ಸುಂದರ ಸೂರಕ್ಕಿಗಳು

ಸುಂದರ ಸೂರಕ್ಕಿಗಳು

ನಗರ ಪ್ರದೇಶದ ಮನೆಗಳಲ್ಲಿ ಬೆಳಿಗ್ಗೆ ಎದ್ದ ಕೂಡಲೇ ಕೇಳುವುದು ನಮ್ಮ ಹಾಗು ಅಕ್ಕ ಪಕ್ಕದ ಮನೆಗಳಲ್ಲಿನ ಕರ್ಕಶವಾದ ನೀರೆತ್ತುವ ಮೋಟಾರ್ ಶಬ್ದಗಳೇ, ಹಳ್ಳಿಗಳಲ್ಲಿನ ಮುಂಜಾವಿನ ಸೊಗಡೇ ಬೇರೆ. ಹಾಲು ತರುವ ನೆಪದಲ್ಲಿ ಬೆಳಿಗ್ಗೆ ಮನೆಯಿಂದ ಹೊರಡುವ ನನಗೆ ಚಿಲಿಪಿಲಿ, ಟ್ವೀಟ್ ಟ್ವೀಟ್ ಶಬ್ದ ಕೇಳಿಸಿಕೊಳ್ಳಲು ಸ್ವಲ್ಪ ದೂರ ನೆಡೆಯಬೇಕು. ನಮ್ಮ ರಸ್ತೆ ತಿರುವಿನ ಮನೆಯ ಕಾಂಪೌಂಡ್ ನಲ್ಲಿ ದಾಸವಳ ಹಾಗು ಗಣಗಳೆ ಗಿಡಗಳನ್ನು ಹಾಕಿಕೊಂಡಿದ್ದಾರೆ. ಅಲ್ಲಿ ಸ್ವಲ್ಪ ಹೊತ್ತು ನಿಂತು ತಲೆ ಎತ್ತಿ ದಿಟ್ಟಿಸಿದರೆ ಚೀಕ್ ಚೀಕ್, ಟೀವ್ ಟೀವ್ ಎಂದು ಶಬ್ದ ಮಾತ್ರ ಕೇಳಿಸುತ್ತದೆಯೇ ಹೊರತು ಶಬ್ದ ಮಾಡುತ್ತಿರುವ ಆಕೃತಿಯನ್ನು ಹುಡುಕುವುದು ಬರಿಗಣ್ಣಿಗೆ ಬಹು ತ್ರಾಸಾದಾಯಕದ ಕೆಲಸ. ಕೊನೆಗೂ ಕಷ್ಟ ಪಟ್ಟು ಪತ್ತೆ ಮಾಡಿದರೆ ಪುಟ್ಟ ಪುಟ್ಟ ಸೂರಕ್ಕಿಗಳೇ ಅವುಗಳ ಸ್ವರ .ಸಂಯೋಜಕರು ಎಂದು ತಿಳಿಯಿತು.

