ಶ್ರೀ ಕ್ಷೇತ್ರ ಪೊಳಲಿ
ದಕ್ಷಿಣ ಕನ್ನಡ ಜಿಲ್ಲೆಯು ಕಡಲತಟದ ಇತಿಹಾಸ ಪ್ರಸಿದ್ಧ ಸ್ಥಳವಾಗಿದ್ದು, ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮದಲ್ಲಿರುವ ಶ್ರೀ ಕ್ಷೇತ್ರ ಪೊಳಲಿ ರಾಜರಾಜೇಶ್ವರಿ ದೇವಸ್ಥಾನವು ಅತ್ಯಂತ ಪುರಾತನ ದೇವಾಲಯಗಳಲ್ಲಿ ಒಂದು. ಇದು ಮಂಗಳೂರಿನಿಂದ ಸುಮಾರು 20 ಕಿ.ಮೀ ದೂರದಲ್ಲಿದ್ದು ಪೊಳಲಿಯು ಇತರ ದೇವಾಲಯಗಳಿಗಿಂತ ಭಿನ್ನವಾದ ಸ್ಥಳ ಪುರಾಣವನ್ನು ಹೊಂದಿದ್ದು ಇದು ಮುಖ್ಯವಾಗಿ ಫಲ್ಗುಣಿ ನದಿ ದಡದಲ್ಲಿದೆ.
ಮೂಲಗಳ ಪ್ರಕಾರ 1446ರಲ್ಲಿ ಫಲ್ಗುಣಿ ನದಿಯಲ್ಲಿ ಬಂದ ನೆರೆಯಿಂದಾಗಿ ಪೊಳಲಿ ದೇವಸ್ಥಾನದ ಪವಿತ್ರ ಸ್ಥಳವನ್ನು ಹೊರತು ಪಡಿಸಿ ಉಳಿದೆಲ್ಲಾ ಭೂ ಪ್ರದೇಶಗಳೂ ಪೂರ್ತಿ ನಾಮಾವಶೇಷವಾಗಿತ್ತು. ಕ್ರಿ.ಶ. 6ನೇ ಶತಮಾನದಲ್ಲಿ ಚೀನೀ ಯಾತ್ರಿಕ ಫಯಾನ್ ಭಾರತದಾದ್ಯಂತ ಸಂಚರಿಸುತ್ತಾ ಪೊಳಲಿಯ ದೇವಸ್ಥಾನದ ಮೂರ್ತಿಯನ್ನು ನೋಡಿ ಇದರ ಬಗ್ಗೆ ಇಷ್ಟೊಂದು ಪ್ರಭೆಯುಳ್ಳ ಅಥವಾ ಅದ್ಭುತವಾದ ಮೂರ್ತಿಯನ್ನು ನಾನೆಲ್ಲೂ ಕಂಡಿಲ್ಲ ಎಂದು ತನ್ನ ಪ್ರವಾಸ ಕಥನದಲ್ಲಿ ಉಲ್ಲೇಖಿಸಿದ್ದಾನೆ.
