ಸಮಯ ನಿರ್ವಹಣಾ ತಂತ್ರ

ಸಾಮಾನ್ಯವಾಗಿ ನಾವೆಲ್ಲರೂ ಹಣ ಅಥವಾ ವಿದ್ಯೆಯನ್ನು ಬದುಕಿನ ಅತ್ಯಂತ ದೊಡ್ಡ ಸಂಪತ್ತೆಂದು ಹೇಳುತ್ತೇವೆ. ಇದು ನಿಜವೂ ಹೌದು ಆದರೆ ಇವೆರಡರ ಜೊತೆ ಜೊತೆಗೆ ಬದುಕಿನ ಒಂದೊಂದು ಕ್ಷಣವೂ ಅತ್ಯಂತ ಅಮೂಲ್ಯವಾದುದ್ದು ಎನ್ನುವುದನ್ನು ನಾವೆಲ್ಲರೂ ಮರೆತೇ ಬಿಟ್ಟಿದ್ದೇವೆ.

ಸಮಯವನ್ನು ಯಾರು ಅತ್ಯಂತ ಪರಿಪೂರ್ಣವಾಗಿ ಬಳಸಿಕೊಳ್ಳುತ್ತಾ ಸಾಗುತ್ತಾರೋ ಅವರು ನಿರಂತರವಾಗಿ ಜೀವನದಲ್ಲಿ ಯಶಸ್ಸಿನ ಮೆಟ್ಟಿಲನ್ನು ಏರುತ್ತಾ ಸಾಗುತ್ತಾರೆ. ಕೆಲವರು ದಿನವಿಡೀ ಸಮಯವನ್ನು ವ್ಯರ್ಥವಾಗಿ ಕಳೆಯುವುದರಲ್ಲೇ ವ್ಯಸ್ತರಾಗಿರುತ್ತಾರೆ. ಈ ಕ್ಷಣವನ್ನು ನಂತರ ಉಪಯೋಗಿಸಿಕೊಳ್ಳೋಣ ಎಂದು ಸಮಯವನ್ನು ಜೋಪಾನ ಮಾಡಿ ತೆಗೆದಿಡಲು ಸಾಧ್ಯವಾಗಿದ್ದು, ಸಮಯಕ್ಕೂ ಜೀವನಕ್ಕೂ ಬಿಡಿಸಲಾರದ ನಂಟಿದೆ ಎನ್ನುವುದನ್ನು ಮರೆಯಬಾರದು. ಎಲ್ಲರಿಗೂ ಸಮಯದ ಲಭ್ಯತೆಯು ಏಕಪ್ರಕಾರವಾಗಿದ್ದರೂ ಅವುಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುವುದರಲ್ಲಿ ವ್ಯಕ್ತಿಯ ಯಶಸ್ಸು ಅಡಗಿದೆ. ಆದ್ದರಿಂದ ಸಮಯದ ನಿರ್ವಹಣೆಯು ಯಶಸ್ವಿ ವ್ಯಕ್ತಿಯ ಬದುಕಿನ ಮೂಲ ಮಂತ್ರವೆಂದರೆ ತಪ್ಪಾಗಲಾರದು. ಹಾಗಾದರೆ ಸಮಯದ ನಿರ್ವಹಣೆಯನ್ನು ಹೇಗೆ ಮಾಡಬಹುದೆಂದು ತಿಳಿಯೋಣ.

