ಸುರಕ್ಷಾ ಜಾಗೃತಿ
(ನಮ್ಮ ಸುರಕ್ಷೆಯ ಬಗ್ಗೆ ತಿಳಿದುಕೊಳ್ಳಬೇಕಾದ ಅಂಶಗಳು)
ರಕ್ಷಣೆ ಎನ್ನುವ ಪದವನ್ನು ಹೇಳುವಾಗಲೇ ಏನೋ ಒಂದು ತೃಪ್ತಿ, ಅಭಯ ಪ್ರಾಪ್ತಿ ಆದಂತಹ ಭಾವ ನಮ್ಮೊಳಗೆ ಮೂಡುತ್ತದೆ ಅಲ್ವಾ..? ಹಾಗಾದರೆ ಈ ರಕ್ಷಣೆ ನಮಗೆ ಹೇಗೆ ತಿಳಿಯಿತು? ರಕ್ಷಣೆ ಎನ್ನುವುದು ದೈವದತ್ತವಾಗಿ ಬಂದಿರುವಂತದ್ದೇ? ಇಂತಹ ಹಲವಾರು ಪ್ರಶ್ನೆಗಳು ಉದ್ಬವವಾಗುವುದು ಸಹಜ ಅಲ್ವೇ?…
ಭೂಮಿಯ ಉಗಮವಾದಾಗ ಎಲ್ಲಾ ಜಲಚರ, ಕ್ರಿಮಿಕೀಟಗಳು, ಸರೀಸೃಪಗಳು, ಉಭಯವಾಸಿಗಳು ನಂತರ ಪ್ರಾಣಿಸಂಕುಲಗಳು, ಪಕ್ಷಿಪ್ರಭೇದಗಳು ಪ್ರಕೃತಿಯಲ್ಲಿ ಜೀವನವನ್ನು ಕ್ರಮೇಣ ಆರಂಭಿಸಿದವು. ನಂತರ ಕಾಲಕ್ರಮೇಣ ಮಾನವನ ಜನ್ಮ ಉಂಟಾಯಿತು.
ಮಾನವನು ಕಲಿತುಕೊಂಡದ್ದೆಲ್ಲಾ ಈ ಪ್ರಕೃತಿ ಮತ್ತು ತನ್ನ ಸುತ್ತಮುತ್ತಲಿನ ಪರಿಸರದಿಂದಲೇ. ಹೊಟ್ಟೆಯ ಹಸಿವನ್ನು ನೀಗಿಸಲು ಗೆಡ್ಡೆ ಗೆಣಸು, ಸೊಪ್ಪು, ಹಣ್ಣು ಹಂಪಲನ್ನು ತಿನ್ನುವುದನ್ನು ಕಲಿತ. ನಂತರ ಹಸಿ ಮಾಂಸದ ಸೇವನೆಯನ್ನು ಕಲಿತುಕೊಂಡ. ಸಮಯ ಹೋದಂತೆ ಪ್ರಕೃತಿಯಲ್ಲುಂಟಾಗುವ ಕಾಡ್ಗಿಚ್ಚಿನ ಪ್ರಕ್ರಿಯೆಯಿಂದ ಬೆಂಕಿಯನ್ನು ಕಂಡುಕೊಂಡ, ಮಳೆ, ಚಳಿ, ಗಾಳಿಯಿಂದ ತನ್ನನ್ನು ತಾನು ರಕ್ಷಿಸಿಕೊಳ್ಳಲು ಪ್ರಾಣಿಗಳು ಹೇಗೆ ಬಿಲದೊಳಗೆ ಇಲ್ಲ ಪೊದೆಗಳೊಳಗೆ, ಗವಿಯೊಳಗೆ ಅವಿತುಕೊಳ್ಳುತ್ತಿದ್ದವೋ ಇದನ್ನು ಕಂಡು ಮಾನವನೂ ಅದನ್ನೇ ತಾನೂ ಅನುಕರಣೆ ಮಾಡಿಕೊಂಡು ಸೂರಿನ ನಿರ್ಮಾಣವನ್ನು ಮಾಡಿಕೊಂಡ.
