ಸಕಾರಾತ್ಮಕ – ಧನಾತ್ಮಕ
ಶಿಖರಪುರ ಪಟ್ಟಣದಲ್ಲಿ ಜೋನಾರ್ಸ್ ಎಂಬ ಹೆಸರಿನ ಹೆಸರಾಂತ ಪಾದರಕ್ಷೆತಯಾರಿಸುವ ಕಂಪನಿಯು ಬಹಳ ವರ್ಷಗಳ ಕಾಲದಿಂದ ಮಹಿಳೆಯರು ಪುರುಷರು ಮತ್ತು ಮಕ್ಕಳ ಪಾದರಕ್ಷೆಗಳನ್ನು ತಯಾರಿಸುತ್ತಿತ್ತು. ತನ್ನ ಅತ್ಯಾಕರ್ಷಕ ವಿನ್ಯಾಸದ ಪಾದರಕ್ಷೆಗಳು ಮತ್ತು ಶೂಗಳ ಕಾರಣದಿಂದಾಗಿ ಅದು ಪ್ರಪಂಚದಾದ್ಯಂತ ತನ್ನದೇ ಆದ ಮಾರುಕಟ್ಟೆ ಜಾಲವನ್ನು ಹೊಂದಿತ್ತು. ಹಾಗಾಗಿ ಜೋನಾರ್ಸ್ ಸಂಸ್ಥೆಯ ಮಾಲೀಕನಾದ ದೇವೇಂದ್ರನಿಗೆ ತನ್ನ ಕಂಪನಿಯು ತಯಾರಿಸಿದ ಪಾದರಕ್ಷೆಗಳನ್ನು ಮಾರಾಟ ಮಾಡಲು ಯಾವುದೇ ಸಮಸ್ಯೆ ಆಗುತ್ತಿರಲಿಲ್ಲ. ತನ್ನ ಕಂಪನಿಯು ವಾರ್ಷಿಕವಾಗಿ ತಯಾರಿಸುವ ಒಟ್ಟು ಪಾದರಕ್ಷೆಗಳ ಸಂಖ್ಯೆಗಿಂತ ಹೆಚ್ಚಿನ ಸಂಖ್ಯೆಯ ಪಾದರಕ್ಷೆಗಳ ಬೇಡಿಕೆಯು ಜಾಗತಿಕ ಮಾರುಕಟ್ಟೆಯಿಂದ ನಿರಂತರವಾಗಿ ಬರುತ್ತಾ ಇದ್ದುದರಿಂದ ವ್ಯವಹಾರವು ಅತ್ಯುನ್ನತವಾಗಿ ನಡೆಯುತ್ತಿತ್ತು.
ವರ್ಷಗಳು ಉರುಳಿದಂತೆ ಜೋನಾರ್ಸ್ ಕಂಪನಿಯ ಪಾದರಕ್ಷೆಗಳ ಗುಣಮಟ್ಟಕ್ಕಿಂತ ಉನ್ನತ ದರ್ಜೆಯ ಹಾಗೂ ಕಡಿಮೆ ದರದ ಪಾದರಕ್ಷೆಗಳು ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ಲಭಿಸುತ್ತಿದ್ದುದರಿಂದ ಜೋನಾರ್ಸ್ ಸಂಸ್ಥೆಯ ಪಾದರಕ್ಷೆಗಳಿಗೆ ಬೇಡಿಕೆಯು ಗಣನೀಯವಾಗಿ ಕುಸಿದು ವ್ಯವಹಾರವು ನಷ್ಟದ ಸ್ಥಿತಿಗೆ ಬಂದಿತು. ಇದನ್ನು ಅರಿತ ಜೋನಾರ್ಸ್ ಸಂಸ್ಥೆಯ ಮಾಲೀಕನಾದ ದೇವೇಂದ್ರನು ಯತೀಶ್ ಮತ್ತು ರತೀಶ್ ಎಂಬ ಎರಡು ಮಂದಿ ವಿದ್ಯಾವಂತ ಹಾಗೂ ಚಾಣಾಕ್ಷ ಮಾರಾಟ ವಿಸ್ತರಣಾಧಿಕಾರಿಗಳನ್ನು ತನ್ನ ಕಂಪನಿಯ ಪಾದರಕ್ಷೆಗಳ ಮಾರಾಟವನ್ನು ವಿವಿಧ ದೇಶಗಳಿಗೆ ವಿಸ್ತರಿಸುವ ಉದ್ದೇಶದಿಂದ ನೇಮಕ ಮಾಡಿದನು.
