ಸೈನಿಕರ ಯುದ್ಧ ಮತ್ತು ಹಕ್ಕಿಗಳ ಶಾಂತಿ !

ಸುಧೀರ್ ಪ್ರಭು

ಆಸ್ಟ್ರೇಲಿಯಾ ಖಂಡದ ಪಶ್ಚಿಮ ಆಸ್ಟ್ರೇಲಿಯಾ ರಾಜ್ಯದ (Western Australia), ದಕ್ಷಿಣ ಪ್ರಾಂತ್ಯದಲ್ಲಿ, ಅಂದಾಜು 1,54,000 ಚದರ ಕಿಲೋಮೀಟರ್ ಪ್ರದೇಶವನ್ನು, ಗೋಧಿ ಬೆಳೆಯುವ ಪ್ರದೇಶ (“ಗೋಧಿಪ್ರಾಂತ್ಯ”) ಅಂತ ಅಲ್ಲಿನ ಸರ್ಕಾರ ಗುರುತಿಸಿದೆ.

ಈ ಭಾಗದ ದೊಡ್ಡ ನಗರ ಮತ್ತು ಆಸ್ಟ್ರೇಲಿಯಾದ ರಾಜಧಾನಿ ನಗರ ಪರ್ತ್.

ಈ ಪ್ರಾಂತ್ಯದ ಸಮುದ್ರ ತೀರ ಪ್ರದೇಶದಲ್ಲಿ, ವರ್ಷಕ್ಕೆ 150 ಸೆಂಟಿಮೀಟರುಗಳಷ್ಟು ಮಳೆಯಾಗುತ್ತದೆ. ಕೊಂಚ ಒಳನಾಡಿಗೆ ಜರುಗುತ್ತಿದ್ದಂತೆಯೇ, ವಾತಾವರಣವು ರೂಕ್ಷವಾಗುತ್ತಾ ಹೋಗುತ್ತದೆ. ಆ ತೀರಾ ಅಹಿತಕರ ಒಣ ವಾತಾವರಣದ ಆಚಿನ ಅಂಚಲ್ಲಿ ಇರುವುದೇ, ಗ್ರೇಟ್ ವಿಕ್ಟೋರಿಯಾ ಡೆಸರ್ಟ್, ಲಿಟಲ್ ಸ್ಯಾಂಡೀ ಡೆಸರ್ಟ್ ಮತ್ತು ಗಿಬ್ಸನ್ ಡೆಸರ್ಟ್ ಎಂದು ನಾಮಕರಣಗೊಂಡಿರುವ ಮೂರು ಮರುಭೂಮಿಗಳು.

1932ರಲ್ಲಿ, 26,42,753 ಚದರ ಕಿಲೋಮೀಟರ್ ವಿಸ್ತೀರ್ಣದ ಪಶ್ಚಿಮ ಆಸ್ಟ್ರೇಲಿಯಾ ರಾಜ್ಯದ ಜನಸಂಖ್ಯೆ ಇದ್ದದ್ದು 4,21,609. ಅಂದರೆ ಪ್ರತೀ ಚದರ ಕಿಲೋಮೀಟರ್ ವಿಸ್ತೀರ್ಣಕ್ಕೆ 0.16 ಜನ !

2016ರ ಜನಗಣತಿ ವರದಿಯ ಪ್ರಕಾರ ಈ ಇಡೀ ಪಶ್ಚಿಮ ‘ಗೋಧಿಪ್ರಾಂತ್ಯ’ದ ಒಟ್ಟೂ ಜನಸಂಖ್ಯೆ 1,35,354 !

1914ರಿಂದ, 1918ರವರೆಗೆ ನಡೆದ ಮೊದಲ ವಿಶ್ವಯುದ್ಧದಲ್ಲಿ ಸುಮಾರು ಆರೂವರೆ ಕೋಟಿ ಜನ ಸತ್ತಮೇಲೆ, ಯುದ್ಧದಾಹಿ ರಾಷ್ಟ್ರಗಳು ಯುದ್ಧವನ್ನು ತಾತ್ಕಾಲಿಕವಾಗಿ ನಿಲ್ಲಿಸಿದವು.

