ಸತ್ವಯುತ ಜೀವಕ್ಕೆ ‘ಜೀವಸತ್ವಗಳು’

ಸತ್ವಯುತ ಜೀವಕ್ಕೆ ‘ಜೀವಸತ್ವಗಳು

ಜೀವಸತ್ವಗಳು ನೈಸರ್ಗಿಕವಾಗಿ ತರಕಾರಿ ಹಣ್ಣು ಆಹಾರ ಪದಾರ್ಥ ಹಾಗೂ ಖಾದ್ಯ ಪದಾರ್ಥಗಳ ಮೂಲಕ ನಮ್ಮ ದೇಹ ಪ್ರವೇಶಿಸಬೇಕೆ ಹೊರತು ನಮ್ಮ ದೇಹದಲ್ಲಿ ಉತ್ಪತ್ತಿಯಾಗುವುದಿಲ್ಲ. ದೇಹದಲ್ಲಿ ನಡೆಯುವ ರಾಸಾಯನಿಕ ಕ್ರಿಯೆಗಳಲ್ಲಿ ಜೀವಸತ್ವಗಳು ಮಹತ್ವದ ಪಾತ್ರವಹಿಸುತ್ತದೆ. ದೇಹದ ಬೆಳವಣಿಗೆಗೆ ಹಾಗೂ ಆರೋಗ್ಯದ ದೃಷ್ಟಿಯಿಂದ ಜೀವಸತ್ವಗಳು ಅವಶ್ಯಕ. ಹಾಗಾಗಿ ಸಣ್ಣ ಪ್ರಮಾಣದಲ್ಲಿ ಇವು ನಮ್ಮ ದೇಹವನ್ನು ಪ್ರವೇಶಿಸುತ್ತಲೇ ಇರಬೇಕು. ನಾವು ತಿನ್ನುವ ಆಹಾರದಲ್ಲಿ ಬಹಳ ದಿನಗಳವರೆಗೆ ಯಾವುದೇ ಒಂದು ಜೀವಸತ್ವದ ಕೊರತೆಯಾದರೂ ದೇಹದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಜೀವಸತ್ವಗಳು ಕರಗುವ ಗುಣವನ್ನು ಆಧರಿಸಿ ” ಕೊಬ್ಬಿನಲ್ಲಿ ಕರಗುವ” ಹಾಗೂ “ನೀರಿನಲ್ಲಿ ಕರಗುವ” ಜೀವಸತ್ವಗಳೆಂದು ಎರಡು ವಿಧವಾಗಿ ವಿಂಗಡಿಸಿದ್ದಾರೆ. ಜೀವಸತ್ವ “ಎ, ಡಿ, ಈ ಹಾಗೂ ಕೆ” ಕೊಬ್ಬಿನಲ್ಲಿ ಕರಗಿದರೆ “ಬಿ, ಸಿ ಮತ್ತು ಪಿ” ಜೀವಸತ್ವಗಳು ನೀರಿನಲ್ಲಿ ಮಾತ್ರ ಕರಗುತ್ತದೆ.

ಜೀವಸತ್ವ “ಎ”

