಿನ ರಸ್ತೆಗಳು ಮುಗಿದು ಡಾಂಬರ್ ರಸ್ತೆಯು ಸಿಕ್ಕಿತು. ನನ್ನ ಉತ್ಸಾಹಕ್ಕೆ ಕೊನೆಯಿರಲಿಲ್ಲ.
ಸುಮಾರು ಹದಿನೈದು ನಿಮಿಷಗಳ ಕಾಲ ಆಗಿರಬಹುದು ಆಗ ಮುಕುಂದ ಏನೋ ಇದು ಒಳ್ಳೆ ವ್ಯಾಸಗುಟ್ಟಿನ ರೀತಿ ಸೈಕಲ್ ತುಳೀತಾ ಇದ್ಯಾ..ಗೊತ್ತಿಲ್ಲ ಗುರಿ ಇಲ್ಲ.. ಏನಾಯ್ತು ಅಂದ. ಆ ಮಾತು ಕೇಳಿದೊಡನೆಯೇ ನಾನು ಬ್ರೇಕ್ ಹಾಕಿ ಅವನನ್ನು ಕೆಳಗಿಳಿಸಿ ನಾನೂ ಇಳಿದು ರಸ್ತೆ ಬದಿಯ ಕಲ್ಲೊಂದಕ್ಕೆ ಸೈಕಲ್ ಒರಗಿಸಿ ಅಲ್ವೋ ಮುಕುಂದ ಅದೇನೋ ವ್ಯಾಸಗುಟ್ಟು ಹಾಗಂದ್ರೇನೋ.. ಅಂತ ಕೇಳಿದೆ.. ಅದಕ್ಕವನು ನಸುನಗುತ್ತಾ… ನಂಗೂ ಸರಿಯಾಗಿ ಗೊತ್ತಿಲ್ಲ ಕಣ್ಲೇ ನಮ್ಮಪ್ಪ ಆಗಾಗ ಹೇಳ್ತಾರೆ, ಅದೇನೋ ಗಣೇಶ, ಮಹಾಭಾರತ ಅಂತ ಹೇಳ್ತಾರೆ ನಂಗೂ ಅರ್ಥ ಆಗಿಲ್ಲಪ್ಪಾ ಅಂದ.. ನನಗೆ ಆ ಪದದ ಬಗ್ಗೆ ವಿಪರೀತ ಕುತೂಹಲ ಮೂಡಿತು. ಲೋ ಮುಕುಂದ ಈಗ ನಿಮ್ಮಪ್ಪ ಎಲ್ಲಿರ್ತಾರೋ ಅಂತ ಕೇಳಿದೆ. ಅವನು ಇನ್ನೆಲ್ಲಿ ಹೋಗ್ತಾರೆ, ಮನೇಲೇ ಇರ್ತಾರೆ ಅಂತ ಹೇಳಿದ. ನಿಮ್ಮಪ್ಪನ್ನ ಕೇಳಿದ್ರೆ ಹೇಳ್ತಾರೇನೋ ವ್ಯಾಸಗುಟ್ಟಿನ ಬಗ್ಗೆ ಎಂದೆ ಅದಕ್ಕೇನಂತೆ ಬಾ ಧಾರಾಳವಾಗಿ ಹೇಳ್ತಾರೆ ಅಂದ. ಸರಿ ಮತ್ತೆ ಸೈಕಲ್ ಹತ್ತಿ ಹಳ್ಳಿಯ ಕಡೆ ಮುಖ ಮಾಡಿದೆವು.
ಮತ್ತೆ ಹಳ್ಳಿ ತಲುಪಿದಾಗ ಸೂರ್ಯ ತನ್ನ ಅಂದಿನ ಪಾಳಿ ಮುಗಿಸಿ ವಿಶ್ರಾಂತಿಯತ್ತ ಮುಖ ಮಾಡಿದ್ದ. ಮುಕುಂದನ ಮನೆ ಸೇರಿಕೊಂಡ್ವಿ. ಮುಕುಂದನ ತಂದೆ ಮನೆಯಲ್ಲೇ ಇದ್ರು ನನ್ನನ್ನು ನೋಡಿ ಬಾಪ್ಪಾ ಕೂತ್ಕೋ ಅಂತೆಲ್ಲಾ ಉಪಚರಿಸಿದ್ರು, ನಾನು ಮುಜುಗರದಿಂದ್ಲೇ ಕುಳಿತೆ. ಮುಕುಂದನೇ ಅವರಪ್ಪನ ಹತ್ರ ಅಪ್ಪಾ ಇವನಿಗೆ ವ್ಯಾಸಗುಟ್ಟು ಅಂದ್ರೇನು ಅಂತ ತಿಳ್ಕೋಬೇಕಂತೆ ಅಂತ ಪ್ರಸ್ತಾಪ ಇಟ್ಟ.. ಅದಕ್ಕವರು ನಸುನಗುತ್ತಾ ಅಷ್ಟೇನಾ ಹೇಳ್ತೀನಿ ಇರು ಅಂದ್ರು.
