ಸಾವಿನ ರಣಭೂಮಿ-ಸಿಯಾಚಿನ್ ಗ್ಲೇಸಿಯರ್

ಪ್ರಾಕೃತಿಕ ವೈಪರೀತ್ಯದ ಸಾವಿನ ರಣಭೂಮಿ-ಸಿಯಾಚಿನ್ ಗ್ಲೇಸಿಯರ್

ಪ್ರಪಂಚದ ಅತ್ಯಂತ ಎತ್ತರದ ಯುದ್ಧಭೂಮಿಯೇ ಸಿಯಾಚಿನ್ ಗ್ಲೇಸಿಯರ್. ಸಿಯಾಚಿನ್ ಎಂಬ ಹೆಸರು ಈ ಹಿಮಶಿಖರದಲ್ಲಿ ಹೇರಳವಾಗಿ ಬೆಳೆಯುವ “ಸಿಯಾನ್” ಎಂಬ ಹೂವುಗಳಿಂದಾಗಿ ಬಂದಿದೆ. ಸಿಯಾಚಿನ್ ತನ್ನ ಪೂರ್ವ ಮಗ್ಗುಲಲ್ಲಿ ಪಾಕ್ ಮತ್ತು ಪಶ್ಚಿಮ ಮಗ್ಗುಲಲ್ಲಿ ಚೀನಾ ದೇಶಗಳನ್ನು ಇಟ್ಟುಕೊಂಡಿರುವಂತಹ ಪರ್ವತ ಪ್ರದೇಶವಾಗಿದ್ದು ಲಡಾಕ್‌ನಿಂದ 125 ಕಿ.ಮೀ ದೂರ ಹಾಗೂ ಸಮುದ್ರ ಮಟ್ಟದಿಂದ 18,875 ಅಡಿ ಎತ್ತರದಲ್ಲಿದೆ. ಒಟ್ಟು 77 ಕಿ.ಮೀ ವಿಸ್ತೀರ್ಣವನ್ನು ಹೊಂದಿರುವ ಈ ಪ್ರದೇಶ ಭಾರತ, ಪಾಕಿಸ್ತಾನ ಹಾಗೂ ಚೀನಾಗಳ ಗಡಿಗಳ ಮಧ್ಯದಲ್ಲಿದೆ. ಇದು ಹವಾಮಾನ ವೈಪರೀತ್ಯದಿಂದಲೇ ಅತ್ಯಂತ ಕುಖ್ಯಾತಿಯನ್ನು ಪಡೆದಂತ ವಿಶ್ವದ ಅತ್ಯಂತ ಎತ್ತರದ ಯುದ್ಧ ಭೂಮಿಯಾಗಿದೆ.

ಸಿಯಾಚಿನ್ ಗ್ಲೇಸಿಯರ್‌ನಲ್ಲಿ ಭಾರತೀಯ ಸೇನೆಯು ಸುಮಾರು 3 ದಶಕಗಳಿಂದ (1984ರ ನಂತರ) ಇಲ್ಲಿನ ಭೂ ಪ್ರದೇಶದ ಮೇಲೆ ಅತ್ಯಂತ ನಿಗಾವಹಿಸಿ ಕಣ್ಣಲ್ಲಿ ಕಣ್ಣಿಟ್ಟು ಕಾಯುತ್ತಿದೆ. ಇದಕ್ಕೆ ಮುಖ್ಯ ಕಾರಣ ಸಿಯಾಚಿನ್ ಪ್ರದೇಶವು ಅತ್ಯಂತ ಪ್ರಮುಖವಾಗಿ ಪಾಕಿಸ್ತಾನ ಮತ್ತು ಚೀನಾ ದೇಶಗಳ ವ್ಯಾಪಾರ ನೇರ ವ್ಯಾಪಾರ ಸಂಬಂಧಕ್ಕಿದ್ದ ಏಕೈಕ ಭೂಮಾರ್ಗವಾಗಿದ್ದು, ತಮ್ಮ ಬಾಂಧವ್ಯವನ್ನು ಮತ್ತಷ್ಟು ಹತ್ತಿರ ಬೆಸೆಯುವ ಉದ್ದೇಶದಿಂದ ಈ ಪ್ರದೇಶವನ್ನು ತಮ್ಮ ವಶಕ್ಕೆ ಪಡೆದುಕೊಳ್ಳಲು ಪಾಕ್ ಮತ್ತು ಚೀನಾ ದೇಶಗಳು ಪೈಪೋಟಿಗಿಳಿದಿದ್ದವು.

