ಸೂಲಗಿತ್ತಿ ಪಾರವ್ವ
” ಏನ ಪಾರವ್ವ ಇವತ್ತು ಯಾವುದು ಡೆಲಿವರಿ ಕೇಸ್ ಬಂದಿಲ್ಲ ಏನೋ? ಅಂತಾ ಕೂಲಿ ಕೆಲಸಕ್ಕೆ ಹೊಂಟಿದ್ದ ರತ್ನವ್ವ ಕೇಳಿದಳು. ಯಾವುದೂ ಇಲ್ಲ ನೋಡ ತ೦ಗಿ ಅಂತಾ ಪಾರವ್ವ ಮುಗುಳುನಕ್ಕಳು”, ನಡು ರಸ್ತೆಯಲ್ಲಿ ಬೀದಿ ನಾಯಿ ಮರಿ ಹಾಕಿತ್ತು. ಯಾವುದಾದರೂ ಗಾಡಿ ಹಾಯ್ದು, ಇಲ್ಲಾ ಯಾರಾದರೂ ತುಳಿದು ಮರಿಗಳು ಸಾಯಬಾರದೆಂದು, ಮರಿಗಳನ್ನು ಸೀರೆಯ ಸೆರಗಿನಲ್ಲಿ ಹಾಕಿಕೊ೦ಡು ತಂದು, ಮನೆಯ ನೆರಳಿಗೆ ಹಾಸಿದ್ದ ಮೆತ್ತನೆಯ ಚೀಲದ ಮೇಲೆ ಹಾಕಿದಳು. ಬಾಣ೦ತಿ ನಾಯಿಗೆ ಹಾಲು ಕಲಸಿದ ಅನ್ನ ತಿನ್ನಿಸಿ ನಾಯಿ ಮತ್ತು ಮರಿಗಳನ್ನು ಉಪಚರಿಸಿದಳು.
ಇದ್ದಕ್ಕಿದ್ದಂತೆ ಯಾರೋ ಹುಡುಗ ಬ೦ದು “ಪಾರವ್ವ” ಬೇಗ ಬರಬೇಕಂತ, ಗಾಣಿಗೇರ ಮಲ್ಲವ್ವನ ಸೊಸೆಗೆ ಹೆರಿಗೆ ಬ್ಯಾನಿ ಬ೦ದಾವಂತ ಎ೦ದು ಹೇಳಿ ” ಗಾಳಿಗಿಂತ ವೇಗವಾಗಿ ಬಂದ ದಾರಿಯಲ್ಲಿ ಹೊರಟು ಹೋದ. ಯಾರಿಗಾದರೂ ಸಹಾಯ ಅಂದ್ರೆ ಮುಂದೆ ಬರುತ್ತಿದ್ದ ಪಾರವ್ವ, “ ಬ೦ದ ಪ್ರವಾಹ ನಿ೦ತು, ಶಾ೦ತವಾದ ನದಿಯಂತೆ” ಸುಮ್ಮನೆ ಬಾಗಿಲ ಬಳಿ ನಾಯಿ ಮರಿಗಳ ಮೈ ಸವರುತ್ತ ಕುಳಿತು ಬಿಟ್ಟಳು.
ಮಲ್ಲವ್ವನ ಸೊಸೆ ಒ೦ದು ದಿನ ಮನೆ ಮುಂದ ಶ್ಯಾವಿಗೆ ಹೊಸಿಯುವಾಗ, ದಾರೀಲಿ ಹೊರಟ್ಟಿದ್ದ ಪಾರವ್ವನ ನೋಡಿ “ ಶ್ಯಾವಿಗೆ ಹೊಸ್ಯಾಕ ಹಿಡಿಬಾ ಎ೦ದು ಕರೆದಿದ್ದಕ್ಕೆ” ಬ೦ದು ಸಹಾಯ ಮಾಡುತ್ತಿದ್ದವಳ ಕಂಡ ಮಲ್ಲವ್ವ , “ನೋಡು ನೀನು ಹಿಂಗ ಶ್ಯಾವಿಗೆ ಮುಟ್ಟಬಾರದು, ನಾವು ದೇವರ ಎಡಿಗೆ ಬರತಾವಂತ ಕಟ್ಟನಿಟ್ಟಲೇ ಮಾಡತೇವಿ, ತಿಳುವಳಿಕೆ ಇರೋ ನೀನೆ ಬಂದು ಅಶುದ್ಧ ಮಾಡಿದ್ರೆ ಹೇಗೆ? ಎ೦ದು ಅವಮಾನಿಸಿದ್ದ ನೆನಪು, ಅವಳ ತಿಳಿಯಾದ ಮನಸ್ಸನ್ನು ಕದಡಿತ್ತು.
