ಸಿಂಗಳೀಕ – Macaque
ಪಶ್ಚಿಮ ಘಟ್ಟ ಪ್ರದೇಶ, ಇದು ಸುತ್ತಲೂ ಹಚ್ಚ ಹಸಿರನ್ನು ಮೈ ತುಂಬಿ ಕೊಂಡಿರುವ ಸಹ್ಯಾದ್ರಿ, ಎತ್ತಲೂ ನದಿ ಕಣಿವೆಗಳಿಂದ ಕೂಡಿದ ಭೂ ಭಾಗ. ಬೆಟ್ಟ,ಗುಡ್ಡಗಳನ್ನು ಹೊಂದಿರುವ ಪರ್ವತ. ಇಲ್ಲಿ ಬಗೆ-ಬಗೆಯ ಪ್ರಾಣಿ-ಪಕ್ಷಿಗಳ ತಾಣವನ್ನು ನೋಡಿದಾಗ ಕಣ್ಣಿಗೆ ಆನಂದವಾಗುವುದು ಖಂಡಿತ. ಹಸಿರು ಸಿರಿಯ ವನ ರೂಪವನ್ನೊಮ್ಮೆ ನೋಡಿದಾಗ ಸ್ವರ್ಗದಷ್ಟೆ ಖುಷಿ ಅನುಭವ ಸಿಗುವುದು ಖಚಿತ.
ಇಂತಹ ಸಸ್ಯ ವರ್ಗಗಳ ನಡುವೆ ಇಂದು ಉಳಿದಿರುವ ಜೀವಗಳೆಷ್ಟೊ, ಅಳಿದಿರುವ ಜೀವಿಗಳೆಷ್ಟೊ, ಅಳವಿನಂಚಿನಲ್ಲಿರುವ ಜೀವಿಗಳೆಷ್ಟೊ ? ಹುಡುಕುತ್ತಾ ಹೋದರೆ ಲೆಕ್ಕಕ್ಕೆ ಬಾರದಷ್ಟು ಪ್ರಾಣಿ ಸಂಕುಲಗಳು ಇವೆ ಮಾನವನ ದುರಾಸೆ-ದುರಾಲೋಚನೆಗಳಿಂದ ನಾಶವಾಗಿದ್ದು ಅಷ್ಟೆ ಇವೆ. ಅಂತಹುದೇ ಅಪರೂಪದ ಸ್ನೇಹಜೀವಿ ಸಿಂಗಳೀಕ (Macaque) ಕೂಡ ಒಂದು. ಇದನ್ನು ನಾವು ಕೆಲವು ಚಲನಚಿತ್ರಗಳಲ್ಲಿ ನೋಡಿರಬಹುದು. ಹೆಚ್ಚಾಗಿ ಇವುಗಳು ಕಾಣಸಿಗುವುದು ಪಶ್ಚಿಮ ಘಟ್ಟಗಳಲ್ಲಿ ಮಾತ್ರ.
ಮಕಾಕ್ (Macaque) ಎಂಬ ಪುರಾತನ ಪ್ರಪಂಚದ ವಾನರ ಗುಂಪಿಗೆ ಸೇರಿದ ಇವು ನೋಡೊಕೆ ದೇಹದ ಆಕಾರವೆಲ್ಲಾ ಮಂಗಗಳಂತೆ ಇರುತ್ತದೆ. ತಲೆಯ ತುಂಬಾ ಬಿಳಿ ಕೂದಲುಗಳು, ಬಾಲವು ಸಿಂಹದಂತೆ, ಕೈ ಬೆರಳುಗಳು ಪುಟ್ಟ ಮಗುವಿನಂತೆ ಇರುತ್ತದೆ. ಆಶ್ಚರ್ಯವೆಂದರೆ ಮಿಕ್ಕ ಮಂಗಗಳಂತೆ ಸಿಂಗಳೀಕ ತೋಟಗಳಿಗೆ ನುಗ್ಗಿ ಬೆಳೆಗಳಿಗೆ ಹಾನಿಯನ್ನುಂಟು ಮಾಡುವುದಿಲ್ಲಾ. ತುಂಬಾ ಅಪರೂಪದ ಅಮಾಯಕ, ನಾಚಿಕೆ ಸ್ವಭಾವದ ಜೀವಿಗಳಿವು. ನೋಡಿದ ಕೂಡಲೆ ನಮ್ಮ ಮನಸ್ಸಿಗೆ ಆಕರ್ಷಿತವಾಗಿ ಬಿಡುತ್ತವೆ. ಮನುಷ್ಯರ ಸುಳಿವು ಸಿಕ್ಕಿದರೆ ಸಾಕು ಎತ್ತರದ ಮರವನ್ನೇರಿ ಮನುಷ್ಯರಿಂದ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುತ್ತವೆ.