ಸೈನ್ಯದ ಜೀವಾಳವೇ ಹೆಲಿಕಾಪ್ಟರ್‌ಗಳು

IAF Cheetah

ಸಿಯಾಚಿನ್‌ಗೆ ಯಾವುದೇ ರೀತಿಯ ರಸ್ತೆ ಮಾರ್ಗಗಳಿರುವುದಿಲ್ಲ. ಹಾಗೂ ಇಲ್ಲಿ ಕಾರ್ಯ ನಿರ್ವಹಿಸುವ ಸೈನ್ಯಕ್ಕೆ ಪ್ರಮುಖ ಸೇನಾ ಕೇಂದ್ರ ‘ಲೇಹ್’ ಆಗಿದ್ದು, ಇಲ್ಲಿಂದ ಸೈನಿಕರನ್ನು ನಮ್ಮಲ್ಲೇ ನಿರ್ಮಿತವಾದ (ಭಾರತೀಯ ಏರೋನಾಟಿಕಲ್ ಲಿಮಿಟೆಡ್) “ಚೀತಾ” ಹೆಲಿಕಾಪ್ಟರ್‌ಗಳ ಮೂಲಕವೇ ಸಾಗಾಟ ನಡೆಸಲಾಗುತ್ತದೆ. ಇಲ್ಲಿನ ಹವಾಮಾನವು ಕ್ಷಣ ಕ್ಷಣವೂ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ವೈಪರೀತ್ಯಕ್ಕೆ ಒಳಗಾಗುತ್ತಿರುತ್ತದೆ. ಅಂದರೆ ಸಿಯಾಚಿನ್‌ನ ಸೌತೆರೋ ರೇಂಜ್ ಪ್ರದೇಶದಲ್ಲಿ ಗಾಳಿಯ ವೇಗ ಗಂಟೆಗೆ 200 ಕಿ.ಮೀ ಗಿಂತಲೂ ಅಧಿಕವಾಗಿರುವುದರಿಂದ ಇಲ್ಲಿ ಕಾಪ್ಟರ್‌ಗಳು ಗಾಳಿಯ ವೇಗವನ್ನು ಸೀಳಿಕೊಂಡು ಮುಂದೆ ಸಾಗುವುದು ಹಾಗೂ ಇಲ್ಲಿ ನಿರಂತರವಾಗಿ ಹೆಲಿಕಾಪ್ಟರ್‌ನ್ನು ಲ್ಯಾಂಡಿಂಗ್ ಹಾಗೂ ಟೇಕ್‌-ಆಫ್ ಮಾಡುವುದು ಅತ್ಯಂತ ಕಷ್ಟ ಸಾಧ್ಯವಾಗಿದೆ. ಸಿಯಾಚಿನ್ ನಿಂದ 154 ಕಿ.ಮೀ ದೂರದ ಲೇಹ್‌ನಲ್ಲಿ ಸೈನಿಕರ ಆಸ್ಪತ್ರೆ ಇದ್ದು ಇಲ್ಲಿ ಕ್ಯಾಪ್ಟನ್ ದೀಪ್ಶಿಕಾ ಪಾಂಡೆ ಮೆಡಿಕಲ್ ಆಫೀಸರ್ ಆಗಿ ಕೆಲಸ ನಿರ್ವಹಿಸುತ್ತಾ ಹವಾಮಾನ ವೈಪರೀತ್ಯದಿಂದ ಅನಾರೋಗ್ಯಕ್ಕಿಡಾಗುವ ಸೈನಿಕರ ಆರೋಗ್ಯದ ಕಾಳಜಿ ವಹಿಸುತ್ತಾರೆ. “ಆರ್ಮಿ ಏವಿಯೇಶನ್ ಕೋರ್‌ನ” ಮೇಜರ್ “ವಿಕಲ್ಪ್ ಶರ್ಮಾ” ಮತ್ತು ಅವರ ತಂಡದ ಸಹಕಾರದೊಂದಿಗೆ ಸೈನಿಕರಿಗೆ ಅವಶ್ಯವಿರುವ ಆಹಾರ ಹಾಗೂ ಯುದ್ಧ ಸಾಮಗ್ರಿಗಳನ್ನು ಹೆಲಿಕಾಪ್ಟರ್ ಮೂಲಕ ಪೂರೈಸುವ ಕೆಲಸವನ್ನು ಮಾಡಲಾಗುತ್ತಿದೆ. ಇಲ್ಲಿ ಸೈನಿಕ ತರಬೇತಿ ಕೇಂದ್ರವೂ ಲೇಹ್‌ನಲ್ಲಿದ್ದು ಇಲ್ಲಿನ ಸಂಪೂರ್ಣ ಉಸ್ತುವಾರಿಯನ್ನು ಕರ್ನಲ್ ಹರಿಹರನ್‌ ರವರ ನೇತೃತ್ವದಲ್ಲಿ ನಿರ್ವಹಿಸಲಾಗುತ್ತಿದೆ. ಸಿಯಾಚಿನ್ ಪ್ರದೇಶದಲ್ಲಿ ಕಾಪ್ಟರ್‌ಗಳು ಸೈನ್ಯದ ಜೀವಾಳವಾಗಿದ್ದು ಪ್ರತಿ ನಿತ್ಯ ಹೆಲಿಕಾಪ್ಟರ್‌ಗಳಿಂದಾಗಿ ಎರಡು ಮಂದಿ ಸೈನಿಕರ ಜೀವ ಉಳಿಸಲಾಗುತ್ತಿದೆ. ಲೇಹ್ ಬೇಸ್ ಕ್ಯಾಂಪ್‌ನಲ್ಲಿ ಪ್ರತಿ 7 ನಿಮಿಷಕ್ಕೊಂದು ಹೆಲಿಕಾಪ್ಟರ್ ಲ್ಯಾಂಡಿಂಗ್ ಹಾಗೂ ಟೇಕ್‌-ಆಫ್ ಆಗುತ್ತದೆ. ಇದಕ್ಕಾಗಿ ಇಲ್ಲಿ ಸೈನ್ಯವು ತನ್ನದೇ ಅದ ಏವಿಯೇಶನ್ ನಿಯಂತ್ರಣಾ ಕೊಠಡಿಯನ್ನೂ ಹೊಂದಿದೆ. ಸಿಯಾಚಿನ್‌ನಲ್ಲಿ ಸೈನಿಕರು ಹವಾಮಾನ ವೈಪರೀತ್ಯ ಅದರಲ್ಲೂ ವಿಶೇಷವಾಗಿ ಹಿಮಪಾತಕ್ಕೆ ಸಿಲುಕಿದಾಗ ಅವರನ್ನು ಕೇವಲ 40 ನಿಮಿಷದಲ್ಲಿ ಅಲ್ಲಿಂದ ಲೇಹ್‌ಗೆ ‘ಚೀತಾ’ ಹೆಲಿಕಾಪ್ಟರ್ ಮೂಲಕ ಏರ್‌-ಲಿಫ್ಟ್ ಮಾಡಲಾಗುತ್ತದೆ.

