ಸಂಪನ್ಮೂಲ ವ್ಯಕ್ತಿಯೆಂಬ ಮಹಾನ್ ಕಲಾವಿದ
ಯಾವುದೇ ಒಂದು ವಿಚಾರದ ಬಗ್ಗೆ ಮಾಹಿತಿಯ ವಿವರಣೆಯನ್ನು ನೀಡಲು ಬಹಳ ಹಿಂದಿನ ಕಾಲದಿಂದಲೂ ಪ್ರಚಲಿತದಲ್ಲಿರುವ ಒಂದು ಪದ್ದತಿ ಎಂದರೆ ಉಪನ್ಯಾಸ. ಉಪನ್ಯಾಸ ಎಂದ ಕೂಡಲೇ ಇಂದು ವಿದ್ಯಾರ್ಥಿಗಳ ಪಾಲಿಗೆ ಅದೊಂದು ಮಹಾನ್ ಕೊರೆತ ಎಂದೇ ಬಿಂಬಿತವಾಗಿದೆ. ಯಾಕೆಂದರೆ ಉಪನ್ಯಾಸಕರು ಒಂದಷ್ಟು ವಿಚಾರಗಳನ್ನು ಅಭ್ಯಸಿಸಿಕೊಂಡು ಬಂದು ಬಡಪಾಯಿ ವಿದ್ಯಾರ್ಥಿಗಳ ಮೇಲೆ ಪ್ರಯೋಗ ಮಾಡುತ್ತಾರೆ. ಇದು ಗುಬ್ಬಿಯ ಮೇಲೆ ಬ್ರಹ್ಮಾಸ್ತ್ರ ಪ್ರಯೋಗ ಎಂಬಂತಾಗಿಬಿಡುತ್ತದೆ. ತಾನು ತಿಳಿಸುತ್ತಿರುವ ವಿಚಾರಗಳನ್ನು ವಿದ್ಯಾರ್ಥಿಗಳು ಎಷ್ಟು ಅರ್ಥೈಸಿಕೊಳ್ಳುತ್ತಿದ್ದಾರೆ, ತಾನು ನೀಡುತ್ತಿರುವ ಮಾಹಿತಿ ಅವರನ್ನು ತಲುಪುತ್ತಿದೆಯೇ ಎಂದು ಯಾರೂ ಯೋಚಿಸುವ ಗೊಡವೆಗೇ ಹೋಗುವುದಿಲ್ಲ, ಬದಲಾಗಿ ನಾನು ಹೇಳಬೇಕಾಗಿರುವುದನ್ನು ಹೇಳಿದರೆ ನನ್ನ ಕೆಲಸ ಮುಗಿಯಿತು ಎಂದು ಕೈತೊಳೆದುಕೊಳ್ಳುವವರೇ ಹೆಚ್ಚು. ಇದು ಸಾರ್ಥಕ ವಿಷಯ ಮಂಡನೆ ಖಂಡಿತಾ ಆಗಲಾರದು.
