ಸೋತರೂ ಸೊಲೊಪ್ಪದ ರಾಘವೇಂದ್ರ ದೇವ್ಗಿ

ಸೋತರೂ ಸೊಲೊಪ್ಪದ ರಾಘವೇಂದ್ರ ದೇವ್ಗಿ

ಉತ್ತರ ಕನ್ನಡ ಜಿಲ್ಲೆಯ ಕುಮುಟಾದ ಒಂದು ಚಿಕ್ಕ ಹಳ್ಳಿಯಲ್ಲಿ ಹುಟ್ಟಿ ಸುಮಾರು ಹನ್ನೆರಡು ವರ್ಷಗಳ ಹಿಂದೆ ಭಾರತ ಕ್ರಿಕೆಟ್ ತಂಡದ ತಾರೆಯಾಗಿ ಮಿನುಗಬೇಕೆಂಬ ಮಹದಾಸೆಯನ್ನು ಹೊತ್ತು ಮುಂಬೈ ಎಂಬ ಮಾಯಾನಗರಿಗೆ ಬಂದ ಯುವಕನೊಬ್ಬನ ಬದುಕು ಅನಿವಾರ್ಯವಾಗಿ ತಿರುವನ್ನು ಪಡೆದುಕೊಂಡ ರಾಘವೇಂದ್ರ ದೇವ್ಗಿ ರವರ ಕಥೆಯಿದು.
ಇವರು ಇಂದು ಭಾರತೀಯ ಕ್ರಿಕೆಟ್ ತಂಡದ ಸಹಾಯಕ ದೈಹಿಕ ತರಬೇತುದಾರ.

ಕುಮಟಾದ ಹಳ್ಳಿಯೊಂದರ ಬಡ ಕುಟುಂಬದಲ್ಲಿ ಹುಟ್ಟಿದ ರಾಘವೇಂದ್ರ ದೇವ್ಗಿರವರು ಶಾರದಾ ನಿಲಯ ಪ್ರೌಢಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವಾಗಲೇ ಬೆಳೆಯುವ ಸಿರಿ ಮೊಳಕೆಯಲ್ಲಿಯೇ ಎಂಬಂತೆ ಕ್ರಿಕೆಟ್‌ ನ ಗೀಳು ಹುಟ್ಟಿಕೊಂಡು ತಾನು ಶ್ರೇಷ್ಠ ಕ್ರಿಕೆಟ್ ಪಟುವಾಗಬೇಕೆಂಬ ಆಸೆಯು ಮನದಲ್ಲಿ ಗಟ್ಟಿಯಾಗಿ ಬೇರೂರಿತ್ತು. “ಕ್ರಿಕೆಟ್ ತನ್ನ ಬದುಕು, ಅದೇ ನನ್ನ ಗುರಿ” ಎಂಬ ಮಾತು ಆ ಪುಟ್ಟ ಹೃದಯದಲ್ಲಿ ಅದಾಗಲೇ ಸ್ಪಷ್ಟವಾಗಿತ್ತು. ತನ್ನ ಮಗ ಕ್ರಿಕೆಟ್ ಕ್ಷೇತ್ರದೆಡೆಗೆ ಆಕರ್ಷಿತನಾಗುತ್ತಿರುವುದಕ್ಕೆ ಹೆತ್ತವರಿಂದ ಸ್ಪಷ್ಟ ವಿರೋಧವಿದ್ದು, ತನ್ನ ಬಿಡುವಿನ ಹೆಚ್ಚಿನ ಅವಧಿಯನ್ನೆಲ್ಲಾ ಕ್ರಿಕೆಟ್ ಮೈದಾನದಲ್ಲೇ ಕಳೆಯುತ್ತಿದ್ದನ್ನು ಗಮನಿಸಿದ ಪೋಷಕರು, ಶಾಲಾ ಶಿಕ್ಷಕರ ಮಗನಾಗಿ ಉನ್ನತ ವಿದ್ಯಾಬ್ಯಾಸ ಪಡೆದು ಪ್ರಸಿದ್ಧ ಸಂಸ್ಥೆಯಲ್ಲಿ ಉದ್ಯೋಗಕ್ಕೆ ಸೇರುವಂತೆ ಎಂದು ಹಲವು ಬಾರಿ ಗದರಿಸಿದ್ದೂ ಇದೆ. ಆದರೆ ರಾಘವೇಂದ್ರ ರವರ ಕನಸು ಮತ್ತು ಗುರಿ ಹಿಂದಿರುಗಿ ನೋಡದ ಸ್ಥಿತಿಯಲ್ಲಿ ಕ್ರಿಕೆಟ್ ಕ್ಷೇತ್ರದೆಡೆಗೆ ಅದಾಗಲೇ ಟಿಸಿಲೊಡೆದಿತ್ತು.

