ಸಾಹಿತ್ಯಮೈತ್ರಿಗೆ ವರುಷ ತುಂಬಿತು

ಸಾಹಿತ್ಯ ಮೈತ್ರಿ ಗೆ ವರ್ಷ-ಹರ್ಷ!

ಸಾಹಿತ್ಯ ಮೈತ್ರಿಯು ವರ್ಷಕ್ಕೆ ಕಾಲಿಟ್ಟು ಮನೆಯಂಗಳದಿಂದ ಹೊರ ಬಂದು ಕನ್ನಡಿಗರ ಮನದಂಗಳಕ್ಕೆ ಅಂಬೆಗಾಲಿಟ್ಟಿದೆ.

ಈ ‘ಸಾಹಿತ್ಯ ಮೈತ್ರಿ’ ಆನ್ಲೈನ್ ಪತ್ರಿಕೆಗೆ ಒಂದು ವರ್ಷವಾಗಿದೆ. ಈ ಪತ್ರಿಕೆಯ ರುವಾರಿ ಹಾಗೂ ಲೇಖಕರೂ ಆದ ಕು.ಶಿ ಚಂದ್ರಶೇಖರ್ ಅವರ ಶ್ರಮವನ್ನು ಈಗ ಇಲ್ಲಿ ಶ್ಲಾಘಿಸಲೇಬೇಕು. ವೃತ್ತಿಗಷ್ಟೇ ಸೀಮಿತವಾಗದೇ ಪ್ರವೃತ್ತಿಯನ್ನಾಗಿ ಈ ಪತ್ರಿಕೆಯನ್ನು ಆರಂಭಿಸಿದ್ದಾರೆ.

ಈ ಪತ್ರಿಕೆಗೆ ಶೀರ್ಷಿಕೆಯನ್ನು ಆರಿಸುವ ಹಂತದಿಂದ, ಕನ್ನಡದ ಸಾಹಿತ್ಯಲೋಕದ ದಿಗ್ಗಜ ಎಚ್ ಎಸ್ ವೆಂಕಟೇಶಮೂರ್ತಿ ಅವರಿಂದ ಉದ್ಘಾಟಿಸುವ ಸಂಭ್ರಮ (ಹೋದ ವರ್ಷದ ಯುಗಾದಿಯ ದಿನ) ದವರೆಗೂ ನನ್ನನ್ನು ಜೊತೆ ಮಾಡಿಕೊಂಡಿದ್ದರು ಈ ನಮ್ ಚಂದ್ರು!

ನಾನು ಈ ಪತ್ರಿಕೆಗಾಗಿ ಏನು ಮಾಡಿದ್ದೇನೋ ಏನು ಮಾಡಿಲ್ವೋ ನಂಗೇ ಗೊತ್ತಿಲ್ಲಾ!

ಆದರೆ ನನ್ನ ಲೇಖನಗಳನ್ನೂ ಕವಿತೆಗಳನ್ನೂ ಸಾಹಿತ್ಯ ಮೈತ್ರಿ ಯಲ್ಲಿ ಪ್ರಕಟಿಸಿದ್ದಾರೆ.

ನನ್ನ ತಂದೆಯವರಾದ ನೇ.ನಂ.ಶಿ ಅವರ (ಶಿವರಾಮಯ್ಯ ಎನ್) ಕಗ್ಗದ ರೀತಿಯ ‘ಪ್ರತ್ಯಗಾತ್ಮ’ ರಚನೆಗಳನ್ನು ಪ್ರಕಟಿಸುತ್ತಿದ್ದಾರೆ ಹಾಗೂ ನನ್ನ ತಂದೆಯವರು ಬಂಗಾಳಿ ಭಾಷೆಯಿಂದ ಕನ್ನಡಕ್ಕೆ ಅನುವಾದಿಸಿ ಕಾದಂಬರಿ ‘ಅದೃಷ್ಟದ ಆಟ’ ವನ್ನು ಕಂತಲ್ಲಿ ಪ್ರಕಟಿಸುತ್ತಿದ್ದಾರೆ.