ಇಂದಿನ ದಿನಗಳಲ್ಲಿ ಉಪನ್ಯಾಸ ಎನ್ನುವುದು ವಿಷಯ ಜ್ಞಾನದೊಂದಿಗೆ ವಿಷಯ ಮಂಡನೆಯು ಒಂದು ಮಹಾನ್ ಕಲೆಯೇ ಆಗಿ ಬಿಟ್ಟಿದೆ. ಅದೆಷ್ಟೊ ಮಂದಿ ವಿಷಯ ತಜ್ಞರು ವಿಷಯದ ಕುರಿತು ಉತ್ತಮ ಪಾಂಡಿತ್ಯವನ್ನು ಹೊಂದಿದ್ದರೂ ಕೂಡಾ ಅದನ್ನು ವಿದ್ಯಾರ್ಥಿಯ ಪ್ರಶಿಕ್ಷಣಾರ್ಥಿಗಳಿಗೆ ಮುಟ್ಟಿಸುವಲ್ಲಿ ವಿಫಲರಾಗುತ್ತಿದ್ದಾರೆ. ಅದೇ ವಿಷಯ ಜ್ಞಾನ ಇಲ್ಲದವರು ತನ್ನ ಅದ್ಭುತ ಸಾಮರ್ಥ್ಯದ ಮೂಲಕ ವಿದ್ಯಾರ್ಥಿಗಳನ್ನು ಸಮರ್ಥವಾಗಿ ಮುಟ್ಟುವಲ್ಲಿ ಸಫಲರಾಗುತ್ತಿದ್ದಾರೆ. ಆದ್ದರಿಂದ ವಿಚಾರವನ್ನು ಎಲ್ಲರ ಮನ ಮುಟ್ಟುವಂತೆ ಮಂಡಿಸುವುದು ಒಂದು ಸವಾಲೇ ಸರಿ. ಆದುದರಿಂದ ಉತ್ತಮ ಸಂಪನ್ಮೂಲ ವ್ಯಕ್ತಿಯಾಗುವ ನಿಟ್ಟಿನಲ್ಲಿ ಈ ಕೆಳಕಂಡ ಅಂಶಗಳನ್ನು ಗಮನದಲ್ಲಿಟ್ಟುಕೊಂಡಲ್ಲಿ ಎಲ್ಲರೂ ಇಷ್ಟಪಡುವ ಒಬ್ಬ ಉತ್ತಮ ಸಂಪನ್ಮೂಲವ್ಯಕ್ತಿ ಆಗಬಹುದು.
- ತನ್ನ ಶ್ರೋತೃಗಳನ್ನು ಗೌರವದಿಂದ ನೋಡುವುದು ಹಾಗೂ ಅವರಿಗೂ ವಿಷಯದ ಕುರಿತು ಅಲ್ಪ ಸ್ವಲ್ಪ ಜ್ಞಾನವಿದೆ ಎಂಬ ವಿಚಾರವನ್ನು ಅರಿತುಕೊಂಡು ಅವರೆಲ್ಲರೂ ನನ್ನ ವಿಚಾರಗಳನ್ನು ಆಲಿಸಲು ಬಂದಿರುವವರು ವಿನಹ ಅವರೆದುರು ನಾನು ಮಾತನಾಡುವುದು ನನ್ನ ಹಕ್ಕು ಎಂಬ ಅಹಂಕಾರದ ಭಾವನೆ ಬೇಡ.
- ವಿದ್ಯಾರ್ಥಿಗಳು ತರಗತಿಯಲ್ಲಿ ಮುಕ್ತ ಮನಸ್ಸಿನಿಂದ ಕುಳಿತು ಉಪನ್ಯಾಸ ಕೇಳುವಂತಹ ವಾತಾವರಣವನ್ನು ಉಪನ್ಯಾಸಕನಾದವನು ನಿರ್ಮಾಣ ಮಾಡಬೇಕು; ಅಂದರೆ ಯಾವುದೇ ಭಯ ಅಥವಾ ಅಳುಕಿನೊಂದಿಗೆ ವಿದ್ಯಾರ್ಥಿಗಳನ್ನು ಕಟ್ಟಿ ಹಾಕಿ ವಿಷಯ ಮಂಡನೆ ಮಾಡುವಂತಾಗಬಾರದು.
- ಪ್ರತಿಯೊಬ್ಬ ವಿದ್ಯಾರ್ಥಿಯನ್ನು ಗಮನಿಸುತ್ತಾ ಅವರ ಗಮನವನ್ನು ತನ್ನೆಡೆಗೆ ಕೇಂದ್ರೀಕರಿಸುವಂತೆ ಮಾಡುತ್ತಾ ತನ್ನ ವಿಷಯ ಮಂಡನೆಯನ್ನು ಮಾಡಬೇಕು ಹಾಗೂ ತೀರಾ ಹಿಂಬದಿಯ ಆಸನದಲ್ಲಿ ಕುಳಿತಿರುವ ವಿದ್ಯಾರ್ಥಿಗಳನ್ನು ಹೆಚ್ಚಿನ ಏಕಾಗ್ರತೆಯೊಂದಿಗೆ ಗಮನಿಸುತ್ತಿರಬೇಕು.