ಶಾಲಾ ರಜಾ ದಿನಗಳಲ್ಲಿ ರಾಘವೇಂದ್ರ ರವರು ಮುಂಬೈನಲ್ಲಿರುವ ತನ್ನ ಬಂಧುಗಳ ಮನೆಗೆ ಹೋಗುತ್ತಿದ್ದಾಗ ಅಲ್ಲಿ ಕ್ರಿಕೆಟ್ ದಂತಕಥೆ ತೆಂಡೂಲ್ಕರ್‌ ರವರ ಕ್ರಿಕೆಟ್ ಗುರುಗಳಾದ ರಮಾಕಾಂತ ಅಜ್ರೇಕರ್‌ ರವರ ಕ್ರಿಕೆಟ್ ಅಕಾಡೆಮಿಯಲ್ಲಿ ಕ್ರಿಕೆಟ್‌ ನ ವಿವಿಧ ಆಯಾಮಗಳನ್ನು ಸ್ಥೂಲವಾಗಿ ಕಲಿಯುತ್ತಾರೆ. ಆಗಲೇ ಇವರ ಕಲಿಕಾ ಆಸಕ್ತಿ, ಏಕಾಗ್ರತೆ, ಬದ್ಧತೆ ಮೊದಲಾದವುಗಳನ್ನು ಗಮನಿಸಿದ ಅಜ್ರೇಕರ್‌ರವರು ಭವಿಷ್ಯದಲ್ಲಿ ಇವನೊಬ್ಬ ಉತ್ತಮ ಕ್ರಿಕೆಟ್ ಆಟಗಾರನಾಗಿ ಹೊರ ಹೊಮ್ಮತ್ತಾನೆ ಎಂಬ ಆಶಾವಾದದ ಮಾತುಗಳನ್ನಾಡಿದ್ದರು. ಆದರೆ ಬಂಧುಗಳ ಮನೆಯಲ್ಲಿ ಹೆಚ್ಚು ದಿನ ನಿಲ್ಲಲಾರದೇ ಹಾಗೂ ಮುಂಬೈ ಮಹಾನಗರಿಯ ದುಬಾರಿ ಜೀವನದ ಕಾರಣದಿಂದಾಗಿ ಇವರು ಮತ್ತೆ ತನ್ನೂರನ್ನು ಸೇರಿಕೊಳ್ಳುತ್ತಾರೆ. ಪ್ರೌಢಶಾಲಾ ಶಿಕ್ಷಣದ ನಂತರ ಪಿ.ಯು.ಸಿ ವಿದ್ಯಾಭ್ಯಾಸವನ್ನು ಕುಮಟಾದ ಕೆ.ಎಲ್.ಇ ಕಾಲೇಜಿನಲ್ಲಿ ಮಾಡುತ್ತಿರುವಾಗಲೂ ಇವರು ವಿದ್ಯಾಭ್ಯಾಸಕ್ಕಿಂತ ಹೆಚ್ಚಿನ ಅವಧಿಯನ್ನು ಕ್ರಿಕೆಟ್‌ಗೇ ಮೀಸಲಿಡುತ್ತಾರೆ. ನಂತರ ಗುರಿ ಸಾಧನೆಯ ಸಲುವಾಗಿ ರಾಘವೇಂದ್ರ ರವರು ಮನೆ ಹಾಗೂ ವಿದ್ಯಾಭ್ಯಾಸವನ್ನು ತ್ಯಜಿಸಿ ಹುಬ್ಬಳ್ಳಿ ನಗರವನ್ನು ಸೇರಿಕೊಳ್ಳುತ್ತಾರೆ.