ಹೋದ ಬಾರಿ ಊರಿಗೆ ಹೋದಾಗ “ಸಿಂಗಳೀಕ ಇಕೊ ಪಾರ್ಕ್” ಗೇರುಸೊಪ್ಪ” ಕ್ಕೆ ನಾನು ನನ್ನ ಸ್ನೇಹಿತರು ಹೋಗಿ ಇವುಗಳನ್ನು ಬೇಟಿ ಮಾಡಿ ಮಾತನಾಡಿಸಿ ಕೂಡ ಬಂದಿದ್ದೇವೆ. ಅವುಗಳ ಮುಖ ಭಾವನೆ, ಮೂಕ ಭಾಷೆ ನೋಡಲು ತುಂಬಾ ಖುಷಿಯಾಗತ್ತದೆ. ಅವುಗಳ ಆಟ, ಓಟ ನೋಡುತ್ತಿದ್ದರೆ ನಾವುಗಳೊಮ್ಮೆ ನಮ್ಮ ಬಾಲ್ಯ ಜೀವನಕ್ಕೆ ಹೋಗುವುದು ಖಂಡಿತ. ಏನನ್ನಾದರು ತಿನ್ನಲು ಕೊಟ್ಟರೆ ರಭಸವಾಗಿ ಬಂದು ತೆಗೆದುಕೊಂಡು ಓಡಿ ಹೋಗಿ ಮರದ ಮೇಲೆ ಕುಳಿತು ಕೊಳ್ಳುತ್ತವೆ. ಹೋಗುವಾಗ ಅರ್ಧಕ್ಕೆ ತಿರುಗಿ ನಮ್ಮನ್ನು ನೋಡಿ ಒಮ್ಮೆ ಹಲ್ಲುಬಿಟ್ಟು ನಗುತ್ತವೆ. ಬಹುಶಃ ಅದು ಅವುಗಳು ನಮಗೆ ತೋರುವ ಕೃತಜ್ಞತಾ ಮನೋಭಾವನೆ ಅನಿಸುತ್ತದೆ!
ಇವುಗಳ ವಾಸಸ್ಥಾನ ಪಶ್ಚಿಮ ಘಟ್ಟದಲ್ಲಿನ ಮಧ್ಯಭಾಗದ ಇಳಿಜಾರಿನ ಪ್ರದೇಶಗಳಲ್ಲಿ. ಕರ್ನಾಟಕದಲ್ಲಿ ಇವುಗಳು ಶಿರಸಿ, ಹೊನ್ನಾವರ, ಗೇರಸೊಪ್ಪ, ಕುದುರೆಮುಖ, ಆಗುಂಬೆ, ಕತ್ತಲೆ ಕಾನು ಅರಣ್ಯ ಭಾಗಗಳಲ್ಲಿ ಹೆಚ್ಚಾಗಿ ಕಂಡು ಬರುತ್ತವೆ . ಹೆಚ್ಚು ಮಳೆ ಬೀಳುವ ಕಾಡುಗಳಲ್ಲಿ ಬಿಟ್ಟರೆ ಬೇರೆಲ್ಲೂ ಇವು ಕಾಣಿಸುವುದಿಲ್ಲ. ಸುಲಭವಾಗಿ ಮರ ಏರುವ ಸುಂದರ ಕಲೆಯನ್ನು ಬಲ್ಲ ಇವುಗಳು ಹೆಚ್ಚಿನದಾಗಿ ತಮ್ಮ ಜೀವನವನ್ನು ಮರದ ಮೇಲೆಯೆ ಕಳೆಯುತ್ತವೆ. ಹಗಲಿನಲ್ಲಿ ಗುಂಪು-ಗುಂಪಾಗಿ ಆಹಾರಕ್ಕಾಗಿ ಜಿಗಿಯುತ್ತಾ, ಆಟವಾಡುತ್ತಾ, ಓಡುತ್ತಾ ಚುರುಕಾಗಿರುವ ಇವು ರಾತ್ರಿ ಹೊತ್ತು ಮರದ ಮೇಲೆಯೆ ಮಲಗುತ್ತವೆ. ಇವುಗಳಲ್ಲು ಮನುಷ್ಯರಂತೆ ಸಂಸಾರವಿರುತ್ತದೆ.