ಸಮಯವು ನೈಸರ್ಗಿಕವಾದದ್ದು ಮತ್ತು ಈ ಸಮಯವನ್ನು ಭವಿಷ್ಯಕ್ಕಾಗಿ ಉಳಿಸಿಟ್ಟುಕೊಳ್ಳಲು ಸಾಧ್ಯವಿಲ್ಲ ಎನ್ನುವುದನ್ನು ಪ್ರತಿಯೊಬ್ಬರೂ ನೆನಪಿನಲ್ಲಿಟ್ಟುಕೊಳ್ಳಬೇಕು. ಪ್ರತಿಯೊಂದು ಚಟುವಟಿಕೆಗಳನ್ನು ಪೂರ್ಣಗೊಳಿಸಲು ಅದರದ್ದೇ ಆದ ಕಾಲಮಿತಿ ಇರುತ್ತದೆ. ಸಮಯವು ಹಣದಷ್ಟೇ ಮೌಲ್ಯಯುತವಾದ ವಿಚಾರವಾಗಿದ್ದು, ಸಮಯದ ಪರಿಣಾಮವು ಒಟ್ಟುಗೂಡುವ ಗುಣವನ್ನು ಹೊಂದಿದ್ದು, ಸಮಯ ಕಳೆಯುತ್ತಾ ಹೋದಂತೆ ಅದರ ಪರಿಣಾಮವೂ ಹೆಚ್ಚುತ್ತಲೇ ಹೋಗುತ್ತದೆ. ಪ್ರಪಂಚದಲ್ಲಿ ಪ್ರತಿಯೊಬ್ಬ ಮನುಷ್ಯನಿಗೂ ದಿನಕ್ಕೆ ಇಪ್ಪತ್ನಾಲ್ಕು ಗಂಟೆಗಳಷ್ಟೇ ಲಭ್ಯವಿದ್ದು, ಆ ಇಪ್ಪತ್ತನಾಲ್ಕು ಗಂಟೆಗಳನ್ನು ಕಳೆಯುವ ರೀತಿಯಲ್ಲಿ ವ್ಯಕ್ತಿ ವ್ಯಕ್ತಿಗಳ ಮಧ್ಯೆ ಬಹಳಷ್ಟು ವ್ಯತ್ಯಾಸಗಳಿದೆ. ಕೆಲವೊಬ್ಬರಿಗೆ ಸಮಯದ ಅಭಾವದಿಂದ ದಿನವಿಡೀ ಕೆಲಸ ಮಾಡುತ್ತಿರುವಂತೆ ಅನಿಸುತ್ತಿದ್ದರೆ, ಇನ್ನು ಕೆಲವರಿಗೆ ಕೆಲಸ ಮಾಡಿದಷ್ಟೂ ಇನ್ನೂ ಕೆಲಸ ಬಾಕಿಯುಳಿದಿರುವಂತೆ ಅನಿಸುತ್ತದೆ. ಅಷ್ಟೇ ಅಲ್ಲದೇ ದಿನವೂ ಕೆಲಸದೊಂದಿಗೆ ಜಂಜಾಟವಾಡುತ್ತಾ ಸುಸ್ತಾಗಿಬಿಡುತ್ತಾರೆ. ಇನ್ನು ಕೆಲವರು ಅದೇ ಪ್ರಮಾಣದ ಕೆಲಸಗಳನ್ನು ಅತ್ಯಂತ ಅಚ್ಚುಕಟ್ಟಾಗಿ ಮುಗಿಸಿಕೊಂಡು ದಿನದಲ್ಲಿ ಸ್ವಲ್ಪ ಸಮಯವನ್ನು ಆರಾಮವಾಗಿ ಕಳೆಯುತ್ತಾ ಜೀವನವನ್ನು ಚೆನ್ನಾಗಿ ಖುಷಿಯಿಂದ ಅನುಭವಿಸುತ್ತಾರೆ. ಈ ಎರಡು ರೀತಿಯ ವ್ಯಕ್ತಿಗಳ ಪೈಕಿ ಮೊದಲನೇ ವ್ಯಕ್ತಿಗೆ ಸಮಯದ ನಿರ್ವಹಣೆಯ ತಂತ್ರ ತಿಳಿದಿಲ್ಲ. ಎರಡನೆಯ ವ್ಯಕ್ತಿಗೆ ಸಮಯದ ನಿರ್ವಹಣೆಯ ತಂತ್ರ ಚೆನ್ನಾಗಿ ತಿಳಿದಿದೆ ಎನ್ನಬಹುದು. ಸಮಯವೇ ಪ್ರಜ್ಞಾವಂತರಿಗೆ ಜೀವನವಾಗಿದ್ದು, ಅವರ ಜೀವನವೇ ಸಮಯದಲ್ಲಿ ಅಡಗಿರುತ್ತದೆ. ಸಮಯವನ್ನು ಒಬ್ಬರಿಂದ ಇನ್ನೊಬ್ಬರು ಕಸಿದುಕೊಳ್ಳಲು ಹಾಗೂ ಕಳ್ಳತನ ಮಾಡಲು ಸಾಧ್ಯವಿಲ್ಲ. ಸಮಯವು ಕ್ರಮಬದ್ಧವಾಗಿದ್ದು ಅದು ತನಗೆ ಬೇಕಾದಾಗ ಅವಸರವಾಗಿ ಓಡುವುದಿಲ್ಲ ಹಾಗೂ ಬೇಡವೆಂದಾಗ ನಿಧಾನವಾಗಿ ಓಡುವುದಿಲ್ಲ, ನಿಂತಲ್ಲೇ ನಿಲ್ಲುವುದಿಲ್ಲ. ಸಮಯವನ್ನು ನಾವ್ಯಾರೂ ಯಾವುದೇ ಸಂದರ್ಭದಲ್ಲು ನಿಲ್ಲಿಸಲಾರೆವು ಹಾಗೂ ಅದನ್ನು ನಮ್ಮ ಬಳಿ ಇಟ್ಟುಕೊಳ್ಳಲೂ ಸಾಧ್ಯವಿಲ್ಲ. ಸಮಯವನ್ನು ಅನಿವಾರ್ಯವಾಗಿ ವ್ಯಯಿಸಲೇಬೆಕು ಹಾಗೂ ಕಾಲ ಚಕ್ರದೊಂದಿಗೆ ನಾವುಗಳೂ ನೀರಿನಮತೆ ಹರಿಯುತ್ತಾ ಮುಂದಕ್ಕೆ ಹೋಗಲೇಬೇಕು.

