ಸುರಕ್ಷಾ ಜಾಗೃತಿ – 5
ನಮ್ಮ ಸುರಕ್ಷೆಯ ಬಗ್ಗೆ ತಿಳಿದುಕೊಳ್ಳಬೇಕಾದಂತಹ ಅಂಶಗಳು

ಆಟಗಳ ಸಹಾಯದಿಂದ ಹೇಗೆ ನಾವು ಆಪತ್ತಿನ ಸಮಯದಲ್ಲಿ ನಮ್ಮನ್ನು ನಾವು ರಕ್ಷಿಸಿಕೊಳ್ಳಬಹುದು ಅಂತ ತಿಳಿದುಕೊಂಡಿದ್ದೇವೆ. ಹಾಗೆಯೇ ಈ ಅಂಕಣದಲ್ಲಿ ನಾವು ಆಪತ್ತಿಗೆ ಪೂರಕವಾದ ನಮ್ಮಲ್ಲಿನ ಕೆಲವೊಂದು ದೈನಂದಿನ ವ್ಯವಹಾರಗಳು / ಆಚರಣೆಗಳ ಬಗ್ಗೆ ಸ್ವಲ್ಪ ಬೆಳಕನ್ನು ಚೆಲ್ಲೋಣವೇ?

ನಾವೆಲ್ಲರೂ ನಮ್ಮ ದೈನಂದಿನ ವ್ಯವಹಾರಗಳಲ್ಲಿ ಹೇಗೆ ನಮ್ಮನ್ನು ನಾವು ಪ್ರದರ್ಶಿಸಬೇಕು? ಹೇಗೆ ವ್ಯವಹರಿಸಬೇಕು? ಹೇಗೆ ನಡೆದುಕೊಳ್ಳಬೇಕು? ಈ ಎಲ್ಲದರಲ್ಲೂ ಎಲ್ಲರಿಗೂ ತಮ್ಮದೇ ಆದ ಸ್ವಾತಂತ್ರ್ಯವಿದೆ. ಯಾರೂ ಕೂಡ ಯಾರ ಮೇಲೂ ಯಾವುದೇ ರೀತಿಯಾದಂತಹ ಕಟ್ಟುಪಾಡು ಅಥವಾ ಬಲವಂತವನ್ನು ಮಾಡುವಂತಿಲ್ಲ. ಹಾಗಂತ ನಾವು ಏನು ಬೇಕಾದರೂ ಮಾಡಬಹುದು ಅಂತ ಮುಂದುವರೆದು ನಡೆಯುವುದರಿಂದ ಕೆಲವೊಮ್ಮೆ ಅನಗತ್ಯವಾಗಿ ಆಪತ್ತನ್ನು ನಮ್ಮ ಮೈಮೇಲೆ ನಾವೇ ಎಳೆದುಕೊಳ್ಳುತ್ತೇವೆ ಮತ್ತು ಎಳೆದುಕೊಳ್ಳುತ್ತಿದ್ದೇವೆ.

ಹಾಗಾದರೆ ಆಪತ್ತಿಗೆ ಪ್ರೇರೇಪಿಸುತ್ತಿರುವಂತಹ ಅಥವಾ ಪೂರಕವಾಗಿರುವಂತಹ ಕೆಲವೊಂದು ಕಾರಗಳನ್ನು ತಿಳಿಯೋಣವೇ? ಅವುಗಳೆಂದರೆ :- ಅಲಂಕಾರ, ಅಮಲು, ಆಡಂಬರ, ಅಹಂಕಾರ, ಅತಿರೇಕ, ಅಧಿಕಪ್ರಸಂಗ, ಅಪಮಾನ/ಅಪಹಾಸ್ಯ, ಅಪರಿಚಿತ, ಅವತಾರ, ಅವಸರ, ಅರಿಷಡ್ವರ್ಗ, ಆಲಸ್ಯ,..ಇತ್ಯಾದಿ…