- ಉಪನ್ಯಾಸಕನಾದವನ್ನು ನಿರ್ದಿಷ್ಟ ವಿಷಯಗಳನ್ನು ತಿಳಿಸುವಲ್ಲಿ ಸರಿಯಾದ ಉಪನ್ಯಾಸದ ವಿಧಾನವನ್ನು ಮೊದಲೇ ನಿರ್ಧರಿಸಿ ಆ ಪ್ರಕಾರ ತರಗತಿಯನ್ನು ನಡೆಸಬೇಕು. (ಉದಾ: ಉಪನ್ಯಾಸ, ಪ್ರಾಯೋಗಿಕ ಕಲಿಕೆ, ದೃಶ್ಯ ಹಾಗೂ ಶ್ರವಣ ಮಾಧ್ಯಮದ ಬಳಕೆ, ಗುಂಪು ಚರ್ಚೆ, ಕಲಿಕಾ ಆಟಗಳು, ಘಟನೆಯ ವಿಶ್ಲೇಷಣೆ, ಕ್ಷೇತ್ರ ಸಂದರ್ಶನ, ಪಾತ್ರಾಭಿನಯ ಇವುಗಳಲ್ಲಿ ಉಪನ್ಯಾಸ
ವಿಷಯಕ್ಕೆ ತಕ್ಕಂತೆ ಸರಿಯಾದ ತರಬೇತಿ ವಿಧಾನದ ಬಳಕೆಯನ್ನುಮಾಡಿದಲ್ಲಿ ತರಗತಿಗಳು ಆಸಕ್ತಿದಾಯಕವಾಗಬಹುದು. - ತಾನು ಉಪನ್ಯಾಸವನ್ನು ನೀಡುತ್ತಾ ಇದ್ದಂತೆ ಶಿಕ್ಷಣಾರ್ಥಿಗಳಿಗೆ ತಾನು ತಿಳಿಸುತ್ತಿರುವ ವಿಚಾರಗಳು ಸರಿಯಾಗಿ ತಲುಪುತ್ತಿದೆಯೇಯ, ಅರ್ಥೈಸಿಕೊಳ್ಳುತ್ತಿದ್ದಾರೆಯೇ ಎಂದು ಗ್ರಹಿಸಿಕೊಂಡು ವಿಷಯವನ್ನು ಮಂದುವರಿಸುವ ಮನೋಭಾವವಿರಬೇಕು.
- ಶಿಕ್ಷಣಾರ್ಥಿಗಳಲ್ಲಿ ತರಗತಿ ಪ್ರಾರಂಭಿಸುವ ಪೂರ್ವದಲ್ಲೇ ನಾನು ಹೇಳುತ್ತಿರುವ ವಿಚಾರ ನಿಮಗೆ ಅರ್ಥವಾಗದಿದ್ದರೆ ಅದೆಷ್ಟು ಬಾರಿ ಬೇಕಿದ್ದರೂ ನಿಮಗೆ ಅರ್ಥವಾಗುವ ರೀತಿಯಲ್ಲಿ ನಾನು ತಿಳಿಸಲು ಬದ್ಧನು ಎಂಬ ಮಾತಿನೊಂದಿಗೆ ಧೈರ್ಯವನ್ನು ತುಂಬಬೇಕು ಹಾಗೂ ಮುಕ್ತ ಮನಸ್ಸಿನೊಂದಿಗೆ ತರಗತಿಯಲ್ಲಿ ಕುಳಿತುಕೊಳ್ಳುವಂತೆ ಮಾಡಬೇಕು.
- ಅದೆಷ್ಟೋ ಬಾರಿ ಕೆಲವೊಂದು ಉಪನ್ಯಾಸಕರು ತರಗತಿಗೆ ಬಂದರೆಂದರೆ ಭಯದಲ್ಲೇ ಕುಳಿತುಕೊಂಡು ಒಮ್ಮೆ ತರಗತಿ ಮುಗಿದು ಉಪನ್ಯಾಸಕರು ಹೊರಗೆ ಹೋದರೆ ಸಾಕಪ್ಪಾ ಎಂಬ ಭಾವನೆ ಶಿಕ್ಷಣಾರ್ಥಿಗಳಲ್ಲಿ ಇರುತ್ತದೆ, ಇಲ್ಲಿ ಮುಕ್ತ ಕಲಿಕೆಗೆ ಅವಕಾಶ ಇರಲಾರದು. ಉಪನ್ಯಾಸಕ ಮತ್ತು ಶಿಕ್ಷಣಾರ್ಥಿಗಳ ನಡುವಿನ ಸಂಬಂಧ ಗೆಳೆಯರಂತಿರಬೇಕು.