ಸಮಯ ನಿರ್ವಹಣೆಯ ತತ್ವಗಳು

ಸಮಯದ ನಿರ್ವಹಣೆಯನ್ನು ಸಮರ್ಪಕವಾಗಿ ಮಾಡಬೇಕೆಂದರೆ ನಾವು ಹಾಕಿಕೊಂಡಿರುವ ಗುರಿಯು ಅವುಗಳನ್ನು ಸಾದಿಸುವ ನಿಟ್ಟಿನಲ್ಲಿ ನಿರ್ದಿಷ್ಟವಾಗಿ, ನಿಖರವಾಗಿ ಹಾಗೂ ಆದ್ಯತೆ ನೀಡುವಂತಿರಬೇಕು. ನಮಗೆ ಲಭ್ಯವಿರುವ ಗರಿಷ್ಟ ಸಮಯದ ಮಿತಿಯೊಳಗಡೆ ನೀಡಲಾದ ಜವಾಬ್ದಾರಿಯನ್ನು ಅತ್ಯಂತ ಗುಣಮಟ್ಟದಿಂದ ನಿರ್ವಹಿಸುವ ಕುರಿತು ಸದಾ ಯೋಚನೆಯನ್ನು ಮಾಡಿ ಯೋಜನೆಯನ್ನು ಹಾಕಿಕೊಂಡು ನಿರ್ವಹಿಸಬೇಕು. ಮಾಡಬೇಕಿರುವ ಒಟ್ಟಾರೆ ಕೆಲಸಗಳ ಪೈಕಿ ದಿನದ ಆರಂಭದಲ್ಲಿ ಈ ದಿನ ಮಾಡಬೇಕಿರುವ ಕೆಲಸಗಳ ಸಮಗ್ರ ಪಟ್ಟಿಯನ್ನು ತಯಾರಿಸಿಕೊಳ್ಳಬೇಕು. ಇದರಿಂದ ಯಾವುದೇ ಕೆಲಸವು ಮರೆವಿನಿಂದ ಬಾಕಿ ಉಳಿಯುವುದು ತಪ್ಪುತ್ತದೆ. ನಮ್ಮ ಜೀವನಶೈಲಿಗೆ ಅನುಗುಣವಾಗಿ ಆದ್ಯತೆಯ ಆಧಾರದ ಮೇರೆಗೆ ವೈವಿಧ್ಯಮಯ ಕೆಲಸವನ್ನು ಮಾಡುವ ಮನೋಧರ್ಮವನ್ನು ಹೊಂದಿರಬೇಕು. ಸಮಯದ ಪರಿಧಿಯೊಳಗೆ ಕೆಲಸ ಮಾಡುವ ಚಿಂತನೆಯಿರುವ ವ್ಯಕ್ತಿಯು ಸದಾ ಕಾಲ ತನ್ನ ಯೋಚನೆಯನ್ನು ಯಶಸ್ಸನ್ನು ಸಾಧಿಸುವೆಡೆಗೆ ಕೇಂದ್ರೀಕರಿಸಬೇಕು.