ಬ್ರಿಟೀಷ್ ರಾಣಿಯ ಸೈನ್ಯದ ವತಿಯಿಂದ ಆ ಮಹಾಯುದ್ಧದಲ್ಲಿ ಕಾದಾಡಿ, ಜೀವಂತ ಉಳಿದಿದ್ದ ಸುಮಾರು 5000 ಜನ ಆಸ್ಟ್ರೇಲಿಯನ್ ಸೈನಿಕರು, ಸೈನ್ಯದಿಂದ ನಿವೃತ್ತಿ ಹೊಂದಿ, ತಾಯ್ನಾಡಿಗೆ ಮರಳಿದರು.

ನಿವೃತ್ತಿಯ ಭಾಗವಾಗಿ, ಆಸ್ಟ್ರೇಲಿಯಾದಲ್ಲಿದ್ದ ಬ್ರಿಟೀಷ್ ಸರ್ಕಾರವು 1920-21ರಲ್ಲಿ,ಈ ಪಶ್ಚಿಮ ಆಸ್ಟ್ರೇಲಿಯಾ ರಾಜ್ಯದ ದಕ್ಷಿಣ ಭಾಗದಲ್ಲಿ ಸುಮಾರು 90,000 ಹೆಕ್ಟೇರುಗಳಷ್ಟು ಭೂಮಿಯನ್ನು ಸಜ್ಜುಗೊಳಿಸಿ, ಆ ಮಾಜಿ ಸೈನಿಕರು ಮತ್ತವರ ಕುಟುಂಬಗಳಿಗೆ ಅಲ್ಲಿ ಜಮೀನು ನೀಡಿತು. ಆ ಕುಟುಂಬಗಳು ಏನೇನೋ ಬೆಳೆ ಬೆಳೆದುಕೊಂಡು ಜೀವನ ಸಾಗಿಸುತ್ತಿದ್ದವು. ಜೊತೆಯಲ್ಲಿ ಗೋಧಿಯೂ ಇತ್ತು.

1929ರ ನಂತರ, ಸರ್ಕಾರ, ಈ ಗೋಧಿಪ್ರಾಂತ್ಯದ ರೈತರಿಗೆ ಗೋಧಿ ಬೆಳೆಯಲು ಪ್ರೇರೇಪಿಸಿತು. ಅದಕ್ಕೆ ಭರಪೂರು ಸಬ್ಸಿಡಿಗಳನ್ನೂ ಘೋಷಿಸಿತು. ಆದರೆ ಆ ಸಬ್ಸಿಡಿಗಳನ್ನು ಈಡೇರಿಸಲೇ ಇಲ್ಲ. ಆ ಮಾಜಿ ಸೈನಿಕರು, ಇದರಿಂದ ಕ್ರುದ್ಧರಾಗಿದ್ದರು.

ಸರ್ಕಾರ ಅವರಿಗೆ ಗೋಧಿ ಬೆಳೆಯಲು ಹೇಳಲಿಕ್ಕೂ ಒಂದು ಕಾರಣ ಇತ್ತು. 1929ರಲ್ಲಿ ಜಗತ್ತನ್ನು ಬಾಧಿಸಿದ ಯುಗಮಾನದ ಬರದಿಂದಾಗಿ, ಬ್ರಿಟೀಷ್ ಸಾಮ್ರಾಜ್ಯದೆಲ್ಲೆಡೆ ಆಹಾರದ ಸಮಸ್ಯೆ ಆಗಿತ್ತು. ಮುಂದೊಂದು ದಿನ ಹೀಗೆ ಆಗುವುದನ್ನು ತಡೆಯಲು ಮತ್ತು ವಿಶ್ವದಾದ್ಯಂತ ಇರುವ ತನ್ನ ಸೈನಿಕ ಶಿಬಿರಗಳಿಗೆ ಆಹಾರದ ಸರಬರಾಜಿನ ಕೊರತೆ ಇಲ್ಲವಾಗಿಸಲು, ಆ ರೈತರಿಗೆ ಗೋಧಿ ಬೆಳೆಯಲು ಹೇಳಿತ್ತು.