ಹೆಚ್ಚು ಮರದ ಮೇಲೆ ವಾಸಿಸುವ ಇವುಗಳು ಕೆಲವೊಮ್ಮೆ ನೀರಿನಲ್ಲಿ ಈಜುವುದಕ್ಕು ಹೋಗುವುದಿದೆ. ಗುಂಪಿನಲ್ಲಿ ಜೀವನ ಮಾಡಲು ಇಷ್ಟ ಪಡುವಂತಹ ಜೀವಿಗಳಿವು. ಒಂದು ಗುಂಪಿನಲ್ಲಿ 15 ರಿಂದ 20 ಸಿಂಗಳೀಕಗಳು ಇರುತ್ತವೆ. ಅದರಲ್ಲಿ ಒಬ್ಬ ಬಲಿಷ್ಠ ಮುಖಂಡ ಕೂಡ ಇರುತ್ತಾನೆ. ಆತ ಗುಂಪುಗಳೊಂದಿಗೆ ಆಹಾರ ಹುಡುಕಲು ಹೋದಾಗ ಮರದ ಮೇಲಿಂದ ಎಲ್ಲವನ್ನು ಗಮನಿಸುತ್ತಿರುತ್ತಾನೆ. ಅಪಾಯದ ಸೂಚನೆ ಬಂದಾಗ ಭಯಾನಕ ಶಬ್ದ ಮಾಡಿ ಉಳಿದವುಗಳಿಗೆ ಸೂಚನೆ ಕೊಡುತ್ತಾನೆ. ವೈಜ್ಞಾನಿಕ ತಜ್ಞರು ಹೇಳುವ ಪ್ರಕಾರ ಮನುಷ್ಯರಂತೆ ಇವುಗಳು ಕೂಡ ತುಟಿಗಳ ಚಲನೆ, ದೇಹದ ಭಂಗಿ, ಹುಬ್ಬುಗಳ ಚಲನೆ ಮೂಲಕವು ಮೌನ ಸಂಹವನ ನಡೆಸುತ್ತವೆ. ಹಾಗೂ ೧೫ ಕ್ಕೂ ಹೆಚ್ಚು ರೀತಿಯ ಬಗೆಯ ಶಬ್ದಗಳನ್ನು ಹೊರಡಿಸುತ್ತವೆ ಎಂದು ಹೇಳುತ್ತಾರೆ. ಮಿಕ್ಕ ಮಂಗಗಳಂತೆ ಹುಲಿಗಳ ಪರಮಶತ್ರುಗಳು ಇವು.