ಸಮಯ ನಿರ್ವಹಣೆ ಎಂದರೇನು?

ಸಮಯವನ್ನು ಅತ್ಯಂತ ರಚನಾತ್ಮಕವಾಗಿ ಮತ್ತು ಪ್ರಯೋಜನಕಾರಿಯಾಗಿ ಉಪಯೋಗಿಸಿಕೊಳ್ಳುವುದಕ್ಕೆ ಬೇಕಾದ ಪ್ರಾಯೋಗಿಕ ಕೌಶಲ್ಯಗಳನ್ನು (Practical Skills)  ಒಗ್ಗೂಡಿಸುವುದನ್ನು ಸಮಯ ನಿರ್ವಹಣೆ (Time Management) ಎನ್ನುವರು. ವ್ಯಕ್ತಿಯೊಬ್ಬ ಕೆಲಸವೊಂದನ್ನು ಎಷ್ಟು ಕಷ್ಟಪಟ್ಟು ನಿರ್ವಹಿಸುತ್ತಾನೆ ಎನ್ನುವುದಕ್ಕಿಂತ ಆತ ಆ ಕೆಲಸದಿಂದ ಎಂತಹ ಫಲಿತಾಂಶವನ್ನು ಹೊಂದುತ್ತಾನೆ ಎನ್ನುವುದರ ಮೇಲೆ ತನ್ನ ದೃಷ್ಟಿಯನ್ನು ಕೇಂದ್ರೀಕರಿಸುವುದೇ ಸಮಯ ನಿರ್ವಹಣೆಯ ಸೂತ್ರ.

