ಸಿಹಿಜೀವಿಯ ಗಜಲ್

ಕ್ರಿಯಾಶೀಲ ಬರಹಗಾರರಾದ ಶ್ರೀ ಸಿ ಜಿ ವೆಂಕಟೇಶ್ವರ್ ತಮ್ಮ ಪ್ರೀತಿಯ ಗಜಲ್ ಗಳನ್ನು “ಸಿಹಿ ಜೀವಿ ಗಜಲ್” ಎಂಬ ಪುಸ್ತಕದ ಮೂಲಕ ಹೊರತಂದಿದ್ದಾರೆ. ರಾಷ್ಟ್ರ ಪ್ರಶಸ್ತಿ ಪುರಸ್ಕ್ರತ ಕಲಾವಿದರಾದ ಕೋಟೆ ಕುಮಾರ್ ತಮ್ಮ ರೇಖಾ ಚಿತ್ರಗಳಿಂದ ಪುಸ್ತಕದಲ್ಲಿನ ಗಜಲ್ ಗಳಿಗೆ ಅಂದವನ್ನು ಹೆಚ್ಚಿಸಿದ್ದಾರೆ.

ತುಮುಕೂರಿನ ಕನ್ನಡ ಭವನದಲ್ಲಿ “ಸಿಹಿ ಜೀವಿ ಗಜಲ್” ಪುಸ್ತಕವನ್ನು ರಾಜ್ಯ ಸರ್ಕಾರೀ ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಕ್ಷರಿ ಯವರು ಲೋಕಾರ್ಪಣೆ ಮಾಡಿದರು.

ಕವಿಗಳಾದ ಶ್ರೀ ದೇಸು ಆಲೂರು ರವರು ತಮ್ಮ ಮುನ್ನುಡಿಯಲ್ಲಿ ಹೀಗೆ ಹೇಳಿದ್ದಾರೆ,

ಸಿ.ಜಿ. ವೆಂಕಟೇಶ್ವರ ಅವರು ಸವಿಯಾದ ಮಾತುಗಳಿಂದ, ಸಿಹಿಯಾದ ಹನಿಗಳನ್ನು ಉಣಬಡಿಸುತ್ತಲೇ ಸಿಹಿಜೀವಿಯಾದವರು. ಐದು ವರ್ಷದ ಹಿಂದೆ ಪರಿಚಯವಾದ ಸಿಹಿಜೀವಿಯವರು ಗಜಲ್ ಕೃತಿಯನ್ನು ಕಳಿಸಿ ಮುನ್ನುಡಿ ಬರೆದು ಕೊಡಿ ಎಂದಾಗ ಸಂತಸ ದಿಂದಲೇ ಒಪ್ಪಿಕೊಂಡೆ.

ಕವಿತೆಯನ್ನು ಕಟ್ಟಬಾರದು, ಅದು ಹುಟ್ಟಬೇಕು ಅನ್ನುವ ಮಾತಿದೆ, ಹಾಗೆಯೇ ಗಜಲ್ ಕೂಡ ಹೌದು. ರೂಪಕಗಳಿಂದ ಅವತರಣಿಕೆಯಾದ ಸಿ.ಜಿ.ವಿಯವರು ಗಜಲ್‍ನ ಮೂಲ ಆಶಯ ಪ್ರೀತಿ,
ಪ್ರೇಮ, ಪ್ರಣಯ, ಪ್ರಕೃತಿ, ಮುಂತಾದವುಗಳ ಜೀವಂತಿಕೆಯಾಗಿದೆ. ಅಂತೆಯೇ ಜೀವಿಸಿದ್ದಾರೆ ಕೂಡ. ಕವಿ ಮೊದಲ ಗಜಲ್‍ನಲ್ಲೇ ಒಡಲಾಳದ ಧ್ವನಿಯನ್ನು ಭಾವುಕರಾಗಿ ಹೀಗೆನ್ನುತ್ತಾರೆ.

ಈ ಭಾನು ಇಳೆಯ ಮೇಲೆ ಬಿದ್ದರೂ ನಿನ್ನ ಬಿಡೆನು
ಎಂಬ ಆಂತರ್ಯದ ಆಳವಾದ ಅಳಲನ್ನು ಬಿಂಬಿಸುತ್ತಾರೆ.