ಅವುಗಳಲ್ಲಿನ ಪ್ರೀತಿ, ವಾತ್ಸಲ್ಯ, ಬಾಂಧವ್ಯಗಳನ್ನು ನೋಡುತ್ತಿದ್ದರೆ ನಾವುಗಳೇಕೆ ಇವುಗಳಾಗಬಾರದಿತ್ತು ಎಂದೆನಿಸುತ್ತದೆ. ಇವುಗಳ ಥರ ಕೂಡು ಜೀವನ ಮನುಷ್ಯರಲ್ಲಿ ಯಾಕಿಲ್ಲಾ? ಕೆಲವೊಮ್ಮೆ ಮನುಷ್ಯರಲ್ಲಿ ಯಾರಾದರು ಕುಚೇಷ್ಟೆ ಮಾಡಿದಾಗ ಸಿಂಗಳೀಕಗಳಿಗೆ ಹೋಲಿಕೆ ಮಾಡುವುದು ಇದೆ. ಆದರೆ ಇದು ಮನುಷ್ಯರಿಗಿಂತ ಸಿಂಗಳೀಕಗಳಿಗೆ ಹೆಚ್ಚಿನ ಅವಮಾನವನ್ನುಂಟು ಮಾಡುವ ಮಾತು. ಯಾಕೆಂದರೆ ಪರಿಸರದ ಬಗೆಗೆ ಅವುಗಳಲ್ಲಿರುವ ಅಲ್ಪ ತಿಳುವಳಿಕೆಯು ಮಾನವನಲ್ಲಿ ಇಲ್ಲ! ಅದಕ್ಕೆ. ಸಿಂಗಳೀಕಗಳು ವಾಸಿಸುವ ಪ್ರದೇಶಗಳು ಹೆಚ್ಚಾಗಿ ಹಚ್ಚ ಹಸಿರಿನ ಸಸ್ಯ ಸಮೃದ್ಧಿಯಿಂದ ಕೂಡಿರುತ್ತದೆ ಎನ್ನುತ್ತಾರೆ. ಕಾರಣ ಇವುಗಳು ಮಿಶ್ರಹಾರಿ. ಇವುಗಳ ಆಹಾರಗಳು ಹಣ್ಣುಗಳು, ದಂಟುಗಳು, ಮರಗಳನ್ನು ನಾಶಪಡಿಸುವ ವಿವಿಧ ಕೀಟಗಳು, ಸರೀಸೃಪಗಳು, ಎಲೆಗಳು ಇತ್ಯಾದಿ. ಹಣ್ಣುಗಳನ್ನು ತಿಂದು ವಿಸರ್ಜನೆ ಮೂಲಕ ಬೀಜಗಳನ್ನು ಕಾಡಲ್ಲಿ ಇವು ಪ್ರಸರಣ ಮಾಡುತ್ತವೆ. ಇದರಿಂದ ಸಸ್ಯವರ್ಗ ಹೆಚ್ಚಾಗಲು ಇವುಗಳು ಮುಖ್ಯ ಕಾರಣವಾಗಿದೆ. ಹಸಿರಿನ ಪರಿಸರ ಹೆಚ್ಚಾಗಲು ಮಾನವನಿಗಿಂತ ಪ್ರಾಣಿಗಳ ಪಾಲೇ ಹೆಚ್ಚಿರುತ್ತದೆ ಇದಕ್ಕೆ ಇವುಗಳೆ ಉದಾಹರಣೆ. ವಿಶಿಷ್ಟವಾದ ಕೈ ಕಾಲುಗಳು,ಚೂಪಾದ ಹಲ್ಲುಗಳನ್ನು ಹೊಂದಿರುವ ಇವುಗಳು, ಸುಲಭವಾಗಿ ಮರದ ಮೇಲಿನ ಗಟ್ಟಿಯಾದ ಕಾಯಿಗಳನ್ನು ಸೀಳಿ ತಿನ್ನುತ್ತವೆ. ಬಾಯಾರಿಕೆಯಾದಾಗ ಎಲೆಗಳಲ್ಲಿನ ಇಬ್ಬನಿಯನ್ನೆ ಹೆಚ್ಚಾಗಿ ಸೇವಿಸಿ ದೇಹದಲ್ಲಿ ತೇವಾಂಶವನ್ನು ಸಂಗ್ರಹಿಸಿಟ್ಟು ಕೊಳ್ಳುತ್ತವೆಯಂತೆ. ಕೆಲವೊಮ್ಮೆ ಸಾಮಾನ್ಯ ಮಂಗಗಳಿಗೂ, ಇದಕ್ಕು ಮರದ ಮೇಲೆ ಆಹಾರಕ್ಕಾಗಿ ಜಗಳಗಳಾಗುವುದು ಇದೆ. ಅರಣ್ಯ ಇಲಾಖೆಯ ತಜ್ಞರ ಪ್ರಕಾರ ವಿಶ್ವದಲ್ಲಿ ಇವುಗಳ ಸಂಖ್ಯೆ ಅಂದಾಜು 3 ರಿಂದ 4 ಸಾವಿರ ಅಷ್ಟೆ. ಅದರಲ್ಲಿ ಅತೀ ಹೆಚ್ಚು ಅಂದರೆ 600 ಕ್ಕೂ ಹೆಚ್ಚು ಸಿಂಗಳೀಕಗಳು ಶರಾವತಿ ನದಿ ಕಣಿವೆಗಳಲ್ಲಿ ಇದೆ ಎಂದು ಹೇಳುತ್ತಾರೆ. ಕೊಡಗಿನಲ್ಲೂ ಕೂಡ ಮೊದಲು ಸಿಂಗಳೀಕಗಳು ಗಣನೀಯವಾಗಿ ಇತ್ತು. ಆದರೆ ಸರ್ಕಾರದ ವಿವಿಧ ಯೋಜನೆಗಳಿಂದ, ಕಾಡನ್ನು ಕಾಫಿ ತೋಟಗಳನ್ನಾಗಿ ಮಾಡಿದ ಪರಿಣಾಮ ವಾಸಸ್ಥಾನಗಳು ನಾಶವಾದವು ಎನ್ನಲಾಗಿದೆ.
ಸಮೃದ್ಧ ಹಣ್ಣುಗಳು ಸಿಗುವ ಸಮಯದಲ್ಲಿ ಇವುಗಳು ಸಂತಾನೋತ್ಪತ್ತಿ ನಡೆಸುತ್ತವೆ. ಸಂತಾನೋತ್ಪತ್ತಿಯ ಸಮಯ ಡಿಸೆಂಬರ್ ರಿಂದ ಫೆಬ್ರವರಿಯವರೆಗೆ ಎಂದು ಹೇಳುತ್ತಾರೆ.ಗರ್ಭಾವಧಿಯ ಸಮಯ 6 ರಿಂದ 8 ತಿಂಗಳು ಎನ್ನುತ್ತಾರೆ.ಮನುಷ್ಯರಂತೆ ಒಂದು ಅಥವಾ ಎರಡು ಮರಿಗಳಿಗಷ್ಟೆ ಜನ್ಮ ನೀಡುತ್ತವೆ. ಇವುಗಳ ಜೀವಿತಾವಧಿ 20 ರಿಂದ 25 ವರ್ಷಗಳು ಎನ್ನಲಾಗಿದೆ. ಗಂಡು ಸಿಂಗಳೀಕಗಳು ಆಹಾರಕ್ಕಾಗಿ ಹೊರಗಡೆ ಹೋದರೆ ಹೆಣ್ಣು ಸಿಂಗಳೀಕಗಳು ತಮ್ಮ ಮರಿಗಳ ಪಾಲನೆಯಲ್ಲಿ ತೊಡಗಿರುತ್ತದೆ. ಮರಿಗಳು ತಾಯಿ ಅಥವಾ ತಂದೆಯ ಹೊಟ್ಟೆಯ ಭಾಗವನ್ನು ಹಿಡಿದುಕೊಂಡೆ ಇರುತ್ತದೆ. ಗಂಡು ಮರಿಗಳು ಬೆಳವಣಿಗೆಗೆ ಬಂದ ಕೂಡಲೆ ಗುಂಪಿನಲ್ಲಿ ತಾವುಗಳು ಹೋಗಲು ಶುರುಮಾಡುತ್ತವೆ.