ಆಶ್ರಯಕ್ಕಾಗಿ ಸೂರಿಲ್ಲದ ಪರಿಸ್ಥಿಯಲ್ಲಿಯೂ ಧಾರವಾಡ ವಲಯ ತಂಡದ ಪರವಾಗಿ ಆಡಬೇಕೆಂಬ ಅಧಮ್ಯ ಆಸೆಯಿಂದ ಇಲ್ಲಿ ಕರ್ನಾಟಕ ರಾಜ್ಯ ಕ್ರಿಕೆಟ್ ಅಕಾಡೆಮಿ ಮೈದಾನದಲ್ಲಿ ದಿನವಿಡೀ ಅಭ್ಯಾಸ ಮಾಡುತ್ತಾ ವಿಶ್ರಾಂತಿಗಾಗಿ ಸ್ವಲ್ಪ ದಿನಗಳ ಕಾಲ ಬಸ್‌ಸ್ಟಾಂಡ್‌ನ್ನು ಆಶ್ರಯಿಸುತ್ತಾರೆ. ಆದರೆ ಪೋಲೀಸರ ಭಯದಿಂದ ಮೈದಾನದ ಪಕ್ಕದಲ್ಲಿಯೇ ಇರುವ ಸ್ಮಶಾನವೇ ಸುರಕ್ಷಿತ ತಾಣವೆಂದು ಮನಗಂಡು ಅಲ್ಲಿಯೇ ಹಲವಾರು ರಾತ್ರಿಗಳನ್ನು ಕಳೆಯುತ್ತಾರೆ. ಕ್ರಿಕೆಟ್ ಆಡುವ ವೇಳೆ ತನ್ನ ಬಲಗೈಗೆ ಗಂಭೀರವಾದ ಗಾಯವನ್ನು ಮಾಡಿಕೊಂಡು ಶ್ರೇಷ್ಠ ಕ್ರಿಕೆಟ್ ಆಟಗಾರನಾಗಬೇಕೆಂಬ ಅವರ ಕನಸು ಭಗ್ನವಾಗುವ ಹಂತಕ್ಕೆ ಬರುತ್ತದೆ. ಒಂದೆಡೆ ಕ್ರಿಕೆಟ್‌ಗಾಗಿ ಬದುಕಿನಲ್ಲಿ ಮಾಡಿದ ತ್ಯಾಗಗಳು ಮತ್ತು ಕ್ರಿಕೆಟ್‌ ನ್ನೇ ದೇವರೆಂದು ಸ್ವೀಕರಿಸಿದ ಮನಸ್ಸು, ಮತ್ತೊಂದೆಡೆ ಅಡ್ಡಿಯಾಗುವ ತನ್ನ ಗಾಯದ ಸಮಸ್ಯೆಯ ಮಧ್ಯೆಯೂ ಫಿನಿಕ್ಸ್ ಹಕ್ಕಿಯಂತೆ ಮೇಲೆದ್ದು ನನ್ನ ಕನಸುಗಳು ಕಮರಲು ಬಿಡೆನೆಂಬ ದಿಟ್ಟ ನಿರ್ಧಾರದೊಂದಿಗೆ ಬೆಂಗಳೂರಿನ ಎಮ್.ಜಿ ರಸ್ತೆಗೆ ಬರುತ್ತಾರೆ. ಇದೇ ಬೆಂಗಳೂರು ರಾಘವೇಂದ್ರ ದೇವ್ಗಿರವರ ಬದುಕಿನ ದಿಕ್ಕನ್ನೇ ಬದಲಾಯಿಸುತ್ತದೆ ಹಾಗೂ ಇವರ ಕನಸಿನ ಮೆಟ್ಟಿಲಾಗಿ ಮಾರ್ಪಾಡಾಗುತ್ತದೆ. ಏಕೆಂದರೆ ಚಿನ್ನಸ್ವಾಮಿ ಕ್ರಿಡಾಂಗಣ ಇರುವುದು ಇಲ್ಲೇ. ತನ್ನ ಕನಸನ್ನು ಹೊತ್ತು ಕುಳಿತ್ತಿದ್ದ ರಾಘವೇಂದ್ರರವರನ್ನು ಗಮನಿಸಿದ ಭಾರತ ತಂಡದ ಮಾಜಿ ವೇಗದ ಬೌಲರ್ ಜಾವಗಲ್ ಶ್ರೀನಾಥ್‌ರವರು ಇವರಲ್ಲಿದ್ದ ಕನಸು ಹಾಗೂ ಕ್ರಿಕೆಟ್‌ನ ತುಡಿತವನ್ನು ಕಂಡು ಕರ್ನಾಟಕ ಕ್ರಿಕೆಟ್ ಸಂಸ್ಥೆಯ ಮುಖ್ಯ ತರಬೇತುದಾರರಾಗಿದ್ದ ಇರ್ಫಾನ್ ಸೇಠ್‌ ರಿಗೆ ಪರಿಚಯಿಸುತ್ತಾರೆೆ. ಅಲ್ಲಿಂದ ಇಲ್ಲಿಯವರೆಗೂ ಈ ಹುಡುಗ ಮತ್ತೆಂದೂ ಹಿಂದೆ ತಿರುಗಿ ನೋಡಿದ್ದೇ ಇಲ್ಲ