ಬಾಲ್ಯ ಎಷ್ಟೊಂದು ಸೋಜಿಗ ಅಲ್ಲವೇ?ಬೊಗಸೆ ಕಂಗಳಲ್ಲಿ ಬತ್ತದ ಆಸೆಗಳು ಬಹಳವಿತ್ತು
ತುಂಟು ವಯಸಲಿ ತೀರದ ಚೇಷ್ಟೆಗಳು ಬಹಳವಿತ್ತು

ಬಾಲ ಲೀಲೆಗಳು ಅದೆಷ್ಟೊಂದು ಮಧುರ! ಕವಿ ತನ್ನ ಬಾಲ್ಯದಲ್ಲಿ ಕಂಡುಂಡ ಬಡತನದ ಬೇಗೆಗಳನ್ನು ಬಾಲ್ಯದ ಹಸಿವನ್ನು ನಗುಮೊಗದಲ್ಲಿ ಅರಳುವ ಗೆರೆಗಳನ್ನು ಗುಲಾಬಿಗೆ ಹೋಲಿಸುತ್ತಾ ಸೂಕ್ಷ್ಮವಾಗಿ ಬಡತನವನ್ನೇ ಬಿಂಬಿಸುತ್ತಾರೆ.

ಭೌತಿಕ ಅಭಿವೃದ್ಧಿ ಕಂಡು ಸಂತಸವಾಗಿದೆ ಮನ
ಮಾಲಿನ್ಯಗೊಂಡ ನೆಲಜಲಕೆ ಕೊರಗಿದೆ ಮನ
ಅಭಿವೃದ್ಧಿ ಹೊಂದುವುದು ಒಂದೆಡೆಯಾದರೆ, ಈಗ ಅಭಿವೃದ್ಧಿ ಕಾರ್ಯಗಳು ಎಷ್ಟೇ ಜರುಗಿದರೂ ಸಹ ಹಿಂದೆ ಪ್ರಕೃತಿಯನ್ನು ನಾಶಗೈದು ವಿಕೃತಿ ಮೆರೆದು ಮಲಿನ ಮಾಡಿರುವ ಹುಚ್ಚು ಮನಸುಗಳಿಗೆ ಹಿಡಿಶಾಪ ಹಾಕುವ ಕವಿ ಪ್ರಕೃತಿಯನ್ನು ನೆನೆದು ಮರುಗುತ್ತಾರೆ.

ಚೆಲುವಿಲ್ಲ ಒಲವಿಲ್ಲ ಎಲ್ಲೆಡೆ ಹಣದ ಲೆಕ್ಕಾಚಾರ
ಪ್ರಕೃತಿಯೆಡೆಗೆ ಅತ್ಯಾಚಾರ ಲಾಭದ ಲೆಕ್ಕಾಚಾರವನ್ನು ಹೀಗೆ ಹೇಳಿದ್ದಾರೆ.

ಎಲ್ಲೋ ಹುಡುಕಿದೆ ಇಲ್ಲದ ದೇವರ ಕಲ್ಲು ಮಣ್ಣುಗಳ ಗುಡಿಯೊಳಗೆ ಇಲ್ಲೇ ಇರುವ ಪ್ರೀತಿ ಸ್ನೇಹಗಳ ಗುರುತಿಸದಾದೆನು ನನ್ನೊಳಗೆ ಎನ್ನುವ ರಾಷ್ಟ್ರಕವಿ ಜಿ.ಎಸ್.ಎಸ್ ರವರ ಕವನದ ಸಾಲಿನಂತೆ,

ವ್ರತ ಪೂಜೆ ಜಾತ್ರೆ ದೊಂಬರಾಟ ನಿನ್ನ ಹೆಸರಲ್ಲಿ
ಅತೃಪ್ತ ಆತ್ಮಗಳ ಕಪಟ ನೋಡಿರುವೆ ನೀನು

ಇಲ್ಲಿ ದೇವರ ಹೆಸರಲ್ಲಿ ಕಚ್ಚಾಡುವ ಕಪಟಿಗಳಿದ್ದಾರೆ ನಂಬದಿರಿ. ದೇವರನ್ನು ಯಾರಾದರೂ ನೋಡಿದ್ದರೆ ನನಗೂ ತಿಳಿಸಿ, ನಾನೂ ಸಹ ದೇವರನ್ನು ನೋಡಲು ಉತ್ಸುಕನಾಗಿದ್ದೇನೆ. ಆದರೆ… ಅವನು ಸರ್ವಾಂತರ್ಯಾಮಿ ಯಾರಿಗೂ ಕಾಣಬಾರದೆಂದು ಅವಿತು ಕುಳಿತಿದ್ದಾನೆ, ಯಾರಿಗೆ ಹೇಳಿದರೂ ಪ್ರಯೋಜನವಿಲ್ಲವೆಂದು ತನ್ನ ಅಂತರ್ಗತ ನೋವನ್ನು ಹೀಗೆ ಹೊರಹಾಕುತ್ತಾರೆ.