ಸೈನಿಕರ ಉಡುಗೆ ತೊಡುಗೆ

ಇಲ್ಲಿನ ಸಾಮಾನ್ಯ ಉಷ್ಣತೆ -45 ರಿಂದ -50 ಡಿಗ್ರಿ ಸೆಲ್ಸಿಯಸ್ ವರೆಗೂ ಇಳಿಯುವುದರಿಂದ ಸಾಮಾನ್ಯವಾಗಿ ನೀರು ಸೊನ್ನೆ ಡಿಗ್ರಿ ಸೆಲ್ಸಿಯಸ್ ಉಷ್ಣತೆಯಲ್ಲಿ ಮಂಜುಗಡ್ಡೆಯಾಗಿ ಮಾರ್ಪಾಡಾಗುತ್ತದೆ. ಅಂತಹದ್ದರಲ್ಲಿ -45 ಡಿಗ್ರಿ ಎಂದರೆ ಪರಿಸ್ಥಿತಿ ಹೇಗಿರಬೇಡ ನೀವೇ ಊಹಿಸಿ. ಇಲ್ಲಿನ ನೀರು ಹಿಮವಾಗಿ ಮಾರ್ಪಡುವುದರಿಂದ ನಡೆದಾಡಲು ಸ್ನೋ ಬೂಟುಗಳನ್ನು ಸೈನಿಕರು ಬಳಸುತ್ತಾರೆ. ಒಂದು ವೇಳೆ ಬೂಟಿನಲ್ಲಿ ಕಾಲು ಬೆವರಿದರೆ ಆ ಬೆವರು ಹಿಮವಾಗಿ ಮಾರ್ಪಾಡಾಗುವ ಸಂದರ್ಭಗಳೂ ಅಧಿಕವಾಗಿದ್ದು ಸೈನಿಕರು ಬಹಳ ಎಚ್ಚರಿಕೆಯಿಂದಿರಬೇಕಾಗುತ್ತದೆ. ಇಲ್ಲಿನ ಸೈನಿಕರು ಧರಿಸುವ ಧಿರಿಸಿನ ಬೆಲೆ ಸುಮಾರು ರೂ.55,000/- ಇದ್ದು ವಿಶೇಷವಾಗಿ ಚಳಿಯಿಂದ ರಕ್ಷಿಸಿಕೊಳ್ಳಲು ಅವಶ್ಯವಾಗಿರುವ ರೀತಿಯಲ್ಲಿ ಇದನ್ನು ವಿನ್ಯಾಸಗೊಳಿಸಲಾಗಿದೆ. ಇಲ್ಲಿ ಬಳಸಲಾಗುವ ಉಡುಗೆಗಳೆಂದರೆ,

 ವಿಂಡ್ ಶೀಡರ್ (ಚಳಿಯಿಂದ ರಕ್ಷಿಸಿಕೊಳ್ಳುವ ವಿಶೇಷ ಉಡುಗೆ)
 ವಿಂಡ್ ಟ್ರೌಜರ್
 ನೀರಿನ ಕ್ಯಾನ್‌ಗಳು
 ಹಿಮ ಬೂಟುಗಳು (ಹಿಮಗಡ್ಡೆಯಲ್ಲಿ ನಡೆದಾಡಲು ಅನುಕೂಲವಾಗುವಂತೆ ವಿನ್ಯಾಸ)
 ಹಿಮ ಕೈಗವಸುಗಳು
 ಹಿಮದಿಂದ ಕಣ್ಣನ್ನು ರಕ್ಷಿಸುವ ವಿಶೇಷ ಕನ್ನಡಕಗಳು (ಸ್ನೋ ಗಾಗಲ್)
 ಸೈನಿಕರ ಇರಿಸುವಿಕೆಯನ್ನು ಗುರುತಿಸುವ ವಿಶೇಷ ಟ್ರಾನ್ಸ್ರಿಸೀವರ್‌ಗಳು
 ಹಿಮಗಡ್ಡೆಯನ್ನು ಕತ್ತರಿಸುತ್ತಾ ಮುಂದಕ್ಕೆ ಸಾಗಲು ಅನುಕೂಲವಾಗುವ ಕೈಕೊಡಲಿಗಳು.
 ಹಿಮದಿಂದಾವೃತವಾದ ನೀರಿನ ಹೊಂಡಗಳಿಗೆ ಬೀಳದಂತೆ ತಪ್ಪಿಸಿಕೊಳ್ಳಲು ಒಬ್ಬರನ್ನೊಬ್ಬರು ಸರಪಣೆಯಂತೆ ಜೋಡಿಸಿಕೊಂಡು ಮುನ್ನಡೆಯಲು ಹಗ್ಗಗಳನ್ನು ಬಳಸಲಾಗುತ್ತದೆ.