ಸಮಯ ನಿರ್ವಹಣೆಯ ಉಪಯೋಗಗಳು

ಸಮಯವನ್ನು ಸಮರ್ಪಕವಾಗಿ ನಿರ್ವಹಿಸುವುದರಿಂದ ದೈನಂದಿನ ಬದುಕಿನಲ್ಲಿ ಅಚ್ಚುಕಟ್ಟುತನ ಹೆಚ್ಚಾಗುತ್ತಾ ಹೋಗಿ ನಾವು ಮಾಡುವ ಕೆಲಸಗಳಲ್ಲಿ ಏಕಾಗ್ರತೆ ಉಂಟಾಗುತ್ತದೆ. ಇದರಿಂದಾಗಿ ನಮ್ಮ ಮೇಲಿನ ನಂಬಿಕೆ ಮತ್ತು ಗೌರವಗಳು ಹೆಚ್ಚುತ್ತಾ ಹೋಗುತ್ತದೆ. ಯಾವುದೇ ಒಂದು ಕೆಲಸವನ್ನು ಮಾಡಲಾರೆ ಎನ್ನುವ ಋಣಾತ್ಮಕವಾದ ಭಾವನೆಯು ಹೊರಟು ಹೋಗಿ, ಎಲ್ಲಾ ಕೆಲಸಗಲನ್ನೂ ಸಮರ್ಪಕವಾಗಿ ಮಾಡಬಲ್ಲೆ ಎಂಬ ಧನಾತ್ಮಕ ಭಾವನೆಯು ಮೂಡುತ್ತದೆ. ಸಮಯದ ಸಮರ್ಪಕವಾದ ನಿರ್ವಹಣೆಯಿಂದ ವೃತ್ತಿ ಹಾಗೂ ವೈಯುಕ್ತಿಕ ಜೀವನದಲ್ಲಿ ಸಮತೋಲನ ಉಂಟಾಗುತ್ತದೆ. ಕ್ಲಪ್ತ ಸಮಯಕ್ಕೆ ಕೆಲಸವನ್ನು ಪೂರ್ಣಗೊಳಿಸುವುದರಿಂದ ಮೇಲಾಧಿಕಾರಿಗಳ ಪ್ರಶಂಸೆಗೆ ಪಾತ್ರರಾಗುತ್ತೇವೆ. ಪ್ರತಿಯೊಂದು ಕೆಲಸದಲ್ಲಿ ಹಾಗೂ ಬದುಕಿನಲ್ಲಿ ಯಶಸ್ಸು ಸುಲಲಿತವಾಗಿ ಒಲಿದು ಬರುತ್ತದೆ. ಸಮಯದ ನಿರ್ವಹಣೆಯಿಂದ ಇತರರಿಗೂ ನಮ್ಮ ಬದುಕು ಆದರ್ಶಪ್ರಾಯವಾಗಬಹುದು. ಆದ್ದರಿಂದಲೇ ತಿಳಿದವರು ಹೇಳುವುದು ಸಮಯವು ನಮ್ಮನ್ನು ನಿರ್ವಹಿಸುವ ಮೊದಲು ಸಮಯವನ್ನು ನಾವು ಸರಿಯಾಗಿ ನಿರ್ವಹಿಸಿ ಸಂಘಟಿಸಿದಲ್ಲಿ ಅದ್ಭುತ ವ್ಯಕ್ತಿಯಾಗಿ ಬೆಳೆಯಲು ಸಾಧ್ಯ.