ಅಲ್ಲದೇ ಸಾಹಿತ್ಯ ಪ್ರೀತಿ ಇದ್ದು ಹೊಸದಾಗಿ ಬರವಣಿಗೆಗೆ ತೊಡಗಿರುವವರಿಗೆ ಅವಕಾಶ ಕೊಟ್ಟಿದ್ದಲ್ಲದೇ, ಸಾಹಿತ್ಯ ಕ್ಷೇತ್ರದಲ್ಲಿ ದೊಡ್ಡ ಹೆಸರು ಮಾಡಿರುವ ಹಿರಿಯರನ್ನು ಕಂಡು ಅವರ ಬರಹಗಳನ್ನು ತಮ್ಮ ಪತ್ರಿಕೆಯಲ್ಲಿ ಬಳಸುತ್ತಿದ್ದಾರೆ ಅದೇ ಖುಷಿಯ ಸಂಗತಿ.

ರಂಗಭೂಮಿಯ ನಂಟಿರುವವರಿಗೆ, ಕನ್ನಡದಲ್ಲಿ ಹೊಸ ಪ್ರಯೋಗ ಮಾಡುವ ಯುವ ಮನಸ್ಸುಗಳಿಗೆ ಬರೆಯಲು ಪ್ರೋತ್ಸಾಹಿಸಿ ಪ್ರಕಟಿಸುತ್ತಿದ್ದಾರೆ.

ಪ್ರತಿವಾರವೂ ತಪ್ಪದೇ ವಿಜ್ಞಾನ, ಇತಿಹಾಸ, ಪಕ್ಷಿಲೋಕ, ನಾಟಕ, ಸಿನಿಮಾ ಹಾಗೂ ಸಾಹಿತ್ಯಕ್ಕೆ ಸಂಬಂದಿಸಿದ ವೈವಿಧ್ಯಮಯದ ಲೇಖನಗಳನ್ನು ಪ್ರಕಟಿಸುತ್ತಿದ್ದಾರೆ. ಲೇಖನಕ್ಕೆ ತಕ್ಕ ವಿಡಿಯೋ ಹಾಗೂ ಫೋಟೋಗಳನ್ನು ತಾಳ್ಮೆಯಿಂದ ಹುಡುಕಿ ಹಾಕ್ತಾರೆ. ಏಕ ಪಾತ್ರಾಭಿನಯದಂತೆ ಹಲವು ಪಾತ್ರಗಳನ್ನು ಒಬ್ಬರೇ ಮಾಡುತ್ತಾ ಮೈತ್ರಿಯನ್ನು ಬೆಸೆಯುತ್ತಾ ‘ಸಾಹಿತ್ಯ ಮೈತ್ರಿ’ ಪತ್ರಿಕೆಯನ್ನು ಬೆಳೆಸುತ್ತಿದ್ದಾರೆ. ಈ ಪತ್ರಿಕೆಯು ಮತ್ತಷ್ಟು ಆಸಕ್ತ ಓದುಗರನ್ನು ತಲುಪಲಿ. ಯಶ ಕಾಣಲಿ. ಓದುಗರ ಸಂಖ್ಯೆಯು ವೃದ್ಧಿಯಾಗಲಿ. ಕೋಟಿ ಕನ್ನಡಿಗರನ್ನು ತಲುಪಲಿ. ಆನ್ಲೈನ್ ಪತ್ರಿಕೆಯ ಕ್ಷೇತ್ರದಲ್ಲಿ ಮೈಲಿಗಲ್ಲಾಗಲಿ. ಹೊಸ ಯೋಜನೆಗಳು ಸಾಕಾರಗೊಳ್ಳಲಿ.

ಗುರುದತ್ತ ಸಂಕೇತ್

ಕಳೆದ ಒಂದು ವರ್ಷದಿಂದ ಪ್ರತೀ ಭಾನುವಾರವೂ ತಪ್ಪದೆ ನನ್ನ ವಾಟ್ಸ್ಯಾಪ್ ಒಳಪೆಟ್ಟಿಗೆಗೆ ಸಾಹಿತ್ಯಮೈತ್ರಿ ಅಂತರ್ಜಾಲ ಪತ್ರಿಕೆಯ ಅಂಕಣಗಳು ಬಂದು ಕದ ತಟ್ಟುತ್ತಿವೆ. ಮಮತೆಯಿಂದ ಕದ ತೆರೆದು ಒಳಗೆ ಬರಮಾಡಿಕೊಂಡಿದ್ದೇನೆ.