ದೇವಿ ನೆಲೆಸಿರುವ ನಾಡಲ್ಲಿ ದಾನವರು ಮೆರೆಯುತಿಹರು ಯಾರಿಗ್ಹೇಳಲಿ
ದುಷ್ಟಶಕ್ತಿಗಳು ಅಟ್ಟಹಾಸದಲಿ ಪಟ್ಟವೇರುತಿರೆ ಯಾರಿಗ್ಹೇಳಲಿ

ಸತ್ತವರು ಬದುಕಿರುತ್ತಾರಂತೆ, ನಮ್ಮೊಳಗೆ ಜೀವಿಸುತ್ತಿರುತ್ತಾರಂತೆ. ಬಟ್ಟೆ ತೊಡಬೇಕೆಂದು ಬೋಧಿಸಿದ ಜಗದಲ್ಲಿ, ಬಟ್ಟೆ ತೊಟ್ಟರೂ ಬೆತ್ತಲಾಗಿ ಬದುಕುತ್ತಿರುವ ನಾವುಗಳು ನಮ್ಮದೇ ‘ಅಹಂ’ ಎಂಬ ಜಗತ್ತನ್ನು ಕೋಟೆಯಂತೆ ಕಟ್ಟಿಕೊಂಡು ಆ ಕೋಟೆಯೊಳಗೆ ವಿರಾಜಮಾನವಾಗಿ ಪವಡಿಸಿ ಬಿಡುತ್ತೇವೆ. ಪರದೆ ಸರಿಸಿ ಅದರಿಂದ ಹೊರಬರಲಾಗದೆ ತೊಳಲಾಡುತ್ತೇವೆ. ಹೊರಬರಬೇಕೆಂದರೆ ಬೆಳಕಿನ ಕಿರಣದಂತೆ ಜ್ಞಾನದ ಕಿಡಿ ಬೇಕು. ಅಂತಹ ಕಿಡಿ ಈ ಸಂಕಲನದ ಕೆಲವು ಗಜಲ್‍ಗಳಲ್ಲಿ ವ್ಯಕ್ತವಾಗಿವೆ. ಬದಲಾವಣೆ ಅನಿವಾರ್ಯ, ಮನುಜನ ಮಜಲುಗಳು ಬದಲಾದಂತೆಲ್ಲಾ ಭಾವನೆಗಳು ಬದಲಾಗಬೇಕು. ಆಗ ತಾನೆ ಬದುಕು ಸಾಧ್ಯ. ಅನಿವಾರ್ಯ ಆವರಿಸಿಕೊಳ್ಳುವ ತನಕ ಬದಲಾಗಲಾರೆ ಎಂದರೆ ಬದುಕು ಮೂರಾಬಟ್ಟೆಯಾಗುವುದರಲ್ಲಿ ಸಂದೇಹವೇ ಇಲ್ಲ.

ನಲವತ್ತು ದಾಟಿದ ಮೇಲೆ ನಿಜವಾಗಿ ಬದುಕಲು ಬದಲಾಗಿದ್ದೇನೆ
ಗತಕಾಲದ ನೆನಪುಗಳ ಮೊಗೆದು ಸವಿಯಲು ಬದಲಾಗಿದ್ದೇನೆ

ಬಂಧ ಸಂಬಂಧ ಗಟ್ಟಿಯಾಗಬೇಕಾದರೆ ಬದಲಾಗಲೇಬೇಕಿದೆ ಎಂದು ನಯವಾಗಿ ಸಿಹಿಯಾದ ಮಾತುಗಳಿಂದಲೇ ಸೂಕ್ಷ್ಮವಾಗಿ ತಿವಿದಿದ್ದಾರೆ. ಹರಿಯೇ ಸರ್ವೋತ್ತಮ ನಿರ್ಮಲ ಭಕ್ತಿಯೇ ಮುಕ್ತಿಯ ಸಾಧನ, ಜೀವಾತ್ಮ-ಪರಮಾತ್ಮ ಭಿನ್ನವಾದುದ್ದು ಎಂಬ ಸಿದ್ದಾಂತವನ್ನು ಪ್ರತಿಪಾದಿಸಿದ ಕನಕದಾಸರು ಅನನ್ಯ ಭಕ್ತಿಯಿಂದಲೇ ಶ್ರೀಕೃಷ್ಣನ ದರ್ಶನ ಪಡೆದವರು.