“ಸನ್ ಬರ್ಡ್” ಕನ್ನಡದಲ್ಲಿ “ಸೂರಕ್ಕಿ” ಎಂದು ಕರೆಯುವ ಈ ಪುಟ್ಟ ಹಕ್ಕಿಗಳು “ನೆಕ್ಟರಿನಿಡೇ” ಎಂಬ ಪಕ್ಷಿ ಕುಲಕ್ಕೆ ಸೇರಿದವು. ಪ್ರಪಂಚದಲ್ಲೇ ಪುಟ್ಟ ಹಕ್ಕಿ ಹಮಿಂಗ್ ಬರ್ಡ್ ಬಗ್ಗೆ ಕೇಳಿರುತ್ತೀರ! ಆದರೆ ಅದು ನಮ್ಮ ಬಾರತದಲ್ಲಿ ಇಲ್ಲ. ಸೂರಕ್ಕಿ ಗಾತ್ರದಲ್ಲಿ ಹಮಿಂಗ್ ಬರ್ಡ್ ಗಿಂತ ಸ್ವಲ್ಪ ಕಡಿಮೆ ಅಷ್ಟೆ. ಪ್ರಪಂಚದಲ್ಲಿ 145 ವಿವಿಧ ಜಾತಿಯ ಸೂರಕ್ಕಿಗಳನ್ನು ಪಕ್ಷಿತಜ್ಞರು ಗುರುತಿಸಿದ್ದಾರೆ. ನಮ್ಮ ಭಾರತದಲ್ಲಿ, 15 ಬಗೆಯ ಸೂರಕ್ಕಿಗಳಿವೆಯಾದರೂ, ಕೆನ್ನೀಲಿ ಸೂರಕ್ಕಿ (ಪರ್ಪಲ್‍ ಸನ್‍ಬರ್ಡ್), ಕೆನ್ನೀಲಿ ಪೃಷ್ಠದ ಸೂರಕ್ಕಿ (ಪರ್ಪಲ್ ರಮ್ಪಡ್‍ ಸನ್‍ಬರ್ಡ್‍), ಉದ್ದ ಕೊಕ್ಕಿನ ಸೂರಕ್ಕಿ (ಲೋಟನ್ ಸನ್‍ಬರ್ಡ್‍) ಮುಖ್ಯವಾದವು.

ಮಕರಂದ ಹೀರುವ ಪಕ್ಷಿಗಳೆಂದೇ ಗುರುತಿಸಲಾಗುವ ಸೂರಕ್ಕಿಗಳ ವಿಶಿಷ್ಟತೆಯೆಂದರೆ ಅದರ ಉದದ್ದ ಬಾಗಿದ ಕೊಕ್ಕುಗಳು. ತಮ್ಮ ಚೂಪಾದ ಉದ್ದದ ಕೊಕ್ಕಿನ ಸಹಾಯದಿಂದ ಹೂವಿನ ಆಳದಲ್ಲಿರುವ ಮಕರಂದವನ್ನು ಹೀರುವ ಈ ಪುಟ್ಟ ಸೂರಕ್ಕಿಗಳು ಮಕರಂದವನಷ್ಟೇ ಹೀರದೆ ಹೂವಗಳ ಪರಾಗ ಸ್ಪರ್ಶವನ್ನು ಸಹ ಮಾಡಿ ನಿಸರ್ಗದಲ್ಲಿ ತಮ್ಮ ಕೊಡುಗೆಯನ್ನು ಸಹ ನೀಡುತ್ತವೆ. ಮಕರಂದವನ್ನು ಹೀರುವುದರ ಜೊತೆಗೆ ಕೆಲ ಸೂರಕ್ಕಿಗಳು ಹಣ್ಣುಗಳನ್ನು ಸಹ ತಿನ್ನುವುದರಿಂದ ಬೀಜ ಪ್ರಸರಣ ಕಾರ್ಯದಲ್ಲೂ ತೊಡಗಿಕೊಂಡು ಕಾಡುಗಳು ಬೆಳೆಯುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ.

