ಇತ್ತೀಚೆಗೆ ಶಿಕ್ಷಣ ವ್ಯವಸ್ಥೆಯಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಕಲಿ – ನಲಿ, ನಲಿ – ಕಲಿ ಎಂಬ ಹೆಸರಿನ ಯೋಜನೆಗಳು ಜಾರಿಯಾಗಿ ಎಲ್ಲೆಡೆ ಸಂತಸ ಕಲಿಕಾ ವಾತಾವರಣ ಕಂಡು ಬಂದಿದೆ. ಚಟುವಟಿಕೆ ಆಧಾರಿತ ಕಲಿಕೆಯನ್ನುಅಳವಡಿಸಿಕೊಳ್ಳಲಾಗುತ್ತಿದೆ.ಇದು ಯಶಸ್ವಿಯೂ ಆಗಿದೆ ಕೂಡ.
ಅಂದು ನಾನು ಏಳನೇ ತರಗತಿಗೆ ಪಾಠ ಮಾಡುತ್ತಿದ್ದೆ, ಚಟುವಟಿಕೆ ಆಧಾರಿತ , ಸಂತಸ ಕಲಿಕೆಯನ್ನು ಉಂಟು ಮಾಡೋಣವೆಂದು ಸಕಲ ಸಿದ್ಧತೆಯೊಂದಿಗೆ ತರಗತಿಗೆ ಹೋಗಿದ್ದೆ. ಯುದ್ದಕ್ಕೆ ಹೊರಟ ಯುವ ಸೈನಿಕನಂತಾಗಿತ್ತು ನನ್ನ ಮನ!ಅಂದು ನಾನು ಶುರು ಮಾಡಿದ ಪಾಠದ ಹೆಸರು’ ಕುಡಿತದ ಕೆಡಕುಗಳು’! ಮಾದರಿ ವಾಚನವನ್ನು ಚನ್ನಾಗಿ ಮಾಡಿದ ಖುಷಿಯಲ್ಲಿ ನನ್ನ ಬೆನ್ನನ್ನು ನಾನೇ ಚಪ್ಪರಿಸಿಕೊಂಡೆ! ಕುಡಿಯುವುದರಿಂದ ಸಂಸಾರಗಳು ಹಾಳಾಗುತ್ತವೆ. ಮನೆಯಲ್ಲಿ ನೆಮ್ಮದಿ ಹಾಳಾಗುತ್ತದೆ.ಅದೊಂದು ದುಶ್ಚಟ..ಎಂದೆಲ್ಲ ಹೇಳಿದೆ.ಮಕ್ಕಳು ಬಾಯಿ ತೆರೆದು, ಕಣ್ಣರಳಿಸಿ ಪಾಠ ಕೇಳುತ್ತಿದ್ದರು. ನನಗೆ ನನ್ನ ಮೇಲೇ ಹೆಮ್ಮೆ ಎನಿಸಿತ್ತು!
ಸದಾ ತರಲೆ ಮಾಡುತ್ತಿದ್ದ ಹರೀಶ, ಗಿರೀಶ, ಸುರೇಶ ಕೂಡ ಸೈಲೆಂಟಾಗಿ ಪಾಠವನ್ನು ಆಲಿಸುತ್ತಿದ್ದರು.ಬಹುಶಃ ಅವರಿಗೆ ದಿನಾಲೂ ಕುಡಿದು ಬರುವ ಅವರವರ ಅಪ್ಪ ನೆನಪಾಗಿರಬಹುದು ಎಂದುಕೊಂಡು ಪಾಠ ಮುಂದುವರೆಸಿದೆ. ಅನೇಕ ಉದಾಹರಣೆಗಳೊಂದಿಗೆ ಪಾಠ ಮಾಡಿ ಮುಗಿಸಿದೆ. ಚಟುವಟಿಕೆ ಆಧಾರಿತ ಕಲಿಕೆ ನೆನಪಾಯ್ತು! ಮನೆಯಿಂದ ಬರುವಾಗಲೇ ನನ್ನ ಚೀಲದಲ್ಲಿ ಸ್ವಲ್ಪ ವಿಸ್ಕಿ ಹಾಗೂ ಸ್ವಲ್ಪ ಚಿಕ್ಕ ಚಿಕ್ಕ ಕೀಟಗಳನ್ನು ಹಿಡಿದು ತಂದಿದ್ದೆ. ಮಕ್ಕಳಿಗೆ ಒಂದು ಚಟುವಟಿಕೆಯ ಮೂಲಕ ಕುಡಿತದ ಕೆಡಕುಗಳನ್ನು ತಿಳಿಸುವ ನಿರ್ಧಾರ ಮಾಡಿದೆ.