ನಾನೆಂಬ ಅಹಂನಿಂದ ಒಡೆಯುತ್ತಿವೆ ಮನೆಮನಗಳು ಸಾಕಿ
ನಾನತ್ವ ಕಳೆದು ಸತ್ಯದರ್ಶನವ ಮಾಡಿಸಿದವರು ಕನಕದಾಸರು

ಹರಿದಾಸರೆಂದರೆ ಹರಿಯ ಸೇವಕರು, ಅಹಂ ಅನ್ನು ತ್ಯಜಿಸಿ ನಿಜ ಭಕ್ತಿಯಿಂದ ದೇವರನ್ನು ಕಾಣಬಹುದು ಎಂಬ ಅದ್ಭುತ ನುಡಿಯಿಂದ ಕನಕದಾಸರ ಬಗ್ಗೆ ಭಕ್ತಿಯ ಪರಾಕಾಷ್ಟೆಯನ್ನು ಮೆರೆದಿದ್ದಾರೆ.

ಜಯತು ಜಯ ರಾಮ ಹರಸು ರಘುರಾಮ
ಭಯವ ನೀಗಿ ಆಭಯ ಕರುಣಿಸು ರಘುರಾಮ

ರಘುವಂಶದ ಕೀರ್ತಿ ಕಳಸ, ಮರ್ಯಾದಾ ಪುರುಷೋತ್ತಮ ದಶರಥ ಸುತ, ದಶಕಂಠನ ಹರಿದ ಶ್ರೀರಾಮನಲ್ಲಿ ಸಿಹಿಜೀವಿಗಳನ್ನು ಕಾಪಾಡು ಎಂದು ದೈನ್ಯತೆಯಿಂದ ಬೇಡಿಕೊಳ್ಳುವಾಗ ಕವಿಯ ಸಾಮಾಜಿಕ ಕಳಕಳಿಯನ್ನು ತೋರುತ್ತದೆ. ನಮ್ಮ ಪೂರ್ವಜರು ನಡೆಸಿಕೊಂಡು ಬಂದಿದ್ದ ಆಚಾರ-ವಿಚಾರಗಳಿಗೆ ಮನ್ನಣೆ ಕೊಡದೆ ನಮ್ಮತನವನ್ನು ಕಳೆದುಕೊಂಡು ಬದುಕಿದ್ದರ ಫಲವಾಗಿ, ಕಾಣದ ವೈರಾಣುವೊಂದು ಮನುಕುಲವನ್ನು ಹೈರಾಣು ಮಾಡುತ್ತಿದೆ.