ಇಬ್ಬರೂ ಪ್ರಪಂಚದ ವಿವಿಧ ಮೂಲೆಗಳಿಗೆ ಜೋನಾರ್ಸ್ ಕಂಪೆನಿಯ ಪಾದರಕ್ಷೆಗಳು ಮತ್ತು ಶೂಗಳ ಮಾರಾಟದ ವಿಸ್ತರಣೆಗಾಗಿ ತೆರಳಿದರು. ಪ್ರಪಂಚವನ್ನು ಸುತ್ತಾಡುತ್ತಾ ತನ್ನ ಕಂಪೆನಿಯ ಪಾದರಕ್ಷೆಗಳ ಪ್ರಚಾರ ಮತ್ತು ಬೇಡಿಕೆಗಳನ್ನು ಪಡೆದುಕೊಳ್ಳುತ್ತಿದ್ದ ಈ ಇಬ್ಬರ ಪೈಕಿ ಯತೀಶನನ್ನು ಮಾಲೀಕನು ಒಮ್ಮೆ ಜೋರಾ ಜೋರಾ ಎನ್ನುವ ದ್ವೀಪಕ್ಕೆ ಕಳುಹಿಸಿದ. ದ್ವೀಪದಲ್ಲಿ ಇಳಿದ ಯತೀಶನು ಅತೀ ಹೆಚ್ಚಿನ ಸಂಖ್ಯೆಯ ಪಾದರಕ್ಷೆ ಮಾರಾಟಗಾರರನ್ನು ಭೇಟಿಯಾಗಿ ದೊಡ್ಡ ಮೊತ್ತದ ವ್ಯವಹಾರವನ್ನು ಕುದುರಿಸಬೇಕು ಎನ್ನುವ ನಿರೀಕ್ಷೆಯೊಂದಿಗೆ ದ್ವೀಪದೆಲ್ಲೆಡೆ ಸುತ್ತಾಡುತ್ತಾನೆ. ಆದರೆ ಯತೀಶನಿಗೆ ಅಲ್ಲಿ ಆಶ್ಚರ್ಯವೊಂದು ಕಾದಿತ್ತು, ಅದೇನೆಂದರೆ ಆ ದ್ವಿಪದಲ್ಲಿ ಯಾರೊಬ್ಬರ ಕಾಲಲ್ಲೂ ಪಾದರಕ್ಷೆಯೇ ಇರಲಿಲ್ಲ. ಅಲ್ಲಿನ ಹಲವು ಮಂದಿಯಲ್ಲಿ ಈ ಕುರಿತು ಪ್ರಶ್ನಿಸಿದ ನಂತರ ಆ ದ್ವೀಪದ ಜನರು ಪಾದರಕ್ಷೆಯನ್ನೇ ಧರಿಸುತ್ತಿರಲಿಲ್ಲ ಮತ್ತು ಅದರ ಉಪಯೋಗದ ಕುರಿತೂ ತಿಳಿದಿಲ್ಲ ಎನುವ ವಿಚಾರ ಯತೀಶನಿಗೆ ತಿಳಿಯುತ್ತದೆ. ಇದರಿಂದ ಬೇಸರಗೊಂಡ ಯತೀಶನು ಈ ದ್ವೀಪದ ಜನರಿಗೆ ಪಾದರಕ್ಷೆಯ ಬಳಕೆಯೇ ತಿಳಿದಿಲ್ಲ, ಇನ್ನು ಇಲ್ಲಿ ಪಾದರಕ್ಷೆಗಳ ಮಳಿಗೆಗಳು ಇರಲು ಸಾಧ್ಯವಿಲ್ಲ, ನಮ್ಮ ಕಂಪನಿಯ ಚಪ್ಪಲಿಗಳು ಮಾರಾಟ ಆಗಲೂ ಸಾಧ್ಯವಿಲ್ಲ ಎಂದು ಅಲ್ಲಿಂದ ಬರಿಗೈಯಲ್ಲಿ ತನ್ನ ಊರಿಗೆ ಮರಳುತ್ತಾನೆ. ಹಲವು ತಿಂಗಳುಗಳು ಕಳೆದ ನಂತರ ದೇವೇಂದ್ರನು ತನ್ನ ಕಂಪನಿಯ ಮತ್ತೊಬ್ಬ ಮಾರಾಟ ವಿಸ್ತರಣಾಧಿಕಾರಿಯಾದ ರತೀಶನನ್ನು ಜೋರಾ ಜೋರಾ ದ್ವೀಪಕ್ಕೆ ಪಾದರಕ್ಷೆಗಳ ಮಾರಾಟ ವಿಸ್ತರಣೆಗಾಗಿ ಕಳುಹಿಸುತ್ತಾನೆ.ದ್ವೀಪಕ್ಕೆ ಬಂದಿಳಿದ ರತೀಶನು ಅಲ್ಲಿನ ಜನಗಳ ಕಾಲಿನಲ್ಲಿ ಚಪ್ಪಲಿ ಅಥವಾ ಶೂ ಇಲ್ಲದೇ ಇರುವುದನ್ನು ಗಮನಿಸಿ ಬಹಳಷ್ಟು ಮಂದಿಯಲ್ಲಿ ನೀವ್ಯಾರೂ ಚಪ್ಪಲಿಯನ್ನು ಧರಿಸುವುದೇ ಇಲ್ಲವೇ ಎಂದು ಕೇಳುತ್ತಾನೆ.
