ಸರಳ ಜೀವನ ಸಾಧಕನ ಲಕ್ಷಣ

ಸರಳ ಜೀವನ ಸಾಧಕನ ಲಕ್ಷಣ

ಜೀವನ ವೀಣೆಯ ಮೀಟಿದ ವೈಣಿಕನವನು
ಸೋಲೊಪ್ಪದ ಸರದಾರನವನು|
ಕರ್ಮಭೂಮಿಯ ಕಾರ್ಮಿಕನವನು
ಸರಳತೆಯಿಂದ ಸಾಧನೆಯೆಡೆಗೆ ಸಾಗಿದ ಸಾಧಕನವನು||

‘ಕ್ಷಿಪಣಿಗಳ ಜನಕ’ ನೆಂಬ ಅಭಿದಾನ ಪಡೆದ ಅಭಿಮಾನಿಯವನು
ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಅಧ್ಯಾಪಕನವನು|
ಕರ್ತವ್ಯ ನಿಷ್ಠೆಯೇ ಜೀವನದೃಷ್ಟಿಯಾಗಿಸಿಕೊಂಡ ಜನಕನವನು
ಪವಿತ್ರಾತ್ಮವನು ಹೊಂದಿದ ಪರಮದಯಾಳು ಅವನು||

ದೂರದೃಷ್ಟಿಯ ದಾರ್ಶನಿಕನವನು
ಧರ್ಮಸಮದೃಷ್ಟಿಯ ಧಾರ್ಮಿಕನವನು|
ಕನಸನ್ನು ನನಸಾಗಿಸಿದ ಛಲಗಾರನವನು
ಮನುಜಧರ್ಮವನು ಮನುಕುಲಕ್ಕೆ ಸಾರಿದ ಮಹಾನಾಯಕನವನು||

ವಿಜ್ಞಾನಿಯಾಗಿ, ವೈಣಿಕನಾಗಿ, ಕವಿಯಾಗಿ, ಕಲಾವಿದನಾಗಿ
ಪ್ರತಿಭಾ ಕಾರಂಜಿಯನ್ನು ಚಿಮ್ಮಿದ ಪ್ರತಿಭಾವಂತನವನು
ಗುರಿಯೊಂದಿದ್ದರೆ ಸಾಕು ಗರಿ ತಾನಾಗಿಯೇ ಬರುವುದೆಂದು ತೋರಿದ
ದಿಟಪುರುಷನಿವನು||

ಶಿಸ್ತಿನ ಸಿಪಾಯಿಯವನು
ನಭದೆತ್ತರಕ್ಕೆ ಹಾರಿದರೂ ಇಳೆಗಂಟಿಕೊಂಡ ನಾಯಕನವನು|
ಸರ್ವರ ಕಣ್ಣಿನಲ್ಲಿ ಕಣ್ಮಣಿಯವನು
‘ಅಂತರಿಕ್ಷ ಅಭಿಯಂತ’ ನವನು||

‘ಪ್ರಜೆಗಳ ಪ್ರಜಾಪತಿ’ ಯವನು
ಬುದ್ಧಿಜೀವಿಗಳಿಗೂ ಬೋಧಕನವನು|
ಅಜಾತಶತ್ರು, ಅಜೇಯನವನು
ಸಾರ್ಥಕ ಜೀವನ ಸಾಗಿಸಿದ ಸಾತ್ವಿಕನವನು||

ಪ್ರಜ್ಞಾವಂತ, ಪ್ರಾಮಾಣಿಕ, ರಾಜಕೀಯ ಧುರೀಣನವನು
ಸದ್ಗುಣಗಳ ಸಾಕಾರ ಮೂರ್ತಿಯವನು|
ಅವರೇ ನಮ್ಮ ನೆಚ್ಚಿನ ಕಲಾಮ್
‘ಕಲಾಮ್’ ಗೆ ನಮ್ಮೆಲ್ಲರ ಸಲಾಮ್||

ಹೇಮಾ ಶ್ರೀವತ್ಸ

Related post

Leave a Reply

Your email address will not be published. Required fields are marked *