ಈ ಪದಗಳನ್ನು ಓದುವಾಗ ನಮಗೆ ಇದು ಹೇಗೆ ಆಪತ್ತನ್ನು ಅಯಸ್ಕಾಂತದಂತೆ ಆಕರ್ಷಿಸುತ್ತದೆ ಅಂತ ಆಲೋಚನೆ ಮೂಡುತ್ತದೆ. ಹೌದು ಯಾವುದೇ ಆದರೂ ಅತಿಯಾದರೆ ಅದು ಆಪತ್ತು. ಅತಿಯಾದ ಅಮೃತವೂ ವಿಷಕ್ಕೆ ಸಮ ಅಂತ ಓದಿರುವುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು. ಕೆಲವರಿಗೆ ಇದರಲ್ಲಿ ಕೆಲವೊಂದರ ಅನುಭವವೂ ಆಗಿರಲೂಬಹುದು.
ಹಾಗಾದರೆ ಒಂದೊಂದು ಪದಗಳ ಬಗ್ಗೆ ತಿಳಿದುಕೊಳ್ಳುತ್ತ ಹೋಗೋಣ:

ಅಲಂಕಾರ ಇಲ್ಲಿ ನಾನು ಯಾರನ್ನೂ ನೋಯಿಸುತ್ತಿಲ್ಲ ಬದಲಾಗಿ ಆಪತ್ತಿನ ಅರಿವನ್ನು ಮೂಡಿಸುವ ಪ್ರಯತ್ನವನ್ನು ಮಾಡುತ್ತಿದ್ದೇನೆ ಅಷ್ಟೇ. ಅಲಂಕಾರ ಎಲ್ಲರೂ ಇಷ್ಟ ಪಡುವಂತಹ ವಿಷಯ. ಅದರಲ್ಲೂ ಮುಖ್ಯವಾಗಿ ಹೆಣ್ಣುಮಕ್ಕಳು ಅಲಂಕಾರ ಪ್ರಿಯರು. ಇತ್ತೀಚಿನ ಬೆಳವಣಿಗೆಗಳನ್ನು ಗಮನಿಸಿದಾಗ ನಾವು ಒಂದು ವಿಚಾರವನ್ನು ಬಹಳ ಸೂಕ್ಷ್ಮವಾಗಿ ಗಮನಿಸಿದರೆ ಈ ಅಲಂಕಾರ ಅಗತ್ಯಕ್ಕಿಂತಲೂ ಜಾಸ್ತಿ ಇದೆ ಅಂತ ಅನಿಸುವುದಿಲ್ಲವೇ? ತೋರ್ಪಡಿಕೆಯ ಅಲಂಕಾರ ಅನಗತ್ಯವಾಗಿ ಆಪತ್ತನ್ನು ಬಳಿಗೆ ಕರೆದು ನಿಲ್ಲಿಸುತ್ತದೆ. ಹಾಗಾಗಿ ಮಿತವಾದ ಹಿತವಾದ ಅಲಂಕಾರ ಒಳಿತು ಅಂತ ತಿಳಿದು ಅದರಂತೆ ನಡೆದುಕೊಳ್ಳುವುದು ಒಳಿತು. ಅನಗತ್ಯವಾಗಿ ಆಭರಣಗಳನ್ನು ಧರಿಸಿಕೊಂಡು ಅಲಂಕಾರ ಮಾಡಿ ಪ್ರದರ್ಶಿಸುವುದರಿಂದ ಸುಮ್ಮನೇ ಕಳ್ಳಕಾಕರನ್ನು ಬಳಿಗೆ ಆಕರ್ಷಿಸಿಕೊಂಡು ಆಪತ್ತನ್ನು ಬಳಿಗೆ ಸೆಳೆದುಕೊಳ್ಳುತ್ತೇವೆ.

ಅಮಲು ಸಂಸ್ಕಾರದ ಕೊರತೆಯಿಂದ ಇಂದಿನ ಯುವ ಪೀಳಿಗೆ ಈ ಅಮಲಿಗೆ ಗುಲಾಮರಾಗಿದ್ದಾರೆ ಮತ್ತು ಇದಕ್ಕೆ ದಾಸರಾಗಿದ್ದಾರೆ. ಅಮಲೆಂಬುವುದು ವ್ಯಸನವಾಗಿರದೇ ವ್ಯಾಮೋಹವಾಗಿ ಪರಿವರ್ತನೆಗೊಂಡು ಇದೊಂದು ಪ್ರತಿಷ್ಠೆಯಾಗಿ ಮಾರ್ಪಟ್ಟಿದೆ. ಇಂದಿನ ಗಂಡಾಗಲೀ, ಹೆಣ್ಣಾಗಲಿ ಈ ಒಂದು ಪಿಡುಗಿಗೆ ತಮ್ಮನ್ನು ತಾವು ಅರ್ಪಿಸಿಕೊಂಡು ಇದರಿಂದ ಹಲವಾರು ಆಪತ್ತನ್ನು ತಮ್ಮ ಮೈಮೇಲೆ ತಾವೇ ಎಳೆದುಕೊಳ್ಳುತ್ತಿದ್ದಾರೆ.