ಅರ್ಧ ಗಂಟೆ ಕಳೆದ ಮೆಲೆ ಮಲ್ಲವ್ವನೆೇ ಬಂದು, “ಸೊಸೆಗೆ ಹೆರಿಗೆ ನೋವು ಬೇಗ ಬಾ ಎಂದು ಬೇಡಿಕೊ೦ಡಳು”. ಎದುರಾದ ಸ್ವಾಭಿಮಾನದ ಗೋಡೆಯನ್ನು , ಮಾನವೀಯತೆಯ ನೆಲೆಗಟ್ಟಿನ ಮೇಲೆ ದಾಟಿ ಅವರ ಮನೆಗೆ ಹೋದಳು. ಪಾರವ್ವನ ಕೈಗುಣವೋ ಏನೋ ಒಂದು ತಾಸಿನಲ್ಲಿ ನಿರಾತಂಕವಾಗಿ ಹೆರಿಗೆ ಮಾಡಿಸಿದಳು. ಪ್ರತಿಯಾಗಿ ಅವರು ನೀಡಿದ ಸೀರೆ, ರವಕೆ, ತಾ೦ಬೂಲ ತಿ೦ಡಿಯನ್ನು ನಿರಾಕರಿಸಿದಳು. ತಾನು ಬೆಲೆ ಕೊಡುವುದು ಮನುಷ್ಯತ್ವ , ಮಾನವೀಯತೆಗೆ ಹೊರತು, ವಸ್ತುಗಳಿಗೆ ಅಲ್ಲ ಎ೦ದು ಅವರಿಗೆ ಸೂಕ್ಷ್ಮವಾಗಿ ಅರ್ಥೈಸಿದಳು.
ಒ೦ದು ದಿನ ಪಾರವ್ವನ ಮಗಳು ಹೆರಿಗೆಗೆ೦ದು ಊರಿಗೆ ಬಂದಿದ್ದಳು. ಹೆರಿಗೆ ನೋವು ಶುರುವಾಗಿದ್ದಾಗ ಪಾರವ್ವ ಸೂಲಗಿತ್ತಿಯನ್ನು ಕರೆತ೦ದಳು, ಸೂಲಗಿತ್ತಿಗಿದ್ದ ಅರೆಬರೆ ಜ್ಞಾನದಿಂದ ನೀರಿನ ಚೀಲ ಒಡೆದು ಮಗು ಹೊಟ್ಟೆಯಲ್ಲೇ ಸತ್ತುಹೋಯಿತು. ಮಗುವನ್ನು ಹೊರತೆಗೆಯಲು ಸೂಲಗಿತ್ತಿ ಮಾಡಿದ ಪ್ರಯತ್ನಗಳು ವಿಫಲವಾದವು. ಮಗಳ ಸಾವು-ಬದುಕಿನ ಹೋರಾಟದ ನೋವನ್ನು ಸಹಿಸಲಾರದೆ ಸೂಲಗಿತ್ತಿಯ ಪಾತ್ರವನ್ನು ತಾನು ನಿಭಾಯಿಸಿ, ಮಗುವನ್ನು ಯಶಸ್ವಿಯಾಗಿ ಹೊರ ತೆಗೆದಳು. ಆದರೆ ವಿಪರೀತ ರಕ್ತಸ್ರಾವದಿಂದ ಮಗಳು ಕೂಡ ಸಾವನ್ನಪ್ಪಿದಳು. ಅರೆಕ್ಷಣದಲ್ಲಿ ಪಾರವ್ವನ ಬದುಕು, ಸಿಡಿಲು ಬಡಿದು ಕರಕಲಾದ ಮರದಂತಾಯಿತು. ಪಾರವ್ವ ಹೆರಿಗೆ ಮಾಡಿಸಿದ ಸುದ್ದಿ ಊರೆಲ್ಲ ಹಬ್ಬಿತು. ಊರಲ್ಲಿ ಯಾವುದೇ ಹೆಣ್ಣು ಮಕ್ಕಳಿಗೆ ಹೆರಿಗೆ ನೋವು ಶುರುವಾದರೇ ಎಲ್ಲರೂ ಪಾರವ್ವನನ್ನೇ ಕರೆಯೋದಕ್ಕೆ ಶುರು ಮಾಡಿದರು. ಅಲ್ಲಿಂದ ಪಾರವ್ವ “ಸೂಲಗಿತ್ತಿ ಪಾರವ್ವ” ಎ೦ದೆ ಹೆಸರಾದಳು.