ನಮ್ಮ ಬೆಳವಣಿಗೆ ಹಾಗೂ ಆರೋಗ್ಯಕರ ದೃಷ್ಟಿಗೆ ಬೇಕಾದ ಅತಿ ಅವಶ್ಯವಾದ ಜೀವಸತ್ವ. ಇದನ್ನು ಬೆಳವಣಿಗೆಯ ಜೀವಸತ್ವ ಎಂದೇ ಕರೆಯುತ್ತಾರೆ. ವಿಟಮಿನ್ ‘ಎ’ ಕೊರತೆಯಾದರೆ ಮನುಷ್ಯನ ಕಣ್ಣು, ಚರ್ಮ, ಮತ್ತು ಮೃದುವಾದ ಸ್ನಾಯುಗಳು ಒಣಗಿದಂತಾಗುತ್ತದೆ. ನರಮಂಡಲದ ಜೀವಕೋಶಗಳು ಮತ್ತು ಸ್ನಾಯುಗಳ ಉತ್ಪಾದನೆಯಲ್ಲಿ ಇದು ಮಹತ್ವದ ಕಾರ್ಯವಹಿಸುತ್ತದೆ. ರೋಗ ನಿರೋಧಕವಾಗಿಯೂ ಇವು ಕೆಲಸ ಮಾಡುತ್ತದೆ. ಪ್ರತಿದಿನ ಸಮತೋಲನ ಆಹಾರ ಸೇವನೆಯಿಂದ ನಮ್ಮ ದೇಹಕ್ಕೆ ಅಗತ್ಯವಾದಷ್ಟು ಎ ಜೀವಸತ್ವ ಸಿಗುತ್ತದೆ. ಜೀವಸತ್ವದ ಕೊರತೆಯುಂಟಾದರೆ ಬೆಳವಣಿಗೆ ಕುಂಠಿತವಾಗುವುದಲ್ಲದೇ ದೇಹದ ತೂಕವು ಇಳಿಯುತ್ತದೆ. ಅಧಿಕ ಪ್ರಮಾಣದಲ್ಲಿ ಕೊರತೆಯುಂಟಾದರೆ “ಜೀರೋಥಾಲ್ಮಿಯಾ” ಎಂಬ ಕಣ್ಣಿನ ಖಾಯಿಲೆ ಬರುತ್ತದೆ. ಹಾಗೆಂದು ಜೀವಸತ್ವವು ಅಧಿಕ ಪ್ರಮಾಣದಲ್ಲಿ ದೇಹ ಸೇರಿದರೆ ಹಸಿವಿಲ್ಲದಿರುವಿಕೆ ಹಾಗೂ ಉದ್ದನೆಯ ಮೂಳೆಗಳಲ್ಲಿ ಊತ ಉಂಟಾಗಲು ಕಾರಣವಾಗುತ್ತದೆ.

ಜೀವಸತ್ವ “ಡಿ”

ಇದನ್ನು ‘ಕ್ಯಾಲ್ಸಿಪೇರಾಲ್‘ ಎಂದೂ ಕರೆಯುತ್ತಾರೆ. ಇದು ದೇಹದಲ್ಲಿ ಕ್ಯಾಲ್ಸಿಯಂ ಹಾಗೂ ರಂಜಕದ ನಿಗದಿತ ಮಟ್ಟವನ್ನು ಕಾಪಾಡಲು ಬೇಕಾದ ಮುಖ್ಯವಾದ ಜೀವಸತ್ವ. ಮೂಳೆ ಹಾಗೂ ಹಲ್ಲುಗಳ ಆರೋಗ್ಯಕರ ಬೆಳವಣಿಗೆಗೆ ಇದು ಅಗತ್ಯ, ಮೀನಿನೆಣ್ಣೆ, ಮೊಟ್ಟೆ, ಹಾಲು ಹಾಗೂ ಬೆಣ್ಣೆಯಲ್ಲಿ ‘ಡಿ’ ಜೀವಸತ್ವ ಅಧಿಕ ಪ್ರಮಾಣದಲ್ಲಿ ಇರುತ್ತದೆ ಬೆಳಗಿನ ಸೂರ್ಯರಶ್ಮಿ ನಮ್ಮ ಚರ್ಮವನ್ನು ಸೋಕಿದಾಗಲೂ ದೇಹದಲ್ಲಿ ‘ಡಿ’ ಜೀವಸತ್ವ ಉತ್ಪತ್ತಿಯಾಗುತ್ತದೆ. ಹಾಗಾಗಿ ‘ಡಿ’ ಜೀವಸತ್ವ ಕೊರತೆ ನೀಗಲು ಬೆಳಗಿನ ಬಿಸಿಲಿಗೆ ಮೈ ಒಡ್ಡಬೇಕು. ‘ಡಿ’ ಜೀವಸತ್ವದ ಕೊರತೆಯು ಕ್ಯಾಲ್ಸಿಯಂ ಹಾಗೂ ರಂಜಕದ ರಾಸಾಯನಿಕ ಪರಿವರ್ತನೆ ಮೇಲೆ ಪ್ರಭಾವ ಬೀರುತ್ತದೆ. ಇದರಿಂದ ಮೂಳೆಗಳಲ್ಲಿ ಕ್ಯಾಲ್ಸಿಯಂ ಕೊರತೆಯುಂಟಾಗಿ ಮೂಳೆಗಳು ಮೆದುವಾಗುತ್ತದೆ. ಇದನ್ನು “ರಿಕೆಟ್ಸ್” ಎಂದು ಕರೆಯುತ್ತಾರೆ. ಮಕ್ಕಳಲ್ಲಿ ಮೂಳೆಗಳು ಡೊಂಕಾಗಿ ಬೆಳವಣಿಗೆ ಹೊಂದಿ ಓಡಾಡಲು ಕಷ್ಟವಾಗುತ್ತದೆ. ಕಾಲುಗಳು ಡೊಂಕಾಗಿ ಬೆಳೆಯುವುದು ‘ಡಿ’ ಜೀವಸತ್ವದ ಕೊರತೆಯ ಲಕ್ಷಣ.