ಹೀಗೇ ದಿನಗಳು ಸಾಗುತ್ತಿದ್ದ 1932ರಲ್ಲಿ,ಆ ರೈತರು ಕಷ್ಟಪಟ್ಟು ಜಮೀನಿನಲ್ಲಿ ಗೋಧಿ ಬೆಳೆದು, ಅದು ಕಾಳುಕಟ್ಟಿ, ಆ ಕಾಳು ಗಟ್ಟಿಯಾಗುವ ಅಕ್ಟೋಬರ್ ನವೆಂಬರ್ ತಿಂಗಳ ಸಂದರ್ಭದಲ್ಲಿ, ಗೋಧಿಪ್ರಾಂತ್ಯದ ಷಾಂಡ್ಲರ್ ಮತ್ತು ವಾಲ್ಗೂಲನ್ ಎಂಬೆರಡು ಸಣ್ಣ ಹಳ್ಳಿಯ ಪ್ರದೇಶದಲ್ಲಿ, ಎಮು ಎಂಬ ಪಕ್ಷಿಗಳು ಕಾಣಿಸಿಕೊಂಡವು.

ಅದೂ ಒಂದು ಎರಡರ ಸಂಖ್ಯೆಯಲ್ಲಲ್ಲ. ಬದಲಿಗೆ ಸುಮಾರು 20000ದಷ್ಟು ಎಮುಗಳು, ತಮ್ಮ ಸಂತಾನಾಭಿವೃದ್ಧಿಗೆ ಸೂಕ್ತ ನೀರು, ನೆಳಲು, ಆಹಾರ ಇರುವ ಸ್ಥಳ ಹುಡುಕಿ ಗುಳೇ ಹೊರಟಿದ್ದವವು.

ಆ ಬೃಹತ್ ಎಮು ನಿರಾಶ್ರಿತರ ತಂಡಕ್ಕೆ, ವಿಶಾಲವಾಗಿ, ಸಮೃದ್ಧವಾಗಿ ಗೋಧಿ ಬೆಳೆದಿರುವ, ನೀರಿನ ವ್ಯವಸ್ಥೆ ಇರುವ ಈ ಗೋಧಿಪ್ರಾಂತ್ಯದ ಭೂಮಿ ಬಹಳ ಹಿಡಿಸಿಬಿಟ್ಟಿತು.

ಅವು ಆ ಗೋಧಿ ಹೊಲಗಳಲ್ಲೇ ಉಳಿದುಬಿಟ್ಟವು.

ಇಡೀ ಹಳ್ಳಿಯ ಪ್ರದೇಶದಲ್ಲಿ ಬೆಳೆದಿದ್ದ ಗೋಧಿ ಹೊಲಗಳಲ್ಲೆಲ್ಲ ಗೂಡುಕಟ್ಟಿ ಮೊಟ್ಟೆಯಿಡಲು ಪ್ರಾರಂಭಿಸಿದವು !

ಆ ದೈತ್ಯ ಹಕ್ಕಿಗಳ ಓಡಾಟಕ್ಕೆ ಸಿಕ್ಕು, ರೈತರು ಕಟ್ಟಿದ್ದ ಬೇಲಿಗಳು ಉಜಾಡೆದ್ದು ಹೋದವು. ಹೊಲದ ನಡುವಿದ್ದ ಮನೆಗಳೆಲ್ಲಾ ಮುರಿದು ಬಿದ್ದು, ಆ ಅವಶೇಷಗಳು ಅವುಗಳ ಗೂಡುಗಳಾದವು. ಅಲ್ಲಿ, ಕೃಷಿಗಾಗಿ ನಿರ್ಮಿಸಿದ್ದ ನೀರಿನ ಮೂಲಗಳೆಲ್ಲಾ ಈ ಹಕ್ಕಿಹಿಂಡಿನ ಆಕ್ರಮಣಕ್ಕೆ ಸಿಕ್ಕು ನಾಶವಾಗಿಹೋದವು.

ಸಾಮಾನ್ಯವಾಗಿ, ಎಮು ಪಕ್ಷಿಗಳು, ತಮ್ಮ ಸಂತಾನಾಭಿವೃದ್ಧಿಯ ಕಾಲದಲ್ಲಿ ಸಮುದ್ರತೀರ ಪ್ರದೇಶಗಳಿಗೆ ಹೋಗುತ್ತವೆ.