ಹರಿಜನ ಕೇರಿಯ ಹುಡುಗ, ಬಸವಣ್ಣನ ಗುಡಿ ಪೂಜಾರಿಯ ಮಗಳು ಇಬ್ಬರೂ ಓಡಿ ಹೋಗಿ ರಿಜಿಸ್ಟರ್ ಮ್ಯಾರೇಜ್ ಆಗಿದ್ದ ಸುದ್ದಿ ಕಾಡ್ಗಿಚ್ಚಿನಂತೆ ಊರೆಲ್ಲ ಹಬ್ಬಿ, ಊರೆಲ್ಲ ಕೋಮು ಗಲಬೆಯ ದಳ್ಳುರಿಯಲ್ಲಿ ಬೇಯುವಂತಾಯಿತು. ಊರಿನ ಮುಖ೦ಡನಾದ ಗೌಡರ ರಾಜಪ್ಪ ಊರಿನ ಜನರ ಸಭೆ ಕರೆದ. ಕೋಮು ಗಲಭೆ ಅತಿರೇಕಕ್ಕೆ ಹೋಗುವುದನ್ನು ತಡೆಯಲು, ಹರಿಜನ ಕೇರಿಯವರು ಊರ ಒಳಗೆ, ಊರಿನವರು ಯಾರೂ ಹರಿಜನ ಕೇರಿಗೆ ಹೋಗಬಾರದೆಂದು, ಹೋದರೆ ಊರಿಂದ ಬಹಿಷ್ಕಾರ ಹಾಗು 1000 ರೂ ದಂಡ ವಿಧಿಸಿ ಆದೇಶಿಸಿದ.
ಒ೦ದು ದಿನ ಏದುಸಿರು ಬಿಡುತ್ತಾ ಓಡಿಬಂದ ಹರಿಜನ ಕೇರಿಯ ಶಾಂತವ್ವ, ಕೇರಿ ದಾಟಿ ಊರಿನ ಬಾಂದುಗಲ್ಲು ಬಳಿ ಬ೦ದು, ಅರಳಿ ಮರದ ಕೆಳಗೆ ಕುಳಿತು ಇಸ್ಪೀಟು ಆಡುತಿದ್ದ ಮೂಲಮನಿ ಶಂಕ್ರಪ್ಪನನ್ನು ಕೂಗಿ ತನ್ನ ಮಗಳಿಗೆ ಹೆರಿಗೆ ನೋವೆಂದು, ಪಾರವ್ವನನ್ನು ಕಳಿಸುವಂತೆ ಅಂಗಲಾಚಿದಳು. ನಿನ್ನ ಮಗಳನ್ನು ಹೆರಿಗೆ ಆಸ್ಪತ್ರೆಗೆ ಕರೆದಕೊಂಡ ಹೋಗು. ಪಾರವ್ವನ ಕರಕೊಂಡು ಹೋಗಿ ಗಡಿಪಾರ ಮಾಡಸಬೇಕಂತ ಪ್ಲಾನ್ ಮಾಡೆರೇನು? ನಿಮ್ಮ ನಾಟಕ ಎಲ್ಲಾ ಗೊತ್ತು ಹೋಗು ಎ೦ದು ಅವಮಾನಿಸಿ ಕಳುಹಿಸಿದ.
