ಸರಳ ಸಜ್ಜನಿಕೆಯ ಶಾಂತಿದೂತ “ಲಾಲ್ ಬಹದ್ಧೂರ್ ಶಾಸ್ತ್ರೀ”

ಭಾರತ ದೇಶ ತನ್ನದೇ ಆದ ಸಾಂಸ್ಕೃತಿಕ ಹಿರಿಮೆ ಗರಿಮೆಗಳಿಂದ ವಿಶ್ವಮನ್ನಣೆ ಪಡೆದಿದೆ. ಭಾರತಾಂಬೆಯ ಮಡಿಲಲ್ಲಿ ಜನಿಸಿದ ಅನೇಕ ಸತ್ಪುರುಷರ ಆದರ್ಶದ ಬದುಕು ನಮಗೆ ದಾರಿದೀಪ. ರಾಷ್ಟ್ರಪಿತಾ ಮಹಾತ್ಮಾ ಗಾಂಧೀಜಿಯವರಷ್ಟೇ ಎತ್ತರಕ್ಕೆ ನಿಲ್ಲಬಲ್ಲ ವ್ಯಕ್ತಿತ್ವ ಇವರದ್ದು. ಅವರ ಜನ್ಮ ಜಯಂತಿಯನ್ನು ಗಾಂಧೀಜಿಯವರ ಜಯಂತಿಯ ಜೊತೆಗೆ ಆಚರಿಸುತ್ತೇವೆ. ಅವರೇ “ಲಾಲ್ ಬಹದ್ಧೂರ್ ಶಾಸ್ತ್ರೀ”.

ಒಬ್ಬ ವ್ಯಕ್ತಿ ಸತ್ತಾಗ ನಾವು ಅವರ ಬಳಿ ಒಡವೆ, ವಸ್ತ್ರ, ಆಸ್ತಿಪಾಸ್ತಿಗಳ ವಿವರಕ್ಕಾಗಿ ಹುಡುಕಾಡುತ್ತೇವೆ. ಆದರೆ ಭಾರತದ ಪ್ರಧಾನಿಯೊಬ್ಬರು ಸತ್ತಾಗ ಅವರ ಬಳಿ ಹುಡುಕಿದಾಗ ಜೇಬಿನಲ್ಲಿ ಸಿಕ್ಕಿದ್ದು “ಒಂದು ಸೂಜಿ ಮತ್ತು ದಾರ” ಅದನ್ನು ಅವರು ತಮ್ಮ ಹರಿದ ಬಟ್ಟೆ ತಾವೇ ಹೋಳಿಗೆ ಹಾಕಿಕೊಳ್ಳಲು ಇಟ್ಟುಕೊಂಡಿದ್ದರು. ಅವರೇ ಸರಳ ಸಜ್ಜನಿಕೆಯ ಶಾಂತಿ ದೂತ ಲಾಲ್ ಬಹದ್ದೂರ್ ಶಾಸ್ತ್ರೀ.

ಗಾಂಧೀಜಿಯವರು ಸ್ವಾತಂತ್ರ ಗಳಿಸಲು ಹೋರಾಟ ಮಾಡಿದರೆ, ಶಾಸ್ತ್ರೀಜಿಯವರು ಸ್ವಾತಂತ್ರದ ಉಳಿವಿಗಾಗಿ ಹೋರಾಡಿದ ಮಹಾನ್ ಚೇತನ. ಬಡ ಜನರ ಏಳಿಗೆಗೆ, ನಿಷ್ಠೆಯಿಂದ ಕಾರ್ಯವೆಸಗಿದ ಕಾಯಕಯೋಗಿ. ನೆಹರು ನಂತರ ಯಾರು? ಎನ್ನುವ ಪ್ರಶ್ನೆಗೆ ಸಮರ್ಥ ಪ್ರಧಾನಿಯಾಗಿ ಕಾರ್ಯನಿರ್ವಹಿಸಿ ಸಮರ್ಪಕ ಉತ್ತರ ನೀಡಿದ ವಾಮನ ಮೂರ್ತಿ ಶಾಸ್ತ್ರೀಜಿ.