ಕೈ ಗಾಯದ ಕಾರಣದಿಂದಾಗಿ ರಾಘು ರವರು ಇರ್ಫಾನ್ ಸೇಠ್‌ ರವರ ಗರಡಿಯಲ್ಲಿ ಸುಮಾರು 2008 ರವರೆಗೆ ಸಹಾಯಕರಾಗಿ ಕರ್ತವ್ಯವನ್ನು ನಿರ್ವಹಿಸುವ ಸಂದರ್ಭದಲ್ಲೇ ಇವರಲ್ಲಿನ ಪರಿಪೂರ್ಣ ಕ್ರಿಕೆಟಿಗನಾಗಬೇಕೆಂಬ ಮನೋಭಾವವನ್ನು ಗಮನಿಸಿದ್ದಾಗಿ ಹೇಳುತ್ತಾರೆ. ಕೆ.ಎಸ್.ಸಿ.ಎ ಯಲ್ಲಿದ್ದಾಗ (ಕನಾಟಕ ರಾಜ್ಯ ಕ್ರಿಕೆಟ್ ಅಕಾಡೆಮಿ) ಸ್ವಾತಿಕ್ ಯೂನಿಯನ್ ಕ್ರಿಕೆಟ್ ಕ್ಲಬ್ ಪರ ಆಡುತ್ತಾ ಅದರ ಮುಖ್ಯ ತರಬೇತುದಾರರಾದ ಇರ್ಫಾನ್ ಸೇಠ್‌ ರವರೊಂದಿಗೆ ಸಹ ಆಟಗಾರರಿಗೆ ಅಭ್ಯಾಸ ಶಿಬಿರದಲ್ಲಿ ಥ್ರೋಡೌನ್ (ವಿವಿಧ ಆಯಾಮಗಳ ಬೌಲಿಂಗ್) ಬೌಲರ್ ಆಗಿಯೂ ಕಾರ್ಯನಿರ್ವಹಿಸುವ ಅವಕಾಶವನ್ನು ಪಡೆಯುತ್ತಾರೆ. ಈ ಒಂದು ವಿಶೇಷ ಕಾರಣದಿಂದಾಗಿಯೇ ರಾಘವೇಂದ್ರರವರು ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್.ಸಿ.ಎ) ವತಿಯಿಂದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾರತದ ಹಿರಿಯ ಆಟಗಾರರ ಅಭ್ಯಾಸ ಶಿಬಿರಗಳು ನಡೆಯುತ್ತಿದ್ದಾಗ ಆಗಾಗ ಸಹಾಯಕರಾಗಿ ಹೋಗುವ ಅವಕಾಶವನ್ನು ಪಡೆಯುತ್ತಾರೆ. ಹೀಗೆ ಕರ್ನಾಟಕ ರಾಜ್ಯ ಕ್ರಿಕೆಟ್ ಅಕಾಡೆಮಿಯಿಂದ ಭಾರತೀಯ ಕ್ರಿಕೆಟ್ ತಂಡ ಅಥವಾ ರಣಜಿ ಆಟಗಾರರ ಅಭ್ಯಾಸ ಶಿಬಿರಗಳಲ್ಲಿ ನೆಟ್ಸ್ನಲ್ಲಿ ಬೌಲಿಂಗ್ ಮಾಡಲು ಬೌಲರ್‌ಗಳ ಬೇಡಿಕೆ ಬಂದಾಗ ಇರ್ಫಾನ್ ಸೇಠ್‌ ರವರು ಧೈರ್ಯದಿಂದ ರಾಘವೇಂದ್ರರವರನ್ನು ಕಳುಹಿಸಿಕೊಡುತ್ತಿದ್ದರು.