ಅಲ್ಲೇ ಸಮೀಪದ ಬೋರಿನಿ೦ದ ನೀರು ಸೇದುತ್ತಿದ್ದ ಬಾಲಕನ ಕಿವಿಗೆ ವಿಷಯ ಬಿದ್ದಾಗ, ತುಂಬಿದ ಕೊಡಪಾನ ಅಲ್ಲೇ ಬಿಟ್ಟು ಓಡಿ ಹೋಗಿ, ನಡೆದ ಸಂಗತಿಯನ್ನು ಪಾರವ್ವಳಿಗೆ ತಿಳಿಸಿದ. ಪಾರವ್ವಳಿಗೆ ಒ೦ದು ರೀತಿಯ ಧರ್ಮಸಂಕಟ. ವಿಧಿಸಿದ ಕಟ್ಟಳೆ ಮೀರಿದರೆ ಈ ಊರಿನಿಂದ ಬಹಿಷ್ಕಾರ, ಹೋಗದೆ ಇದ್ದರೆ ಜೀವನ ಪರ್ಯಂತ ಕಾಡುವ ಪಾಪಪ್ರಜ್ಞೆ. ಹುಟ್ಟಿ ಬೆಳೆದ ಊರ ಬಿಟ್ಟ ಹೋದ್ರೆ ಮುಪ್ಪಿನ ಈ ಕಾಲದಾಗ ಯಾರ ಆದಾರೂ? ಎ೦ದು ಮುಂದಾಲೋಚಿಸಿ ಸುಮ್ಮನಾದಳು. ಆದರೆ ತನ್ನ ಮಗಳು, ಮೊಮ್ಮಗುವನ್ನು ಹೆರಿಗೆ ಸಮಯದಲ್ಲಿ ಕಳೆದುಕೊಂಡಿದ್ದಕ್ಕೆ, ದಿನನಿತ್ಯ ಬ೦ದು ಹಾಜರಿ ಹಾಕಿ ಹೋಗುತಿದ್ದ ಮನದ ಸ೦ಕಟ, ಪರಿತಾಪ, ಜೀವನವನ್ನೇ ಅಣುಕಿಸಿ ಕಾಡುತ್ತಿದ್ದ ನೋವುಗಳು, ಅಲೆಗಳಂತೆ ಒಂದರ ನಂತರ ಮತ್ತೊಂದು ಬಂದು ಮನಸಿನ ನೆಮ್ಮದಿ ಕದಡತೊಡಗಿದವು. ಮರುಗಳಿಗೆ ಮನಸ್ಸಿನಲ್ಲಿ, “ದೇಹಕ್ಕೆ ಅಡರಿದ್ದ ಮುಪ್ಪನ್ನು” ನೆನೆದು , ಇನ್ನೆಷ್ಟು ದಿನ ಈ ಜೀವ ಬದುಕೀತು? ಈ ಊರಲ್ಲಿ ಜಾಗ ಕೊಡದಿದ್ದರೇನಂತ; ಎಲ್ಲೋ ನೆಲೆ ಕೊಡದೇ ಇರತಾನ ಆ ದೇವ್ರು ಎಂದು, ತನ್ನನ್ನು ತಾನೆ ಸಂತೈಸಿಕೊಂಡು ಸರಕಾರದಿ೦ದ ತನಗೆ ಬಂದಿದ್ದ “ಡೆಲಿವರಿ ಕಿಟ್ಟನ್ನು” ಕೈಯಲ್ಲಿ ಹಿಡಿದು ಕೇರಿಯ ದಾರಿ ಹಿಡಿದಳು. ವಿಷಯ ತಿಳಿದ ಊರಿನ ಜನ ಬಂದು ಕೇರಿಗೆ ಹೋಗದಂತೆ ತಡೆ ಒಡ್ಡಿದರು. ಯಾವುದಕ್ಟೂ ಜಗ್ಗದ ಪಾರವ್ವ ಮನದ ಸಂಕುಚಿತತೆಯ ಬೇಲಿ ದಾಟಿ ಕೇರಿಗೆ ಪ್ರವೇಶ ಮಾಡಿದಳು.
ಶಾ೦ತವನ ಮಗಳಿಗೆ ಹೆರಿಗೆಯಾಯಿತು. ಆಗ ತಾನೆ ಹುಟ್ಟಿದ ಮಗುವನ್ನು ಅಪ್ಪಿ ಮುದ್ದಿಸಿ, ಚಿತ್ತ ತಿಳದತ್ತ ಹೆಜ್ಜೆಹಾಕಿ ಗಡುಗತ್ತಲ ರಾತ್ರಿಯಲ್ಲಿ ಲೀನವಾದಳು ಸೂಲಗಿತ್ತಿ ಪಾರವ್ವ….
ವಿದ್ಯಾಶ್ರೀ ಹಡಪದ
ಕಾರಟಗಿ, ಕೊಪ್ಪಳ ಜಿಲ್ಲೆ
ಇಮೇಲ್ : vidyashreehk81@gmail̤com