ಅವು ಮೇ-ಜೂನ್ ತಿಂಗಳಲ್ಲಿ ಸಂತಾನಾಭಿವೃದ್ಧಿಗೆ ಪ್ರಾರಂಭಿಸುತ್ತವೆ. ಅಕ್ಟೋಬರ್ ಕಾಲದಲ್ಲಿ ಮೊಟ್ಟೆ ಇಡುತ್ತವೆ. ಮೊಟ್ಟೆಗಳು ಎಂಟು ವಾರಗಳಲ್ಲಿ ಒಡೆದು ಮರಿಗಳಾಗುತ್ತವೆ. ಆ ಮರಿಗಳು ಆರೇ ತಿಂಗಳಲ್ಲಿ ಪ್ರಾಯಕ್ಕೆ ಬರುತ್ತವೆ.

(1992ರ ಗಣತಿಯ ಅಂದಾಜಿನ ಪ್ರಕಾರ, ಇವುಗಳ ಸಂಖ್ಯೆ ಸುಮಾರು 7.5 ಲಕ್ಷ)

ಗೋಧಿಪ್ರಾಂತ್ಯದ ಹಳ್ಳಿಗಳಲ್ಲಿ ಈ ಎಮುಗಳ ಕಾಟ ವಿಪರೀತವಾಗಿ ಏರುತ್ತಿದ್ದಂತೆ, ರೈತರೆಲ್ಲ ಒಟ್ಟಾಗಿ ಸರ್ಕಾರದ ಮೊರೆಹೊಕ್ಕರು.

ಆಗ, ಜಾರ್ಜ್ ಫಾಸ್ಟರ್ ಪಿಯರ್ಸ್ ಎಂಬಾತ ಆಸ್ಟ್ರೇಲಿಯಾದ ಡಿಫೆನ್ಸ್ ಮಿನಿಸ್ಟರ್ ಆಗಿದ್ದ.

ಆತ ಒಂದು ಉಪಾಯ ಮಾಡಿದ. ಆಸ್ಟ್ರೇಲಿಯಾದಲ್ಲಿದ್ದ ಬ್ರಿಟೀಷ್ ಸೈನಿಕ ತುಕಡಿಗಳಿಗೆ ಟಾರ್ಗೆಟ್ ಪ್ರಾಕ್ಟೀಸ್ ಮಾಡಿದಂತೆಯೂ ಇರುತ್ತೆ, ಜೊತೆಗೆ ಈ ರೈತರ ಸಂಕಷ್ಟವನ್ನು ನೀಗಿಸಿದಂತೆಯೂ ಆಗುತ್ತೆ ಎಂದು, ಎಮುಗಳ ಮೇಲೆ “ಯುದ್ಧ” ಸಾರಿಬಿಟ್ಟ !

ಇದೇ, ಆಸ್ಟ್ರೇಲಿಯಾದ ಇತಿಹಾಸದಲ್ಲಿ, “ದಿ ಗ್ರೇಟ್ ಎಮು ವಾರ್” ಎಂದು ಹೆಸರಾಯಿತು.

ಒಟ್ಟು ಮೂರು ಜನ ಸೈನಿಕರು, ಎರಡು ಲೆವಿಸ್ ಮಷಿನ್ ಗನ್ನುಗಳು ಮತ್ತು ಹತ್ತು ಸಾವಿರ ರೌಂಡ್ಸ್ ಗುಂಡುಗಳನ್ನು ಒಂದು ಆರ್ಮಿ ಟ್ರಕ್ಕಿಗೆ ಸೇರಿಸಿ ಮೇಜರ್ P. W. ಮೆರಿಡಿತ್ ನೇತೃತ್ವದಲ್ಲಿ, ಎಮುಗಳ ಮೇಲೆ ಯುದ್ಧ ಮಾಡಲು ಆದೇಶಿಸಿದ, ಜಾರ್ಜ್ ಫಾಸ್ಟರ್ ಪಿಯರ್ಸ್.

1932ರ ನವೆಂಬರ್ 2ನೇ ತಾರೀಖಿನಿಂದ, ಡಿಸೆಂಬರ್ 10ನೇ ತಾರೀಖಿನವರೆಗೆ… ಒಟ್ಟು 39 ದಿನಗಳ ಕಾಲ, ಎರಡು ಹಂತಗಳಲ್ಲಿ ಈ ಯುದ್ಧ ನಡೆಯಿತು !