ಆಡಂಬರ ಇಂದಿನ ಸಮಾಜದಲ್ಲಿ ಎಲ್ಲರಿಗೂ ತಮ್ಮ ಪ್ರತಿಷ್ಠೆಯನ್ನು ತೋರ್ಪಡಿಸುವುದೊಂದು ಹವ್ಯಾಸವಾಗಿ ಹೋಗಿದೆ. ಅನಗತ್ಯವಾಗಿ ತಮ್ಮ ಆಡಂಬರವನ್ನು ಪ್ರದರ್ಶಿಸುತ್ತಾರೆ. ಈ ಪ್ರದರ್ಶನದಿಂದ ಅವರುಗಳು ಹಲವಾರು ದುರುಳರ ಕಣ್ಣಿಗೆ ಎದ್ದು ಕಾಣುತ್ತಾರೆ. ಇವರ ಈ ಆಡಂಬರ ಕೆಲವೊಮ್ಮೆ ಇವರುಗಳಿಗೆ ಉರುಳಾಗುವ ಸಂಭವವೂ ಆಗಬಹುದು. ಯಾವ ಸಮಯದಲ್ಲಿ ಎಲ್ಲಿ ಎಷ್ಟು ಪ್ರಮಾಣದಲ್ಲಿ ಯಾರೊಂದಿಗೆ ಹೇಗೆ ತಮ್ಮ ಆಡಂಬರವನ್ನು ತೋರಿಸಿಕೊಳ್ಳಬೇಕೋ ಅಷ್ಟೇ ಅದನ್ನು ಪ್ರದರ್ಶಿಸಿ ಆಪತ್ತಿನಿಂದ ದೂರವಿರಬೇಕು.

ಅಹಂಕಾರ ಎಲ್ಲರಿಗೂ ತಮ್ಮ ತಮ್ಮ ಬಗ್ಗೆ ತಮ್ಮವರ ಬಗ್ಗೆ ಅತಿಯಾದ ಹೆಮ್ಮೆ ಇದ್ದೇ ಇರುತ್ತದೆ….ಅದರಲ್ಲಿ ತಪ್ಪಿಲ್ಲ. ಆದರೆ ಕೆಲವರಿಗೆ ಇದು ಇಷ್ಟವಾಗೋದಿಲ್ಲ. ಅವನು ಜಾಸ್ತಿ ಮೆರಿತಾ ಇದ್ದಾನೆ ಅವನಿಗೆ ಹೇಗಾದರೂ ಮಾಡಿ ಪಾಠ ಕಲಿಸಬೇಕು ಅಂತ ಹೊಂಚು ಹಾಕುವ ಸಂಭವವನ್ನು ತಳ್ಳಿಹಾಕುವಂತಿಲ್ಲ. ಹಾಗಾಗಿ ಇದರಲ್ಲಿ ನಾವುಗಳು ಕೊಂಚ ಜಾಗರೂಕರಾಗಿ ಇರಬೇಕಾಗುತ್ತದೆ.

ಅತಿರೇಕ ಕೆಲವೊಂದು ಸಂದರ್ಭದಲ್ಲಿ ನಾವು ನಮ್ಮ ಈ ಅತಿರೇಕ ವರ್ತನೆಯಿಂದ ಹಲವಾರು ಜನರ ಕೆಂಗಣ್ಣಿಗೆ ಒಳಗಾಗುತ್ತೇವೆ. ಹಾಗಾಗಿ ನಮ್ಮ ಈ ಅತಿರೇಕದ ವರ್ತನೆಗಳ ಮೇಲೆ ನಾವುಗಳು ತೀರ್ವವಾದಂತಹ ನಿಗವನ್ನು ಇಟ್ಟುಕೊಂಡು ಜನರೊಂದಿಗೆ ವ್ಯವಹರಿಸಬೇಕು.