ಶಾಸ್ತ್ರೀ ಯವರು 1904 ನೇ ಇಸವಿ ಅಕ್ಟೋಬರ್ 2 ರಂದು ಉತ್ತರ ಪ್ರದೇಶದ ಮೊಘಲ್ ಸರಾಯಿ ಎಂಬಲ್ಲಿ ಶಾರದಾ ಪ್ರಸಾದ್ ಹಾಗು ರಾಮದುಲಾರಿ ದೇವಿಯವರ ಪ್ರೀತಿಯ ಮಗನಾಗಿ ಜನಿಸಿದರು. ಚಿಕ್ಕಂದಿನಲ್ಲಿ ತಂದೆಯನ್ನು ಕಳೆದುಕೊಂಡು ಅಜ್ಜನ ಮಾರ್ಗದರ್ಶನದಲ್ಲಿ ಬೆಳೆದವರು. ವಿದ್ಯಾರ್ಥಿ ದೆಸೆಯಲ್ಲಿಯೇ ಶಿಸ್ತಿನ ಸಿಪಾಯಿಯಾಗಿ ಶಿಕ್ಷಕರ ಪ್ರೀತಿ ವಿಶ್ವಾಸಕ್ಕೆ ಪಾತ್ರರಾಗಿದ್ದ ಇವರನ್ನು ಸ್ನೇಹಿತರೆಲ್ಲ “ಗುಬ್ಬಚ್ಚಿ” ಎಂದು ಮನೆಯವರೆಲ್ಲ “ಲಾಲ್” ಎಂದು ಮುದ್ದಿನಿಂದ ಕರೆಯುತ್ತಿದ್ದರು.

ಬಾಲ್ಯದಲ್ಲಿಯೇ ಭಾರತೀಯರು ಬ್ರಿಟಿಷರ ಕಪಿಮುಷ್ಠಿಯಲ್ಲಿ ಸಿಲುಕಿ ಪಾರತಂತ್ರದಲ್ಲಿ ಬಾಳುವುದನ್ನು ಕಂಡು ಶಾಸ್ತ್ರೀಜಿಯವರು ಬಹಳ ಯೋಚಿಸುತ್ತಿದ್ದರು. ಬ್ರಿಟಿಷರ ನಿರಂಕುಶ ಆಡಳಿತದ ವಿರುದ್ಧ ಸಿಟ್ಟಿಗೇಳುತ್ತಿದ್ದರು. ಲಾಲಾ ಲಜಪತರಾಯರ ಭಾಷಣಗಳಿಂದ ಸ್ಪೂರ್ತಿಗೊಂಡು ‘ದೇಶ ಸೇವೆಗಿಂತ ಮಿಗಿಲಾದುದಿಲ್ಲ’ ಎಂದು ತಿಳಿದು ಸ್ವಾತಂತ್ರ ಸಂಗ್ರಾಮದಲ್ಲಿ ದುಮುಕಿ ಸೆರೆಮನೆ ವಾಸವನ್ನು ಅನುಭವಿಸಿದರು.

ಸ್ವಾತಂತ್ರ ನಂತರದಲ್ಲಿ ಲೋಕಸಭೆ, ರಾಜ್ಯಸಭಾ ಚುನಾವಣೆಗಳ ಮೂಲಕ ರಾಜಕೀಯರಂಗ ಪ್ರವೇಶಿಸಿದರು. ಕಾಂಗ್ರೆಸ್ ಪಕ್ಷದ ಸಂಘಟಕರಾಗಿ ತಮ್ಮ ಕಾರ್ಯ ಧಕ್ಷತೆ, ಸಹಕಾರ ಗುಣ ಸಂಘಟನಾ ಚಾತುರ್ಯದಿಂದ ಜನಮನ ಗೆದ್ದರು. ನೆಹರು ರವರ ಸಂಪುಟದಲ್ಲಿ ಸಾರಿಗೆ ಮತ್ತು ರೈಲ್ವೆ ಸಚಿವರಾಗಿ ನಿಷ್ಕಳಂಕ ವ್ಯಕ್ತಿಯೆಂದೇ ಖ್ಯಾತಿ ಪಡೆದಿದ್ದರು. 1965 ರಲ್ಲಿ ಮದ್ರಾಸ್ ರಾಜ್ಯದ ರೈಲ್ವೆ ದುರಂತದಲ್ಲಿ ನೊಂದವರಿಗಾಗಿ ದುರಂತದ ನೈತಿಕ ಹೊಣೆಹೊತ್ತು ರಾಜೀನಾಮೆ ನೀಡಿ, ಮಾದರಿ ರಾಜಕಾರಣಿಯಾದರು. ಅಧಿಕಾರಕ್ಕಾಗಿ ಅಂಟಿಕೊಳ್ಳದೆ ರಾಜೀನಾಮೆ ನೀಡಿದ್ದು, ನಮ್ಮ ದೇಶದ ಆದರ್ಶ ಪರಂಪರೆಯ ಮೊದಲ ಘಟನೆ ಎಂದು ಇತಿಹಾಸ ಪುಟ ಸೇರಿತು. ಇದು ಶಾಸ್ತಿಜಿಯ ಪ್ರಾಮಾಣಿಕ ನಿಲುವಿಗೆ ಹಿಡಿದ ಕೈಗನ್ನಡಿ.