ಇಲ್ಲಿನ ಸೈನಿಕರು ತಮ್ಮ ದೇಹದ ಉಷ್ಣತೆಯನ್ನು ಕಾಪಾಡಿಕೊಳ್ಳಲು ಹೀಟರ್‌ಗಳ ಬಳಕೆ ಮಾಡುತ್ತಾರೆ ಹಾಗೂ ಆಹಾರವನ್ನು ಬಿಸಿ ಮಾಡಲು ಸೀಮೆ ಎಣ್ಣೆಯನ್ನು ಬಳಸಲಾಗುತ್ತದೆ. ಇಲ್ಲಿ ಕ್ಷಣ ಕ್ಷಣಕ್ಕೂ ಹವಾಮಾನ ವೈಪರೀತ್ಯಗಳಾಗುತ್ತಿರುವ ಕಾರಣಕ್ಕಾಗಿ ಕಾಪ್ಟರ್‌ಗಳ ಹಾರಾಟ ಕಷ್ಟ ಸಾಧ್ಯವಾಗುವ ಸಂದರ್ಭಗಳು ಬಂದಾಗ ಸೀಮೆಎಣ್ಣೆಯ ಕೊರತೆ ಬಾರದ ರೀತಿಯಲ್ಲಿ ಇಲ್ಲಿ ದಾಸ್ಥಾನು ಮಾಡಲಾಗುತ್ತದೆ. ಇಲ್ಲಿನ ಚಳಿಯಿಂದಾಗಿ ದೇಹದ ಜೀರ್ಣ ಶಕ್ತಿಯ ಪ್ರಮಾಣವೂ ಕಡಿಮೆಯಾಗುವುದರಿಂದ ಸೈನಿಕರಿಗೆ ರೆಡೀ ಹಾಗೂ ಒಣ ಆಹಾರವನ್ನೇ ನೀಡಲಾಗುತ್ತದೆ. ಯಾವುದೇ ತ್ಯಾಜ್ಯವನ್ನು ಎಸೆದರೆ ಅದು ಇಲ್ಲಿನ ಚಳಿಯ ಕಾರಣದಿಂದ ಯಾವುದೇ ಕಾರಣಕ್ಕೂ ಕೊಳೆಯುವುದಿಲ್ಲ, ಅದ್ದರಿಂದ ತ್ಯಾಜ್ಯವನ್ನೂ ಅಲ್ಲಿಂದ ಕಾಪ್ಟರ್‌ಗಳ ಮೂಲಕವೇ ಸಂಗ್ರಹಿಸಿ ವಾಪಾಸ್ ಲೇಹ್‌ಗೆ ತರುವ ಜವಾಬ್ದಾರಿಯೂ ಆರ್ಮಿ ಏವಿಯೇಶನ್ ಕೋರ್‌ನ ಮೇಲಿದೆ. ಈ ಮೂಲಕ ತ್ಯಾಜ್ಯ ನಿರ್ವಹಣೆಯನ್ನೂ ಸಮರ್ಪಕವಾಗಿ ಮಾಡುವ ಮೂಲಕ ಸೈನ್ಯವು ಇಲ್ಲಿ ವಿಶೇಷ ಸಾಧನೆಯನ್ನು ಮಾಡುತ್ತಿದೆ.

ಇಲ್ಲಿಗೆ ಸಾಮಾಗ್ರಿಗಳನ್ನು ಸಾಗಾಟ ಮಾಡಲು ರಷ್ಯ ನಿರ್ಮಿತ ಒI-17 ಕಾಪ್ಟರ್ ಗಳನ್ನು ಬಳಸಲಾಗುತ್ತದೆ. ಈ ಕಾಪ್ಟರ್‌ಗಳು ಸುಮಾರು 15,000 ಕೆ.ಜಿ ಭಾರವನ್ನು ಸಾಗಿಸುವ ಸಾಮರ್ಥ್ಯವನ್ನು ಹೊಂದಿದ್ದು, ಸಿಯಾಚಿನ್‌ನಲ್ಲಿ ಎಲ್ಲಾ ಸಮಯದಲ್ಲೂ ಲ್ಯಾಂಡಿಂಗ್ ಹಾಗೂ ಟೇಕ್‌ಆಫ್ ಅಸಾಧ್ಯವಾದ ಸಂದರ್ಭದಲ್ಲಿ (ಅಸಾಮಾನ್ಯ ಹಿಮಪಾತವಾಗುತ್ತಿರುವಾಗ) ವಸ್ತುಗಳನ್ನು ಮೇಲಕ್ಕೆ ಸುಲಭವಾಗಿ ಹಾಕಲು ಹಾಗೂ ಕಾಪ್ಟರ್‌ನಿಂದ ಕೆಳಗಿಳಿಸಲು ಸಹಾಯವಾಗುವಂತೆ ಹಿಂಬದಿಯಲ್ಲಿ ದೊಡ್ಡದಾದ ಬಾಗಿಲನ್ನು ಅಳವಡಿಸಲಾಗಿದೆ. ಸಿಯಾಚಿನ್‌ಗೆ ಪದಾರ್ಪಣೆ ಮಾಡುವ ಪೂರ್ವದಲ್ಲಿ ಇಲ್ಲಿ ಓ.ಪಿ ಬಾಬಾರವರ ದೇವಾಲಯ ಸಿಗುತ್ತದೆ. ಇಲ್ಲಿಗೆ ಆಗಮಿಸುವ ಸೈನಿಕರು ಇಲ್ಲಿನ ಒ.ಪಿ ಬಾಬಾರ ದರ್ಶನ ಹಾಗೂ ಪೂಜೆಯನ್ನು ನೆರೆವೇರಿಸಿಯೇ ಇಲ್ಲಿಗೆ ಪ್ರಯಾಣ ಮುಂದುವರೆಸುತ್ತಾರೆ.