ಜೀವಸತ್ವ “ಇ”

ಇದನ್ನುಇತ್ತೀಚಿನ ದಿನಗಳಲ್ಲಿ ಲೈಂಗಿಕ ಜೀವಸತ್ವವೆಂದೇ ಗುರುತಿಸುತ್ತಾರೆ. ಇದು ಲೈಂಗಿಕ ಆಸಕ್ತಿಯನ್ನು ಹೆಚ್ಚಿಸುತ್ತದೆ ಎಂದು ಇತ್ತೀಚಿನ ಸಂಶೋಧನೆಗಳಿಂದ ತಿಳಿದು ಬಂದಿದೆ. ಇದನ್ನು ‘ಟೊಕೊಪಿರಾಲ್‘ ಎಂದು ಕರೆಯುತ್ತಾರೆ. ರಕ್ತನಾಳಗಳು ಸಮರ್ಪಕವಾಗಿ ಕೆಲಸ ಮಾಡಲು ಇದು ಅಗತ್ಯ. ಮಹಿಳೆಯರಲ್ಲಿ ಗರ್ಭಾವಸ್ಥೆ ಕಾಪಾಡಲು ಹಾಗೂ ಆರೋಗ್ಯಕರ ಮಗುವಿನ ಜನನಕ್ಕೆ ‘ಇ’ ಜಿವಸತ್ವ ಅಗತ್ಯ. ಹಸಿರು ಕಾಯಿಪಲ್ಲೆಗಳು, ಖ್ಯಾದ್ಯ ತೈಲ, ಹಾಲು, ಮೊಸರು, ಮೀನಿನ ಎಣ್ಣೆಯಲ್ಲಿ ಜಾಸ್ತಿ ಪ್ರಮಾಣದಲ್ಲಿ ‘ಇ’ ಜೀವಸತ್ವ ಇರುತ್ತದೆ. ಪ್ರತಿದಿನ ಒಬ್ಬ ಆರೋಗ್ಯ ವ್ಯಕ್ತಿಗೆ 33 ಮಿಲಿಗ್ರಾಂನಷ್ಟು ‘ಇ’ ಜೀವಸತ್ವ ಅವಶ್ಯಕತೆ ಇದೆ ಎಂದು ಅಂದಾಜು ಮಾಡಲಾಗಿದೆ.

ಜೀವಸತ್ವ “ಕೆ”

ರಕ್ತ ಹೆಪ್ಪುಗಟ್ಟಲು ಅವಶ್ಯವಾದ “ಪ್ರೋತ್ರಾಂಬಿನ್” ನ ಉತ್ಪಾದನೆಯಲ್ಲಿ ಪ್ರಮುಖವಾದ ಪಾತ್ರವನ್ನು ವಹಿಸುತ್ತದೆ. ‘ಕೆ’ ಜೀವಸತ್ವದಲ್ಲಿ ಕೆ1 ಹಾಗೂ ಕೆ2 ಎಂಬ ಎರಡು ವಿಧಗಳಿದ್ದು ಈ ಎರಡು ವಿಧಗಳು ಹೆಚ್ಚಾಗಿ ಹಸಿರು ಕಾಯಿಪಲ್ಲೆಗಳು, ಬಸಳೆಸೊಪ್ಪು, ಕೋಸುಗೆಡ್ಡೆ, ಮೀನು, ಹಾಗೂ ಹಾಲಿನಲ್ಲಿ ಹೆಚ್ಚಾಗಿರುತ್ತದೆ. ‘ಕೆ’ ಜೀವಸತ್ವದ ಕೊರತೆಯಾದರೆ ‘ಪ್ರೋತ್ರಾಂಬಿನ್” ನಿಗದಿತ ಮಟ್ಟದಲ್ಲಿ ಉತ್ಪತ್ತಿಯಾಗದೇ ಅಧಿಕ ರಕ್ತಸ್ರಾವಕ್ಕೆ ಕಾರಣವಾಗುತ್ತದೆ.

