ಸುಂದರ ಜೀವನದ ಉದ್ದೇಶ
ನಮ್ಮ ಜೀವನದ ಉದ್ದೇಶ ಏನು? ಮುಕುಂದಾನಂದ ಸ್ವಾಮೀಜಿಗಳು ಅವರ ಒಂದು ಪ್ರವಚನದಲ್ಲಿ ಜೀವನದ ಉದ್ದೇಶದ ಬಗ್ಗೆ ತಮ್ಮ ಅನಿಸಿಕೆಯನ್ನು ಹಂಚಿಕೊಳ್ಳುತ್ತಾರೆ.
ಒಮ್ಮೆ ಒಬ್ಬ ಕಾರಿನ ಚಾಲಕ ಜಂಕ್ಷನಿನಲ್ಲಿ ನಿಂತಿರುವ ಹಿರಿಯ ದಾರಿಹೋಕ ವ್ಯಕ್ತಿಯಲ್ಲಿ, “ಈ ದಾರಿ ನನ್ನನ್ನು ಎಲ್ಲಿ ಕರೆದುಕೊಂಡು ಹೋಗುತ್ತದೆ ಎಂದು ಕೇಳುತ್ತಾರೆ”. ಅದಕ್ಕೆ ಆ ಹಿರಿಯ, “ನೀವು ಎಲ್ಲಿಗೆ ಹೋಗಬೇಕು” ಎಂದು ಕೇಳುತ್ತಾರೆ. ಅದಕ್ಕೆ ಆತ ನಿರ್ದಿಷ್ಟವಾಗಿ “ಇಂತಹುದೇ ಕಡೆ ಎಂಬುದು ಇಲ್ಲ”, ಅಂತ ಹೇಳಿದಾಗ ಹಿರಿಯ ವ್ಯಕ್ತಿ “ಹಾಗಾದರೆ ಏತಕ್ಕಾಗಿ ಕೇಳಿದೆ?”. ನಿನಗೆ ಅದು ಯಾವ ವ್ಯತ್ಯಾಸವನ್ನು ಮಾಡುತ್ತದೆ?. ಎನ್ನುತ್ತಾರೆ.
ಅಂತೆಯೇ ನಾವು ಜೀವನದಲ್ಲಿ ಓಡುತ್ತಲೇ ಇದ್ದೇವೆ. ಯೋಚಿಸುವುದನ್ನು ನಿಲ್ಲಿಸಿದ್ದೇವೆ. ನಾವು ಯಾವುದಕ್ಕಾಗಿ ಓದುತ್ತಿದ್ದೇವೆ. ಮತ್ತು ನಮಗಾಗಿ ನಾವು ಯೋಚಿಸಿದ ಗುರಿಗಳು ನಮಗೆ ಉಪಯುಕ್ತವಾಗಿದೆಯಾ ಅಥವಾ ಇಲ್ಲವೇ? ಎಂಬುದರ ಅರಿವಿರುವುದಿಲ್ಲ.
ಜೀವನದಲ್ಲಿ ಪ್ರತೀ ಘಳಿಗೆ ದುಡ್ಡು ಮಾಡುವ ಯೋಚನೆಯಲ್ಲೇ ಇರುತ್ತೇವೆ. ಬೇರೆಯವರೊಂದಿಗೆ ಹೋಲಿಕೆ ಮಾಡಿಕೊಂಡು ಸ್ಪರ್ಧೆಯಲ್ಲೇ ನಮ್ಮ ಅರ್ಧ ಜೀವನವನ್ನು ನೆಮ್ಮದಿ ಕಳೆದುಕೊಂಡು ಬದುಕುತ್ತೇವೆ. ಹಾಗೆಯೇ ಬ್ಯಾಂಕ್ ಬ್ಯಾಲೆನ್ಸ್, ಆಸ್ತಿ, ಪ್ರಾಪಂಚಿಕ ಸೊತ್ತುಗಳನ್ನು ವೃದ್ಧಿಸಿಕೊಳ್ಳಲು ಒಂದಲ್ಲ ಒಂದು ದಿನ ಇವುಗಳನ್ನೆಲ್ಲ ಬಿಟ್ಟು ಹೋಗಬೇಕು ಎಂದು ಯೋಚಿಸದೆ ಶ್ರಮ ಪಡುತ್ತಲೇ ಇರುತ್ತೇವೆ. ನಮ್ಮ ಜೀವನದ ಗುರಿ ಏನಾಗಿರಬೇಕು ಎಂದು ಎಂದಾದರೂ ಯೋಚಿಸಿದ್ದೇವೆಯೇ?. ಸ್ವಾಮೀಜಿಗಳು ತಮ್ಮ ಒಂದು ಗ್ರಂಥದಲ್ಲಿ ಅವರ ಗುರುಗಳ ಮಾತನ್ನು ಉಲ್ಲೇಖಿಸಿದ್ದಾರೆ ಅದೇನೆಂದರೆ,” ನಮ್ಮ ಜೀವನ ಹೇಗಿರಬೇಕೆಂದರೆ ಯಾತ್ರಿಕನು ಹೋಟೆಲಿನ ರೂಮಿನಲ್ಲಿ ವಾಸ್ತವ್ಯ ಹೂಡುತ್ತಾನೆ. ಬೆಳಗ್ಗೆ ಎದ್ದು ತೆರಳುತ್ತಾನೆ. ಅಲ್ಲಿ ಅವನಿಗೆ ವಿಶ್ರಾಂತಿಯೊಂದೇ ಅವನ ಆದ್ಯತೆ ಆಗಿರುತ್ತದೆ. ಅವನು ಹೋಟೆಲಿನ ಸೌಂದರ್ಯದ ಬಗ್ಗೆ ಕಾಳಜಿ ವಹಿಸುವುದಿಲ್ಲ. ಜೀವನದಲ್ಲಿ ನಾವು ಅಷ್ಟೇ ತಪ್ಪಾದ ತಿಳುವಳಿಕೆಯಲ್ಲಿ ಬದುಕು ತಾತ್ಕಾಲಿಕ ಅಂತ ಗೊತ್ತಿದ್ದರೂ ತಾತ್ಕಾಲಿಕ ವಿಷಯಗಳನ್ನು ಶಾಶ್ವತವೆಂದು ಭಾವಿಸಬಾರದು.