ಸಾವಿರಾರು ವರ್ಷಗಳ ಇತಿಹಾಸವುಳ್ಳ ಈ ದೇವಾಸ್ಥಾನವನ್ನು ಸುರಥ ಮಹಾರಾಜ ನಿರ್ಮಿಸಿದನೆಂಬ ಪುರಾಣವಿದೆ. ಈ ಮಹಾರಾಜನು ವೈರಿಗಳ ಆಕ್ರಮಣದಿಂದ ನಡೆದ ಯುದ್ಧದಲ್ಲಿ ಸೋತು ಸರ್ವಸ್ವವನ್ನೂ ಕಳೆದುಕೊಂಡು ಬೇಸರದಿಂದ ಕಾಡು ಹಾದಿಯಲ್ಲಿ ನಡೆದುಕೊಂಡು ಹೋಗುತ್ತಿರಲು ಕಾಡಿನಲ್ಲಿರುವ ಸುಮೇಧ ಮುನಿಯ ಆಶ್ರಮವನ್ನು ತಲುಪುತ್ತಾರೆ. ಈತನ ಕಷ್ಟಗಳನ್ನೂ ಕೇಳಿದ ಸುಮೇಧ ಮಹರ್ಷಿಗಳು ನಿನ್ನ ಈ ಪರಿಸ್ಥಿತಿಗಳಿಗೆ ಕಾರಣ ಆದಿಮಾಯೆಯ ಶಾಪ ಎಂದು ತಿಳಿಸುತ್ತಾರೆ. ಹೀಗಾಗಿ ರಾಜನಿಗೆ ಶ್ರೀ ಆದಿಮಾಯೆಯ ಕುರಿತಾಗಿ ಸುಮೇಧ ಮಹರ್ಷಿಗಳು ತಿಳಿಸುತ್ತಾ ತನ್ನ ಸರ್ವಸ್ವವನ್ನೂ ತ್ಯಜಿಸಿ ಆದಿ ಮಾಯೆ ರೂಪಿಣಿಯಾದ ಶ್ರೀ ರಾಜ ರಾಜೇಶ್ವರಿಯ ಕುರಿತಾದ ಮಂತ್ರೋಪದೇಶವನ್ನು ಮಾಡಿ ಆಕೆಯನ್ನು ಧ್ಯಾನಿಸಲು ಹೇಳುತ್ತಾರೆ. ಸುರಥ ಮಹಾರಾಜನು ಫಲ್ಗುಣಿ ನದಿ ದಡದಲ್ಲಿ ಮಣ್ಣಿನ ಆದಿಮಾಯೆಯ ಮೂರ್ತಿಯನ್ನು ಪ್ರತಿಷ್ಠಾಪಿಸಿ ನಿರಂತರವಾಗಿ ಮೂರು ವರ್ಷಗಳ ಕಾಲ ಕಠಿಣ ತಪಸ್ಸನ್ನಾಚರಿಸಿ ವರ ಪ್ರಸಾದವಾಗಿ ತಾನು ಕಳೆದುಕೊಂಡ ರಾಜ್ಯವನ್ನು ಮರಳಿ ಪಡೆಯುತ್ತಾನೆ. ಹೀಗೆ ಸುರಥ ಮಹಾರಾಜನಿಂದ ಪೂಜಿಸಲ್ಪಟ್ಟ ಮಣ್ಣಿನ ಮೂರ್ತಿಯೇ ಇಂದಿನ ಶ್ರೀ ರಾಜರಾಜೇಶ್ವರಿ ದೇವಿ ಎಂಬುವುದು ಸ್ಥಳ ಪುರಾಣ.
ಪುಳಿನ ಅಥವಾ ಪೊಳಲ್ ಎಂದರೆ ಮಣ್ಣು ಎಂಬ ಅರ್ಥದಿಂದ ಶ್ರೀದೇವಿಯ ಕ್ಷೇತ್ರಕ್ಕೆ ಪುಳಿನಾಪುರ “ಪೊಳಲಿ” ಎಂಬ ಹೆಸರು ಬಂದಿದೆ. ಇಲ್ಲಿನ ಪ್ರ‍್ರಧಾನ ದೇವತೆ ಶ್ರೀ ರಾಜರಾಜೇಶ್ವರಿ ದೇವಿ. ಈಕೆಯ ಎಡಗಡೆಯಲ್ಲಿ ಭದ್ರಕಾಳಿ, ಬಲಗಡೆಯಲ್ಲಿ ಶ್ರೀ ಸುಬ್ರಹ್ಮಣ್ಯ, ಶ್ರೀ ಮಹಾಗಣಪತಿ, ಬ್ರಹ್ಮವಟು, ವಿಷ್ಣುವಟು, ಶೂಲಿನಿ, ದಂಡಿನಿ, ಮಂಡಿನಿ ಮುಂತಾದ ಪರಿವಾರ ಗಣಗಳ ಸಾನಿಧ್ಯವು ಶ್ರೀ ಕ್ಷೇತ್ರದಲ್ಲಿದೆ.