ಸೈನಿಕರ ದೇವರು ಓ.ಪಿ ಬಾಬಾ

ಓ.ಪಿ ಬಾಬ ದೇವಸ್ಥಾನದಲ್ಲಿ ಒಬ್ಬ ಯೋಧನೇ ದೇವರು. ಇಲ್ಲಿ ಯೋಧರೇ ಈತನಿಗೆ ಪೂಜೆಯನ್ನು ಭಕ್ತಿಯಿಂದ ನೆರವೇರಿಸುತ್ತಾರೆ. ಈ ಯೋಧನ ಹೆಸರೇ “ಓಂ ಪ್ರಕಾಶ್”. 1984 ರಲ್ಲಿ ಭಾರತೀಯ ಸೈನ್ಯವು ಆಪರೇಶನ್ “ಮೇಘದೂತ್” ಮೂಲಕ ಸಿಯಾಚಿನ್‌ನನ್ನು ಪಾಕ್ ಸೈನ್ಯದ ಉಪಟಳದಿಂದ ರಕ್ಷಿಸಿ ಗಡಿಯನ್ನು ಗುರುತಿಸಿ ಬೇಲಿ ಹಾಕುವ ಕಾರ್ಯಕ್ಕಾಗಿ ನಡೆಸಲಾಗುತ್ತದೆ. ಈ ಸಂದರ್ಭದಲ್ಲಿ ರಾತ್ರಿಯ ವೇಳೆ ಪಾಕ್ ಸೈನ್ಯ ಸಿಯಾಚಿನ್ ಒಳಗೆ ನುಸುಳುತ್ತಿರುವುದನ್ನು ಗಮನಿಸಿದ ಯೋಧ “ಓಂಪ್ರಕಾಶ್” ತನ್ನ ಸಹ ಸೈನಿಕರ ನಿದ್ದೆಗೆ ಭಂಗವಾಗದಿರಲಿ ಎಂಬ ಉದ್ದೇಶದಿಂದ ತಾನೊಬ್ಬನೇ ಪಾಕ್ ಸೈನಿಕರ ವಿರುದ್ಧ ಹೋರಾಡುತ್ತಾ ಪಾಕ್ ಸೈನಿಕರನ್ನು ಹಿಮ್ಮೆಟ್ಟಿಸಿ ನಿಗೂಢವಾಗಿ ಕಾಣೆಯಾಗುತ್ತಾನೆ. ಅಂದಿನಿಂದ ಇಂದಿನವರೆಗೂ ಈ “ಓಂ ಪ್ರಕಾಶ್” ಎಂಬ ಸೈನಿಕ ಏನಾದ ಎಂಬುವುದಕ್ಕೆ ಯಾವುದೇ ಕುರುಹುಗಳಿಲ್ಲ. ಅದರೆ ಈತನ ಆತ್ಮ ಇಲ್ಲಿನ ಸೈನಿಕರ ಮೈಯಲ್ಲಿ ಪವಾಡ ರೂಪದಲ್ಲಿ ಬಂದು ತನ್ನ ಕುರಿತು ಹೇಳಿರುವ ಹಾಗೂ ಸಿಯಾಚಿನ್‌ನನ್ನು ತಾನು ಇನ್ನೂ ಕಾವಲು ಕಾಯುತ್ತಿರುವುದಾಗಿ ಹೇಳಿದ ನಿರ್ದರ್ಶನಗಳು ಇವೆ. ಹೀಗಾಗಿ ಸಿಯಾಚಿನ್‌ನಲ್ಲಿ “ಓಂ ಪ್ರಕಾಶ್‌” ನನ್ನು ದೇವರೆಂದೇ ಪೂಜಿಸಲಾಗುತ್ತಿದೆ.