ಜೀವಸತ್ವ “ಬಿ”

ಸಂಕೀರ್ಣವಾದ ‘ವಿಟಮಿನ್’ ಗಳ ಗುಂಪನ್ನು ಹೊಂದಿರುವ ಇದು ಚಿಕ್ಕ ಮಕ್ಕಳ ಬೆಳವಣಿಗೆಯಲ್ಲಿ ಅತಿ ಅಗತ್ಯ. ಇದರಲ್ಲಿ ಬಿ1 ಅಂದರೆ ‘ಥಯಾಮಿನ್‘, ಬಿ2 ಅಂದರೆ ‘ರೈಬೋಪ್ಲೇವಿನ್‘, ‘ನಿಯಾಸಿನಮೈಡ್‘ ಮತ್ತು ಬಿ12 ಅಂದರೆ ‘ಸೈನಕೋಬಾಲಮಿನ್‘ ತುಂಬಾ ಅಗತ್ಯವಾದ ಜೀವಸತ್ವಗಳಾಗಿದೆ. ಮೊದಲ ಮೂರು ಜೀವಸತ್ವಗಳು ಮಾಂಸಹಾರ, ಹಾಲು ಹಾಗೂ ಧವಸ ಧಾನ್ಯಗಳಲ್ಲಿ ಅಧಿಕವಾಗಿರುತ್ತದೆ. ಮೇಲಿನ ‘ಬಿ’ ಜೀವಸತ್ವಗಳಲ್ಲಿ ಯಾವುದಾದರ ಒಂದು ಕೊರತೆಯಾದರೂ ಹೊಟ್ಟೆ ಹಸಿಯದಿರುವುದು, ಕುಂಠಿತಗೊಂಡ ಬೆಳವಣಿಗೆ, ಚರ್ಮದ ಸುಕ್ಕುಗಳು, ತುಟಿ ಒಡೆಯುವುದು, ಪೆಲಿಗ್ರಾ ಹಾಗೂ ನಾಲಗೆ ಊದುವ ಲಕ್ಷಣಗಳು ಕಾಣಿಸಿಕೊಳ್ಳುತ್ತದೆ. ನಿಗದಿತ ಪ್ರಮಾಣದ ‘ಬಿ’ ಜೀವಸತ್ವದ ಸೇವನೆಯಿಂದ ಮೂಳೆ ಸೆವೆತ ಹಾಗೂ ಹೃದಯ ಸಂಬಂಧಿ ಖಾಯಿಲೆಗಳಿಂದ ದೂರವಿರಬಹುದೆಂದು ಇತ್ತೀಚಿನ ಸಂಶೋಧನೆಗಳು ದೃಡಪಡಿಸಿದೆ.

ಜೀವಸತ್ವ “ಸಿ”

