ಸದಾಶಯ
ಯಾರ ಶಾಪ ತಟ್ಟಿತೋ,
ಅದಾರ ಕಣ್ಣು ತಾಗಿತೋ.
ನಂದನದಂತಿದ್ದ ಮನೆಯೇಕೆ
ಭೂತ ಬಂಗಲೆಯಾಯಿತೋ ?
ರಾಮನನ್ನನುಸರಿಸುವ
ಅನುಜರಂತಿದ್ದವರಿಂದು,
ತಾವೇ ರಾವಣರಂತೆ
ಬಾಳಲೇಕಾದರೋ ?
ಜೇನುಗೂಡಿನಂತಿದ್ದ
ಆ ಮನೆಯೊಗ್ಗಟ್ಟಿಗೆ,
ದ್ವೇಷವೆಂಬ ಕಲ್ಲನ್ನು
ಅದಾರೊಗೆದರೋ ?
ಕೇರುವ ಮೊರದಂತೆ
ದೋಷವ ಬಿಟ್ಟು ಗುಣ
ಗ್ರಹಿಸುತ್ತಿದ್ದವರು, ಜರಡಿಯಂತೆ
ದೋಷ ಸಂಗ್ರಹಕರೇಕಾದರೋ ?
ಇರುವ ಸುಖವನು ತೊರೆದು,
ಮರೀಚಿಕೆಯನ್ನರಸುತ್ತಾ,
ಅವರವರಲ್ಲೇ ಹೊಡೆದಾಡಿ
ಪರಸ್ಪರ ಶತೃಗಳೇಕಾದರೋ ?
ವೈರತ್ವ ಕರಗಿ, ಮನದ ಕೊಳ
ತಿಳಿಯಾಗಿ, ಮನೆ-ಮನ-
ಗಳೊಂದಾಗಿ, ಹಿಂದಿರುಗಲಾ
ಮನೆಯ ಸಿರಿ ವೈಭವ !!

ಶ್ರೀವಲ್ಲಿ ಮಂಜುನಾಥ