ಸವಿಸಂಜೆಯ ಚಿತ್ತಾರ
ಅಂಬರದ ನೀಲಬಣ್ಣದಿ
ಅಂದದ ಚಿತ್ತಾರವದು ಕಂಡಿದೆ!
ಹೊನ್ನಿನ ರಂಗಲಿ ದಿಗಂತವು..
ತನ್ನಿರುವನು ತಾನೇ ಮರೆತಂತಿದೆ!!
ಅಹಸ್ಕರನ ಕಿರಣವು ಮಾಸಿ ತನ್ನ
ಆಯಸ್ಸನು ಮರುದಿನಕೆ ದೂಡಿದೆ!
ಮತ್ತದೇ ಉತ್ಸಾಹದಿ ಆಗಮಿಸಿರಲು..
ಬತ್ತದಿಹ ಚೈತನ್ಯವ ಜಗಕೆ ತಂದಿದೆ!!
ಪ್ರತಿದಿನವೂ ಅದೇ ಬೆಳಗು
ಪ್ರತಿನಿಮಿಷವೂ ಅದೇ ಸೊಬಗು!
ನಿತ್ಯವೂ ಲೋಕ ತನ್ನಂತೆ ತಾ ನಡೆದು..
ಮಿಥ್ಯವಿರದ ಪ್ರಕೃತಿ ತಾ ಅರಳಿದ ಮೆರುಗು!!
ಮಾನವನ ಇಹದ ಬದುಕಲಿಯೂ
ಮಾಸದಿಹ ಇಳಿಸಂಜೆಯು ಕಾಯುತಿದೆ!
ಕಪ್ಪುಬಿಳುಪಿನ ರಂಗಿನಲಿ ತನಗೆ…
ಒಪ್ಪಾದ ಬಣ್ಣವನು ಹುಡುಕುತಿದೆ!!
ಸುಮನಾ ರಮಾನಂದ
ಮುಂಬೈ