- ಶಿಕ್ಷಣಾರ್ಥಿಗಳನ್ನು ತನ್ನ ವಿಷಯ ಜ್ಞಾನ ಮತ್ತು ತನ್ನಮಂಡನೆಯ ಕಲೆಯ ಮೂಲಕ ನಿಯಂತ್ರಿಸಬೇಕೇ ವಿನಹ ದರ್ಪಅಥವಾ ಬೈಗುಳಗಳಿಂದಲ್ಲ.
- ಉಪನ್ಯಾಸಕನಾದವನು ಹಸನ್ಮುಖಿಯಾಗಿರಬೇಕೇ ವಿನಹ ಮುಖವನ್ನು ಸದಾ ಕಾಲ ಗಂಟಿಕ್ಕಿಕೊಂಡಿರಬಾರದು.
- ಉಪನ್ಯಾಸವು ಮುಕ್ತ ಸಂವಾದದೊಂದಿಗೆ ಆಗಬೇಕಲ್ಲದೆ ಏಕಮುಖ ಭಾಷಣವಾಗಬಾರದು, ಶಿಕ್ಷಣಾರ್ಥಿಗಳು ತನಗೆ ತಿಳಿದಿರುವ ವಿಚಾರಗಳನ್ನು ಹಂಚಿಕೊಳ್ಳುವಂತಹ ಮುಕ್ತ ವಾತಾವರಣ ನಿರ್ಮಿಸಿ, ಪ್ರತಿಯೊಬ್ಬರೂ ಪ್ರಶ್ನೆ ಕೇಳುವ ಮನೋಭಾವ
ಬೆಳೆಸಿಕೊಳ್ಳುವಂತೆ ಪ್ರೇರೇಪಿಸಬೇಕು. - ಉಪನ್ಯಾಸ ವಿಧಾನಗಳಲ್ಲಿ ಶಿಕ್ಷಣಾರ್ಥಿಗಳು ಓದುವಿಕೆಯಿಂದ ಕೇವಲ 10%, ಕೇಳುವಿಕೆಯಿಂದ 20%, ನೋಡುವುದರಿಂದ 30%, ನೋಡುವುದು ಮತ್ತು ಕೇಳುವಿಕೆಯಿಂದ 50%, ತಾನು ಸ್ವತಃ ಮಾಡುವುದರಿಂದ 70%, ಹಾಗೂ ಪಾಲ್ಗೊಳ್ಳುವಿಕೆಯಿಂದ 90% ಕಲಿಕೆಯನ್ನು ಮಾಡಬಹುದಾಗಿದ್ದು ಆದಷ್ಟು ತರಬೇತಿಗಳನ್ನು ಪಾಲ್ಗೊಳ್ಳುವಿಕೆಯ ಮೂಲಕ ಮಾಡಿದಲ್ಲಿ ಹೆಚ್ಚು
ಪರಿಣಾಮಕಾರಿಯಾಗಬಹುದು. - ತರಗತಿಗಳಲ್ಲಿ ಸಮಸ್ಯಾತ್ಮಕ ವ್ಯಕ್ತಿಗಳಿದ್ದಾಗ ಅವರನ್ನು ತನ್ನ ಅಧಿಕಾರ ಹಾಗೂ ಬೆದರಿಸುವ ತಂತ್ರಗಳ ಮೂಲಕ
