ಸಮಾಜ ಸಮನ್ವಯ

ಸಮಾಜ ಸಮನ್ವಯ

ನಮ್ಮೂರ ಬೆಟ್ಟದ ತುದಿಯಲ್ಲಿ
ಉದಯಿಸುವ ಸೂರ್ಯನಿಗೆ
ಎದ್ದೇಳು ಮಂಜುನಾಥ ಏಳು ಬೆಳಗಾಯಿತು
ಎನ್ನುವ ಸ್ವಾಗತ ಗೀತೆ
ಪ್ರತಿ ದಿನವೂ
ನಮ್ಮೂರಿನ ದೇವಾಲಯದಲ್ಲಿ ಕೇಳಿ ಬರುತಿತ್ತು

ಬೆಳಗಿನ ಜಾವ ನಾಲ್ಕು ಘಂಟೆಗೆ
ಮಠ ಮಂದಿರದಲ್ಲಿ ಮೈಕ್ ಹತ್ತಿಸಿದರೆ
ಶುಕ್ಲಾಂಬರದರಂ ಶಶಿವರ್ಣಂ ಚತುರ್ಭುಜಂ
ನೊಂದಿಗೆ ಮುಂದುವರಿಯುತ್ತಿತ್ತು…

ಮಂದಿರದ ಮೈಕ್ ನೊಂದಿಗೆ ಮಸೀದಿಯಲ್ಲಿ ಕೂಗುತ್ತಿದ್ದ ಆಜಾನ
ಧ್ವನಿಯೂ ಗಾಳಿಯಲ್ಲಿ ವಿಲೀನಗೊಂಡು ತೇಲಿ
ಮಠದ ಸ್ವಾಗತ ಗೀತೆಯೊಂದಿಗೆ ಬೆರೆತು
ಅರಳುವ ಮೊಗ್ಗುಗಳಿಗೆ, ಹಾರುವ ಹಕ್ಕಿಗಳಿಗೆ,
ಮೊಳಕೆಯೊಡೆಯುವ ಬೀಜಕ್ಕೆ, ಕೂಗುವ ಕೋಳಿಗೆ,
ಇಂಪಾದ ಸಂಗೀತದೊಂದಿಗೆ ಶುಭ ಕೋರುತಿತ್ತು

ನಿನ್ನೆಯ ಕತ್ತಲೆಯ ಬಾನಿನ ಮುಸುಕಿನಲ್ಲಿ
ಹಕ್ಕಿಗಳ ಹಿಂಡು ರಂಗೋಲಿ ಹಾಕಿ
ಕರಗುವ ಚಂದಿರನಿಗೂ ದಾರಿ ತೋರಿ
ಮರೆಯಾಗುವ ಚುಕ್ಕಿಗಳಿಗೂ
ಕೈ ಹಿಡಿದು ದಾರಿ ತೋರಿಸುತ್ತಿದ್ದವು

ಕೆಂದಾವರೆಯ ಮುಖದ ಸೂರ್ಯನ
ಮುಖ ತೊಳೆದು ಬೀಸುವ ಗಾಳಿಯು
ಹಕ್ಕಿಯ ಜೊತೆ ಕೈ ಜೋಡಿಸುತ್ತಿತ್ತು

ಸೂರ್ಯೋದಯದ ಬೆಳಕನ್ನು ಮೇಲೆತ್ತಿ
ಭುವಿಗೆ ಕರೆ ತಂದು
ತಮ್ಮ ದಿನಚರಿ ಬರೆಯುತ್ತಿದ್ದವು

ಮಂದಿರ ಮಸೀದಿಯ ಸ್ವಾಗತ ಗೀತೆಯನ್ನೇ
ಅಲಾರಾಂ ಎಂದು ನಂಬಿದ್ದ ಎಷ್ಟೋ ಬಡ ಕುಟುಂಬಗಳು
ನಾಳೆಯ ನಂಬಿ ಮಲಗಿದ ಹಾಸಿಗೆಯ ಮೇಲೆತ್ತಿ
ದಿನದ ಬದುಕಿಗೆ ಮುನ್ನುಡಿ ಬರೆಯುತ್ತಿದ್ದವು