ಪ್ರಾಮಾಣಿಕವಾಗಿ ಹೇಳಬೇಕೆಂದರೆ ನಾನು ಎಲ್ಲ ಅಂಕಣಗಳನ್ನೂ ಓದುವುದಿಲ್ಲ. ಆದರೆ ಅವುಗಳ ಚಿತ್ತಾಕರ್ಷಕ ಚಿತ್ರಗಳು, ಲೇಖನಗಳ ಶೀರ್ಷಿಕೆಗಳು ನನ್ನನ್ನು ಸೆಳೆಯದೆ ಬಿಡುವುದಿಲ್ಲ. ಕೆಲವು ಲೇಖನಗಳನ್ನು ಸ್ಥೂಲವಾಗಿ ಕಣ್ಣಾಡಿಸಿಕೊಂಡು ಮುಂದೆ ಸಾಗುವಾಗ, ನನ್ನ ಮೊಗೆ ಚಿಕ್ಕದಾದುದ್ದಕ್ಕೆ ಖೇದವಾಗುತ್ತದೆ. ಉತ್ತಮ, ವೈವಿಧ್ಯಮಯ, ಬುದ್ಧಿಭಾವಗಳ ಪ್ರಚೋದಕವಾದ ಬರಹಗಳನ್ನು ತುದಿಕಡಿಯದ ಧ್ಯಾನದಿಂದ ನಮ್ಮ ಮುಂದಿಡಲು ನಿರಂತರವಾಗಿ ಶ್ರಮಿಸುವ ಪತ್ರಿಕೆಯ ಸಂಪಾದಕರು ಹಾಗೂ ಸಿಬ್ಬಂದಿಗಳಿಗೆ ಒಬ್ಬ ಓದುಗಳಾಗಿ ಕೃತಜ್ಞತೆಗಳನ್ನು ಅರ್ಪಿಸುತ್ತಾ, ಸಾರ್ಥಕವಾಗಿ ವರ್ಷ ತುಂಬಿದ ಸಂತಸಕ್ಕೆ ಅಭಿನಂದನೆಗಳನ್ನೂ ಸಲ್ಲಿಸುತ್ತೇನೆ.

-ಆಶಾ ರಘು
ಕಾದಂಬರಿಗಾರ್ತಿ

ಸಾಹಿತ್ಯ ಮೈತ್ರಿ ಎಂಬ ಹೆಸರೇ ಆಕರ್ಷಕ.
ಇದರಲ್ಲಿ ಅಡಕವಾಗಿರುವ ಲೇಖನಗಳು ಬಹಳವೇ ವೈವಿಧ್ಯಮಯ. ನನ್ನ ವೇದಾಂತ +ಸಸ್ಪೆನ್ಸ್ ಬೆರೆತ ಕಾದಂಬರಿ “ಪರಾಭವ ಭಾವನಾ” ಈ ಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟವಾಗಿತ್ತು.

ಧಾರಾವಾಹಿಗೆ ಸೂಕ್ತವಾದ ಛಾಯಾಚಿತ್ರಗಳನ್ನು ಬಳಸಿ, ಧಾರಾವಾಹಿಗೊಂದು ಮೆರುಗು ಕೊಟ್ಟಿದ್ದರು.
ಸಾಹಿತ್ಯ ಮೈತ್ರಿ ಪತ್ರಿಕೆಯ ಸಂಪಾದಕರು, ಸಿಬ್ಬಂದಿ ಮತ್ತು ಎಲ್ಲ ಲೇಖಕರಿಗೂ ಯುಗಾದಿಯ ಶುಭಾಶಯಗಳು.