ನಿಯಂತ್ರಿಸುವುದರ ಬದಲಾಗಿ ತನ್ನ ಮಾತುಗಾರಿಕೆ ಹಾಗೂ ವಿಷಯ ಪಾಂಡಿತ್ಯದ ಮೂಲಕ ಅವರನ್ನು ನಿಯಂತ್ರಿಸುವ ಕೌಶಲ್ಯವನ್ನು ಮೈಗೂಡಿಸಿಕೊಳ್ಳುವುದು. - ವಿಷಯ ಮಂಡನೆಯು ನಿರಂತರವಾದ ಕೊರೆತವಾಗಿರದೆ ಆಸಕ್ತಿದಾಯಕವಾಗಿಸುವ ನಿಟ್ಟಿನಲ್ಲಿ ವಿಷಯಕ್ಕೆ ಸಂಬಂಧಿಸಿದ
ಕಥೆಗಳು, ಕೆಲವೊಂದು ಚಟುವಟಿಕೆಗಳು, ಆಟಗಳು ಹಾಗೂ ಕವನಗಳ ಮೂಲಕ ಹೆಚ್ಚು ರಂಜನೀಯವಾಗಿ ಮಾಡಬಹುದು. - ಉಪನ್ಯಾಸದ ನಂತರ ಪ್ರತಿಯೊಬ್ಬ ಶಿಕ್ಷಣಾರ್ಥಿಯಿಂದ ತನ್ನ ಉಪನ್ಯಾಸದ ಕುರಿತು ವಸ್ತುನಿಷ್ಠವಾದ ಮೌಲ್ಯ ಮಾಪನವನ್ನು
ಪಡೆದುಕೊಳ್ಳುವುದು ಉತ್ತಮ ಹಾಗೂ ಪಡೆದುಕೊಂಡ ಮೌಲ್ಯ ಮಾಪನದಲ್ಲಿ ಧನಾತ್ಮಕ ಅಥವಾ ಋಣಾತ್ಮಕ ಮೌಲ್ಯ ಮಾಪನ
ದೊರೆತಲ್ಲಿ ಅವುಗಳನ್ನು ಧನಾತ್ಮಕವಾಗಿಸುವ ನಿಟ್ಟಿನಲ್ಲಿ ಮುಕ್ತ ಪ್ರಯತ್ನ ಅತಿ ಅವಶ್ಯಕ. - ಉಪನ್ಯಾಸಕನಾದವನಿಗೆ ಉತ್ತಮ ಆಂಗಿಕ ಭಾಷೆಯ ಬಳಕೆಯೂ ತಿಳಿದಿರಬೇಕು. ವಿಷಯ ಮಂಡನೆ ಮಾಡುವಾಗ ಒಂದೇ
ಕಡೆ ಕಂಬದಂತೆ ನಿಲ್ಲಬಾರದು, ನಿಯಮಿತವಾದ ಚಲನೆಯೊಂದಿಗೆ ಕೈಗಳು ಹಾಗೂ ದೇಹದ ಅಂಗಾಂಗಗಳ ಬಳಕೆಯೂ
ಸಮರ್ಪಕವಾಗಿ ಮಾಡಿಕೊಳ್ಳುವ ಕಲೆಯನ್ನು ಅಳವಡಿಸಿಕೊಳ್ಳಬೇಕು. - ವಿಚಾರಗಳ ಮಂಡನೆ ಮಾಡುವಾಗ ಅವುಗಳು ನೀರಸವಾಗಿ ಮಾಡಿ ಎದುರಿದ್ದವರಿಗೆ ನಿದ್ದೆಯನ್ನು ಬರಿಸುವಂತಿರಬಾರದು ಹಾಗೂ ಮಾತಿನ ಶೈಲಿ ಆಕರ್ಷಣೀಯವಾಗಿದ್ದು ಧ್ವನಿಯಲ್ಲಿ ಏರಿಳಿತಗಳನ್ನು ಮಾಡಿಕೊಂಡು ಮಾತನಾಡುವ ಕಲೆಯನ್ನು ಬೆಳೆಸಿಕೊಳ್ಳಬೇಕು.
