ಸಂಗೀತ – ಸಮರ್ಪಣೆ
ಒಂದು ದಿನ ಸಂಗೀತ ಕಾರ್ಯಕ್ರಮ ಮುಗಿಸಿ ವೇದಿಕೆ ಇಂದ ಕೆಳಗಿಳಿಯುವ ಸಮಯಕ್ಕೆ ಸರಿಯಾಗಿ ಪ್ರೇಕ್ಷಕರೊಬ್ಬರು ಒಂದು ಪ್ರಶ್ನೆ ಕೇಳಿದರು. ನೀವು ಯಾತಕ್ಕಾಗಿ ಹಾಡುತ್ತಿರ ಎಂದು.ಆಗ ನನಗೆ ಏನೂ ಹೇಳಲು ತೋಚಲಿಲ್ಲ.ಬಹಳ ಯೋಚಿಸಿದೆ ನಾನು ಏಕೆ ಹಾಡುತ್ತೇನೆ, ಜೀವನ ನಡೆಸಲು! ಮನೆಯವರ ಒತ್ತಾಯಕ್ಕೊ!,ಕಲಿತಿರುವ ವಿಧ್ಯೆ ವ್ಯರ್ಥವಾಗಬಾರದೆಂದು!, ಅಥವಾ ಪ್ರೇಕ್ಷಕರ ಸಂತೋಷಕ್ಕೊ!, ಬಹಳ ಯೋಚಿಸಿದ ಮೇಲೆ ಕೊನೆಗೆ ಅನ್ನಿಸಿದ್ದು ಇದ್ಯಾವುದೂ ಅಲ್ಲ ನಾನು ಹಾಡುವುದು ಕೇವಲ ನನ್ನ ಆತ್ಮ ತೃಪ್ತಿಗೆ. ಸಂಗೀತ ಕಲಿಯುವುದು ಮತ್ತು ಕಲಿತು ಪ್ರಸ್ತುತ ಪಡಿಸುವುದು ಬಲವಂತ ಆಗಲಾರದು. ಯಾವುದೇ ಒತ್ತಾಯಕ್ಕೆ ಯಾವುದೇ ಕೆಲಸ ಸಮರ್ಪಣೆ ಆಗಲಾರದು. ಕೇವಲ ಕೆಲಸವಷ್ಟೇ ಆಗುತ್ತದೆ. ನನ್ನ ಪ್ರಕಾರ ಸಂಗೀತವೇ ಸಮರ್ಪಣೆ. ಹಾಡುವವರು ಮೊದಲು ಸಂಗೀತವನ್ನು ಅನಂದಿಸಿ ಅನುಭವಿಸಿದರೆ ತಾನೇ ಪ್ರೇಕ್ಷಕರಿಗೆ ನ್ಯಾಯ ಒದಗಿಸಲು ಸಾಧ್ಯ. ಹತ್ತು ಜನರಲ್ಲಿ ಒಬ್ಬರೊ ಇಬ್ಬರೊ ತಲೆದೂಗಿದರೂ ಸಾಕು ಮನಸ್ಸು ತೃಪ್ತಿ ಭಾವದಿಂದ ಬೀಗುತ್ತದೆ.