ಶ್ರೀ ಕ್ಷೇತ್ರದ ಹೊರಾಂಗಣದ ಬಲಬದಿಯಲ್ಲಿ ಶ್ರೀ ದುರ್ಗಾಪರಮೇಶ್ವರಿಯ ಗುಡಿಯಿದ್ದು ಇದನ್ನು ಸುಮೇಧ ಮುನಿಯು ಪ್ರತಿಷ್ಠಾಪಿಸಿದರೆಂದು ಐತಿಹ್ಯವಿದೆ. ಎಡಬದಿಯಲ್ಲಿ ಶ್ರೀ ಕ್ಷೇತ್ರಪಾಲನ ಸನ್ನಿಧಿಯಿದೆ. ದೈನಂದಿನ ಪೂಜೆಗಳಲ್ಲಿ ಪ್ರಥಮ ಪೂಜೆ ದುರ್ಗಾಪರಮೇಶ್ವರಿಗೆ, ದ್ವಿತೀಯದಲ್ಲಿ ಪರಿವಾರ ದೇವತೆಗಳಿಗೆ ಪೂಜೆ ನಡೆದು ತದನಂತರ ಶ್ರೀ ರಾಜರಾಜೇಶ್ವರಿ ದೇವಿಗೆ ಪೂಜೆ ನಡೆಯುತ್ತದೆ ಇದು ಇಲ್ಲಿನ ವಿಶೇಷತೆ. ಮಂಗಳವಾರ, ಗುರುವಾರ ಮತ್ತು ಭಾನುವಾರದಂದು ಶ್ರೀ ಭದ್ರಕಾಳಿ ದೇವರಿಗೆ ರಾತ್ರಿ ಗಾಯತ್ರಿ ಪೂಜೆ ನಡೆಯುತ್ತದೆ. ಹದಿನಾರು ಮಾಗಣೆ ಒಳಪಟ್ಟ ಈ ದೇವಸ್ಥಾನವು ಸಾವಿರ ಸೀಮೆಯ ದೇವಸ್ಥಾನವೆಂದೇ ಪ್ರಸಿದ್ಧಿ ಪಡೆದಿದೆ. ಪವಿತ್ರವಾದ ಫಲ್ಗುಣಿ ನದಿಯ ಎಡ ದಂಡೆಯಲ್ಲಿ ಹೊಲ, ಬೆಟ್ಟ ಗುಡ್ಡಗಳ ನಡುವೆ ಈ ದೇವಾಲಯವು ರಾರಾಜಿಸುತ್ತಿದ್ದು ಶ್ರೀ ಮಹಾಕಾಳಿ, ಮಹಾಲಕ್ಷ್ಮಿ, ಮಹಾಸರಸ್ವತಿ ಸ್ವರೂಪಳಾದ ಶ್ರೀ ಮಾತೆ ಭಕ್ತರ ಭಕ್ತಿಗೆ ಫಲವನ್ನು ನೀಡುತ್ತ ಇಷ್ಟಪ್ರದಾಯಿನಿಯಾಗಿ ಇಲ್ಲಿ ಮೆರೆಯುತ್ತಿದ್ದಾಳೆ. ಈ ಕಾರಣದಿಂದಾಗಿಯೇ ಇಲ್ಲಿಗೆ ಭಕ್ತ ಮಹಾಸಾಗರವೇ ಹರಿದು ಬರುತ್ತಿರುವುದು ವಿಶೇಷವಾಗಿದೆ.