ನಾವು ಏನೇ ಮಾಡುವುದಿದ್ದರೂ ಜೀವನಕ್ಕೆ ಒಂದು ಅರ್ಥವಿರಬೇಕು. ಹೌದು, ಜೀವನದಲ್ಲಿ ಆರ್ಥಿಕವಾಗಿ ಸದೃಢತೆ ಇರಬೇಕು. ಹಾಗಂತ ಹಣ ಸಂಪಾದನೆಯೊಂದೇ ಜೀವನದ ಉದ್ದೇಶವಿರಬಾರದು. ಒಂದು ವೇಳೆ ಹಣವೇ ನಮ್ಮ ಜೀವನದಲ್ಲಿ ಪ್ರಾಮುಖ್ಯತೆ ಪಡೆದಾಗ ಮುಂದೊಂದು ದಿನ ನಮ್ಮ ಜೀವನದ ಬಗ್ಗೆ ನಮಗೆ ಬೇಸರ ಮೂಡಬಹುದು. ಪ್ರತೀ ಕ್ಷಣ ಕ್ಷಣಕ್ಕೂ ನಮ್ಮ ಆಯಸ್ಸು ಕ್ಷೀಣಿಸುತ್ತಾ ಸಾಗುತ್ತದೆ ಎಂಬುವುದು ತಿಳಿದಿರಬೇಕು. ಮರಳಿ ಹೋದ ಸಮಯಯನ್ನು ಮರಳಿ ಪಡೆಯಲು ಸಾಧ್ಯವಿಲ್ಲ. ಹಾಗಾಗಿ ನಾವು ಮಾಡುವ ಪ್ರತೀ ಕೆಲಸ ನಮಗೆ ಸಂತೋಷವನ್ನು ನೀಡುತ್ತಿದೆಯೇ ಎಂಬುವುದು ಗಮನದಲ್ಲಿ ಇಡಬೇಕು. ಮುಂದಿನ ಜನ್ಮ ಇದೆಯೋ ಇಲ್ಲವೊ ಗೊತ್ತಿಲ್ಲ. ದೇವರು ಕೊಟ್ಟಿರುವ ಈ ಅಮೂಲ್ಯವಾದ ಜೀವನಕ್ಕೆ ದೇವರು ವಿವೇಚನಾ ಶಕ್ತಿಯನ್ನು ನೀಡಿದ್ದಾನೆ. ನಮ್ಮ ಜೀವನದ ಉದ್ದೇಶ ಏನು? ಅದನ್ನು ಸಂತೋಷದಿಂದ ಇಟ್ಟುಕೊಳ್ಳಲು ಹಲವಾರು ದಾರಿಗಳಿವೆ. ನಮ್ಮ ಮನಸ್ಸನ್ನು ತೆರೆದಿಟ್ಟು ಆ ದಾರಿಯನ್ನು ಹುಡುಕಲು ಪ್ರಯತ್ನಿಸಬೇಕು. ಜೀವನಕ್ಕೆ ಒಂದು ಗುರಿಯಿರಲಿ. ಆ ಗುರಿಯಲ್ಲಿ ನಮ್ಮ ಸಂತೋಷವಿರಲಿ. ನೆಮ್ಮದಿಯಿರಲಿ. ನಾವು ಸಂತೋಷವಾಗಿದ್ದು ಬೇರೆಯವರನ್ನು ಸಂತೋಷವಾಗಿರಿಸೋಣ.
ನಿನ್ನೆ ನಿನ್ನೆಗೆ. ನಾಳೆ ನಾಳೆಗೆ. ಇಂದು ನಮ್ಮದೇ ಚಿಂತೆ ಏತಕೆ? ಎಂಬಂತೆ ಬದುಕುವ ಜೀವನ ನಮ್ಮದಾಗಲಿ. ನಿನ್ನೆಗಳ ಮರೆತು ನಾಳೆ ಏನೆಂಬ ಚಿಂತೆಯಿಲ್ಲದೆ ಇವತ್ತಿನ ದಿನವನ್ನು ಸಂಪೂರ್ಣವಾಗಿ ಬದುಕುವ ಜೀವನ ನಮ್ಮದಾಗಲಿ.
ಸೌಮ್ಯ ನಾರಾಯಣ್