ಕಾಡಿನಲ್ಲಿ ಬದುಕನ್ನು ಕಟ್ಟಿಕೊಂಡ ಮನುಜ ತನ್ನ ನೈಜ ಬುದ್ದಿವಂತಿಕೆಯನ್ನು ಬಳಸಿಕೊಳ್ಳುತ್ತಾ ಕಲಿಯಲು ಪ್ರಾರಂಭಿಸಿದ. ಸಾದು ಪ್ರಾಣಿಗಳು ತಮ್ಮನ್ನು ತಾವು ಕ್ರೂರ ಮೃಗಗಳಿಂದ ಹೇಗೆ ರಕ್ಷಿಸಿಕೊಳ್ಳುತ್ತಿದ್ದವು, ಅವುಗಳ ದೇಹರಚನೆ ಇವುಗಳ ವಿರುದ್ದ ಹೋರಾಡಲು ಹೇಗೆ ಮಾರ್ಪಾಡು ಹೊಂದಿದ್ದವು (ಉದಾಹರಣೆಗೆ ಕೊಂಬು, ಚರ್ಮ, ಮುಳ್ಳು,ಕೊಕ್ಕು,ಉಗುರು,ಚಿಪ್ಪು…)ಇವುಗಳನ್ನು ನೋಡುತ್ತ ತಾನೂ ಇಂತಹ ಆಯುಧಗಳನ್ನು ಪ್ರಕೃತಿಯಿಂದಲೇ ತಯಾರಿಸಿಕೊಂಡ ತನ್ನನ್ನು ತಾನು ರಕ್ಷಿಸಿಕೊಳ್ಳಲು….
ಹಾಗಾಗಿ ಈ ರಕ್ಷಣೆ ಎನ್ನುವಂತದ್ದು ದೈವದತ್ತವಾಗಿ ಬಂದದ್ದಲ್ಲ,ಪ್ರಕೃತಿದತ್ತವಾಗಿ ಬಳುವಳಿಯಾಗಿ ಪಡೆದದ್ದು…..ಮುಂದೆ ಕೆಲವೊಂದು ಜ್ವಾಲಾಮುಖಿಗಳು, ಚಂಡಮಾರುತಗಳು, ಪ್ರಕೃತಿ ವಿಕೋಪಗಳನ್ನು ಕಂಡು ಯಾವುದೋ ಅಗೋಚರ ಶಕ್ತಿ ಇರುವುದನ್ನು ಅರಿತು ಪ್ರಕೃತಿಯ ಈ ಶಕ್ತಿಗಳನ್ನು ಆರಾಧಿಸುತ್ತಾ ತನಗೆ ರಕ್ಷಣೆಯನ್ನು ಕಲ್ಪಿಸು ಅಂತ ಬೇಡಿಕೊಳ್ಳಲು ಶುರುಮಾಡಿದ…
ಹೀಗೆ ಸಾಗುತ್ತ ನಾಗರೀಕತೆಯ ಬೆಳವಣಿಗೆ ಉಂಟಾಗುತ್ತಾ ಹೋಗಲು ಮಾನವ ಒಂದು ಕಡೆಯಿಂದ ಇನ್ನೊಂದು ಕಡೆಗೆ ಅಲೆಮಾರಿಯಾಗಿ ಸಂಚರಿಸಲು ಪ್ರಾರಂಭಿಸಿದ. ತಾನು ಹೋದಲ್ಲೆಲ್ಲಾ ಒಂದೊಂದು ಗುಂಪುಗಳು, ಪಂಗಡಗಳು ಉಂಟಾಗುತ್ತ ಸಾಗಿತು. ಮುಂದೆ ಇವನಿಗೆ ಪ್ರಕೃತಿ, ಮೃಗಪಕ್ಷಿ ಇವುಗಳೊಂದಿಗೆ ಹೋರಾಡುವುದರ ಜೊತೆಗೆ ಇಂತಹ ಕೆಲವೊಂದು ಪಂಗಡಗಳಿಂದ ತನ್ನವರನ್ನು ತನ್ನ ಸಂಘ ಪರಿವಾರಗಳನ್ನು ರಕ್ಷಣೆ ಮಾಡುವ ಹೊಣೆಯೂ ಕೂಡಿಕೊಂಡಿತು.
