ಸಂತಸದ ಚಿಗುರು
ಚಂಚಲತೆಯ ಮನಕೆ
ಮೌನವು ಬೀಗದಂತೆ..!
ಬಾಡುತಿಹ ಕಾನನಕೆ..
ಮುಸಲಧಾರೆ ಜೀವಾಮೃತದಂತೆ!!
ಬರದ ಬವಣೆಯ ಕಾಲಕೆ
ಮತ್ತೆ ಸಂತಸದ ಚಿಗುರು..!
ಕಡುತಾಪಕೆ ಮುರುಟಿದರೂ..
ಮತ್ತೆ ಚಿಗುರಿತು ಎಲ್ಲೆಲ್ಲೂ ಹಸಿರು!!
ಇರಬೇಕು ಕಮಲದೆಲೆಯ ತೆರದಿ
ನೀರಿಗಂಟಿಯೂ ಅಂಟದಂತೆ..!
ಎಲ್ಲೊ ಮುದುಡಿ ಬೇರೆಲ್ಲೋ
ಚಿಗುರುವ ಕೊರಡಂತೆ!!
ಬೀಗದಲಿ ಬಂಧಿಸಿಯೂ
ಅಂತರಾಳವು ಪುಟಿದಿದೆ..!
ನನಗೆ ಸಾಟಿ ಯಾರೆನುತಾ..
ಹಚ್ಚಹಸಿರು ತಾ ನಗುತಿದೆ!!
ಸುಮನಾ ರಮಾನಂದ