ಎಲ್ಲರಿಂದಲೂ ಚಪ್ಪಲಿಯ ಬಳಕೆಯು ನಮಗೆ ತಿಳಿದೇ ಇಲ್ಲವೆಂಬ ಉತ್ತರವು ದೊರೆಯಿತು. ಇದನ್ನು ಅರಿತ ರತೀಶನ ವ್ಯವಹಾರ ಪ್ರಜ್ಞೆಯು ಜಾಗೃತವಾಗಿ, ಇಲ್ಲಿನ ಜನರಿಗೆ ಚಪ್ಪಲಿಯ ಬಳಕೆಯೇ ತಿಳಿದಿಲ್ಲ. ಈ ದ್ವೀಪವೇ ನಮ್ಮ ಕಂಪನಿಯ ಚಪ್ಪಲಿಗಳನ್ನು ಪ್ರಚಾರ ಮತ್ತು ಮಾರಾಟ ಮಾಡಲು ಸೂಕ್ತವಾದ ಸ್ಥಳ ಎಂದು ನಿರ್ಧರಿಸುತ್ತಾನೆ. ಅದರಂತೆ ರತೀಶನು ತಾನು ಬರುವಾಗ ಮಾರಾಟಗಾರರಿಗೆ ತೋರಿಸಲೆಂದು ತಂದಿದ್ದ 5-10 ಚಪ್ಪಲಿಯ ಮಾದರಿಗಳನ್ನು ಅಲ್ಲಿನ ಕೆಲವೊಂದಷ್ಟು ಜನರಿಗೆ ನೀಡಿ ಅವರಿಗೆ ಚಪ್ಪಲಿಯನ್ನು ಹಾಕಿಸಿ ತಾನೂ ಅವರೊಂದಿಗೆ ನಡೆದಾಡಿ ಚಪ್ಪಲಿಯ ಬಳಕೆಯಿಂದ ಆಗುವ ಪ್ರಯೋಜನಗಳನ್ನು ತಿಳಿಸಿದನು.