ನೆಹರು ನಿಧನದ ನಂತರ ಸರ್ವಪಕ್ಷಗಳ ಹಾಗು ಜನರ ಒಲವಿನಿಂದ ಭಾರತದ ಎರಡನೇ ಪ್ರಧಾನಮಂತ್ರಿಯಾಗಿ ಅಧಿಕಾರಕ್ಕೇರಿದರು. “ಸ್ವಾತಂತ್ರ ಪಡೆದುದಕ್ಕಿಂತ ಅದನ್ನು ಉಳಿಸಿಕೊಂಡು ಹೋಗುವುದು ಅತ್ಯಂತ ಮಹತ್ತರ ಜವಾಬ್ಧಾರಿ” ಎಂಬುದನ್ನು ಮನಗೊಂಡು ಹಿಂದುಳಿದವರ ಅಲ್ಪಸಂಖ್ಯಾತರ ಶೋಷಿತರ, ಬಡವರ ಏಳಿಗೆಗಾಗಿ ಶ್ರಮಿಸಿ ಭಾರತದ ಜಾತ್ಯತೀತ ನಿಲುವನ್ನು ತಮ್ಮ ಕರ್ತವ್ಯದ ಮೂಲಕ ಸಾಬೀತು ಪಡಿಸಿದರು.

ತಾವು ಪ್ರಧಾನಿಯಾಗಿದ್ದಾಗ ಬಾಂಬೆ (ಮುಂಬೈ) ಸಮಾರಂಭಕ್ಕೆ ಬಂದಾಗ ಇವರ ಮಗ ಐಷಾರಾಮಿ ಹೊಟೇಲಿನಲ್ಲಿ ತಂಗಿದ್ದನಂತೆ, ಇದರ ಕುರಿತು ಶಾಸ್ತಿಜಿಯವರನ್ನು ಪ್ರಶ್ನಿಸಿದಾಗ “ಹೌದಪ್ಪ ಅವರಪ್ಪ ಭಾರತದ ಪ್ರಧಾನಿ ಆದರೆ ನಮ್ಮಪ್ಪ ಒಬ್ಬ ಬಡ ಕುಟುಂಬದಲ್ಲಿ ಬಂದವನು” ಎಂದು ಉತ್ತರಿಸಿದರಂತೆ. ಅವರ ಬದುಕು ಅಧಿಕಾರ ಎಲ್ಲವು ಸರಳ ಅಷ್ಟೇ ಅನುಕರಣೀಯ ಆದರ್ಶಪ್ರಾಯವಾಗಿತ್ತು.

1965 ರಲ್ಲಿ ಪಾಕಿಸ್ತಾನ ಭಾರತದ ಕಾಶ್ಮೀರವನ್ನು ಕಬಳಿಸುವ ಉದ್ದೇಶದಿಂದ ಯುದ್ಧ ಸಾರಿದ ಸಂದರ್ಭದಲ್ಲಿ “ಕಾಶ್ಮೀರ ಭಾರತದ ಅವೀಬಾಗ್ಯ ಅಂಗ ಒಂದು ಅಂಗುಲವನ್ನು ಪರರಿಗೆ ಬಿಟ್ಟು ಕೊಡುವುದಿಲ್ಲ. “ನಾವು ಶಾಂತಿ ಪರಿಪಾಲಕರು ಆದರೆ ನಮ್ಮ ಮೇಲೆ ಬಲಪ್ರಯೋಗ ನೆಡೆಸಿದರೆ ಸುಮ್ಮನಿರುವ ಹೇಡಿಗಳಲ್ಲ ನಾವು, ಶಕ್ತಿಯಿಂದ ಶಕ್ತಿಯನ್ನು ಎದುರಿಸಿ ಜಯವನ್ನು ಸಾಧಿಸುವ ಸಾಮರ್ಥ್ಯವನ್ನು ಭಾರತ ಹೊಂದಿದೆ ಎಂಬುದನ್ನು ತೋರಿಸಿಕೊಡುತ್ತೇವೆ” ಎನ್ನುವ ಸತ್ಯ ಮತ್ತು ಸ್ಪಷ್ಟ ಮಾತುಗಳಿಂದ ನುಡಿದು ಭಾರತಕ್ಕೆ ವಿಶ್ವಮನ್ನಣೆ ದೊರಕಿಸಿಕೊಟ್ಟರು.

