ಸಾಲವೆಂಬ ತಿರುಳು
ಮೌನವದು ಬಿಕ್ಕಿ ತಾ ಸೋತಾಗ
ಮಾತುಗಳು ಮನಕೆ ಬೇಡವಾದಾಗ
ಮೌನ-ಮಾತುಗಳ ಮಂಥನದಿ ಕ್ಷಣವುರುಳಿದಾಗ..
ನಿನ್ನ ಕಾಳಜಿಯ ಸಾಲ ಕೊಡುವೆಯಾ !!?
ಅಂತರಾಳವು ಬೇಸರದ ಕದ ಮುಚ್ಚಿದಾಗ
ಬಾಳಲಿ ಸಂತಸವು ಮರೆಯಾದಾಗ
ನೋವು-ನಲಿವಿನುಯ್ಯಾಲೆಯಲಿ ಮನ ಜೀಕಿದಾಗ…
ನಿನ್ನ ನಸುನಗುವಿನ ಸಾಲ ನೀಡುವೆಯಾ !!?
ಕಡಲಿನ ಅಲೆಗಳೊಂದಿಗೆ ಒಂಟಿಯಾದಾಗ
ದುಗುಡವೇ ನಿತ್ಯ ಜಂಟಿಯಾದಾಗ
ಏಕಾಂತವೇ ಬದುಕಿನ ಭಾಗವಾದಾಗ…
ನಿನ್ನ ಒಲವಿನಾಸರೆಯ ಸಾಲ ಕೊಡುವೆಯಾ !!?
ನಡೆವ ಹಾದಿಯದು ಕಗ್ಗಂಟಾದಾಗ
ನುಡಿವ ಹೃದಯವೇ ಒಗಟಾದಾಗ
ನಡೆದು ನುಡಿವ ಪಯಣದಿ ಸೋತು ಕುಗ್ಗಿದಾಗ…
ನಿನ್ನ ಸಾಂಗತ್ಯದ ಸಾಲ ನೀಡುವೆಯಾ !!?
ಸುಮನಾ ರಮಾನಂದ