ಸಿನಿಮಾ ಸ್ವಾರಸ್ಯಕರ ಸಂಗತಿಗಳು-1

ಸಾವಿರ ಮೆಟ್ಟಿಲು ಚಿತ್ರ ಅಪೂರ್ಣವಾಗಿ ವರ್ಷಾಂತರದಲ್ಲಿ ಪೂರ್ಣಗೊಂಡು ಬಿಡುಗಡೆ ಕಂಡಂತೆ. ಹಲವು ಚಿತ್ರಗಳ ಪ್ರಕರಣಗಳು ನೆನಪಾಗುತ್ತಿವೆ.

ಲವ್ ಅಂಡ್ ಗಾಡ್

ಮೊಘಲ್ ಎ ಆಜಾಮ್ ನಂತಹ ಅಧ್ಬುತ ಚಿತ್ರ ನಿರ್ಮಿಸಿದ ಕೆ. ಆಸಿಫ್, ಲೈಲಾ ಮಜ್ನು ಪ್ರೇಮದ ಕಥೆ ಆದರಿಸಿ “ಲವ್ ಅಂಡ್ ಗಾಡ್” ಚಿತ್ರವನ್ನು ಕೋಟ್ಯಾಂತರ ರೂಪಾಯಿಗಳ ವೆಚ್ಚದಲ್ಲಿ ಪ್ರಾರಂಭಿಸಿದರು. ಗುರುದತ್ತ್, ನಿಮ್ಮಿ ನಾಸಿರ್ ಹುಸೇನ್, ಜಯಂತ್, ಪ್ರಾಣ್ ಮುಂತಾದವರ ತಾರಾಗಣ, ನೌಷಾದರ್ ಸಂಗೀತವಿದ್ದು, 1963 ರಲ್ಲಿ ಶೂಟಿಂಗ್ ಶುರುವಾಯಿತು. ಇದಕ್ಕೆ 1964 ರಲ್ಲಿ ಮೊದಲ ಸಿಡಿಲು ಬಡಿಯಿತು. ನಾಯಕನಟ ಗುರುದತ್ತ್ 1964 ಅಕ್ಟೋಬರ್ 10 ರಂದು ಆತ್ಮಹತ್ಯೆ ಮಾಡಿಕೊಂಡರು. ಆಸಿಫ್ ಸಾಹೇಬರು ಮಜ್ನು ಪಾತ್ರಕ್ಕೆ ಗುರುದತ್ತ್ ನ ಪ್ರತಿಭೆಗೆ ಸರಿಸಮನಾದ ನಟನನ್ನು ಹುಡುಕಿ ಗುರುದತ್ತ್ ನ ದೃಶ್ಯಗಳನ್ನು ಮತ್ತೊಮ್ಮೆ ಚಿತ್ರೀಕರಿಸಲು ನಿರ್ಧರಿಸಿ ಸಂಜೀವ್ ಕುಮಾರ್ ನನ್ನು ಆಯ್ಕೆ ಮಾಡಿ 1970 ರಲ್ಲಿ ಶೂಟಿಂಗ್ ಪ್ರಾರಂಭಿಸಿದರು. ಅಂಥಾ ನಿರ್ಮಾಪಕ ನಿರ್ದೇಶಕರು ಬಹಳ ಅಪರೂಪವೇ ಸರಿ. ಆದರೆ ಎರಡನೇ ಸಿಡಿಲು ಕಾದಿತ್ತು. 9 ನೇ ಮಾರ್ಚ್ 1971 ರಂದು ಸ್ವಯಂ ಆಸಿಫ್ ಅವರೇ ಇಹಲೋಕ ತ್ಯಜಿಸಿದರು. ಆಗ ಪತಿಯ ಮಹತ್ವಾಕಾಂಕ್ಷೆಯ ಚಿತ್ರ ತೆರೆಗೆ ತರಲು ದೀಕ್ಷೆ ಹೊತ್ತು ಆಸಿಫ್ ಅವರ ಪತ್ನಿ ನಿಗಾರ್ ಸುಲ್ತಾನ್ (ಆಕೆ ದಿಲೀಪ್ ಕುಮಾರ್ ನ ಸಹೋದರಿ) ಕೆ ಸಿ ಬೊಕಾಡಿಯ ಎಂಬ ನಿರ್ಮಾಪಕರ ನೆರವಿನಿಂದ ಚಿತ್ರೀಕರಣ ಪ್ರಾರಂಭಿಸಿದರು. ಈ ಬಾರಿ ಚಿತ್ರ ಬಹುಪಾಲು ಮುಕ್ತಾಯದ ಹಂತಕ್ಕೆ ಬಂದಿತು. ಆದರೆ ವಿಧಿಯ ಆಟವೇ ಬೇರೆಯಾಗಿತ್ತು. 6 ನೇ ನವೆಂಬರ್ 1985 ರಂದು ದೇಶ ಕಂಡ ಅಪ್ರತಿಮ ನಟ ಸಂಜೀವ್ ಕುಮಾರ್ ಸಹ ಕೊನೆಯುಸಿರೆಳೆದರು. ಇವೆಲ್ಲ ದುರಂತಗಳ ಸರಣಿಯ ನಂತರ “ಲವ್ ಅಂಡ್ ಗಾಡ್” 1986 ರಲ್ಲಿ ತೆರೆಕಂಡಿತು. ಕಮರುದ್ದೀನ್ ಆಸಿಫ್ ರ ಆತ್ಮ ಅಲ್ಲಿಂದಲೇ ” ಇನ್ ಷಾ ಅಲ್ಲಾಹ” ಎಂದಿರಬೇಕು!