-ಯತಿರಾಜ್ ವೀರಾಂಬುಧಿ
(ಕಾದಂಬರಿಕಾರ, ಅಂಕಣಕಾರ ಮತ್ತು ಅನುವಾದಕ)

ಸಾಹಿತ್ಯ ಮೈತ್ರಿಗೆ ಇದೀಗ ವರ್ಷ ತುಂಬಿದೆ. ಮೊದಲ ವರ್ಷದ ಹುಟ್ಟು ಹಬ್ಬವೆಂದರೆ ಪೋಷಕರಿಗೆ ಹೊಸ ಪುಳಕ.
ಆಸಕ್ತಿದಾಯಕ, ವೈವಿಧ್ಯಮಯ ಬರಹಗಳನ್ನು ಓದುಗರಿಗೆ ತಲುಪಿಸುವ,


ಹೊಸ ಬರಹಗಾರರನ್ನು ಪ್ರೋತ್ಸಾಹಿಸುವ, ಅನುಭವೀ ಬರಹಗಾರರನ್ನು ಗೌರವಿಸುವ ಸಾಹಿತ್ಯ ಮೈತ್ರಿ ಬಳಗಕ್ಕೆ ಶುಭವಾಗಲಿ. ಕನ್ನಡ ಸಾಹಿತ್ಯ ಲೋಕದ ನಕ್ಷತ್ರವಾಗಿ ಸಾಹಿತ್ಯ ಮೈತ್ರಿ ಬೆಳೆಯಲಿ. ಶುಭಹಾರೈಕೆಗಳು.

ಸೌಜನ್ಯ ದತ್ತರಾಜ್

ಸಾಹಿತ್ಯ ಮೈತ್ರಿಗೆ ಅದೆಷ್ಟು ಬೇಗ ಒಂದು ವರ್ಷವಾಯಿತಲ್ಲ! ಎನ್ನಿಸಿದೆ.ಪತ್ರಿಕೆ ನಿರಂತರವಾಗಿ, ಉತ್ತಮ ವಿಚಾರಪೂರ್ಣ ಲೇಖನಗಳೊಂದಿಗೆ, ಕವನ, ಹನಿಗವಿತೆ, ಶಾಯಿರಿ, ಗಜಲ್ , ಸಣ್ಣ ಕತೆಗಳೊಂದಿಗೆ ಒಡಮೂಡಿ ಬರುತ್ತಿದೆ. ಅನೇಕ ಪ್ರತಿಭಾವಂತ ಲೇಖಕ/ ಕಿಯರನ್ನೂ ನಾಡಿಗೆ ಪರಿಚಯಿಸಿದೆ.ಪ್ರಾರಂಭದಲ್ಲಿ ಸಂಪಾದಕ ಚಂದ್ರಶೇಖರ್ ಏನಂದು ಕೊಂಡಿದ್ದರೋ, ಅದಕ್ಕಿಂತಲೂ ಪತ್ರಿಕೆ ಹೆಚ್ಚು ಸಾಧಿಸಿದೆ ಎಂದರೆ ಅತಿಶಯೋಕ್ತಿಯೇನಲ್ಲ.

ಪ್ರತೀವಾರ ವಿಶಿಷ್ಟ ಲೇಖನ, ಕವಿತೆ, ಹನಿ ಮುಂತಾದ ಸಾಹಿತ್ಯ ಪ್ರಕಾರಗಳಿಂದ ಪತ್ರಿಕೆ ಸುಂದರವಾಗಿ ಬರುತ್ತಿದೆ. ಇದೇ ಉತ್ಸಾಹ ನಿರಂತರವಾಗಿರಲಿ.ಸಂಪಾದಕ ಚಂದ್ರಶೇಖರ್ ಸಾಹಿತ್ಯ ಕ್ಷೇತ್ರದಲ್ಲಿ ಮತ್ತಷ್ಟು ಹೆಸರು ಮಾಡಲಿ ಎಂಬ ಹಾರೈಕೆಗಳೊಂದಿಗೆ ಯುಗಾದಿಯ ಶುಭಾಶಯಗಳು.
# ಡಾll ಪರಮೇಶ್ವರಪ್ಪ ಕುದರಿ
ಚಿತ್ರದುರ್ಗ, 9916277217

ಒಂದು ವರ್ಷದಿಂದ ಪರಿಚಯವಾದ ಸಾಹಿತ್ಯಮೈತ್ರಿ ಬಳಗ ಈಗ ನಮ್ಮದೇ ಬಳಗವಾಗಿದೆ. ಕಾರಣ ಎಲ್ಲರೂ ನಮ್ಮವರು ಎಂದು ತಬ್ಬುವ ಈ ಬಳಗವು ನಾಡಿನ ಖ್ಯಾತ ಲೇಖಕರ ಲೇಖನಗಳನ್ನು ಕಿರಿಯರಿಗೆ ಪರಿಚಯಿಸುವುದಲ್ಲದೆ, ಯುವಬರಹಗಾರರನ್ನು ಬೆನ್ನು ತಟ್ಟುತ್ತಾ ನಿರಂತರ ಸಾಹಿತ್ಯ ಸೇವೆಯಲ್ಲಿ ನಿರತವಾಗಿದೆ.

ಬಹಳಷ್ಟು ಬರಹಗಾರರಿಗೆ ಉತ್ಸಾಹ ತುಂಬುವ ವೇದಿಕೆಯಾಗಿ, ಹಿರಿಯರಿಗೂ ಕಿರಿಯರಿಗೂ ಒಡನಾಟ ಬೆಳೆಸುತ್ತಾ ಸಮಾಜದ ಕೈಗನ್ನಡಿಯಾಗಿ ಮುಂದೆ ಸಾಗುತ್ತಿದೆ. ವಾರವಾರಕ್ಕೂ ವೈವಿಧ್ಯಮಯ ವಿಷಯಗಳು, ಅಂಕಣಗಳು, ನಗೆಹನಿಗಳು, ಕವಿತೆಗಳು ಎಲ್ಲವೂ ವರ್ಣರಂಜಿತವಾಗಿ ಮೂಡಿಬರುತ್ತಿವೆ.

ಪತ್ರಿಕೆಯ ಸಂಪಾದಕರಾದ ಕು ಶಿ ಚಂದ್ರು ಸರ್ ಅವರದು ಅಷ್ಟೇ ಸರಳವಾದ ವ್ಯಕ್ತಿತ್ವ. ಓದುಗರಿಗೆ ಮತ್ತು ಬರಹಗಾರರಿಗೆ ತೊಂದರೆಯಾಗದಂತೆ ಎಲ್ಲರಿಗೂ ಪ್ರತಿಕ್ರಿಯಿಸುತ್ತಾ ಪತ್ರಿಕೆಯನ್ನು ಚೆಂದವಾಗಿ ನಡೆಸಿಕೊಂಡುಹೋಗುತ್ತಿದ್ದಾರೆ.

ಈ ಯುಗಾದಿಗೆ ಒಂದು ವರ್ಷ ತುಂಬಲಿರುವ ಈ ಪತ್ರಿಕೆಯು ನಾಡಿನಾದ್ಯಂತ ಎಲ್ಲರ ಮನ-ಮನಗಳನ್ನೂ ತಲುಪಿ ಮನದ ಮಾತಾಗಲಿ ಎಂದು ಹಾರೈಸುವೆ.

  • ಅನಂತ ಕುಣಿಗಲ್
    ಯುವಸಾಹಿತಿ, ರಂಗಕಲಾವಿದ & ಸಹಾಯಕ ನಿರ್ದೇಶಕ

ಅಕ್ಷರದ ಸಹವಾಸ ಮಾಡುವ, ಕವಿತೆಯನ್ನು ಪ್ರೀತಿಸುವ, ಕತೆಗಳ ದಾಟಿಸುವ ನಿಮ್ಮ ಜಾಲತಾಣ ವಸಂತದಲ್ಲಿ ಚಿಗುರುವ ಅಶೋಕ ವೃಕ್ಷದ ಹಾಗೆ ನಳನಳಿಸಲಿ.

ನಿಮ್ಮ ಈ ಕಾರ್ಯ ನಿಮಗೆ ಸಂತೋಷ ಕೊಡಲಿ. ಹಾರ್ದಿಕ ಹಾರೈಕೆ.
-ಜೋಗಿ

Related post