ಶಾಸ್ತ್ರೀಜಿಯವರ “ಜೈ ಜವಾನ್ ಜೈ ಕಿಸಾನ್” ಎಂಬ ಘೋಷಣೆಯ ಸ್ಪೂರ್ತಿಯಿಂದ ರಕ್ಷಣಾಪಡೆಗಳು ಪಾಕಿಸ್ತಾನಿ ಸೈನಿಕರನ್ನು ಹಿಮ್ಮೆಟ್ಟಿಸಿ ಭಾರತಕ್ಕೆ ಜಯ ತಂದು ಕೊಟ್ಟವು. ರಷ್ಯಾ ಪ್ರಧಾನಿ ಕೊನೆಗಿನ್ ರ ಮಧ್ಯಸ್ಥಿಕೆಯಲ್ಲಿ ಭಾರತದ ಅಖಂಡತೆ ಮತ್ತು ನೆರೆ ರಾಷ್ಟ್ರಗೊಳೊಡನೆ ಸೌಹಾರ್ದ ಸಂಬಂಧ ಎತ್ತಿ ಹಿಡಿಯುವ ದೃಷ್ಟಿಯಿಂದ 1966 ರಲ್ಲಿ “ತಾಶ್ಕೆಂಟ್ ಒಪ್ಪಂದ” ಕ್ಕೆ ಸಹಿ ಹಾಕಲಾಯಿತು. ಶಾಂತಿ ಒಪ್ಪಂದಕ್ಕೆ ಸಹಿಹಾಕಿದ ಶಾಸ್ತ್ರೀಜಿಯವರು ನಿಗೂಢವಾಗಿ ಅಂದೇ ಚಿರನಿದ್ರೆಯಲ್ಲಿ ಸಾವನ್ನಪ್ಪಿ ಮರೆಯಾಗಿ ಇತಿಹಾಸದ ಪುಟ ಸೇರಿದರು. ಭಾರತ ರಾಷ್ಟ್ರವು ಶಾಂತಿಧೂತನ ಕಳಕೊಂಡು ದುಃಖಿತವಾಯಿತು.
ಲಾಲ್ ಬಹದ್ದೂರ್ ಶಾಸ್ತ್ರಿಯವರ ಕಾರ್ಯದ ಹಾದಿಯಲ್ಲಿ ಸಾಗಿ ಭಾರತದ ಅಖಂಡತೆಗೆ ಧಕ್ಕೆ ಬಾರದ ರೀತಿಯಲ್ಲಿ ಭಾರತೀಯರಿಗೆ ಅರ್ಥಪೂರ್ಣ ಬದುಕು ಕಲ್ಪಿಸಲು ಮುಂದಾಗಬೇಕೆನ್ನುವವರಿಗೆ ಶಾಸ್ತಿಜಿಯವರ ಬದುಕೊಂದು ಆದರ್ಶವಾಗಿದೆ.

ಹುರುಳಿ ಎಂ ಬಸವರಾಜ

ಸಾಹಿತಿಗಳು, ಚಿತ್ರದುರ್ಗ

Related post

1 Comment

  • ತುಂಬಾ ಅತ್ಯುತ್ತಮ ಲೇಖನ, ಸಂಕ್ಷಿಪ್ತ, ಸತ್ಯ ಮಾಹಿತಿ ಅಧರಿಸಿದ, ಅರ್ಥ ಗರ್ಭಿತ, ತಿಳಿಯದವರಿಗೆ ತಿಳಿದುಕೊಳ್ಳಲು ಅನುಕೂಲವಾದ,ಚೊಕ್ಕಮಹಿತಿಯುಳ್ಳ ಆದರ್ಶ್ ನುಡಿ, ನೀತಿಪಾಠ ಉಳ್ಳ ಲೇಖನ 🙏🙏🙏

Leave a Reply

Your email address will not be published. Required fields are marked *