ಸತ್ಯ – ಮಿಥ್ಯದ ಲಹರಿ
ಹೃದಯದೊಳಗೆ ಪ್ರೀತಿಯ
ಹಣತೆ ಹಚ್ಚಿ ಕತ್ತಲ ನೀಗಿಸಿ..
ಸತ್ಯವನರುಹಿ ಮನವ ಹಗುರಾಗಿಸಿ
ಸಂತಸದಿ ನಗುವವರ ನಗೆಯೇ ಸತ್ಯ!!
ಒಡಲೊಳಗೆ ದ್ವೇಷದುರಿಯ
ಉಪೇಕ್ಷೆಯ ಜ್ವಾಲೆಯ ಕಿಚ್ಚು ಹತ್ತಿಸಿ..
ಧಗೆಯ ಕೆಂಡದಿ ಭಾವಗಳನುರಿಸಿ
ವ್ಯಂಗ್ಯದಿ ನಗುವವರ ನಗೆಯೇ ಮಿಥ್ಯ!!
ಮನಸಿನೊಳಗೆ ನೂರಾಸೆಯ
ಭಾವಗಳಾಕಾಂಕ್ಷೆಯ ಬೀಜವ ಬಿತ್ತಿ..
ಹೃದಯದೊಳು ಒಲುಮೆಯ ಮೊಳಕೆಯನು ಅರಳಿಸಿ
ಕಿರುನಗು ನಗುವವರ ನಗೆಯೇ ಸತ್ಯ!!
ಮನದ ಮಾತುಗಳ ಭಂಡಾರ ಹುಡುಕಿ
ಕಂಗಳ ಕದದಲಿ ಅದನಿರಿಸಿ..
ಅಂತರಾಳದ ನೋವನು ತಾ ಕೆಣಕಿ
ಕಪಟದಿ ನಗುವವರ ನಗೆಯೇ ಮಿಥ್ಯ!!
ಸುಮನಾ ರಮಾನಂದ