ಚಿಕ್ಕ-ಚಿಕ್ಕ ಮರಿಗಳು ಕೆಳಗಡೆ ಮರದ ಮೇಲೆ ಜಿಗಿಯುತ್ತಾ ಆಟವಾಡುತ್ತ ಇರುತ್ತವೆ. ಗೇರಸೊಪ್ಪ ಸುತ್ತ-ಮುತ್ತ ಸಿಗುವ ಉಪ್ಪಾಗೆ (ಉಪ್ಪ೦ಗಿ) ಹಣ್ಣುಗಳು ಇವುಗಳಿಗೆ ತುಂಬಾ ಪ್ರಿಯವಾದವು. ಉಪ್ಪಾಗೆ ಋತುವಿನಲ್ಲಿ ಇವುಗಳಿಗೆ ಒಂಥರಾ ಹಬ್ಬದ ಸಂತೋಷ. ಆದರೆ,ಇದರ ಮೇಲು ದುಷ್ಟ ಮನುಷ್ಯ ಕಣ್ಣಿಟ್ಟು ಸಿಂಗಳೀಕಗಳ ಆಹಾರಕ್ಕೂ ಕಲ್ಲು ಹಾಕುತ್ತಿದ್ದಾನೆ. ಹಣಕ್ಕಾಗಿ ಉಪ್ಪಾಗೆ ಹಣ್ಣುಗಳನ್ನು ಕೂಯ್ದು ಮಾರುತ್ತಿದ್ದಾನೆ. ಇದರಿಂದ ಇವುಗಳು ಇಂದು ಮನುಷ್ಯನ ಕಣ್ಣು ತಪ್ಪಿಸಿ ಅಳಿದು – ಉಳಿದ ಹಣ್ಣುಗಳನ್ನು ತಿನ್ನುತ್ತಿವ ಅಷ್ಟೆ. ಮನುಷ್ಯನ ಸ್ವಾರ್ಥ ವೃತ್ತಿ ಹೀಗೆ ಮುಂದುವರೆದರೆ ಮುಂದೊಂದು ದಿನ ಪ್ರಕೃತಿಯ ವಿಕೋಪಕ್ಕೆ ಸಿಲುಕಿ ಬೇರೆ ಜೀವಿಗಳ ಮುಂದೆ ತಾನು ಅಳಿವಿನಂಚಿನ ಜೀವಿಯಾಗಿ ನಿಲ್ಲುವುದು ಖಂಡಿತ.
ಸಿಂಗಳೀಕಗಳಿಗೋಸ್ಕರ ಇಕೋ ಪಾರ್ಕ್ ನಿರ್ಮಿಸಿದೆ. ರಸ್ತೆಯಲ್ಲಿ ಅಡ್ಡಾಡುವಾಗ ವಾಹನಗಳಿಗೆ ಸಿಲುಕಿ ಅಪಘಾತವಾಗುವುದನ್ನು ತಪ್ಪಿಸಲು ಇವುಗಳಿಗಾಗಿಯೆ ರಬ್ಬರನಿಂದ ತಯಾರಿಸಲ್ಪಟ್ಟ ಮೇಲ್ಸೇತುವೆಗಳನ್ನು ಕಟ್ಟಿದೆ. ಅಕ್ಕಪಕ್ಕದ ವಿದ್ಯುತ್ ತಂತಿಗಳನ್ನು ವಿದ್ಯುತ್ ನಿರೋಧಕವನ್ನಾಗಿ ಮಾಡಲಾಗಿದೆ (Insulation of Power Wires). ಪ್ರಕೃತಿ ಶಿಬಿರಗಳಂತಹ ಕಾರ್ಯಕ್ರಮವನ್ನು ಆಯೋಜಿಸಿ ಇವುಗಳ ಬಗ್ಗೆ,ಇವುಗಳ ರಕ್ಷಣೆ ಬಗ್ಗೆ ಮಾಹಿತಿಗಳನ್ನು ನೀಡುತ್ತಿದೆ.ಉತ್ತರ ಕನ್ನಡದಲ್ಲಿ ಸುಮಾರು ೩೦೦ ಚದರ ಕಿಮೀ ನಷ್ಟು ಪ್ರದೇಶವನ್ನು ಸಿಂಗಳೀಕಗಳ ರಕ್ಷಣೆಗಾಗಿಯೆ ಕಾಯ್ದಿರಸಲಾಗಿದೆ. ವಿಜ್ಞಾನಿ ಎಚ್.ಏನ್ ಕುಮಾರ್ ಎನ್ನುವವರು ಇವುಗಳ ಬಗ್ಗೆ ಇನ್ನೂ ಮತ್ತಷ್ಟು ಮಾಹಿತಿ ತಿಳಿಯಲು ೨೦ ವರ್ಷಗಳಿಂದ ಸಂಶೋಧನೆ ನಡೆಸುತ್ತಿದ್ದಾರೆ ಎನ್ನುವುದನ್ನು ಗೂಗಲ್ ನಲ್ಲಿ ಓದಿದ್ದೇನೆ.