ಅಧಿಕಪ್ರಸಂಗ ಕೆಲವೊಮ್ಮೆ ಅನಾವಶ್ಯಕವಾಗಿ ನಾವುಗಳು ಬೇಡದೇ ಇರುವ ವಿಚಾರಗಳ ಬಗ್ಗೆ ಮೂಗುತೂರಿಸಿ ಆಪತ್ತನ್ನು ನಮ್ಮ ಬಳಿಗೆ ನಾವೇ ಕರೆದುಕೊಂಡು ಬರುತ್ತಿದ್ದೇವೆ. ಈಗಂತೂ ವಿಪರೀತವಾದ ಸಮೂಹ ಮಾದ್ಯಮಗಳ ಬಳಕೆಯಿಂದಾಗಿ ಈ ಅಧಿಕಪ್ರಸಂಗದ ಅವಾಂತರಗಳಂತೂ ದಿನನಿತ್ಯ ಬೆಳಕಿಗೆ ಬರುತ್ತಿದೆ ಮತ್ತು ವಿಪರೀತವಾಗಿದೆ.

ಅಪಮಾನ/ಅಪಹಾಸ್ಯ ಅನಗತ್ಯವಾಗಿ ಇನ್ನೊಬ್ಬರನ್ನು ಸಾರ್ವಜನಿಕವಾಗಿ ಅಪಮಾನಗೊಳಿಸುವುದರಿಂದ ಮತ್ತು ಎಲ್ಲರ ಮುಂದೆ ಅಪಹಾಸ್ಯ ಮಾಡುವುದರಿಂದ ಕೆಲವೊಮ್ಮೆ ಆಪತ್ತಿನ ಖೆಡ್ಡಾವನ್ನು ನಾವೇ ತೋಡಿಕೊಳ್ಳುತ್ತೇವೆ. ನಮ್ಮಿಂದ ಅಪಮಾನಕ್ಕೊಳಗಾದ ಅಥವಾ ಅಪಹಾಸ್ಯಕ್ಕೀಡಾದ ವ್ಯಕ್ತಿ ಸೂಕ್ತ ಸಂದರ್ಭಕ್ಕಾಗಿ ಕಾದು ಕುಳಿತು ತನಗಾದ ಅಪಮಾನಕ್ಕೆ ಸೇಡು ತೀರಿಸಿಕೊಳ್ಳಲು ಹೊಂಚುಹಾಕುತ್ತಿರುತ್ತಾನೆ ಎಂಬುವುದನ್ನು ನಾವು ಮರೆಯಬಾರದು.

ಅಪರಿಚಿತ ಈ ಪದವೇ ಒಂದು ರೀತಿಯ ಕ್ಲಿಷ್ಟ ಪದವಾಗಿಬಿಟ್ಟಿದೆ. ಇತ್ತೀಚೆಗೆ ನಡೆದಂತಹ ಹಾಗೂ ನಡೆಯುತ್ತಿರುವಂತಹ ಯಾವುದೇ ಅಪರಾಧಗಳಾಗಿರಬಹುದು ಅದಕ್ಕೆ ಒಂದಿಲ್ಲ ಒಂದು ರೀತಿ ಈ ಅಪರಿಚಿತ ಪದ ತಳಕು ಹಾಕಿಕೊಂಡಿರುವುದನ್ನು ನಾವು ಹಲವಾರು ಪ್ರಸಂಗಗಳಲ್ಲಿ ಕಾಣಬಹುದಾಗಿದೆ. ಹಾಗಾಗಿ ನಾವು ಯಾರೊಂದಿಗೆ ವ್ಯವಹರಿಸುತ್ತೇವೋ ಅವರ ಪೂರ್ವಾಪರವನ್ನು ಸರಿಯಾಗಿ ತಿಳಿದುಕೊಂಡು ಅಂತಹವರೊಂದಿಗೆ ವ್ಯವಹರಿಸಬೇಕು ಅಥವಾ ಇಂತಹ ಅಪರಿಚಿತ ವ್ಯಕ್ತಿಗಳಿಂದ ದೂರವಿದ್ದು ಆಪತ್ತನ್ನು ದೂರವಿರಿಸಬೇಕು. ಅದು ಅಪರಿಚಿತ ವ್ಯಕ್ತಿಯೇ ಆಗಿರಬಹುದು ಅಥವಾ ಅಪರಿಚಿರ ದೂರವಾಣಿಯ ಕರೆಯೇ ಆಗಿರಬಹುದು ಅಥವಾ ಅಪರಿಚಿತ ವಸ್ತುವೇ ಆಗಿರಲೂಬಹುದು…