ಆದ್ಯತೆಗೆ ಅನುಸಾರವಾಗಿ ಕೆಲಸದ ವಿಂಗಡಣೆ

ಅಂದುಕೊಂಡ ಸಮಯಕ್ಕೆ ಕೆಲಸವನ್ನು ನಿರ್ವಹಿಸುವ ಸಂದರ್ಭದಲ್ಲಿ ನಮ್ಮೆದುರಿಗಿರುವ ಹತ್ತು ಹಲವು ಕೆಲಸಗಳನ್ನು ಅವುಗಳ ಪ್ರಾಮುಖ್ಯತೆ ಹಾಗೂ ಆದ್ಯತೆಗೆ ಅನುಗುಣವಾಗಿ ವಿಂಗಡಿಸುವ ಕೌಶಲವನ್ನು ಹೊಂದಬೇಕು. ಹಲವು ಕೆಲಸಗಳ ಪೈಕಿ ಪ್ರಥಮ ಆದ್ಯತೆಯನ್ನು ಅತ್ಯಂತ ಪ್ರಾಮುಖ್ಯ ಹಾಗೂ ಅತ್ಯಂತ ತುರ್ತಾಗಿ ನಿರ್ವಹಿಸಬೇಕಾದ ಕೆಲಸಗಳನ್ನು ಆಯ್ದುಕೊಂಡು ಅದಕ್ಕೆ ನೀಡಬೇಕು. ದ್ವಿತೀಯ ಆದ್ಯತೆಯನ್ನು ಅತ್ಯಂತ ಪ್ರಾಮುಖ್ಯ ಹಾಗೂ ಅಷ್ಟೊಂದು ತುರ್ತಾಗಿ ಮಾಡಬೇಕಿಲ್ಲದ ಕೆಲಸಗಳನ್ನು ಆಯ್ದುಕೊಂಡು ಅದಕ್ಕೆ ನೀಡಬೇಕು. ತೃತೀಯ ಆದ್ಯತೆಯನ್ನು ಅತ್ಯಂತ ಪ್ರಾಮುಖ್ಯವಲ್ಲ ಆದರೆ ಅತ್ಯಂತ ತುರ್ತಾಗಿ ಮಾಡಬೇಕಾದ ಕೆಲಸಗಳನ್ನು ಆಯ್ದುಕೊಂಡು ಅದಕ್ಕೆ ನೀಡಬೇಕು. ನಾಲ್ಕನೆಯ ಆದ್ಯತೆಯನ್ನು ಅಷ್ಟೊಂದು ಪ್ರಾಮುಖ್ಯವಲ್ಲ ಹಾಗೂ ಅಷ್ಟೊಂದು ತುರ್ತಾಗಿ ಮಾಡಬೇಕಿಲ್ಲದ ಕೆಲಸಕ್ಕೆ ನೀಡಿ ನಿರ್ವಹಿಸಬೇಕು. ಆದರೆ ಸಾಮಾನ್ಯವಾಗಿ ನಾವೆಲ್ಲ ಅದಕ್ಕೆ ವಿರುದ್ಧವಾಗಿ ಕೆಲಸಗಳನ್ನು ನಿರ್ವಹಿಸುತ್ತಾ ಸಮಯವನ್ನು ಫೊಲು ಮಾಡುತ್ತಾ ಕೆಲಸಗಳೇ ಮುಗಿಯುತ್ತಿಲ್ಲವೆಂದು ಗೊಣಗಾಡುತ್ತೇವೆ.