ಪ್ರಕೃತಿದತ್ತವಾದ ಆಯುಧಗಳಿಂದ ತನ್ನನ್ನು ತನ್ನ ಪರಿವಾರದವರನ್ನು ರಕ್ಷಣೆ ಮಾಡಲು ಕಲಿತ ಮಾನವ ತನ್ನೊಂದಿಗೆ ಚೂಪಾದ ಕಲ್ಲಿನ ಆಯುಧ, ಮೊನಚಾದ ಮರದ ಈಟಿಯಂತಹ ಉಪಕರಣ, ಕಲ್ಲನ್ನು ದೂರಕ್ಕೆ ಹಾರಿಸುವಂತಹ ಸಲಕರಣೆ,ತದನಂತರ ಅದಿರಿನ ಅನ್ವೇಷಣೆ ಆದನಂತರ ಕತ್ತಿ, ಗುರಾಣಿ, ಬಿಲ್ಲು ಬಾಣ ವನ್ನು ಇಟ್ಟುಕೊಳ್ಳಲು ಶುರುಮಾಡಿದ. ಇವುಗಳ ಜೊತೆಗೆ ಬೆಂಕಿಯ ಪಂಜು, ಮರದ ಬಿಳಲುಗಳಿಂದ ಮಾಡಿದ ಬಲೆಗಳನ್ನು ಬಳಸಲು ಆರಂಭಿಸಿದ. ತಾನು ವಾಸಿಸುವ ಸೂರಿನ ಸುತ್ತಲೂ ರಕ್ಷಣೆಗಾಗಿ ಕಂದಕಗಳನ್ನು, ಬೇಲಿಗಳನ್ನು ನಿರ್ಮಾಣ ಮಾಡುವುದನ್ನು ಕಲಿತ.
ಹೀಗೆ ಪ್ರತಿಯೊಂದು ಹೆಜ್ಜೆಯಲ್ಲಿಯೂ ಮಾನವ ರಕ್ಷಣೆಯನ್ನು ಪ್ರಕೃತಿಯೊಂದಿಗೆ ಹೋರಾಡುತ್ತಲೇ ಪ್ರಕೃತಿಯಿಂದಲೇ ಕಲಿತುಕೊಂಡ. ಹವಾಮಾನದ ಬದಲಾವಣೆಯಿಂದ ತನ್ನನ್ನು ತಾನು ರಕ್ಷಿಸಿಕೊಳ್ಳಲು ಎಲೆ ಮತ್ತು ಬಳ್ಳಿಗಳಿಂದ ತನ್ನ ಬೆತ್ತಲೆ ದೇಹವನ್ನು ಮುಚ್ಚಿಕೊಳ್ಳಲು ಶುರುಮಾಡಿದ, ಮುಂದೆ ಚರ್ಮದ ಧಿರಿಸನ್ನು ಧರಿಸಲು ಕಲಿತ.
ಇದರ ನಡುವೆ ಪ್ರಕೃತಿಯಲ್ಲುಂಟಾಗುವ ಗುಡುಗು, ಸಿಡಿಲುಗಳು ಅವುಗಳ ಸದ್ದನ್ನು ಕೇಳಿ ಭಯಭೀತಿಯಿಂದ ಓಡುವ ಮೃಗಪಕ್ಷಿಗಳನ್ನು ನೋಡಿ, ಶಬ್ದಗಳಿಂದಲೂ ರಕ್ಷಣೆಯನ್ನು ಸಾಧಿಸಿಕೊಳ್ಳಬಹುದೆಂದು ಕಂಡುಕೊಂಡು.. ವಿಚಿತ್ರ ವಿಚಿತ್ರ ಶಬ್ದಗಳ ಪ್ರಯೋಗವನ್ನು ಕಂಡುಹಿಡಿದ.. ನಂತರ ಟೊಳ್ಳು ತೊಗಟೆಗಳಿಂದ ಹೊರಹೊಮ್ಮುವ ಶಬ್ದ, ಕಲ್ಲುಗಳಿಂದ ಉಂಟಾಗುವ ಶಬ್ದ, ಚರ್ಮದ ನಗಾರಿಗಳನ್ನುಮಾಡಿ ಅದನ್ನು ಬಾರಿಸುತ್ತ ಶಬ್ದ ಗಳ ಪ್ರಯೋಗ, ಎಲೆಗಳನ್ನು ಸುರುಳಿ ಸುತ್ತಿ ಅದನ್ನು ಊದುವುದರಿಂದ ಹೊರಹೊಮ್ಮಿದ ಸದ್ದು, ತನ್ನ ಬಾಯಿಯಿಂದ ನಾನಾ ವಿಧದ ಕಾಡುಮೃಗಗಳ, ಪ್ರಾಣಿಪಕ್ಷಿಗಳ ಶಬ್ದವನ್ನುಂಟುಮಾಡುತ್ತ ಇದರಿಂದಲೂ ರಕ್ಣಣೆ ಸಾಧ್ಯ ಅಂತ ಕಂಡುಕೊಳ್ಳುವುದರ ಜೊತೆಗೆ, ಇತರರಿಗೂ ಅನಾಹುತಗಳ ಬಗ್ಗೆ ಈ ಶಬ್ದಗಳಿಂದ ಸಂದೇಶಗಳನ್ನು ಕಳುಹಿಸಬಹುದೆಂದು ಅರಿತುಕೊಂಡ….