ಸಂಗೀತ ಹಾಡುವವರು ಹೇಗೆ ಹಾಡಿದರೂ ಎದುರಿಗಿರುವ ಪ್ರೇಕ್ಷಕ ಮಹಾಶಯರು ತಮ್ಮ ಅಭಿವ್ಯಕ್ತಿ ವ್ಯಕ್ತ ಪಡಿಸಿದಾಗಲೇ, ಅವರ ಮುಖಚರ್ಯೆಯಲ್ಲಿಯೇ ಹಾಡುವವರ ಯೋಗ್ಯತೆ ವ್ಯಕ್ತವಾಗುವುದು. ಅವರ ಚಪ್ಪಾಳೆಯೇ ಗಾಯಕರ ಸಂಭಾವನೆ ಎಂದೆನ್ನಬಹುದು. ಗಾಯಕರಿಗೆ ಸಿಗುವ ಸಂಭಾವನೆ ಕ್ಷಣಿಕ ಹಾಗೆ ಚಪ್ಪಾಳೆ,ಗೌರವ ನಿರಂತರ ಸ್ಮರಿಸುವಂತದ್ದು. ಬಹಳ ಸಲ ಸಂಗೀತಕ್ಕೆ ಸಾಹಿತ್ಯವೋ ಸಾಹಿತ್ಯಕ್ಕೆ ಸಂಗೀತವೋ ಎಂಬ ಚರ್ಚೆಗಳು ಕೂಡ ಎದುರಾಗಿದ್ದು ಉಂಟು. ನನ್ನ ಅನಿಸಿಕೆಯಲ್ಲಿ ಸಾಹಿತ್ಯಕ್ಕೆ ಸಂಗೀತ, ಸಂಗೀತಕ್ಕೆ ಸಾಹಿತ್ಯ, ಒಂದನ್ನೊಂದು ಬಿಟ್ಟು ಇರಲಾರದ ಅವಿನಾಭಾವ ಸಂಬಂಧ .ಸಂಗೀತ ಭಾವವಾದರೆ ಸಾಹಿತ್ಯ ಭಾವನೆ.ಇವೆರಡೂ ದಂಪತಿಗಳಂತೆ! ಜೀವನದ ಎರಡು ಚಕ್ರಗಳು. ಯಾವ ಸಂದರ್ಭಕ್ಕೆ ಯಾವ ಭಾವನೆ ಮುಖ್ಯ ಎಂದು ಅರಿತಾಗ ಗಾಯಕನ ಕೆಲಸ ಸುಗಮ. ಸರಿಯಾದ ಗೀತೆಯ ಆಯ್ಕೆ ಇಲ್ಲಿ ಪ್ರಮುಖ ಪಾತ್ರವಾಗುತ್ತದೆ.
ಆಯಾ ಸಂದರ್ಭಕ್ಕೆ ತಕ್ಕಂತೆ ಮದುವೆ, ನಾಮಕರಣ, ಹುಟ್ಟುಹಬ್ಬ, ಸ್ನೇಹಿತರ ಸಮಾಗಮ, ಸಂತೋಷ ಕೂಟ, ಮಹಿಳೆಯರ ದಿನಾಚರಣೆ, ಅಮ್ಮಂದಿರ ದಿನಾಚರಣೆ, ಶೋಕಾಚರಣೆ, ಗಣರಾಜ್ಯೋತ್ಸವ ಅಥವಾ ಸ್ವಾತಂತ್ರೋತ್ಸವ ಮತ್ತು ದೇವರ ಸನ್ನಿಧಿಯಲ್ಲಿ ಹಾಡುವುದು ಹೀಗೆ ಪ್ರತಿಯೊಂದು ಸಂದರ್ಭದಲ್ಲೂ ಗೀತೆಗಳ ಆಯ್ಕೆ ಬಹಳ ಮುಖ್ಯ. ಆಗ ಸಾಹಿತ್ಯ ಮುಖ್ಯ ಪಾತ್ರ ವಹಿಸುತ್ತದೆ. ಸಂದರ್ಭಕ್ಕೆ ಸೂಕ್ತ ಗೀತೆ ಹಾಡಿದರೆ ಗಾಯಕರು ಅರ್ಧ ಗೆದ್ದಂತೆಯೆ ಸರಿ. ಹೀಗೆ ಅರ್ಧ ಪಾಲು ಸಾಹಿತ್ಯಕ್ಕೂ, ಇನ್ನರ್ಧ ಪಾಲು ಸಂಗೀತಕ್ಕೂ ಕೊಡಬಹುದು. ಹಾಡುಗಾರರಿಗೆ ಒಂದೊಂದು ವೇದಿಕೆಯೂ ಮುಖ್ಯ. ಒಂದೊಂದು ವೇದಿಕೆಯಲ್ಲಿ ಸಿಗುವ ಅನುಭವಗಳು ಅವಿಸ್ಮರಣೀಯ. ಖುಷಿ ಇರಲಿ ದುಖಃವಿರಲಿ ವಾತಾವರಣದ ಸಂಪೂರ್ಣ ಜವಾಬ್ದಾರಿ ಗಾಯಕನದ್ದಾಗಿರುತ್ತದೆ. ಮನೆಯಲ್ಲಿ, ಮನದಲ್ಲಿ ಏನೇ ಕಷ್ಟ ನಷ್ಟಗಳಿದ್ದರೂ, ಸಂದರ್ಭಗಳು ಹೇಗೆ ಇದ್ದರೂ, ಅದನ್ನು ನಿಭಾಯಿಸುವುದು ಗಾಯಕರ ಆದ್ಯ ಕರ್ತವ್ಯವಾಗಿರುತ್ತದೆ.
