ಸುಳ್ಳಿನ ಸೋಗು
ಸುಳ್ಳಿನ ಸೋಗು ಬಲು ಜೋರು
ಜನ ಹೋಗುತಿರುವರು ಅದಕೆ ಮಾರು. (ಮಾರುಹೋಗುತಿರುವರು)
ಸುಳ್ಳು ತೋರುತಿದೆ ಆರ್ಭಟವನು
ಸತ್ಯ ಮೊರೆಯಿಡುತಿದೆ ದೈವ ಕೃಪೆಯನು.
ಸುಳ್ಳಿನ ಮುಖಗಳು ಹಲವಾರು
ಸತ್ಯವ ತಿಳಿದವರು ಕೇವಲ ಕೆಲವರು.
ಸುಳ್ಳು ಮೆರೆಯುತಿದೆ ಅಟ್ಟಹಾಸದಿ
ಸತ್ಯವು ಸಾಯುತಿದೆ ಸುಳ್ಳಿನ ಅಡಿಯಲಿ.
ಸುಳ್ಳು ತೋರುತಿದೆ ಭಯಂಕರ ಆಸೆ
ಸತ್ಯಕ್ಕಾಗುತಿದೆ ಪದೇ ಪದೇ ನಿರಾಸೆ.
ಸುಳ್ಳೀಗೆ ಸಿಗುತ್ತಿದೆ ಜಯದ ಮಾಲೆ
ಸತ್ಯಕೆ ಸಿಗುತ್ತಿದೆ ಸೋಲಿನ ಸರಮಾಲೆ.
ಸುಳ್ಳು ಮಾಡುತಿರುವುದು ಅಪಹಾಸ್ಯವ
ಸತ್ಯ ಕೂಗಿ ಕರೆಯುತಿದೆ ಮನುಷ್ಯತ್ವವ.
ಸುಳ್ಳಿಗೆ ಸುಖದ ಸೋಪಾನ
ಸತ್ಯಕೆ ಸದಾ ಅವಮಾನ.
ಸುಳ್ಳು ಮಾಡುತಲಿದೆ ಮಾರ್ಮಿಕ ಹತ್ಯೆ
ಜನರಿಗಾಗುತ್ತಿಲ್ಲ ಇದರ ಪತ್ತೆ (ಗೊತ್ತಾಗುತ್ತಿಲ್ಲ)
ಸುಳ್ಳಿನ ಸೋಗಿನ ಪರದೆಯ ಸರಿಸಿ
ಸತ್ಯದ ಸುಂದರ ಮೊಗವನು ತೋರಿಸಿ.
ಸುಳ್ಳಿನ ಅಂಧಕಾರವ ಅಳಿಸಿ
ಸತ್ಯದ ಬೆಳಕನು ಉಳಿಸಿ.
“ಸುಳ್ಳು ಕ್ಷಣಿಕ, ಸತ್ಯ ಶಾಶ್ವತ
ಸುಳ್ಳಿಗೆ ಛೀಕಾರ, ಸತ್ಯಕೆ ಜಯಕಾರ”
ಈ ಘೋಷಣೆಯ ಎಲ್ಲೆಡೆ ಪಸರಿಸಿ.
ಹೇಮಾ ಶ್ರೀವತ್ಸ