ಜನವರಿಯಿಂದ ಜೂಲೈ ತಿಂಗಳು ಸೂರಕ್ಕಿಗಳ ಸಂತಾನೋತ್ಪತಿಯ ಸಮಯ. ತಮ್ಮ ಸಂಗಾತಿಗಳನ್ನು ಆರಿಸಿಕೊಂಡು ಒಣಗಿದ ಎಲೆ ಮತ್ತಿತ್ತರ ಮೃದು ಪದಾರ್ಥಗಳಿಂದ ಗೂಡು ಕಟ್ಟಲು ಅನುವಾಗುವ ಇವು ಗಾತ್ರದಲ್ಲಿ ಪುಟ್ಟದಾದರೂ ತುಸು ದೊಡ್ಡದು ಎನ್ನಬಹುದಾದ ಗೂಡುಗಳನ್ನು ಎಲೆಗಳ ಮರೆಯಲ್ಲಿ, ನೇತಾಡುವ ಗಿಡಗಳ ಕೊಂಬೆಗಳಲ್ಲಿ, ಗಿಡಗಳ ಪೊದೆಗಳಲ್ಲಿ ಕಟ್ಟುತ್ತವೆ. ಇವುಗಳು ಕಟ್ಟುವ ಗೂಡುಗಳು ಗೀಜಗದ ಹಕ್ಕಿಯ ತೂಗಾಡುವ ಗೂಡಿನ ಮಾದರಿಯಲ್ಲೇ ಇದ್ದರು ಅವುಗಳಷ್ಟು ಆಕರ್ಷಕವಾಗಿರದೆ ಪರಭಕ್ಷಕಗಳಿಗೆ ಸುಲಭವಾಗಿ ಸಿಕ್ಕುವಷ್ಟು ಎತ್ತರದಲ್ಲಿ ಕಟ್ಟಿಬಿಡುತ್ತದೆ ಎನ್ನುವುದೇ ದುಃಖಕರ. ಆದರೂ ಮೊಟ್ಟೆಗಳ ರಕ್ಷಣೆಯಲ್ಲಿ ಇವು ಆಕ್ರಮಣಕಾರಿ, ಗುಂಪು ಗುಂಪಾಗಿ ಮರಿಗಳನ್ನು ಕಬಳಿಸಲು ಬಂದ ಗೂಬೆಗಳನ್ನೇ ಓಡಿಸಿದ ಉದಾಹರಣೆಗಳಿವೆ. ತಾವು ಕಟ್ಟಿದ ಗೂಡನ್ನು ಕಸ ಇರಲು ಬಿಡದೆ ನಿತ್ಯ ಸ್ವಚ್ಛವಾಗಿಟ್ಟಿಕೊಳ್ಳುವುದು ಇವುಗಳ ಮತ್ತೊಂದು ಮೆಚ್ಚುವ ಗುಣ.

ಒಮ್ಮೆಗೆ ಒಂದರಿಂದ ನಾಲ್ಕು ಮೊಟ್ಟೆಗಳವರೆಗೂ ಇಡುವ ಹೆಣ್ಣು ಸೂರಕ್ಕಿಗಳು 15 ರಿಂದ ದಿನಗಳ ಕಾಲ ಮೊಟ್ಟೆಗಳಿಗೆ ಕಾವನ್ನು ಕೊಡುತ್ತವೆ. ಗಂಡು ಹಕ್ಕಿಗಳು ಸ್ವಲ್ಪ ಸೋಂಬೇರಿ ಸ್ವಭಾವದವು ಆದರೆ ಕಾವು ಕೊಡುವ ಹೆಣ್ಣು ಹಕ್ಕಿಗಳನ್ನು ಪ್ರೀತಿಯಿಂದ ಉತ್ತೇಜಿಸಿ ಗೊಡುಗಳನ್ನು ಇತರೆ ಪರಭಕ್ಷಕಗಳಿಂದ ಕಾಪಾಡಿಕೊಳ್ಳಲು ಆಕ್ರಮಣಕಾರಿಯಾಗಿ ಕಾಯ್ದು ಮೊಟ್ಟೆಗಳು ಹೊರಬರುವಲ್ಲಿ ಸಹಾಯ ಮಾಡುತ್ತವೆ. ವಸಂತ ಋತುವಿನಲ್ಲಿ ಸೂರಕ್ಕಿಗಳ ಮೈ ಬಣ್ಣ ದಟ್ಟ ನೇರಳೆ ಬಣ್ಣಕ್ಕೆ ಬದಲಾಯಿಸುವುದು ಇದರ ಮತ್ತೊಂದು ವಿಶೇಷತೆ. ಗಂಡು ಹಕ್ಕಿಗಳ ರೆಕ್ಕೆಗಳು ದಟ್ಟ ನೀಲಿ ಬಣ್ಣದಿಂದ ಹೊಳಪಿನಿಂದ ಕೊರೈಸಿದರೆ ಎದೆಯ ಭಾಗ ಮಾತ್ರ ಕಂದು ಬಣ್ಣದಲ್ಲಿ ಕಾಣುತ್ತದೆ.