ಸೈನಿಕರ ಜೀವನ ಶೈಲಿ

ಸಿಯಾಚಿನ್‌ನಲ್ಲಿ ಸಾಮಾನ್ಯವಾಗಿ -30 ಡಿಗ್ರಿಯಷ್ಟು ತಾಪಮಾನವಿದ್ದು ಸೈನಿಕರು ಚಳಿಯಿಂದ ರಕ್ಷಿಸಿಕೊಳ್ಳಲು ರಾತ್ರಿ ಹೊತ್ತು ಇಲ್ಲಿ ಕ್ಯಾಂಪ್ ಫಯರ್ ಹಾಕುತ್ತಾರೆ. ಇಲ್ಲಿ ಪ್ರತೀ ಮೂರು ತಿಂಗಳಿಗೊಮ್ಮೆ ಸೈನಿಕರನ್ನು ಬದಲಾವಣೆ ಮಾಡಲಾಗುತ್ತಿದ್ದು, ಪ್ರತೀ ಹೊಸ ಸೈನಿಕರ ತಂಡಗಳು ಇಲ್ಲಿ ಬಂದಾಗಲೂ ಇಲ್ಲಿ ಹಳೆಯ ತಂಡ ಹೊಸ ತಂಡಕ್ಕೆ ವೆಲ್‌ಕಂ ಪಾರ್ಟಿ ನಡೆಸುತ್ತದೆ. ಇಡೀ ಸಿಯಾಚಿನ್‌ನ್ನು ಕಾಯಲು ಒಟ್ಟು 800 ಮಂದಿ ಸೈನಿಕರನ್ನು ನಿಯೊಜಿಸಲಾಗುತ್ತದೆ. ಪ್ರತೀ ತಂಡದಲ್ಲೂ ಸುಮಾರು ಐದು ಮಂದಿ ಸೈನಿಕರಿದ್ದು ದಿನವೊಂದಕ್ಕೆ ಸುಮಾರು 12 ರಿಂದ 18 ಕಿಮೀ ಸಿಯಾಚಿನ್‌ನಲ್ಲಿ ನಡೆದಡುತ್ತಾ ಕಾರ್ಯಾಚರಣೆಯನ್ನು ನಡೆಸುತ್ತಾರೆ. ನಂತರ ಎರಡು ದಿನಗಳ ಕಾಲ ಆಯ್ದ ಪ್ರದೇಶದಲ್ಲಿ ವಿಶ್ರಾಂತಿಯನ್ನು ಪಡೆಯುತ್ತಾರೆ. ಇಲ್ಲಿ ಯೋಧರು ಜೋರಾಗಿ ಮಾತನಾಡಲೂ ಹಿಂಜರಿಯುತ್ತಾರೆ, ವೇಗವಾಗಿ ನಡೆದಾಡಿದಲ್ಲಿ ಶೀಘ್ರವಾಗಿ ಸುಸ್ತಾಗುವ ಹಾಗೂ ಬೆವರುವ ಕಾರಣಕ್ಕೆ ನಿಧಾನವಾಗಿ ನಡೆದಾಡುತ್ತಾರೆ. ಇಲ್ಲಿನ ಸೈನಿಕರಿಗೆ ನಡೆದಾಡುತ್ತಿರುವ ಅವಧಿಯಲ್ಲೇ ಹೆಲಿಕಾಪ್ಟರ್‌ಗಳ ಮೂಲಕ ಆಹಾರದ ಪೊಟ್ಟಣಗಳನ್ನು ಪ್ಯಾರಾಶೂಟ್‌ಗಳನ್ನು ಬಳಸಿ ಕೆಳಕ್ಕೆ ಇಳಿಯಬಿಡಲಾಗುತ್ತದೆ. ಯೋಧರು ಇವುಗಳನ್ನು ತಕ್ಷಣ ಅಲ್ಲಿಂದ ಸಂಗ್ರಹಿಸಬೇಕು ಇಲ್ಲವಾದರೆ ಹಿಮಪಾತದಲ್ಲಿ ಕ್ಷಣ ಮಾತ್ರದಲ್ಲಿ ಆಹಾರದ ಪೊಟ್ಟಣಗಳು ಹಿಮದಲ್ಲಿ ಮುಳುಗಿ ಬಿಡುತ್ತದೆ. ಹಾಗೂ ಇವುಗಳನ್ನು ಸಂಗ್ರಹಿಸಿ ಬಿಸಿ ಮಾಡಿಯೇ ತಿನ್ನಬೇಕು, ಯಾಕೆಂದರೆ ಇವುಗಳು ಮಂಜಿನಿಂದ ಗಟ್ಟಿಯಾಗಿರುತ್ತವೆ. ಸೈನಿಕರು ನಡೆದಾಡುವ ಸಂದರ್ಭದಲ್ಲಿ 18 ಕೆ.ಜಿ ತೂಕದ ಟೆಂಟ್‌ಗಳನ್ನು ಮತ್ತು ಸುಮಾರು 25 ಕೆ.ಜಿ ತೂಕದ ಶಸ್ತ್ರಾಸ್ತ್ರ ಗಳನ್ನೂ ಹೊತ್ತುಕೊಂಡೇ ನಡೆಯಬೇಕಾಗಿದೆ. ಯೋಧರು ಇಲ್ಲಿ ರಾತ್ರಿ ನಿದ್ರಿಸಬೇಕಾದರೆ ಬಿಸಿ ನೀರಿನಲ್ಲಿ ಕಾಲಿಟ್ಟು ಮಲಗಿದರೆ ಮಾತ್ರ ನಿದ್ರೆ ಬರುವಂತಹ ಸನ್ನಿವೇಶಗಳೂ ಇವೆ. ಪ್ರಪಂಚದಲ್ಲಿ ಯಾವುದೇ ಮಿಲಿಟರಿಯೂ ಇಂತಹ ಕಠಿಣ ಸನ್ನಿವೇಶದಲ್ಲಿ ಕಾರ್ಯಾಚರಿಸುತ್ತಿರುವ ಉದಾಹರಣೆಗಳೇ ಇಲ್ಲ. ಭಾರತೀಯ ಸೈನ್ಯ ಹಾಗೂ ನಮ್ಮ ಸೈನಿಕರು ನಿಜಕ್ಕೂ ಗ್ರೇಟ್ ಅಲ್ಲವೇ?