- ಉಪನ್ಯಾಸಕ ಹುದ್ದೆಗೆ ಸಂಬಂಧಪಟ್ಟಂತೆ ಎಷ್ಟೇ ಪದವಿಗಳನ್ನು ಪಡೆದರೂ ಸಹಾ ಆತನೊಬ್ಬ ಉತ್ತಮ ಉಪನ್ಯಾಸಕನಾಗಲು ತರಗತಿಯಲ್ಲಿ ತಾನು ಉಪನ್ಯಾಸ ಮಾಡುವಾಗ ಶಿಕ್ಷಣಾರ್ಥಿಗಳಿಂದ ಬರುವ ಪ್ರಶ್ನೆಗಳಿಗೆ ನಗು ಮುಖದಿಂದಲೇ ಉತ್ತರಿಸುವ ಮನೋಭಾವವಿರಬೇಕು
- ಶಿಕ್ಷಣಾರ್ಥಿಗಳು ಕೇಳುವ ಪ್ರಶ್ನೆ ಕ್ಲಿಷ್ಟವಾಗಿದ್ದಲ್ಲಿ ಆ ವಿಚಾರದ ಕುರಿತು ಅರಿತುಕೊಂಡು ಮರುದಿನ ತಿಳಿಸುವೆನೆಂದು ಹೇಳುವ
ಮನೋಭಾವದೊಂದಿಗೆ ತಾನೂ ಒಬ್ಬ ನಿತ್ಯವೂ ಹೊಸತನವನ್ನು ಕಲಿಯುವ ವಿದ್ಯಾರ್ಥಿಯೆಂದು ತಿಳಿದುಕೊಂಡು, ತನ್ನೆದುರು
ಕುಳಿತಿರುವ ಶಿಕ್ಷಣಾರ್ಥಿಗಳಿಂದಲೂ ತಾನು ಒಂದಷ್ಟು ವಿಚಾರಗಳನ್ನು ಕಲಿಯಬೇಕೆಂಬ ತುಡಿತವಿರುವ ಉಪನ್ಯಾಸಕ ಒಬ್ಬ ಅತ್ಯುತ್ತಮ ಉಪನ್ಯಾಸಕನಾಗಬಹುದು. - ವಿವಿಧ ಉಪನ್ಯಾಸಕರು ನೀಡಿದ ವಿವಿಧ ಉಪನ್ಯಾಸಗಳನ್ನು ಅಧ್ಯಯನ ಮಾಡಿದಾಗ ಕಂಡು ಬರುವ ಅಂಶವೆಂದರೆ ಒಂದು
ಗಂಟೆಯ ಉಪನ್ಯಾಸದಲ್ಲಿ ಶಿಕ್ಷಣಾರ್ಥಿಗಳು ಸರಿಯಾಗಿ ನೆನಪಿನಲ್ಲಿಟ್ಟುಕೊಳ್ಳುವುದು ಕೇವಲ 15-20 ನಿಮಿಷಗಳ ಉಪನ್ಯಾಸವನ್ನು ಮಾತ್ರ. ಆದ್ದರಿಂದ ನೀಡಬೇಕಾಗಿರುವ ಉಪನ್ಯಾಸದ ಕುರಿತಾಗಿ ಗುಂಪು ಚರ್ಚೆಯ ಮೂಲಕ ಮಂಡನೆಯನ್ನು ಮಾಡಿಸಿ ಅವರಲ್ಲಿರುವ ತಿಳುವಳಿಕೆಯ ಮಟ್ಟವನ್ನು ಅರಿತುಕೊಂಡು 20-25 ನಿಮಿಷಗಳ ಉಪನ್ಯಾಸ ಮಾಡುವುದು ಉತ್ತಮ. - ಉಪನ್ಯಾಸದ ಮಧ್ಯ ಮಧ್ಯದಲ್ಲಿ ಕಲಿಕೆಯಲ್ಲಿ ಹಿಂದಿರುವ ವಿದ್ಯಾರ್ಥಿಗಳಲ್ಲಿ ಹೆಚ್ಚು ಹೆಚ್ಚು ಪ್ರಶ್ನೆಗಳನ್ನು ಕೇಳುವ ಮೂಲಕ ವಿಷಯದ ಮೇಲಿನ ಆಸಕ್ತಿ ಹೆಚ್ಚುವಂತೆ ಮಾಡಬಹುದು ಹಾಗೂ ಉಪನ್ಯಾಸದ ಕೊನೆಯಲ್ಲಿ ತಾನು ಹೇಳಿದ ವಿಚಾರಗಳಷ್ಟನ್ನೂ ಸಂಕ್ಷಿಪ್ತವಾಗಿ ಶಿಕ್ಷಣಾರ್ಥಿಗಳಿಂದಲೇ ಹೇಳಿಸಿ ಮನನ ಮಾಡಿಸುವುದು.
ಸಂತೋಷ್ ರಾವ್ ಪೆರ್ಮುಡ
ಉಪನ್ಯಾಸಕರು,
ದೂ: 9742884160