ಇದರ ಸೇವನೆಯು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದಲ್ಲದೇ ಶೀತ ಫಲಕವನ್ನು ನಿವಾರಿಸುತ್ತದೆ. ಇದರ ಸೇವನೆ ಎಲ್ಲಾ ರೀತಿಯ ಸಾಮಾನ್ಯ ಖಾಯಿಲೆಗಳನ್ನು ದೂರವಿರಿಸುತ್ತದೆ ಎಂದು “ಲೆನಿನ್ ಪೌಲಿಂಗ್” ಎಂಬ ನೊಬೆಲ್ ಪುರಸ್ಕೃತ ಜೀವರಾಸಾಯನ ಶಾಸ್ತ್ರಜ್ಞ ತಿಳಿಸಿದ್ದಾರೆ, ಸ್ಕರ್ವಿ ರೋಗವನ್ನು ‘ಸಿ’ ಜೀವಸತ್ವ ತಡೆಗಟ್ಟುತ್ತದೆ. ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಿಸುವಲ್ಲಿ ಇದರ ಪಾತ್ರ ಮುಖ್ಯವಾಗಿದೆ. ರಕ್ತ ಕಣಗಳ ಉತ್ಪಾದನೆಯಲ್ಲಿ ಹಾಗೂ ಕೆಂಪು ರಕ್ತ ಕಣಗಳ ನಿಗದಿತ ಮಟ್ಟ ಕಾಪಾಡಲು ‘ಸಿ’ ಜೀವಸತ್ವ ಅಗತ್ಯ, ಆರೋಗ್ಯವಂತ ವ್ಯಕ್ತಿಗೆ ದಿನವೊಂದಕ್ಕೆ 60 ಮಿ.ಗ್ರಾಂ ನಷ್ಟು ‘ಸಿ’ ಜೀವಸತ್ವ ಅವಶ್ಯ, ಇದಕ್ಕಿಂತ ಹೆಚ್ಚು ತೆಗೆದುಕೊಂಡರೂ ಯಾವುದೇ ರೀತಿಯ ಅಡ್ಡ ಪರಿಣಾಮ ಇರುವುದಿಲ್ಲ. ‘ಸಿ’ ಜೀವಸತ್ವದ ಕೊರತೆಯಾದರೆ ಮಕ್ಕಳು ಬಹಳ ಬೇಗ ಸ್ಕರ್ವಿ ರೋಗಕ್ಕೆ ತುತ್ತಾಗುತ್ತಾರೆ. ವಸಡಿನಿಂದ ರಕ್ತ ಸೋರುವುದು, ಹಲ್ಲು ಸಡಿಲವಾಗಿ ಬಿದ್ದು ಹೋಗುವುದು, ದೇಹದ ತೂಕ ಕಡಿಮೆಯಾಗುವುದು, ಹೊಟ್ಟೆ ಹಸಿಯದಿರುವುದು ಮತ್ತು ಸ್ನಾಯುಗಳ ಸಂದುಗಳಲ್ಲಿ ನೋವುಂಟಾಗುವುದು ಸ್ಕರ್ವಿ ರೋಗದ ಲಕ್ಷಣಗಳು. ನಿಂಬೆಹಣ್ಣು, ಕಿತ್ತಳೇ, ಮೊಸಂಬಿ, ನೆಲ್ಲಿಕಾಯಿಯಲ್ಲಿ ‘ಸಿ’ ಜೀವಸತ್ವ ಅಧಿಕವಾಗಿರುತ್ತದೆ. ಟೊಮೆಟೋ, ಬಸಳೆ ಸೊಪ್ಪು, ಹಾಗೂ ಕೋಸಿನಲ್ಲೂ ‘ಸಿ’ ಜೀವಸತ್ವ ಇರುತ್ತದೆ. ನಿತ್ಯದ ಆಹಾರ ಕ್ರಮದಲ್ಲಿ ಇವುಗಳ ಉಪಯೋಗ ನಮಗೆ ಅಗತ್ಯ ಪ್ರಮಾಣದ ‘ಸಿ’ ಜೀವಸತ್ವವನ್ನು ಒದಗಿಸುತ್ತದೆ.

ಎಲ್ಲಾ ಜೀವಸತ್ವಗಳು ಒಂದಲ್ಲಾ ಒಂದು ರೀತಿಯಲ್ಲಿ ಮನುಷ್ಯನ ದೇಹದ ಕೆಲಸ ಕಾರ್ಯಗಳು ಸಸೂತ್ರವಾಗಿ ನಡೆಯಲು ನಿಗದಿತ ಮಟ್ಟದಲ್ಲಿ ಬೇಕು. ದಿನನಿತ್ಯದ ಆಹಾರ ಕ್ರಮದಲ್ಲಿ ಹಾಲು, ಮೊಸರು, ಮಾಂಸ, ಹಣ್ಣು, ತರಕಾರಿ ಮತ್ತು ಬೆಣ್ಣೆ ಉಪಯೋಗಿಸುವುದರಿಂದ ದೇಹಕ್ಕೆ ಅಗತ್ಯವಾದ ಜೀವಸತ್ವಗಳು ನಿಗದಿತ ಪ್ರಮಾಣದಲ್ಲಿ ಪೂರೈಕೆಯಾಗುತ್ತದೆ.

ಡಾ.ಪ್ರಕಾಶ್.ಕೆ.ನಾಡಿಗ್

Related post

Leave a Reply

Your email address will not be published. Required fields are marked *