ಇಲ್ಲಿನ ಪ್ರಧಾನ ದೇವತೆಗಳಾದ ಶ್ರೀ ರಾಜರಾಜೇಶ್ವರಿ, ಶ್ರೀ ಭದ್ರಕಾಳಿ, ಶ್ರೀ ಮಹಾಗಣಪತಿ, ಶ್ರೀ ಸುಬ್ರಹ್ಮಣ್ಯ ದೇವರ ಆಳೆತ್ತರ ಕುಳಿತ ಭಂಗಿಯ ವಿಗ್ರಹಗಳಾಗಿದ್ದು, ಅದರಲ್ಲೂ ರಾಜರಾಜೇಶ್ವರಿ ದೇವಿಯ ಒಂಬತ್ತು ಅಡಿ ಎತ್ತರದ ಮಣ್ಣಿನ ಮೂರ್ತಿಯು ಭಾರತದಲ್ಲೇ ಪ್ರಥಮ ಎಂದರೂ ತಪ್ಪಾಗಲಾರದು. ಇಲ್ಲಿನ ಸಾನಿಧ್ಯ ವೃದ್ಧಿಗಾಗಿ ಮೂರ್ತಿಗೆ ಪ್ರತೀ ಹನ್ನೆರಡು ವರ್ಷಕ್ಕೊಮ್ಮೆ ಲೇಪಾಷ್ಟ ಗಂಧ ಬ್ರಹ್ಮಕಲಶಾಭಿಷೇಕವನ್ನು ತಂತ್ರಿಗಳ ಮೂಲಕ ನಡೆಸಲಾಗುತ್ತದೆ. ಇಲ್ಲಿ ಶ್ರೀ ದೇವಿಗೆ ತೊಡಲು ಹದಿನೆಂಟು ಮೊಳದ ಸೀರೆಯನ್ನು ಬಳಸುತ್ತಿರುವುದು ಇಲ್ಲಿನ ಇನ್ನೊಂದು ವಿಶೇಷತೆ. ಜಾತ್ರಾ ಸಂಧರ್ಭದಲ್ಲಿ ಶ್ರೀ ದೇವಿಗೆ ವಿಶಿಷ್ಟವಾಗಿ ಅಲಂಕರಿಸಲಾದ ಕಿರೀಟವನ್ನು ಅಳವಡಿಸಲಾಗುತ್ತದೆ. ಇದಕ್ಕೆ “ಪ್ರಭಾವಳಿ” ಎಂದು ಹೆಸರು. ಉತ್ಸವದ ನಾಲ್ಕನೆಯ ದಿನ ದೇವಾಲಯದಿಂದ ನೂರು ಮೀಟರ್ ದೂರದಲ್ಲಿರುವ “ಸಿಂಹಾಸನ ಕಟ್ಟೆ” ಯಲ್ಲಿ ದೇವಳದ ಮೂರ್ತಿಯನ್ನು ಪ್ರತಿಷ್ಠಾಪಿಸಿ ವಿಶಿಷ್ಟವಾಗಿ ಪೂಜಿಸಲಾಗುತ್ತದೆ.
ತಲುಪುವ ಮಾರ್ಗ:
ಈ ಕ್ಷೇತ್ರವು ಮಂಗಳೂರಿಗೆ ಅತ್ಯಂತ ಸನಿಹದಲ್ಲಿರುವುದರಿಂದ ಇಲ್ಲಿಗೆ ವಿಮಾನ, ರೈಲು ಮತ್ತು ಸಾರಿಗೆ ವ್ಯವಸ್ಥೆಯಿದೆ. ಬಜ್ಪೆ ವಿಮಾನ ನಿಲ್ದಾಣದಿಂದ ನೇರ ರಸ್ತೆ ಮಾರ್ಗದ ಮೂಲಕ ಹಾಗೂ ರೈಲು ಮತ್ತು ರಸ್ತೆಯ ಮೂಲಕ ಮಂಗಳೂರಿಗೆ ತಲುಪಿ ಅಲ್ಲಿಂದ ಬಿ.ಸಿ ರೋಡ್ ಮೂಲಕ ಖಾಸಗಿ ಬಸ್‌ಗಳ ಮೂಲಕ ಶ್ರೀ ಕ್ಷೇತ್ರ ಪೊಳಲಿಯನ್ನು ತಲುಪಬಹುದು. ಪ್ರತೀ 20 ನಿಮಿಷಕ್ಕೊಂದು ಬಸ್‌ಗಳ ವ್ಯವಸ್ಥೆಯಿದ್ದು ಸ್ವಂತ ವಾಹನದ ಮೂಲಕವೂ ತಲುಪಬಹುದಾಗಿದೆ.
ಸಂತೋಷ್ ರಾವ್ ಪೆರ್ಮುಡ
ಪಟ್ರಮೆ ಗ್ರಾಮ ಮತ್ತು ಅಂಚೆ,
ಬೆಳ್ತಂಗಡಿ ತಾಲೂಕು,
ದೂ:9742884160