SMART ಆಗಿ ಕೆಲಸ ನಿರ್ವಹಿಸುವ ವಿಧಾನಗಳು

ಸಮಯ ನಿರ್ವಹಣೆಯಡಿಯಲ್ಲಿ ಕೆಲಸ ನಿರ್ವಹಿಸಬೇಕೆಂದರೆ ಮೊದಲಿಗೆ ನಾವು ಮಾಡುವ ಎಲ್ಲಾ ಕೆಲಸಗಳೂ ಸರಿಯಾದ ರೂಪುರೇಷೆಯನ್ನು ಹೊಂದಿ ನಿರ್ದಿಷ್ಟವಾಗಿರಬೇಕು (Specific-ನಿರ್ದಿಷ್ಟವಾದ). ಮಾಡುವ ಹಾಗೂ ಮಾಡುತ್ತಿರುವ ಕೆಲಸಗಳು ಸುಲಭವಾಗಿ ಅಳೆಯುವಂತಿರಬೇಕು (Measurable-ಅಳೆಯಬಹುದಾದ). ಯಾವುದೇ ಕೆಲಸಗಲನ್ನುನಿರ್ವಹಿಸುವ ಜವಾಬ್ದಾರಿಯನ್ನು ಕೈಗೆತ್ತಿಕೊಂಡರೆ ಅವುಗಳನ್ನು ಸರಲವಾಗಿ ಸಾಧಿಸುವಂತಿರಬೇಕು (Attainable ಸಾಧಿಸಬಹುದಾದಂತಹ). ಕೈಗೆತ್ತಿಕೊಂಡ ಕೆಲಸಗಳು ಕೇವಲ ಊಹೆಗಳಾಗಿರದೇ ನೈಜತೆಯಿಂದ ಹಾಗೂ ವಾಸ್ತವಿಕತೆಯಿಂದ ಕೂಡಿರಬೇಕು (Realistic ವಾಸ್ತವಿಕವಾದಂತಹ). ಯಾವುದೇ ಒಂದು ಕೆಲಸವು ನಿರ್ದಿಷ್ಟವಾದ ಕಾಲಮಿತಿಯೊಳಗೆ ಮುಗಿಸಬಹುದಾದಂತಹ ಕೆಲಸಗಳಾಗಿರಬೇಕು (Time Bound ಕಾಲಮಿತಿಯಿರುವಂತಹ). ಸಮಯದ ಮೌಲ್ಯವನ್ನು ಅರಿತಿರುವ ಪ್ರತಿಯೊಬ್ಬರೂ ತಾವು ದಿನ ನಿತ್ಯ ಮಾಡಬೇಕಿರುವ ಕೆಲಸಗಳನ್ನು ABCDEಪ್ರಕಾರ ಕಾರ್ಯ ನಿರ್ವಹಿಸಲು ತಿಳಿದಿರಬೇಕು. ಅಂದರೆ ನಮ್ಮೆದುರಿಗಿರುವ ಹಲವು ಕೆಲಸಗಳ ಪೈಕಿ ಮೊದಲನೆಯದಾಗಿ ಮಾಡಲೇಬೇಕಾದ ಕೆಲಸಗಳು, ಎರಡನೆಯದಾಗಿ ಮಾಡಬೇಕಾದ ಕೆಲಸಗಳು, ಮೂರನೆಯದಾಗಿ ಮಾಡಿದರೆ ಒಳ್ಳೆಯದು ಎನ್ನುವಂತಹ ಕೆಲಸಗಳು, ನಾಲ್ಕನೆಯದಾಗಿ ಯಾರಿಗಾದರೂ ವಹಿಸಿ ಅವರಿಂದಲೂ ಮಾಡಿಸಬಹುದಾದ ಕೆಲಸಗಳು ಹಾಗೂ ಐದನೆಯದಾಗಿ ಮಾಡದಿದ್ದರೂ ಪರವಾಗಿಲ್ಲ ಎನ್ನುವಂತಹ ಕೆಲಸಗಳು ಎಂಬುದಾಗಿ ವಿಂಗಡಿಸುವ ಚಾಕಚಕ್ಯತೆಯನ್ನು ಬೆಳೆಸಿಕೊಂಡು ಅದರಂತೆ ಕೆಲಸವನ್ನು ನಿರ್ವಹಿಸಬೇಕು. ಇದರಿಂದ ನಮ್ಮೆದುರಿಗಿರುವ ಎಲ್ಲಾ ಕೆಲಸಗಳನ್ನೂ ಸಮರ್ಥವಾಗಿ ನಿರ್ವಹಿಸಿ ಕಛೇರಿಯಲ್ಲಿ ಭೇಷ್ ಎನಿಸಿಕೊಳ್ಳಬಹುದು.ಹೆಚ್ಚಿನ ಕಡೆಗಳಲ್ಲಿ ಇದರ ವಿರುದ್ಧ ದಿಕ್ಕಿನ ಆಯ್ಕೆಗಳನ್ನು ಮಾಡಿಕೊಂಡು ಸಮಯದ ಜಾಲದೊಳಗೆ ಸಿಲುಕಿ ವಿಲವಿಲ ಒದ್ದಾಡುತ್ತೇವೆ.