ಮುಂದುವರೆದಂತೆ ತನ್ನ ಗ್ರಹಣ ಶಕ್ತಿಯನ್ನು ಉತ್ತಮಗೊಳಿಸುತ್ತಾ ಪ್ರಕೃತಿಯಲ್ಲಿ ಹೊರಸೂಸುತ್ತಿದ್ದಂತಹ ನಾನಾವಿಧವಾದ ಸುಗಂಧ ಭರಿತವಾದ ಪರಿಮಳಗಳನ್ನು ಆಘ್ರಾಣಿಸತೊಡಗಿದ. ಹೂವು, ಹಣ್ಣು, ಮಣ್ಣು, ನೀರು ಮಿಶ್ರಿತವಾದ ಮಣ್ಣು, ಹುಲ್ಲು, ಗಾಳಿ, ವಾತಾವರಣ..ಇತ್ಯಾದಿ…ಜೊತೆಗೆ ಹಲವಾರು ವಾಸನೆಗಳನ್ನೂ ತನ್ನ ಮೂಗಿನ ಮೂಲಕ ಕಂಡು ಹಿಡಿಯಲು ಪ್ರಯತ್ನಿಸಿದ…ಸತ್ತ ಪ್ರಾಣಿಪಕ್ಷಿ, ಕೊಳೆತ ಮರ ಗಿಡ, ನಿಂತ ನೀರು, ತನ್ನ ಮೈಯಿಂದ ಹೊರಸೂಸುವ ಬೆವರು…ಇತ್ಯಾದಿ…
ತನ್ನ ಈ ಗ್ರಹಣಶಕ್ತಿಯಿಂದ ಬೆಂಕಿಯಿಂದ ಸುಟ್ಟ ಹೊಗೆ, ಮಣ್ಣಿನ ಪರಿಮಳದಿಂದ ಮಳೆಯ ತಿಳುವಳಿಕೆ, ವಾತಾವರಣದ ಗಾಳಿಯ ತೇವಾಂಶದಿಂದ ಮುಂದೆ ಉಂಟಾಗುವ ಹವಾಮಾನ ವೈಪರೀತ್ಯಗಳು, ಕೆಲವೊಂದು ಪ್ರಾಣಿಗಳ ಮಲದಿಂದ ಹೊರಹೊಮ್ಮಿದ ವಾಸನೆಯಿಂದ ಅವುಗಳ ಚಲನವಲನ ಮತ್ತು ಓಡಾಟ, ಇತ್ಯಾದಿಗಳನ್ನು ಗ್ರಹಿಸಿ ಇವೆಲ್ಲವುಗಳಿಂದ ಹೇಗೆ ಪಾರಾಗುವುದು ಎಂದು ತನ್ನನ್ನು ತಾನೇ ಅವುಗಳಿಂದ ರಕ್ಷಿಸಿಕೊಳ್ಳುವ ವಿಧಾನವನ್ನು ಕಂಡುಕೊಂಡ…..
ಮುಂದುವರೆಯುವುದು…..
ಶ್ರೀನಿಧಿ ಹೊಸಬೆಟ್ಟು