ವೈರಾಣುವೊಂದು ನಮಗೆ ಹೊಸ ಸಂದೇಶ ನೀಡಿದೆ
ಹೈರಾಣು ನಮಗೆ ಯೋಚಿಸಲೊಂದು ಅವಕಾಶ ಮಾಡಿದೆ

ನನಗೆ ಆ ಜಾತಿ ಈ ಜಾತಿ, ಬಡವ-ಬಲ್ಲಿದರೆಂಬ ಬೇಧವಿಲ್ಲ. ಹಮ್ಮು-ಬಿಮ್ಮನು ತೊರೆದು ಸಮರಸದಿ ಬಾಳು ಎಂದು ಗುಟುರು ಹಾಕುತ್ತಿದೆ. ಎಂದು ಕವಿ ತಮ್ಮ ಗಜಲ್‍ನಲ್ಲಿ ಭಾವುಕರಾಗಿ ನೋವಿನಿಂದ ನುಡಿಯುತ್ತಾರೆ. ಗಜಲ್‍ಗೆ ಶೀರ್ಷಿಕೆ ಕೊಡಬಾರದೆಂಬ ನಿಯಮವಿದೆ ಎಂದು ಕೆಲವರು ಹೇಳುತ್ತಾರೆ. ಆದರೆ ಎಷ್ಟೋ
ಕವಿಗಳು ಶೀರ್ಷಿಕೆ ಕೊಟ್ಟು ಬರೆದ ಕವನಗಳು ಗಜಲ್ ನಿಯಮದಲ್ಲಿರುತ್ತವೆ ಮತ್ತು ಗೆಲ್ಲುತ್ತವೆ. ‘ಗಜಲ್’ ಎಂದು ತಲೆಬರಹ ಕೊಟ್ಟು ರಚಿಸಿದ ಎಷ್ಟೋ ಬರಹಗಳು, ನಿಯಮ ಪಾಲಿಸಿದ್ದರೂ
ಸಹ ಸಮಸಾಲುಗಳು ಮತ್ತು ಪದಗಳ ಪುನರಾವರ್ತನೆಯಿಂದ ಗೆಲ್ಲುವುದರಲ್ಲಿ ವಿಫಲವಾಗುತ್ತವೆ. ಈ ಕೃತಿಯಲ್ಲಿನ ಗಜಲ್‍ಗಳನ್ನು ಕವಿ ಸರಳವಾಗಿ, ಅರ್ಥವಾಗುವ ಪದಗಳಲ್ಲಿ ಸುಂದರವಾಗಿ
ರಚಿಸಿದ್ದಾರೆ. ಇವರ ಇನ್ನಷ್ಟು ಗಜಲ್ ಸಹಿತ ವಿವಿಧ ಪ್ರಕಾರದ ಕೃತಿಗಳು ಸಾಹಿತ್ಯಲೋಕದಲ್ಲಿ ಪ್ರಜ್ವಲಿಸಲಿ ಎಂದು ಹೃನ್ಮನದಿಂದ ಹಾರೈಸುವೆ. ಶುಭವಾಗಲಿ…

ಪುಸ್ತಕದ ಬೆನ್ನುಡಿಯಲ್ಲಿ ಹಾವೇರಿಯ ಶ್ರೀ ನೂರ ಆಹ್ಮದ ನಾಗನೂರ ರವರು ಪುಸ್ತಕದ ಬಗ್ಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.
‘ಸಾಹಿತ್ಯ ಸೌಂದರ್ಯಕ್ಕಿಂತ ಬದುಕಿನ ಸೌಂದರ್ಯದ ದೃಷ್ಟಿಯು ಪ್ರಮುಖವಾಗಿವೆ’ ಕನ್ನಡ ನಾಡಿನ ಚರಿತ್ರೆಯಲ್ಲಿ ಗಜಲ್ ಆಂದೋಲನದ್ದು ಒಂದು ಉಜ್ವಲ ಸಾಹಿತ್ಯ ಎನ್ನಬಹುದು.
ಇಲ್ಲಿ ವ್ಯಕ್ತಿ ಅಭಿವ್ಯಕ್ತಿ ಸಮಾಜ ದೇವರು ಈ ವಿಷಯಗಳಲ್ಲಿ ಹೊಸ ಕ್ರಾಂತಿಯನ್ನು ಹೊಮ್ಮಿಸಿ, ಮಾನವ ಬದುಕಿಗೆ ನೂತನ ಆಯಾಮ ಅವಿಕ್ಷಾರಗಳನ್ನು ನೀಡಲು ಗಂಭೀರವಾಗಿ ಚಿಂತಿಸಿದ ಕಾವ್ಯದ ಪ್ರಕಾರವಿಂದು ಸಿಹಿಜೀವಿ ಎಂದೇ ಕಾವ್ಯನಾಮವನ್ನು ಇಟ್ಟುಕೊಂಡು ಬರೆಯುವ ಶಿಕ್ಷಕರು ಆದ ಸಿ ಜಿ ವೆಂಕಟೇಶ್ವರರವರು ಹೊಸ ಗಜಲಕಾರರ ಲಿಸ್ಟ್ ನಲ್ಲಿ ಸೇರಿದ್ದಾರೆ. ಈ ಒಂದು ಕೃತಿ ಉಪಸೃಷ್ಟಿಯಾಗಿ, ಸಮರ್ಥ ಮಾಧ್ಯಮವಾಗಿ ಮೂಡಿಬಂದ ಈ `ಸಿಹಿಜೀವಿಯ ಗಜಲ್’ ಸಂಕಲನ ಒಂದು ಅಪೂರ್ವ ಮನ್ವಂತರವನ್ನು ಸ್ಥಾಪಿಸಿದೆ. ವಸ್ತು, ಭಾಷೆ, ರೂಪ, ಆಶಯ, ಅಭಿವ್ಯಕ್ತಿಯ ದೃಷ್ಟಿಯಿಂದ ಇಲ್ಲಿಯ ಗಜಲ್ಗಳು ಗೇಯತೆಯನ್ನು ಕಾಪಾಡಿಕೊಂಡು ಸಾಹಿತ್ಯದ ಅಪಾರ ಬಳಗಗಳಲ್ಲಿ ಪ್ರಶಂಸೆಗೆ ಪಾತ್ರವಾಗಿವೆ.