ಅವತಾರ ಅಲಂಕಾರದಂತೆ ಈ ಅವತಾರವೂ ಇತ್ತೀಚಿನ ದಿನಗಳಲ್ಲಿ ಅಪರಾಧಕ್ಕೆ ಹೂರಣವಿದ್ದಂತೆ. ನಾನು ಮೊದಲೇ ಹೇಳಿದಂತೆ ಎಲ್ಲರಿಗೂ ತಮ್ಮದೇ ಆದ ವಸ್ತ್ರ ಸಂಹಿತೆಯನ್ನು ಧರಿಸಿಕೊಳ್ಳುವಂತಹ ಪೂರ್ಣ ಸ್ವಾತಂತ್ರ್ಯವಿದೆ. ಹಾಗಂತ ಅತಿಯಾದ ತೋರ್ಪಡಿಕೆಯ ಅವತಾರಗಳು ಆಪತ್ತಿಗೆ ಎಡೆಮಾಡಿಕೊಡುತ್ತವೆ ಮತ್ತು ಮಾಡಿಕೊಟ್ಟಿವೆ. ಹಾಗಾಗಿ ನಮ್ಮ ನಮ್ಮ ಅವತಾರಗಳನ್ನು ನಮ್ಮವರ ಮುಂದೆ ನಮ್ಮ ಸಮುದಾಯದವರ ಮುಂದೆ ಆಥವಾ ನಮ್ಮ ಕುಟುಂಬ ಸಂಬಂಧಿಕರ ಮುಂದೆ ಪ್ರದರ್ಶಿಸಿ, ಸಮಾಜದ ಮುಂದೆ ಪ್ರದರ್ಶಿಸುವಾಗ ಕೊಂಚ ಎಚ್ಚರವಿರಲಿ ಎಂದಷ್ಟೇ ಪ್ರಾರ್ಥನೆ.

ಅವಸರ ಆಪತ್ತಿಗೆ ಅವಸರವೇ ಕಾರಣ. ಯಾವ ಸಂದರ್ಭವೇ ಇರಲಿ ಸಾವಕಾಶದಿಂದ ತಿಳಿದು ನಡೆದರೆ ಒಳಿತು. ಅವಸರದಿಂದ ಅರಿತುಕೊಳ್ಳದೇ ಮುನ್ನುಗ್ಗಿದರೆ ಆಪತ್ತು ಕಟ್ಟಿಟ್ಟ ಬುತ್ತಿ. ಹಾಗಾಗಿ ಯಾವುದೇ ಕೆಲಸವಾಗಿರಲಿ ಸಾವದಾನದಿಂದ ಮಾಡುವುದು ಕ್ಷೇಮ.

ಅರಿಷಡ್ವರ್ಗ ಮಾನವನಲ್ಲಿರುವ ಈ ಅರಿಷಡ್ವರ್ಗಗಳನ್ನು (ಕಾಮ, ಕ್ರೋಧ, ಮದ, ಮೋಹ, ಲೋಭ, ಮಾತ್ಸರ್ಯ) ನಿಯಂತ್ರಣದಲ್ಲಿಟ್ಟುಕೊಂಡಿರಬೇಕು. ಇವುಗಳು ಅತಿಯಾದರೆ ಆಪತ್ತು ಗ್ಯಾರಂಟಿ. ಯಾವುದೇ ಅಪರಾಧ ಕೃತ್ಯಗಳೇ ಆಗಿರಬಹುದು ಅವುಗಳನ್ನು ತನಿಖೆ ಮಾಡಿದಾಗ ಈ ಅರಿಷಡ್ವರ್ಗಗಳ ಪ್ರಭಾವದಿಂದಲೇ ಇಂತಹ ಅಪರಾಧ ಕೃತ್ಯಗಳು ನಡೆದಿರುವುದು ಅಂತ ಗೋಚರಿಸುತ್ತದೆ. ಎಲ್ಲಾ ಸಂದರ್ಭದಲ್ಲಿಯೂ ಈ ಯಾವುದಾದರೂ ಒಂದರಿಂದ ಅಂತಹ ಅಪರಾಧಗಳು ನಡೆದಿರುತ್ತವೆ. ಹಾಗಾಗಿ ಇವುಗಳ ನಿಯಂತ್ರಣ ಮಾಡುವುದು ತುಂಬಾ ಮುಖ್ಯವಾದ ವಿಚಾರ.