ಅವ್ವ ಒಲೆ ಬೂದಿ ತುಂಬಿ ಹೊರಚೆಲ್ಲಿ
ಕ್ಯಾಗಸ ಹೊಡೆದರೆ, ಅಪ್ಪ ಎತ್ತಿಗೆ ಮೇವು ಹಾಕಿ
ಸಗಣಿ ಗಂಜಳದ ಸ್ವಚ್ಛತೆಯಲ್ಲಿರುತ್ತಿದ್ದ
ಅಕ್ಕ ಬಾಗಿಲು ಮುಂದೆ ರಂಗೋಲಿ ಬಿಡಿಸಿದರೆ
ನಾನು ಅದೇ ಸದ್ದುಗದ್ದಲಕೆ ಎದ್ದು ಒಳಗಿನ ಕೋಣೆಗೆ
ಓದಲು ಕುಳಿತುಕೊಳ್ಳುತ್ತಿದ್ದೆ
ಚಿಕ್ಕವರೆಲ್ಲರೂ ಸೂರ್ಯ ವಂಶಸ್ಥರು

ಈಗೀಗ ಯಾಕೋ ಮಠದಲ್ಲಿ
ಎದ್ದೇಳು ಮಂಜುನಾಥ ಏಳು ಬೆಳಗಾಯಿತೆನ್ನುವ
ಬೆಳಕಿನೊಡೆಯನ ಸ್ವಾಗತ ಕೋರುವ ಮೈಕಿಲ್ಲ ಧ್ವನಿಯಿಲ್ಲ
ಮಸೀದಿಯ ಮೇಲಿನ ಆಜಾನ್ ಸದ್ದು ಹೊರಗೆ ಬರುತ್ತಿಲ್ಲ
ನೀಲಿ ಬಾನಲಿ ಹಕ್ಕಿಗಳ ರಂಗೋಲಿಯೂ ಕಾಣುತ್ತಿಲ್ಲ

ಜನಸಂಖ್ಯೆಗೆ ತಕ್ಕಂತೆ
ಮನೆ ಮಠ ಮಂದಿರ ಮಸೀದಿಗಳು
ಶಾಲೆ ಕಾಲೇಜ್ ವಿಶ್ವವಿದ್ಯಾಲಯಗಳು
ಪೊಲೀಸ್ ಠಾಣೆಗಳು ನ್ಯಾಯಾಲಯಗಳು ಜೈಲುಗಳು
ವೃದ್ಧಾಶ್ರಮಗಳು ಅನಾಥಾಶ್ರಮಗಳು
ಶೌಚಾಲಯಗಳು ಸಮಾಜ ಗಲೀಜು ಮಾಡುವ ಮನಸ್ಸುಗಳು
ರಸ್ತೆ ವಾಹನ ಎಲ್ಲವೂ ಹೆಚ್ಚಾಗಿವೆ

ಹಿಂದಿದ್ದ ಸ್ನೇಹ ಪ್ರೀತಿ ವಿಶ್ವಾಸ
ಮಾನವೀಯತೆಯ ಸಂಬಂಧ ಮರೆಯಾಗಿ
ಜಾತಿ ಧರ್ಮದ ದ್ವೇಷದ ಬೆಂಕಿ ಹಚ್ಚುವ
ಮನಸ್ಸುಗಳು ತುಂಬಿ ತುಳುಕುತ್ತಿವೆ
ನಾವೆಲ್ಲರೂ ಒಂದೇ ಎನ್ನುವ ಭಾವನೆ ಸತ್ತು
ಎಲ್ಲರೆದೆಯಲಿ ಧರ್ಮ ಯುದ್ಧಕ್ಕೆ ಅಣಿಯಾದ ಬಂದೂಕಗಳು ಮಾತ್ರ ಜೀವಂತವಾಗಿವೆ

ಹನಮಂತ ಸೋಮನಕಟ್ಟಿ

Related post