ರಾಷ್ಟ್ರೀಯ ಹೆದ್ದಾರಿ ಮೂಲಕ ಬೆಂಗಳೂರಿನಿಂದ ಹೊನ್ನಾವರಕ್ಕೆ ಹೋಗುವಾಗ ಸಾಗರ ತಾಲೂಕು ತಾಳಗುಪ್ಪ ಮುಗಿದ ಮೇಲೆ ಸಿಂಗಳೀಕಗಳ ಸಂರಕ್ಷಿತ ಪ್ರದೇಶಗಳು ಪ್ರಾರಂಭವಾಗುತ್ತವೆ. ಅಲ್ಲಲ್ಲಿ ಎಚ್ಚರಿಕೆ ಫಲಕಗಳನ್ನು ಹಾಕಿರುವುದನ್ನು ಹೆದ್ದಾರಿಯಲ್ಲಿ ನೋಡಬಹುದು. ಪ್ರವಾಸಿ ತಾಣಗಳನ್ನು ನೋಡಲು ಹೋದರೆ ಒಮ್ಮೆ ಗೇರುಸೊಪ್ಪ, ಶಿರಸಿ ಸಿಂಗಳೀಕಗಳ ತಾಣಕ್ಕೂ ಹೋಗಿ ಬನ್ನಿ. ಮನಸ್ಸಿಗೆ ತುಂಬಾ ಖುಷಿಯಾಗುತ್ತದೆ. ಮನುಷ್ಯ ಇಂದು ತಂತ್ರಜ್ಞಾನದಲ್ಲಿ ಎಷ್ಟೆ ಮುಂದುವರೆದರು ಪ್ರಕೃತಿಯಿಂದ ಸಿಗುವ ನೆಮ್ಮದಿಯಿಂದ ವಂಚಿತನಾಗಿದ್ದಾನೆ. ಸಿಂಗಳೀಕಗಳ ಚುರುಕಿನ ಚಲನ-ವಲನ, ಆಟಗಳನ್ನು ನೋಡಿದರೆ ನಮ್ಮ ಜೀವನವು ಹೀಗೆ ಖುಷಿಯಾಗಿ ಇರಬೇಕು ಅನಿಸುವುದು ನಿಜ. ಇಂತಹ ಜೀವಿಗಳೊಂದಿಗೆ ಸಹಕಾರಿಯಾಗಿ ನಾವು ಜೀವಿಸುವುದನ್ನು ರೂಢಿಸಿಕೊ೦ಡರೆ ತು೦ಬಾ ಒಳ್ಳೇಯದು.
ಲೇಖನ್ ನಾಗರಾಜ್ (ಹೊನ್ನಾವರ, ಹರಡಸೆ )
ಚಿತ್ರಗಳು : ಗೂಗಲ್ ಅಂತರ್ಜಾಲ