ಒಂದು ಗಾಜಿನ ಲೋಟಕ್ಕೆ ವಿಸ್ಕಿ ಸುರಿಯುತ್ತ ‘ ಮಕ್ಕಳೇ ಇದು ಸಾರಾಯಿ’ ಎಂದೆ
ಇನ್ನೊಂದು ಗಾಜಿನ ಲೋಟಕ್ಕೆ ಕುಡಿಯುವ ನೀರು ಸುರಿಯುತ್ತ, ಇದೇನು ಮಕ್ಕಳೇ ಎಂದು ಕೇಳಿದೆ.ಇಡೀ ತರಗತಿ ನೀರು…ನೀರು ಎಂದು ಅರಚಿತು.ನನಗೆ ಸಂತಸವಾಯಿತು. ಸಾರಾಯಿ ಲೋಟಕ್ಕೆ ಮನೆಯಿಂದ ತಂದಿದ್ದ, ಚಿಕ್ಕ ಕೀಟಗಳನ್ನು ಹಾಕುತ್ತ ,ಮಕ್ಕಳೇ ಇಲ್ಲಿ ನೋಡಿ ಕೀಟಗಳು ಏನು ಮಾಡುತ್ತಿವೆ ಎಂದು ಕೇಳಿದೆ. ಗಮನವಿಟ್ಟು ನೋಡಿದ ಮಕ್ಕಳು, ಸರ್ ಹುಳುಗಳು ಒದ್ದಾಡಿ..ಒದ್ದಾಡಿ ಸಾಯುತ್ತಿವೆ ಎಂದರು. ನನಗೂ ಅದೇ ಉತ್ತರ ಬೇಕಾಗಿತ್ತು ಸಂತಸವಾಯಿತು. ನೀರಿನ ಲೋಟಕ್ಕಿಷ್ಟು ಹುಳುಗಳನ್ನು ಹಾಕುತ್ತ, ಮಕ್ಕಳೇ ಈಗ ನೋಡಿ ಹುಳುಗಳು ಏನು ಮಾಡುತ್ತಿವೆ ಎಂದು ಕೇಳಿದೆ.ಹತ್ತಿರ ಬಂದು ನೋಡಿದ ಮಕ್ಕಳು, ಸರ್ ಹುಳುಗಳು ಅರಾಮಾಗಿ ಈಜಾಡುತ್ತಿವೆ ಎಂದರು ನನಗೂ ಅದೇ ಉತ್ತರ ಬೇಕಾಗಿತ್ತು ಮತ್ತೆ ಸಂತಸವಾಯಿತು! ಚಟುವಟಿಕೆ ಆಧಾರಿತ ಕಲಿಕೆಯ ಪರಿಣಾಮ ತಿಳಿಯುವ ಕ್ಷಣ ಬಂದೇ ಬಿಟ್ಟಿತು. ಈಗ ಹೇಳಿ ಮಕ್ಕಳೇ ಸರಾಯಿ ಕುಡಿಯುವುದು ಒಳ್ಳೆಯದೊ..ಕೆಟ್ಟದ್ದೊ? ಮಕ್ಕಳನ್ನು ಕೇಳಿದೆ. ಎಲ್ಲ ಮಕ್ಕಳೂ ಕೆಟ್ಟದ್ದು ಸರ್ ಎಂದರು.ನನಗೆ ಮತ್ತೆ ಖುಷಿಯಾಗಿ, ಪಾಠ ಸಕ್ಸಸ್ ಎಂದು ಬೀಗಿ, ಆ ಕಡೆ ತಿರುಗಿ ಬೋರ್ಡ್ ಒರೆಸುತ್ತಿದ್ದೆ…
ಹಿಂದಿನಿಂದ ‘ ಎಕ್ಸಕ್ಯೂಜಮೀ ಸರ್ ‘ ಎಂಬ ಧ್ವನಿ ಬಂತು, ತಿರುಗಿ ನೋಡಿದೆ.
ಸಾರಾಯಿ ಕುಡಿಯೋದು ಒಳ್ಳೆಯದು ಸರ್ ಎಂದು ಎದ್ದು ನಿಂತದ್ದ ಹರೀಶ!
ನನಗೆ ಗರ ಬಡಿದಂತಾಗಿ , ಅದು ಹೇಗೋ ಎಂದೆ.
‘ ಹೊಟ್ಟೆಯಲ್ಲಿರುವ ಹುಳುಗಳು ಸಾಯುತ್ತವೆ ಸರ್’ ಎಂದ ಹರೀಶ. ಇಡೀ ತರಗತಿ ಗೊಳ್ಳೆಂದು ನಕ್ಕಿತು.
ನಾನು ಮಾತು ಬಾರದ ಮೂಕನಂತಾಗಿದ್ದೆ!
ಪರಮೇಶ್ವರಪ್ಪ ಕುದರಿ
ಚಿತ್ರದುರ್ಗ