ಮೊದಲನೇ ವಿಶ್ವಯುದ್ಧದ ಸಂದರ್ಭದಲ್ಲಿ, ಬ್ರಿಟೀಷ್ ಸರ್ಕಾರವು, ಡಿಸೈನ್ ಮಾಡಿ, ತಯಾರಿಸಿ, ಬಳಸಿದ್ದ, ಸುಮಾರು 12.5 ಕೇಜಿಯಷ್ಟು ತೂಕದ, ಅಜಮಾಸು ಎರಡು ಫರ್ಲಾಂಗಿನಿಂದ (800 ಮೀಟರ್) ಮೂರು ಕಿಲೋಮೀಟರುಗಳಷ್ಟು (3000 ಮೀಟರ್) ಫೈರಿಂಗ್ ರೇಂಜಿದ್ದ, ಲೆವಿಸ್ ಮಷಿನ್ ಗನ್ನನ್ನು ಈ ಎಮು ಯುದ್ಧದಲ್ಲಿ ಮುಖ್ಯ ಆಯುಧವಾಗಿ ಬಳಸಲಾಗಿತ್ತು.

ಸುರಿಯುತ್ತಿದ್ದ ಮಳೆ, ಜಾಮ್ ಆಗುತ್ತಿದ್ದ ಮಷಿನ್ ಗನ್ನುಗಳ ಕಿರಿಕಿರಿಯ ನಡುವೆ, ಆ ಮೂವರು ಸೈನಿಕರು, ಈ 20 ಸಾವಿರ ಶತ್ರುಗಳ (!?) ವಿರುದ್ಧ ವೀರಾವೇಶದಿಂದ ಹೋರಾಡಿದರು !

ಈ ಅವ್ಯವಸ್ಥೆಯ ನಡುವೆ, ಮೊದಲನೇ ದಿನ, ಆ ಮೂವರು ಹೊಡೆಯಲು ಶಕ್ಯವಾದದ್ದು ಒಂದು ಡಜನ್ ಎಮುಗಳನ್ನು ಮಾತ್ರ.

ನವೆಂಬರ್ 2ನೇ ತಾರೀಖಿನಿಂದ ನವೆಂಬರ್ 8ನೇ ತಾರೀಖಿನವರೆಗೆ ನಡೆದ ಮೊದಲ ಹಂತದ ಯುದ್ಧದಲ್ಲಿ, ವೀರಾವೇಶದಿಂದ ಹೋರಾಡಿದ ಆ ಮೂವರು ಸೈನಿಕರು, 2500 ಗುಂಡುಗಳನ್ನು ಹಾರಿಸಿ, ಒಟ್ಟೂ ಸುಮಾರು 500 ಎಮುಗಳನ್ನು ಕೊಲ್ಲುವುದರಲ್ಲಿ ಸಫಲರಾದರು.

ಸರಾಸರಿ ಲೆಕ್ಕದಲ್ಲಿ, ಹತ್ತು ಗುಂಡು ಹಾರಿಸಿದರೆ, ಒಂದು ಗುಂಡು ಎಮುಗೆ ತಾಕಿ ಸಾಯುತ್ತಿದ್ದವಂತೆ. ಇವರ ಗುಂಡಿನ ಮೊರೆತ ಕೇಳಿ, ಅವು ದಿಕ್ಕಾಪಾಲಾಗಿ ಓಡಿ ಬಚಾವಾಗುತ್ತಿದ್ದವು !

ಡಿಸೆಂಬರ್ 10ನೇ ತಾರೀಖು ಈ ಯುದ್ಧ ಮುಗಿದಾಗ, ಇವರ ಗುಂಡಿನ ಆರ್ಭಟಕ್ಕೆ ಮತ್ತು ಗಾಬರಿಗೊಂಡ ಎಮುಗಳ ಓಡಾಟದಿಂದಾಗಿ, ಉಳಿದಿದ್ದ ಗೋಧಿ ಬೆಳೆಯೂ ಪೂರ್ತಿ ನೆಲಕಚ್ಚಿತು. ರೈತರು ಬೀದಿಗೆ ಬೀಳುವಂತಾದರು.