ರತೀಶನು ನೀಡಿದ ಪ್ರಾತ್ಯಕ್ಷಿಕೆಯ ಮೂಲಕ ಚಪ್ಪಲಿಯ ಪ್ರಯೋಜನವನ್ನು ಅರಿತ ಸಾವಿರಾರು ಮಂದಿ ವಿವಿಧ ಅಳತೆಯ ಚಪ್ಪಲಿಗಳಿಗೆ ಬೇಡಿಕೆಯನ್ನು ಸಲ್ಲಿಸುತ್ತಾರೆ. ಬೇಡಿಕೆಯ ಪ್ರಕಾರ ಕಂಪನಿಯಿಂದ ಸಾವಿರಾರು ಜತೆ ಚಪ್ಪಲಿಗಳನ್ನು ತರಿಸಿ ಮಾರಾಟ ಮಾಡುತ್ತಾನೆ. ಇದರಿಂದ ಲಕ್ಷಗಟ್ಟಲೆ ಜೊತೆ ಚಪ್ಪಲಿಗಳಿಗೆ ಬೇಡಿಕೆ ನೇರವಾಗಿ ರತೀಶನಿಗೆ ಬಂದಿತು. ಬೇಡಿಕೆಯ ಪ್ರಮಾಣವನ್ನು ಅರಿತ ರತೀಶನು ಮಾಲೀಕನಿಗೆ ಇದೇ ದ್ವೀಪದಲ್ಲಿ ಜೊನಾರ್ಸ್ ಕಂಪನಿಯ ಮತ್ತೊಂದು ಉತ್ಪಾದನಾ ಘಟಕವನ್ನು ತೆರೆಯಲು ಮನವಿಯನ್ನು ಮಾಡುತ್ತಾನೆ. ರತೀಶನ ಮನವಿಯಂತೆ ಮಾಲೀಕ ವಿಲಿಯಮಸ್ಸ್ ಜೋರಾ ಜೋರಾ ದ್ವೀಪದಲ್ಲಿ ತನ್ನ ಎರಡನೆಯ ಉತ್ಪಾದನಾ ಘಟಕವನ್ನು ತೆರೆಯುತ್ತಾನೆ. ಇದರಿಂದಾಗಿ ಜೋರಾ ಜೋರಾ ಎಂಬ ಚಪ್ಪಲಿಯ ಬಳಕೆಯೇ ತಿಳಿದಿರದ ಜನರಿದ್ದ ದ್ವೀಪದಲ್ಲಿ ಜೋನಾರ್ಸ್ ಕಂಪನಿಯ ಪಾದರಕ್ಷೆಗಳಿಗೆ ಹೆಚ್ಚಿನ ಬೇಡಿಕೆ ಬಂದು, ದೊಡ್ಡ ಪ್ರಮಾಣದ ವ್ಯವಹಾರವನ್ನು ಮಾಡುವ ಕಂಪನಿಯಾಗಿ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿತು
ಇಲ್ಲಿ ಎರಡು ಮಂದಿ ವ್ಯವಹಾರ ವಿಸ್ತರಣಾಧಿಕಾರಿಗಳ ಮನೋಧರ್ಮದಲ್ಲಿ ಮಾತ್ರ ಸಣ್ಣ ವ್ಯತ್ಯಾಸವಿತ್ತು. ಯತೀಶನು ಎಲ್ಲಾ ವಿಷಯದಲ್ಲೂ ಋಣಾತ್ಮಕವಾಗಿ ಯೋಚಿಸುತ್ತಿದ್ದರೆ, ರತೀಶನು ಎಲ್ಲವನ್ನೂ ಧನಾತ್ಮಕವಾಗಿಯೇ ನೋಡುತ್ತಿದ್ದನು. ಯತೀಶನು ಕಂಡಿದ್ದ ಋಣಾತ್ಮಕ ಅಂಶವನ್ನು ರತೀಶನು ಧನಾತ್ಮಕವಾಗಿ ನೋಡಿದ್ದರಿಂದ ಆ ಪುಟ್ಟದಾದ ದ್ವೀಪದಲ್ಲಿ ಜೋನರ್ಸ್ ಕಂಪನಿಯ ಚಪ್ಪಲಿಗಳು ಯಥೇಚ್ಛವಾಗಿ ಮಾರಾಟವಾಗಿ ಅಲ್ಲಿ ಜೋನರ್ಸ್ ಎರಡನೆಯ ಉತ್ಪಾದನಾ ಘಟಕದ ಸ್ಥಾಪನೆಗೆ ಕಾರಣವಾಗಿ ರತೀಶನು ಅದರ ಸಿ.ಇ.ಓ ಆಯ್ಕೆಯಾದನು. ವ್ಯಕ್ತಿಯು ಸಂದರ್ಭ ಮತ್ತು ಸನ್ನಿವೇಶವನ್ನು ನೋಡುವ ರೀತಿಯು ವ್ಯಕ್ತಿಯ ಬದುಕಿನ ದಿಕ್ಕನ್ನೇ ಬದಲಾಯಿಸಬಹುದು.
ಸಂತೋಷ್ ರಾವ್ ಪೆರ್ಮುಡ
ಪೆರ್ಮುಡ ಮನೆ, ಪಟ್ರಮೆ ಗ್ರಾಮ ಮತ್ತು ಅಂಚೆ
ಬೆಳ್ತಂಗಡಿ ತಾಲೂಕು, ದ.ಕ ಜಿಲ್ಲೆ-574198
ದೂ: 9742884160