ಕಾರ್ಯವೈಖರಿ ಅಥವಾ ಕಾರ್ಯತತ್ಪರತೆ

ಯಾವೆಲ್ಲ ರೀತಿಯ ಕೆಲಸಗಳನ್ನು ಮಾಡದೇ ಇರಲು ಅಥವಾ ಅವುಗಳನ್ನು ಮುಂದೂಡಲು ನಿರಂತರವಾಗಿ ಪ್ರಯತ್ನಿಸುತ್ತ ಇರುತ್ತೇವೆಯೋ ಅಂತಹ ಕೆಲಸಗಳನ್ನು ಹುಡುಕಿ ಹುಡುಕಿ ಮಾಡಲು ಪ್ರಯತ್ನಿಸಬೇಕು. ಮಾಡುತ್ತಿರುವ ಪ್ರತಿಯೊಂದು ಕೆಲಸದಲ್ಲೂ ತಕ್ಷಣದಲ್ಲಿ ಮಾಡಿ ಮುಗಿಸಬೇಕು ಎಂಬ ಕನಿಷ್ಠ ಪರಿಜ್ಞಾನವನ್ನು ಹೊಂದಿರಬೇಕು. ನಾವು ಮಾಡುತ್ತಿರುವ ಕೆಲಸದ ವಿಚಾರದಲ್ಲಿ ನಮ್ಮೊಂದಿಗೆ ನಾವೇ ಸದಾಕಾಲ ಸ್ಪರ್ಧಿಸುತ್ತಾ ಇರಬೇಕು. ಕೆಲಸವನ್ನು ಕೊಟ್ಟಾಗ ಅದನ್ನು ತಕ್ಷಣದಲ್ಲಿ ಪೂರ್ಣಗೊಳಿಸಿ ಅದರ ಪರಿಣಾಮದ ಕುರಿತಾಗಿ ಮೇಲಧಿಕಾರಿಗಳಿಗೆ ತಿಳಿಸುವುದು ಎಲ್ಲದಕ್ಕಿಂತ ಮುಖ್ಯವಾದ ಕೆಲಸಗಳನ್ನು ಆಯ್ಕೆ ಮಾಡಿಕೊಳ್ಳುವ ಜಾಣ್ಮೆಯನ್ನು ಹೊಂದಿರಬೇಕು ಹಾಗೂ ಆ ಕೆಲಸ ಮುಗಿಯುವ ತನಕ ಮನಸ್ಸಿಟ್ಟು ಏಕಾಗ್ರತೆಯೊಂದಿಗೆ ಪರಿಪೂರ್ಣಗೊಳಿಸುವ ಚಾಕಚಕ್ಯತೆಯನ್ನು ಹೊಂದಿದ್ದಲ್ಲಿ ನಮ್ಮ ಕೆಲಸದ ವೈಖರಿ ಅಥವಾ ಕಾರ್ಯತತ್ಪರತೆಯನ್ನು ಹೆಚ್ಚಿಸಿಕೊಳ್ಳಬಹುದು.

ನಮ್ಮಲ್ಲಿರುವ ವೈವಿಧ್ಯಮಯ ಪ್ರತಿಭೆಗಳನ್ನೆಲ್ಲಾ ಒಟ್ಟುಗೂಡಿಸಿ ಏಕಕಾಲದಲ್ಲಿ ಹಲವು ಕೆಲಸಗಳನ್ನು ಮಾಡುವ ಜಾಣ್ಮೆಯನ್ನು ಬೆಳೆಸಿಕೊಳ್ಳಬೇಕು ಆದರೆ ಇದು ನಮ್ಮ ಕೆಲಸವನ್ನು ಉಳಿಸಬೇಕೇ ಹೊರತು ಮಾಡಿದ ಕೆಲಸದ ಗುಣಮಟ್ಟವನ್ನು ಹಾಳುಮಾಡಿ ಮತ್ತೆ ಹೊಸದಾಗಿ ಮಾಡುವಂತಿರಬಾರದು. ಆದ್ದರಿಂದ ನಮ್ಮೆಲರಿಗೂ ಸಮಯವೆನ್ನುವುದು ಅತ್ಯಂತ ಅಮೂಲ್ಯವಾದದ್ದು ಎಂಬುವುದನ್ನು ಅರಿತುಲಭ್ಯವಿರುವ ಅಷ್ಟೂ ಸಮಯವನ್ನು ಸಮರ್ಪಕವಾಗಿ ಬಳಸಿಕೊಂಡು ವ್ಯಕ್ತಿಯಾಗಿ ಹಾಗೂ ಕಛೆರಿಯಲ್ಲಿ ಉತ್ತಮ ಕೆಲಸಗಾರನಾಗಿ ಬೆಳೆಯಬಹುದು.

ಸಂತೋಷ್ ರಾವ್ ಪೆರ್ಮುಡ
ಪೆರ್ಮುಡ ಮನೆ, ಪಟ್ರಮೆ ಗ್ರಾಮ ಮತ್ತು ಅಂಚೆ
ಬೆಳ್ತಂಗಡಿ ತಾಲೂಕು, ದ.ಕ ಜಿಲ್ಲೆ 574198
ದೂ: 9742884160

Related post

Leave a Reply

Your email address will not be published. Required fields are marked *