ಉಳಿದಿದ್ದ 19000 ಎಮುಗಳು, ಅದೇ ಏರಿಯಾದಲ್ಲಿ ಆರಾಮವಾಗಿ ಸಂತಾನಾಭಿವೃದ್ಧಿ ಮಾಡಿ, ಕನಿಷ್ಠ ಇನ್ನೊಂದು 10-12 ಸಾವಿರ ಮರಿ ಮಾಡಿಕೊಂಡು ಜಾಗ ಬಿಟ್ಟವು.

“ನಾವು ಈ ಯುದ್ಧದಲ್ಲಿ, 10 ಸಾವಿರ ರೌಂಡ್ಸ್ ಗುಂಡು ಹಾರಿಸಿ, ಸುಮಾರು 1000 ಎಮುಗಳನ್ನು ಸಾಯಿಸಿದ್ದೇವೆ. ಇನ್ನೊಂದು 2500 ಎಮುಗಳಿಗೆ ಗಾಯ ಮಾಡಿದೀವಿ. ಅವು ಆ ಗಾಯಗಳಿಂದ ನರಳಿ ಇನ್ನೊಂದ್ ಸೊಲ್ಪ ದಿನದಲ್ಲಿ ಸಾಯಬಹುದು” ಎಂದು ಮೇಜರ್ ಮೇಜರ್ P. W. ಮೆರಿಡಿತ್ ನೀಡಿದ್ದ ಗ್ರೌಂಡ್ ರಿಪೋರ್ಟನ್ನೇ ಆಸ್ಟ್ರೇಲಿಯಾ ಸಂಸತ್ತಿನಲ್ಲಿ ಜಾರ್ಜ್ ಫಾಸ್ಟರ್ ಪಿಯರ್ಸ್ ಮಂಡಿಸಿದಾಗ, ಸಂಸತ್ತು (Australian House of Representatives) ಕ್ಯಾಕರಿಸಿ ಉಗಿದಿತ್ತು.

ಪತ್ರಿಕೆಗಳು ಸರ್ಕಾರದ ಈ ಹುಚ್ಚು ಸಾಹಸವನ್ನು ನೋಡಿ, ಪೆಕಪೆಕನೆ ನಕ್ಕಿದ್ದವು.

ಈ ಯುದ್ಧದಲ್ಲಿ ಅವತ್ತು ಗೆದ್ದಿದ್ದು ಮಾತ್ರ, ಎಮುಗಳ ಸೈನ್ಯ !

ಆಮೇಲೆ ಬೇಸತ್ತ ಆಸ್ಟ್ರೇಲಿಯಾ ಸರ್ಕಾರ, ಎಮುಗಳನ್ನು ಹೊಡೆದವರಿಗೆ ಬಹುಮಾನ ಘೋಷಿಸಿತು.

ಜನರಿಗೆ, ಗೋಧಿ ಬೆಳೆಯುವುದಕ್ಕಿಂತ ಈ ಎಮುಗಳನ್ನು ಕೊಂದು ಬಹುಮಾನ ಸಂಪಾದಿಸುವುದೇ ಲಾಭದಾಯಕ ಅನಿಸತೊಡಗಿತು. ಬಂದೂಕು ಎತ್ತಿಕೊಂಡು ಎಮು ಕಂಡಲ್ಲಿ ಗುಂಡಿಕ್ಕತೊಡಗಿದರು.

ಆಗ, ಈ ಎಮುಗಳ ಕಾಟ ಕೊಂಚ ಕಡಿಮೆಯಾಗತೊಡಗಿತು.

ಆ 1932-33ನೇ ಇಸವಿಯ ಈ ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ, ಎಮುಗಳನ್ನು ಹೊಡೆದು ಬಹುಮಾನ ಗಿಟ್ಟಿಸಿದವರು ಒಟ್ಟೂ 57000 ಜನರಂತೆ !

ಸುಧೀರ್ ಪ್ರಭು
ಚಿತ್ರ ಕೃಪೆ : https://www.pinterest.com.au/ ಹಾಗು ಗೂಗಲ್

Related post