ಒಬ್ಬ ಗಜಲಕಾರನಿಗೆ ಬೇಕಾದ ಆತ್ಮಶೋಧನೆ, ಸುತ್ತಮುತ್ತಲಿನ ವಿಮರ್ಶೆ ಧರ್ಮತತ್ವ ಪ್ರತಿಪಾದನೆ ಹಾಗೂ ಜೀವನ ಮೌಲ್ಯಗಳ ಪ್ರತಿಷ್ಟಾಪನೆ ಗಜಲ್‍ಗಳ ಮುಖೇನ ಮುಖ್ಯ ಗುರಿಯಾಗಿಸಿ ಜೀವನಪರ ಧೋರಣೆ ಪ್ರೇರಿತವಾಗಿ ಹುಟ್ಟಿದ ಶೇರ್‍ಗಳಲ್ಲಿ ಸಾಹಿತ್ಯ ಸೌಂದರ್ಯಕ್ಕಿಂತ ಬದುಕಿನ ಸೌಂದರ್ಯದ ದೃಷ್ಟಿಯು ಪ್ರಮುಖವಾಗಿ ಕಾಫಿಯಾ, ರದಿಫ್ ಹಾಗೂ ಅಶಾಯರ್‍ಗಳಲ್ಲಿ ಸಂವೇದನಾಶೀಲ ಭಾವನೆಗಳಲ್ಲಿ ಉತ್ಕಟ ಅನುಭವದ ಉನ್ನತ ಅಭಿವ್ಯಕ್ತಿಗಳಾಗಿರುವುದರಿಂದ ಉತ್ತಮ ಕಾವ್ಯದ ಲಕ್ಷಣಗಳನ್ನು ಸಹಜವಾಗಿಯೇ ಪಡೆದುಕೊಂಡಿವೆ. ಅಷ್ಟೇ ಅಲ್ಲದೆ ಕನ್ನಡ ಭಾಷೆಯ ಎಲ್ಲ ಸಾಧ್ಯತೆಗಳನ್ನು ಸೂರೆಗೈದು ಗಜಲ್ ಸಾಹಿತ್ಯಕೊಂದು ಹೊಸ ಅಭಿರುಚಿಯೊಂದಿಗೆ ಸಿಹಿಜೀವಿಯುಆಗಮನವಾಗುತ್ತಿರುವುದು ಸಂತೋಷದ ಸಂಗತಿ. ಇವರ ಸಾಲುಗಳ ಶ್ರೀಮಂತಿಕೆ ಸತ್ಯದ ಸತ್ವವನ್ನು ಓದುಗರ ನಾಲಿಗೆಯ ಮೇಲೆ ಹೃದಯದ ತಳಮಳದಿಂದ ಹಿಡಿದು ಅನುಭಾವದ ಶಾಂತಸ್ಥಿತಿಯವರೆಗಿನ ಸ್ವಾತ್ಮ ಸಾಧನೆಯನ್ನು ಚಿತ್ತವು ಚಿತ್ರವಾನ್ನಾಗಿಸಿ ಮನದುಂಬಿ ಹಾರೈಸುವೆ.

ಸಾಹಿತ್ಯಾಸಕ್ತರು ಪುಸ್ತಕ ಬೇಕಿದ್ದಲ್ಲಿ ಮೊಬೈಲ್ ನಂಬರ್ 9900925529 ಮೂಲಕ ಶ್ರೀ ಸಿ ಜಿ ವೆಂಕಟೇಶ್ವರ್ ರವರನ್ನು ನೇರವಾಗಿ ಸಂಪರ್ಕಿಸಬಹುದು.

ತುಂಕುರು ಸಂಕೇತ್

Related post