ಸೈಕಲ್ ಸೈಕಲ್
ಚಿಕ್ಕವರಿದ್ದಾಗ ಸೈಕಲ್ ಸಿಕ್ಕಿತೆಂದರೆ
ಖುಷಿಯೋ ಖುಷಿ ಹೀರೋ ಆಗಲಿ
ಅಟ್ಲಾಸ್ ಆಗಲಿ ಸಿಕ್ಕ ಸೈಕಲ್ ಸಿಂಹಾಸನವೇರಿ
ತಾಸಿನ ಬಾಡಿಗೆಗೆ ಹದಿನಾರಾಣೆ
ಒಮ್ಮೊಮ್ಮೆ ಎಂಟಾಣೆಗೆ ಅರ್ಧ ತಾಸು ಹೆಸರಿಗೆ ಬರೆಯಿಸಿ
ಪಡೆದದ್ದು ಸಿಹಿ ತಿನಿಸು ತಿಂದಷ್ಟು ಹಿಗ್ಗು
ಚಡ್ಡಿ ದೋಸ್ತ ಏರಿದ ಸೈಕಲ್ ಹಿಂದೆ
ನಗು ನಗುತ್ತಾ ಇಳಿಯುತ್ತಿದ್ದ ಚಡ್ಡಿ ಏರಿಸುತ್ತಾ
ಓಡಿ ಹೋಗುತ್ತಿದ್ದುದು ಎಷ್ಟೊಂದು ಖುಷಿ ಇತ್ತು
ಏರು ದಿಬ್ಬದಲ್ಲಿ ತಿಣುಕಾಡುತ್ತಿದ್ದ ಸೈಕಲ್ ಜೋರಾಗಿ ತಳ್ಳಿ
ಇಳುವಿಗೆ ಸುಯ್ಯೆನ್ನುವಾಗ ನಾನೇ ಹೊಡೆದಷ್ಟು ಸಂಭ್ರಮಪಟ್ಟು
ಸಾವಿರ ಸಾರಿ ನಕ್ಕದ್ದು ಇಂದಿಗೂ ಗಟ್ಟಿಯಾದ ಹಲ್ಲಿಗೆ ಜೀವಂತ
ಪೈಪೋಟಿಯಿಂದ ಹೋಗುತ್ತಿದ್ದ
ದಿನದ ಸಾಲಿಗೆ ಚಕ್ಕರ್ ಹೊಡೆದು
ಮಾಸ್ತರಿಗೆ ಸುಳ್ಳಿನ ಕಂತೆಯ ಮೇಲೆ ಸುಳ್ಳು ಹೇಳಿ
ಹೇಳಿದ್ದು ಸುಳ್ಳೆಂದು ತಿಳಿದಾಗ ತಗಲಾಕಿಕೊಂಡು
ಅಂಗೈಗೆ ಏಟಿನ ಕೊಬ್ಬರಿ ಬೆಲ್ಲ ತಿಂದು
ಎಷ್ಟೋ ದಿನಗಳು ಹೊಟ್ಟೆಯ ಅರಿವಿಲ್ಲದೆ
ಅಪ್ಪಅವ್ವನಿಂದ ಹೊಡೆತ ತಿಂದದ್ದಕ್ಕೆ
ಮೈ ಮೇಲಿನ ಹಸಿರು ಬಣ್ಣದ ಬಾಸುಂಡೆಗಳೇ ಸಾಕ್ಷಿ
ಅತ್ತೆಯ ಗಂಡ ಮನೆ ಮುಂದಿನ ಗೋಡೆಗೆ ಆಣಿಸಿ ಇಟ್ಟಿದ್ದ
ಸೈಕಲ್ ಯಾಮಾರಿಸಿ ಕದ್ದೊಯ್ದು ಊರೆಲ್ ಸುತ್ತಿ
ಎಲ್ಲೆಂದರಲ್ಲಿ ಬಿದ್ದು ಮೊಣಕಾಲು ಕೆತ್ತಿಸಿಕೊಂಡು
ಉಕ್ಕಿದ ರಕ್ತಕ್ಕೆ ಬೆಂಕಿ ಪೊಟ್ಟಣದ ಮಂಕೆ ಮುಲಾಮು ಮಾಡಿ
ಹಚ್ಛಿ ಮಾರುದ್ದ ಗೀರುಗಳ ಮುಚ್ಚಿದ್ದ ನೆನಪುಗಳು
ಜೀವನದ ಹಳೆಯ ದಿನಗಳ ದಾಖಲಾತಿಯಲ್ಲಿ ಉಲ್ಲೇಖ
ಕದ್ದ ಸೈಕಲ್ ದಣಿಯದಿದ್ದರೂ
ನಾವೇ ಒಂಟಿಯಾಗಿ ಬೆವರು ಹರಿಸಿ
ಸೀಟಿಗೆ ಕುಳಿತಾಗ ಸಿಗದ ಪೆಡಲ್ಗೆ ಹರ ಸಾಹಸ ಮಾಡಿ
ರಸ್ತೆ ಬದಿಗೆ ನಿಂತ ಕಿಲೋಮೀಟರ್ ಕಲ್ಲು ಆಶ್ರಯಿಸಿ
ಏರಿದ್ದ ಜಂಬೂ ಸವಾರಿ ಆಕಡೆ ಈಕಡೆ ಕುಂಡಿ ಏರಿಸಿ ಇಳಿಸಿ
ಪೆಡಲ್ ತುಳಿಯುವಾಗ ಮುಂದಿರುವ ತೆಗ್ಗು ನೋಡದೆ
ಮೈಮೇಲೆ ಸೈಕಲ್ ಹೊತ್ತು ಬಿದ್ದದ್ದು ನೋಡಿದವರು ನಗುವಾಗ