ಗಾಯನದಲ್ಲಿ ಸಾಹಿತ್ಯ ಎಷ್ಟು ಮುಖ್ಯ ಎಂದರೆ ಅಲ್ಪ ಸ್ವಲ್ಪ ವ್ಯತ್ಯಾಸ ವಾದರೂ ಸಹ ಅಪಭ್ರಂಶವಾಗುವ ಅಪಾಯವಿರುತ್ತದೆ. ಅನ್ಯಭಾಷಿಗರ ಕನ್ನಡ ಪದಗಳ ಉಚ್ಚಾರಣೆ ಕೆಲವು ಸಲ ಹಾಸ್ಯಾಸ್ಪದವೆನಿಸುತ್ತದೆ. ಆದರೂ ಅವರು ಕನ್ನಡ ಕಲಿಯಲು ಪಡುವ ಪ್ರಯತ್ನ ಕನ್ನಡಿಗರಿಗೆ ಹೆಮ್ಮೆಯ ವಿಷಯ. ಒಮ್ಮೆ ಹೀಗೆ ಕನ್ನಡ ಹಬ್ಬದ ಕಾರ್ಯಕ್ರಮದಲ್ಲಿ ಯಾರೋ ಪ್ರೇಕ್ಷಕರೊಬ್ಬರು ಕನ್ನಡ ವೆಂದರೆ ಇಷ್ಟ ನಾನೊಂದು ಕನ್ನಡ ಗೀತೆ ಹಾಡುವೆ ಎಂದು ವೇದಿಕೆ ಮೇಲೆ ಬಂದರು. ಕನ್ನಡ ಹಬ್ಬದಲ್ಲಿ ಅನ್ಯಭಾಷಿಗರಿಂದ ಕನ್ನಡದ ಗೀತೆ ಇದಕ್ಕಿಂತ ಕನ್ನಡ ಹಬ್ಬದ ಆಚರಣೆ ಇನ್ನೆಲ್ಲಿ ಉಂಟು ಎಂದು ಅವರಿಗೂ ಅವಕಾಶ ಮಾಡಿಕೊಟ್ಟೆವು. ಡಾ.ರಾಜಕುಮಾರ್ ಹಾಡಿರುವ ಜನಪ್ರಿಯ ಗೀತೆ “ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು” ಎನ್ನುವ ಗೀತೆಯನ್ನು ಅವರದೇ ಆದ ಧಾಟಿಯಲ್ಲಿ ಅಂದರೆ ‘ಹೊತಿದರೆ ಕಂಡ ನದಲ್ ಹೋತಬೇಕು’…ಎಂದು ಹಾಡಲು ಶುರು ಮಾಡಿದರು. ಅಲ್ಲಿ ನೆರೆದಿದ್ದವರ ಕಥೆ ಹೇಗಿರಬೇಕೆಂದು ಊಹೆಗೂ ನಿಲುಕದ್ದು. ಇಡೀ ಕಾರ್ಯಕ್ರಮವೇ ನಗೆಗಡಲಲ್ಲಿ ತೇಲಿತು.ಅವರಿಗಂತೂ ತಾನು ತಪ್ಪು ಉಚ್ಚರಣೆ ಮಾಡುತಿದ್ದೇನೆಂಬ ಪರಿವೆ ಇರಲಿಲ್ಲ. ಆದರೆ ಅವರ ಕನ್ನಡ ಕಲಿಯುವ ಪ್ರಯತ್ನ ನಮಗೆ ಖುಷಿಯನ್ನು ಕೊಟ್ಟಿತು.
ಕನ್ನಡ ಹಬ್ಬದ ಆಚರಣೆ ಹೀಗೂ ಮಾಡಬಹುದಾ ಎಂದು ಅನ್ನಿಸಿದ್ದು ಆಗಲೇ. ಆದರೆ ಅವರು ವೇದಿಕೆ ಇಂದ ಇಳಿದ ಮೇಲೆ ಎಷ್ಟು ಸಾಧ್ಯವೋ ಅಷ್ಟು ಅವರ ಕನ್ನಡ ಸರಿ ಪಡಿಸಿದೆವು. ಮಗುವಿನಂತೆ ಮುಗ್ಧವಾಗಿ ಅಂದು ಅವರು ಕನ್ನಡ ಸರಿಪಡಿಸಿಕೊಂಡದ್ದು ಈಗಲೂ ನೆನಪಿನಲ್ಲಿ ಉಳಿದಿದೆ.
ಶೈಲ
ಬೆಂಗಳೂರು
1 Comment
ಸಮರ್ಪಣೆ ಇದ್ದಲ್ಲಿ ಸಂಭಾಷಣೆಗೂ ಮನ್ನಣೆ !!