1947ನೇ ಇಸವಿಯಲ್ಲಿ ಭಾರತ ಮತ್ತು ಪಾಕಿಸ್ತಾನಗಳೆಂದು ದೇಶ ವಿಭಜನೆಯಾದ ನಂತರ ಪಾಕಿಸ್ತಾನ ಭೌಗೋಳಿಕ ವ್ಯಾಪ್ತಿಯಿಂದ ತೃಪ್ತವಾಗದೇ ಸಿಯಾಚಿನ್ ಹಾಗೂ ಕಾಶ್ಮೀರದ ಮೂಲಕ ಯುದ್ಧ ಮಾಡುತ್ತಲೇ ಇದೆ. ಈಗ ಸಿಯಾಚಿನ್ ಪ್ರದೇಶದಲ್ಲಿ ಗುಂಡಿನ ಮೊರೆತವಿಲ್ಲ ಬದಲಾಗಿ ಪರ್ವತ ಶಿಖರಗಳ ಎದೆಯಲ್ಲಿ ಗುಂಡಿನ ಗುರುತು ಮಾತ್ರ ಉಳಿದಿದೆ. ಶಿಮ್ಲಾ ಒಪ್ಪಂದದ ಪ್ರಕಾರ ಭಾರತ ಮಾತ್ತು ಪಾಕ್‌ಗಳ ಮಧ್ಯೆ ಗಡಿಗಳನ್ನು ಗುರುತಿಸಿ L O C (ಲೈನ್ ಆಫ್ ಕಂಟ್ರೋಲ್) ಎಂದು ಗುರುತಿಸಲಾಯಿತು. ಈ ಒಪ್ಪಂದದ ಪ್ರಕಾರ 24,190 ಅಡಿ ಎತ್ತರದ ಸಿಯಾಚಿನ್‌ನ ಪ್ರಮುಖ ಭೂ ಭಾಗಗಳನ್ನು ಗುರುತಿಸಿ ಅಲ್ಲಿ ಭಾರತದ ಬಾವುಟವನ್ನು ಹಾರಿಸಿದ ಶ್ರೇಯಸ್ಸು ಕರ್ನಲ್ ನರೇಂದ್ರ ಕುಮಾರ್ ಮತ್ತು ಅವರ 150 ಮಂದಿ ಯೋಧರ ತಂಡಕ್ಕೆ ಸಲ್ಲುತ್ತದೆ. ಸಿಯಾಚಿನ್ ಹಿಮ ಶಿಖರ ಪಾಕ್ ಕೈವಶವಾದರೆ ಚೀನಾ ಮತ್ತು ಪಾಕಿಸ್ತಾನದ ಗಡಿ ರೇಖೆಗಳು ಅತ್ಯಂತ ಹತ್ತಿರಕ್ಕೆ ಬಂದು ಎಲ್ಲಾ ವ್ಯವಹಾರಗಳಿಗೂ ಇದು ಸಹಕಾರಿಯಾಗಲಿದೆ ಎಂಬುದೇ ಸಿಯಾಚಿನ್‌ನ ಪ್ರಾಮುಖ್ಯತೆ ಹೆಚ್ಚಲು ಕಾರಣ. ಇಲ್ಲಿ ಇದುವರೆಗೆ ಸುಮಾರು 910 ಸೈನಿಕರು ಪ್ರಾಣಾರ್ಪಣೆಯನ್ನು ಮಾಡಿದ್ದಾರೆ ಆದರೆ ಅದು ಯುದ್ಧದಲ್ಲಿ ಅಲ್ಲ ಬದಲಾಗಿ ಭೀಕರ ಹವಾಮಾನ ವೈಪರೀತ್ಯಗಳಲ್ಲೊಂದಾದ ಹಿಮಪಾತದಿಂದಾಗಿ.

ಸಿಯಾಚಿನ್‌ಗೆ ಕರ್ತವ್ಯ ನಿರ್ವಹಿಸಲು ಹೊರಡುವ ಸೈನಿಕರೆಲ್ಲರೂ ವಾಪಾಸ್ಸು ಬರುತ್ತಾರೆ ಎನ್ನುವ ಖಚಿತತೆ ಇಲ್ಲ ಹಾಗೂ ವಾಪಾಸ್ಸು ಬಂದರೂ ಎಲ್ಲರೂ ಹಿಂದಿನ ರೀತಿಯೇ ಇರುತ್ತಾರೆ ಎಂದು ಹೇಳಲಾಗುವುದಿಲ್ಲ. ಇಲ್ಲಿ ಕಾರ್ಯ ನಿರ್ವಹಿಸುವ ವೇಳೆ ತೆಗೆಯಲಾದ ಫೋಟೋ ಹಾಗೂ ವೀಡಿಯೋಗಳನ್ನು ಅಧ್ಯಯನ ನಡೆಸಿ ಮುಂದಿನ ತಂಡಗಳಲ್ಲಿ ಕರ್ತವ್ಯ ನಿರ್ವಹಣೆಗೆ ತೆರಳುವ ಸೈನಿಕರು ಮಾಡಿಕೊಳ್ಳಬೇಕಾದ ತಯಾರಿಗಳ ಕುರಿತು ನಿರ್ದೇಶನವನ್ನು ನೀಡಲಾಗುತ್ತದೆ. ಕೆಲವರಿಗೆ ಈ ಕರ್ತವ್ಯ ನಿರ್ವಹಣೆಯ ಅವಧಿಯು ಜೀವನದ ಅತ್ಯಂತ ವಿಶೇಷವಾದ ಕ್ಷಣವಾಗಿ ಸವಿ ನೆನಪಾಗಿ ಉಳಿದರೆ ಕೆಲವರಿಗಂತೂ ಬದುಕನ್ನೇ ಬದಲಿಸುವ ಕ್ಷಣವಾಗಿ ಮಾರ್ಪಾಡಾಗುವುದೂ ಸಾಮಾನ್ಯ.