ಆಲಸ್ಯ ಇನ್ನು ಆಲಸ್ಯದ ಬಗ್ಗೆ ಹೇಳಬೇಕೆಂದರೆ ಈ ಒಂದು ಜಾಗೃತಿಯ ವಿಷಯವೇ ಒಂದು ರೀತಿಯ ಆಲಸ್ಯದ ವಿಷಯ. ನನಗೂ ಕೂಡ ನಾನು ಓದಬೇಕಾದರೆ ಈ ವಿಷಯಕ್ಕೆ ಅಷ್ಟಾಗಿ ಗಮನಕೊಡುತ್ತಿರಲಿಲ್ಲ. ಒಂದು ರೀತಿಯ ಆಲಸ್ಯ ವಿಷಯದ ಬಗ್ಗೆ. ಆದರೆ ಯಾವಾಗ ನನಗೆ ಈ ಆಲಸ್ಯದಿಂದಾಗಿ ನನ್ನ ನಿಜ ಜೀವನದಲ್ಲಿ ಆಪತ್ತಿನ, ಅಪಘಾತಗಳ ದರುಶನವಾಯಿತೋ ಆವಾಗ ಈ ಆಲಸ್ಯವನ್ನು ಬದಿಗಿಟ್ಟು ಆಪತ್ತಿನ ಬಗ್ಗೆ, ಅಪಘಾತಗಳ ಬಗ್ಗೆ ಹೆಚ್ಚಿನ ಓದನ್ನು ಓದಿಕೊಳ್ಳುತ್ತ ನನ್ನ ಅನುಭವವನ್ನು ಇದರೊಂದಿಗೆ ತಾಳೆಹಾಕುತ್ತ ಕೆಲವೊಂದು ವಿಚಾರಗಳನ್ನು ಮಂಥನ ಮಾಡುತ್ತ ನನಗೆ ತಿಳಿದದ್ದನ್ನು ಇತರರೊಂದಿಗೆ ಹಂಚಿಕೊಳ್ಳುತ್ತ ಮತ್ತು ಇತರರಿಂದ ತಿಳಿದುಕೊಳ್ಳುತ್ತ ಬಂದಿದ್ದೇನೆ. ಹಾಗಾಗಿ ಯಾವುದೇ ಸಮಯದಲ್ಲಾಗಲೀ ಆಲಸ್ಯವನ್ನು ಮಾಡದೇ ಆಪತ್ತಿನಿಂದ ಪಾರಾಗುವುದು ಬಹಳ ಮುಖ್ಯ.

ತಿಳಿದಿರುವ ವಿಚಾರವನ್ನು ನಿಮ್ಮೆಲ್ಲರ ಮುಂದಿಡುವ ಪ್ರಯತ್ನವನ್ನು ಮಾಡಿದ್ದೇನೆ.ಜಾಗೃತಿಯ ವಿಚಾರ ಪ್ರತಿಯೊಂದು ಸಂದರ್ಭದಲ್ಲಿಯೂ ಒಂದೇ ಆಗಿರುವುದಿಲ್ಲ.ಆಯಾ ಸಮಯ ಸಂದರ್ಭಕ್ಕೆ ಅನುಗುಣವಾಗಿ ನಾವು ನಮ್ಮ ಸಮಯ ಪ್ರಜ್ಞೆಯನ್ನು ತೋರಿ ಒದಗಿ ಬಂದಿರುವಂತಹ ಆಪತ್ತಿನಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳಬೇಕು….

ಮುಂದುವರೆಯುವುದು….

ಶ್ರೀನಿಧಿ ಹೊಸಬೆಟ್ಟು

Related post