ದ್ವಾಪರ ಯುಗದ ಅಂತ್ಯದ ಸಮಯ ಅದು ಕುರುಕ್ಷೇತ್ರದ ಯುದ್ಧ ಮುಗಿದು ಜನಮೇಜಯ ಪರೀಕ್ಷಿತ ಮಹಾರಾಜರುಗಳ ಆಡಳಿತಾವಧಿಯೂ ಮುಗಿದಿತ್ತು. ಈ ಕಾಲಾವಧಿಯಲ್ಲಿದ್ದ ವೇದವ್ಯಾಸನಿಗೆ ಈ ಎಲ್ಲಾ ಘಟನಾವಳಿಗಳನ್ನು ಒಂದು ಗ್ರಂಥವನ್ನಾಗಿ ದಾಖಲಿಸಿಡಬೇಕೆಂಬ ಮಹದಾಸೆ ಉಂಟಾಗುತ್ತದೆ. ಆದರೆ ಅಷ್ಟು ದೊಡ್ಡ ಕಥೆಯನ್ನು ಬರೆಯುವುದು ಹೇಗೆ ಅಂತ ಚಿಂತೆಗೀಡಾಗುತ್ತಾರೆ. ಅಷ್ಟರಲ್ಲಿ ನಾರದ ವ್ಯಾಸರಿಗೆ ಸಿಕ್ಕು ತ್ರಿಮೂರ್ತಿಗಳಾದ ಬ್ರಹ್ಮ ವಿಷ್ಣು ಮತ್ತು ಮಹೇಶ್ವರರಲ್ಲಿ ವಿಚಾರಿಸಿ ಪೂಜ್ಯರೇ ಅಂತ ತಿಳಿಸುತ್ತಾನೆ. ವ್ಯಾಸರೂ ತ್ರಿಮೂರ್ತಿಗಳ ಮೊರೆ ಹೋದಾಗ ಆ ಮೂವರೂ ಒಂದು ಒಮ್ಮತದ ನಿರ್ಣಯಕ್ಕೆ ಬರುತ್ತಾರೆ. ಅದೇನಂದ್ರೆ ಸಕಲ ವಿಘ್ನ ವಿನಾಶಕನಾದ ಗಣಪತಿಯೊಬ್ಬನಿಂದಲೇ ಈ ಮಹತ್ಕಾರ್ಯ ಸಾಧ್ಯ ಅಂತ. ಆ ಮಾತನ್ನು ಕೇಳಿ ವೇದವ್ಯಾಸರು ಗಣೇಶನ ಬಳಿಗೆ ತೆರಳಿ ತನ್ಮ ಉದ್ದೇಶವನ್ನು ತಿಳಿಸುತ್ತಾರೆ. ಇತ್ತ ಗಣಪತಿಯೂ ಸಂತಸದಿಂದಲೇ ಒಪ್ಪಿಕೊಳ್ಳುತ್ತಾನೆ..
ಇನ್ನೇನು ಮಹಾಕಾವ್ಯದ ರಚನೆಯಾಗಬೇಕು ಅಷ್ಟರಲ್ಲಿ ಗಣಪತಿಯು ಒಂದು ಷರತ್ತು ಹೇಳುತ್ತಾನೆ. ಮಹರ್ಷಿಗಳೇ ಒಮ್ಮೆ ಪ್ರಾರಂಭ ಆದ ನಂತರ ಯಾವುದೇ ಕಾರಣಕ್ಕೂ ನಿಲ್ಲಿಸಬಾರದು. ಒಂದು ವೇಳೆ ಹಾಗೇನಾದ್ರೂ ಆದ್ರೆ ನಾನೂ ಎದ್ದುಬಿಡುತ್ತೇನೆ. ಆಗ ಮಹಾಕಾವ್ಯ ಅಪೂರ್ಣ ಆಗತ್ತೆ ಎಂದು ಹೇಳುತ್ತಾನೆ. ವೇದವ್ಯಾಸರೂ ಇದ್ದಕ್ಕೆ ಒಪ್ಪಿಕೊಳ್ಳುತ್ತಾರೆ. ಮಹಾಭಾರತದ ಮಹಾಕಾವ್ಯ ರಚನೆ ಮೊದಲಾಗುತ್ತದೆ. ಆರಂಭದಿಂದಲೂ ಒಂದೇ ವೇಗದಲ್ಲಿ ಇಬ್ಬರೂ ಮಹಾಭಾರತದ ರಚನೆಯಲ್ಲಿ ತೊಡಗಿರುತ್ತಾರೆ. ನಿರರ್ಗಳ ವಾಗ್ಝರಿಯಿಂದ ಮಹಾಕಾವ್ಯವನ್ನು ಉಪದೇಶಿಸುತ್ತಾರೆ. ಅಷ್ಟೇ ವೇಗವಾಗಿ ಗಣಪತಿಯು ಅವರು ಹೇಳಿದ್ದನ್ನು ಬರೆಯುತ್ತಿರುತ್ತಾನೆ… ಸ್ವಲ್ಪ ಯೋಚಿಸಲೂ ಗಣಪತಿಯು ಬಿಡುತ್ತಿರಲಿಲ್ಲ. ಆದ ವೇದವ್ಯಾಸರು ಕ್ಲಿಷ್ಟಾತಿ ಕ್ಲಿಷ್ಟ ಪದಗಳನ್ನು, ಶ್ಲೋಕಗಳನ್ನು ಹೇಳುತ್ತಾರೆ. ಆ ಪದಗಳನ್ನು ಮತ್ತು ಶ್ಲೋಕಗಳನ್ನು ಗಣಪತಿಯು ಅರ್ಥೈಸಿಕೊಂಡು ಬರೆಯುವಷ್ಟು ಸಮಯ ದೊರೆತಾಗ ವೇದವ್ಯಾಸರು ಮಹಾಕಾವ್ಯದ ಮುಂದಿನ ಸಾಲುಗಳ ಬಗ್ಗೆ ಯೋಚಿಸುತ್ತಾರೆ. ಇದೇ ಆ ವ್ಯಾಸಗುಟ್ಟು ಅಂತ ಮುಕುಂದನ ತಂದೆ ತಿಳಿಸಿದಾಗ.. ನನಗೆ ಹೊಸತೊಂದು ವಿಷಯ ಕಲಿತ ಅನುಭವವಾಯ್ತು.
ಸಿ.ಎನ್. ಮಹೇಶ್