ಹನುಮಂತ ಕೊಪ್ಪದ್

ಸೈನಿಕರು ಇಲ್ಲಿ ಬಿಡುವಿನ ಸಮಯವನ್ನು ಕ್ರಿಕೆಟ್ ಇನ್ನಿತರ ಆಟಗಳನ್ನು ಅಡುವ ಮೂಲಕ ಕಾಲ ಕಳೆಯುತ್ತಾರೆ ಹಾಗೂ ಇಲ್ಲಿಗೆ ಬರುವಾಗ ಯಾವ ಸೈನಿಕರಿಗೂ ಪರಸ್ಪರ ಪರಿಚಯವಿರುವುದಿಲ್ಲ, ಇಲ್ಲಿ ಬಂದ ನಂತರ ಒಬ್ಬರಿಗೊಬ್ಬರು ಪರಿಚಯವಾಗಿ ಒಂದೇ ಕುಟುಂಬದಂತೆ ಬದುಕುತ್ತಾರೆ. 1947ರ ದೇಶ ವಿಭಜನೆಯಾದ ಎರಡು ತಿಂಗಳ ನಂತರದಲ್ಲಿ ನಡೆದ ಭಾರತ ಮತ್ತು ಪಾಕ್ ಯುದ್ಧ ಹಾಗೂ 1971 ರ ಬಾಂಗ್ಲಾ ವಿಮೋಚನೆಯ ಹೋರಾಟದಲ್ಲಿ ಭಾರತದ ಪಾತ್ರವು ಪಾಕ್‌ಗೆ ಭಾರತದ ಸೈನ್ಯ ಶಕ್ತಿಯ ಆಳವನ್ನು ಪರಿಚಯಿಸಿತ್ತು.

ಮನುಷ್ಯ ಬದುಕುವುದೇ ಕಷ್ಟ ಎಂಬಂತಹ ಪ್ರದೇಶದಲ್ಲಿ ಪ್ರಕೃತಿಯ ಜತೆ ಪ್ರತಿ ಕ್ಷಣವೂ ಹೋರಾಡುತ್ತಾ ಶತ್ರುಗಳ ವಿರುದ್ಧವೂ ಕಾದಾಟ ನಡೆಸಬೇಕಾದಂತಹ ವಿಶಿಷ್ಟ ಸನ್ನಿವೇಶ ಹಾಗೂ ವಿಭಿನ್ನ ಹವಾಮಾನದಲ್ಲಿ ಕೆಲಸ ನಿರ್ವಹಿಸುವ ನಮ್ಮ ಸೈನಿಕರ ಆತ್ಮಸ್ಥೈರ್ಯ ಹಾಗೂ ಛಲವನ್ನು ನಾವೆಲ್ಲರೂ ಗೌರವಿಸಲೇ ಬೇಕು. ಇತ್ತೀಚೆಗೆ ಸಿಯಾಚಿನ್ ಹಿಮಪಾತದಲ್ಲಿ ಸಿಲುಕಿ ಐದು ದಿನ ತನ್ನ ಜೀವವನ್ನು ಹಿಮದಡಿಯಲ್ಲಿ ಹಿಡಿದಿಟ್ಟುಕೊಂಡ “ಲ್ಯಾನ್ಸ್ ನಾಯ್ಕ್ ಹನುಮಂತ ಕೊಪ್ಪದ್” ಹಾಗೂ ಅವರೊಂದಿಗೆ ಹುತಾತ್ಮರಾದ ಇತರ ಒಂಬತ್ತು ಮಂದಿಯ ಬಲಿದಾನ ಎಂತವರ ಎದೆಯನ್ನೂ ಝಲ್ ಎಂದು ನಡುಗಿಸುತ್ತದೆ. ತಾಯಿ ಭಾರತಾಂಬೆಯ ರಕ್ಷಣೆಯು ನಮ್ಮೆಲ್ಲರ ಜವಾಬ್ದಾರಿಯಾಗಿದ್ದು ನೇರವಾಗಿ ದೇಶ ರಕ್ಷಣೆ ಮಾಡುವ ಅವಕಾಶ ನಮಗಿಲ್ಲದಿದ್ದರೂ ದೇಶ ರಕ್ಷಣೆಯ ನೇರ ಕೈಂಕರ್ಯದಲ್ಲಿ ತಮ್ಮ ಕುಟುಂಬ, ಮಕ್ಕಳು, ಬಂಧು ಬಳಗವನ್ನು ಬಿಟ್ಟು ಗಡಿ ಕಾಯುತ್ತಿರುವ ಸೈನಿಕರನ್ನು ನಾವೆಲ್ಲರೂ ಗೌರವಿಸೋಣ ಅಲ್ಲವೇ????

ಭಾರತ್ ಮಾತಾ ಕೀ ಜೈ……

ಸಂತೋಷ್ ರಾವ್. ಪೆರ್ಮುಡ
ಪಟ್ರಮೆ ಗ್ರಾಮ ಮತ್ತು ಅಂಚೆ
ಬೆಳ್ತಂಗಡಿ ತಾಲೂಕು, ದ.ಕ ಜಿಲ್ಲೆ
ದೂ:9742884180
ಚಿತ್ರಗಳು: ಅಂತರ್ಜಾಲ ಸಂಗ್ರಹ

Related post

1 Comment

  • ನಮ್ಮ ಹೆಮ್ಮೆಯ ಸೈನಿಕರ ಬಗ್ಗೆ ವಾಸ್ತವತೆಯನ್ನು ಬಿಚ್ಚಿಟ್ಟ ಈ ಲೇಖನ ಉತಮವಾಗಿ ಮೂಡಿ ಬಂದಿದೆ

Leave a Reply

Your email address will not be published. Required fields are marked *