ಬಹಾರೇಂ ಫಿರ್ ಭೀ ಆಯೆಂಗಿ

“ಬಹಾರೇಂ ಫಿರ್ ಭೀ ಆಯೆಂಗಿ” ಇದು ಗುರುದತ್ತ್ ನಿರ್ಮಿಸಿದ ಚಿತ್ರ ಆದರೆ ಅರ್ಧದಷ್ಟು ಚಿತ್ರೀಕರಣವಾಗದ ಹಂತದಲ್ಲೇ ಗುರುದತ್ತ್ ಜಗತ್ತನ್ನೇ ದಿಕ್ಕರಿಸಿ ಬಾರದ ತಾಣಕ್ಕೆ ಹೊರಟೇ ಹೋದರು. ಆಗ ನಿಂತೇ ಹೋಗಿದ್ದ ಚಿತ್ರವನ್ನು ಗುರುದತ್ತ್ ಫಿಲಂಸ್ ಸಂಸ್ಥೆ ಗುರುದತ್ತ್ ಬಿಟ್ಟುಹೋದ ನಾಯಕನ ಪಾತ್ರಕ್ಕೆ ಧರ್ಮೇಂದ್ರನನ್ನು ತಂದು ಇಡೀ ಚಿತ್ರವನ್ನು ಮತ್ತೊಮ್ಮೆ ಶೂಟ್ ಮಾಡಿ 1966 ರಲ್ಲಿ (ಗುರುದತ್ತ್ ನಿಧನದ 2 ವರ್ಷದ ನಂತರ) ತೆರೆಗೆ ತಂದರು. ಶಾಯಿದ್ ಲತೀಫ್ ನಿರ್ದೇಶಿಸಿ, ಓ ಪಿ ನಾಯರ್, ಸಂಗೀತ ಸಂಯೋಜಿಸಿದ ಈ ಚಿತ್ರ ಪತ್ರಕರ್ತನೊಬ್ಬನ ಕಥೆ ಹೊಂದಿತ್ತು.

ಮುಂದಿನ ವಾರಕ್ಕೆ…

ಡಿ. ಎನ್. ಸುರೇಶ್

ಹವ್ಯಾಸಿ ಪತ್ರಕರ್ತರು

Related post