ನೋವಿಲ್ಲದಂತೆ ನಟಿಸಿದ್ದು ಲೆಕ್ಕವಿಲ್ಲ ಅವರಿಗಲ್ಲ ನನಗೆ
ಇಪ್ಪತ್ತನಾಲ್ಕಿಂಚಿನ ಎತ್ತರದ ಸೈಕಲ್
ಅಡಗಾಲು ಹಾಕಿ ಅವಸರದಿಂದ ನೆಲಕೊಂದು ಕಾಲು ಊರುತ್ತಾ ಪೆಡಲ್ಗೊಂದು ಕಾಲಿಟ್ಟು ಊರ ಬೀದಿಯಲ್ಲಿ ಹೊಡಿಯುವಾಗ
ಸರಿ ಮಾಡುವಾಗ ಕೈಗೂ ಮೈ ಅಂಗೀಗೂ ಹತ್ತಿದ ಮಸಿ
ನೋಡಿ ಮುಷಿ ಮುಷಿ ನಕ್ಕಾಗ ಮನಸ್ಸು ಮುಕ್ಕಾಗುತಿತ್ತು
ಕಾಲಿಗೆ ಚೈನ್ ಆಯಿಲ್ ಮೆತ್ತಿಸಿಕೊಂಡು
ಮನೆಗೆ ಬರುವ ಮೊದಲು ಉಸುಕಲ್ಲಿ ತಿಕ್ಕಿ
ಹರಿಯುವ ಗಟಾರ ನೀರಲ್ಲಿ ತೊಳೆದರೂ ಮಸಿ ಹೋಗದ್ದು
ಏಟು ಬೀಳುವ ಮುನ್ನವೇ ಮೈ ಹಣ್ಣಾಗುವದ ನೆನೆದು
ಅತ್ತದು ಅದೆಷ್ಟೋ ಬಾರಿ ಮೈ ನಡುಗಿ
ಮನೆಯಿಂದ ಹೊರಗೆ ಇರುವಂತೆ ಮಾಡಿದ್ದು
ಕಾಲಾಯ ತಸ್ಮೆ ನಮಃ ಎನ್ನುವಂತೆ ದೇವರ ಇಚ್ಛೆ ಇದ್ದಂತೆ
ಸಾಕು ಸಾಕಾಗುವಷ್ಟು ಸೈಕಲ್ ತುಳಿದು
ಸ್ನೇಹಿತರಿಗಿಷ್ಟು ಉಪ್ಪಿನ ಕಾಯಿಯಂತೆ ರುಚಿ ಕೊಟ್ಟು
ಮೈದುಂಬಿ ಅವಸರದ ಪ್ರಯಾಣದಲ್ಲಿ
ಮುಳ್ಳು ಬೇಲಿಗೆ ನುಗ್ಗಿ ನನಗೂ ಸೈಕಲ್ ಗೂ
ಮೈತುಂಬ ಚುಚ್ಚಿದ ಹಚ್ಚೆ ರಕ್ತ ಹೊರತೆಗೆದು
ಗಾಲಿಯಿಂದ ಗಾಳಿಯ ಗಾನ ಮೊಳಗಿದರು
ಗೊಣಗುತ್ತಾ ತಂದ ಸೈಕಲ್ ಯಾರಿಗೂ ಅರಿಯದಂತೆ
ಇದ್ದಲ್ಲಿಯೇ ಇಟ್ಟು ಬಂದದ್ದು ಇತಿಹಾಸ ದಾಖಲೆ
ಉಬ್ಬಿದ ಟೈರ್ ಮೆತ್ತಗಾಗಿ
ತುಂಬಿದ ಟೂಬೂ ಗಾಳಿ ಹೊರದಬ್ಬಿ
ಮೆರೆದಾಡಿದ ಸೈಕಲ್ ಮೆತ್ತಗೆ ಮಾಡಿ
ತಳ್ಳುತ್ತಾ ತಂದು ಅತ್ತಲಿತ್ತ ನೋಡಿ
ಗಾಬರಿಯಿಂದ ಗೋಡೆಗೆ ನಿಲ್ಲಿಸಿ ಬಂದದ್ದಂತೂ
ಮಹಾಭಾರತದ ಯುದ್ದ ಗೆದ್ದ ಖುಷಿಗಿಂತ ಹೆಚ್ಚೇ
ಸಂತಸ ಕೊಟ್ಟದ್ದಂತೂ ಸುಳ್ಳಲ್ಲ
ಇದನ್ನೆಲ್ಲ ಮಾಡಿದ್ದು ನನ್ನ ತಪ್ಪಿದ್ದರೂ
ಶಿಕ್ಷೆ ಅನ್ಟಮ್ಮನಿಗೆ ಕೊಡಿಸಿದ್ದು ನಾನೆ ನ್ಯಾಯಾಧೀಶ ಆಗಿದ್ದಂತೂ
ಆಗಿನಿಂದ ಈಗೂ ಮೊದಲನೇ ತೀರ್ಪು
ನನ್ನ ಬಾಡಿಗೆ ಸೈಕಲ್
ಈಗ ಮಗನ ಸ್ವಂತದ್ದೆ ಆಗಿದೆ
ಅಜ್ಜಿಯ ಪ್ರೋತ್ಸಾಹದಲ್ಲಿ ಅಣ್ಣನ ತರಬೇತಿಯಲ್ಲಿ
ಗುರುನಂದನ್ ಸೈಕಲ್ ಸವಾರಿ
ಅವನಿಗಿಂತ ನಮಗೆ ಖುಷಿಯ ದಿನಚರಿ
ಹನಮಂತ ಸೋಮನಕಟ್ಟಿ