ಹಮಿಂಗ್ ಬರ್ಡ್ ನಂತರ ಪುಟ್ಟ ಹಕ್ಕಿಗಳೆಂದರೆ ಸೂರಕ್ಕಿಗಳೇ. ನಮ್ಮ ಬೆಟ್ಟಿನ ಗಾತ್ರದಿಂದ ನಮ್ಮ ಕೈ ಗಾತ್ರಕ್ಕೂ ಕಡಿಮೆ ಇರುವ ಈ ಪುಟ್ಟ ಹಕ್ಕಿಗಳು ಗಾತ್ರದಲ್ಲಿ ೪ ಗ್ರಾಂ ನಿಂದ ಹೆಚ್ಚೆಂದರೆ ೪೫ ಗ್ರಾಂ ನಷ್ಟು ಮಾತ್ರ ತೂಗುತ್ತವೆ. ಇವುಗಳು ಅದೆಷ್ಟು ಕ್ರಿಯಾಶೀಲತೆಯಿಂದ ಇರುತ್ತವೆಂದರೆ ತಮ್ಮ ಹಗುರ ಮೈ ಕಾರಣದಿಂದಾಗಿ ಬಹಳ ವೇಗದಲ್ಲಿ ಹೂವಿನಿಂದ ಹೂವಿಗೆ ಮಿಂಚಿನ ವೇಗದಲ್ಲಿ ಹಾರುತ್ತಿರುತ್ತವೆ. ಇವುಗಳನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯಲು ಛಾಯಾಗ್ರಾಹಕರು ಪಡುವ ಕಷ್ಟ ಒಂದೆರಡಲ್ಲ. ಇವುಗಳ ಆಯಸ್ಸು 16 ರಿಂದ 22 ವರ್ಷಗಳು.

ಬೆಳಗಿನ ವಾಕಿಂಗ್ ಹೋಗುವ ಸಮಯದಲ್ಲಿ ನಿಮ್ಮ ಅಕ್ಕ ಪಕ್ಕದ ಮನೆಗಳಲ್ಲಿ ಹೂದೋಟವಿದ್ದರೆ ಅಥವಾ ಪಾರ್ಕಿನಲ್ಲಿ ಸ್ವಲ್ಪ ಎಚ್ಚರ ವಹಿಸಿ ಸೂಕ್ಷ್ಮವಾಗಿ ಅವುಗಳು ಮಾಡುವ ಸದ್ದಿನಿಂದ ಇವುಗಳನ್ನು ಪತ್ತೆ ಹಚ್ಚಬಹುದು. ಇವುಗಳ ಸಂಗೀತ ಗೋಷ್ಠಿ ಬೆಳಗ್ಗೆಯಿಂದಲೇ ಶುರುವಾಗುವ ಕಾರಣ ತಮ್ಮ ಪುಟ್ಟ ಮಕ್ಕಳನ್ನು ಹೆಬ್ಬಿಸಿ ಅವುಗಳಿರುವ ಜಾಗ ಪತ್ತೆ ಹಚ್ಚಿ ತೋರಿಸಿ ಮಕ್ಕಳು ಖುಷಿ ಪಡುವುದನ್ನು ನೀವೂ ನೋಡಿ ಆನಂದಿಸಿ. ಮಕ್ಕಳಿಗೆ ಹೀಗಿನಿಂದಲೇ ಪಕ್ಷಿಗಳ ಬಗ್ಗೆ ಅರಿವು ಮೂಡಿಸಿ.

ಚಂದ್ರಶೇಖರ್ ಕುಲಗಾಣ

Related post

Leave a Reply

Your email address will not be published. Required fields are marked *