ಕ್ರಿಕೆಟ್ ಆಟಗಾರನಾಗಬೇಕೆಂಬ ಹಂಬಲದ ಮಧ್ಯೆಯೂ ನೆಟ್ಸ್ನಲ್ಲಿ ಆಟಗಾರರಿಗೆ ಕೇವಲ ಥ್ರೋ ಡೌನ್ ಬೌಲರ್ ಆಗಿರದೇ ತನ್ನ ಬೌಲಿಂಗ್‌ಗೆ ಅಭ್ಯಾಸ ನಡೆಸುತ್ತಿದ್ದ ಆಟಗಾರರೊಂದಿಗೆ ಹಾಗೂ ಇತರ ಆಟಗಾರರೊಂದಿಗೆ ಉತ್ತಮ ಬಾಂಧವ್ಯ ಹಾಗೂ ಅವರ ಕಠಿಣ ಪರಿರ್ಶಮಕ್ಕೆ ಆಟಗಾರರೇ ಮನಸೋಲುತ್ತಿದ್ದರು. 2008 ರಲ್ಲಿ ಪೂರ್ಣಕಾಲಿಕವಾಗಿ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಕರ್ತವ್ಯಕ್ಕೆ ಸೇರ್ಪಡೆಯಾಗುವಾಗಲೇ ಈ ಸಂಸ್ಥೆಯ ಸಹಭಾಗಿತ್ವದಲ್ಲಿ ಬರುವ ಎಲ್ಲಾ ಆಟಗಾಗರಿಗೆ ಅದಾಗಲೇ ರಾಘವೇಂದ್ರ ರವರು ಸಹಾಯಕರಾಗಿ ಕರ್ತವ್ಯ ನಿರ್ವಹಿಸಿದ್ದರು. ಕ್ರಿಕೆಟ್ ದೇವರೆಂದೇ ಕರೆಯಲ್ಪಡುವ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್, ಕ್ರಿಕೆಟ್ ಗೋಡೆ ಎಂದೇ ಖ್ಯಾತರಾದ ರಾಹುಲ್ ದ್ರಾವಿಡ್, ಅಪ್ರತಿಮ ನಾಯಕ ಮಹೇಂದ್ರ ಸಿಂಗ್ ಧೋನಿ ರವರಂತಹ ದಿಗ್ಗಜರಿಗೆ ಹಾಗೂ ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಮಿಂಚುತ್ತಿರುವ ಹೆಚ್ಚಿನೆಲ್ಲಾ ಆಟಗಾರರಿಗೆ ಥ್ರೋಡೌನ್ ಬೌಲಿಂಗ್ ಮಾಡಿದ ಹೆಗ್ಗಳಿಕೆ ರಾಘವೇಂದ್ರ ದೇವ್ಗಿರವರದು.

ರಾಘವೇಂದ್ರ ದೇವ್ಗಿರವರ ವಿಶೇಷತೆಗಳು

ಅಂತರಾಷ್ಟ್ರೀಯ ಮಟ್ಟದ ಕ್ರಿಕೆಟಿಗನಾಗಬೇಕೆಂಬ ಕನಸು ಕಂಡಿದ್ದ ರಾಘವೇಂದ್ರರವರು ವಿಧಿಯ ಕಾರಣದಿಂದಾಗಿ ಕ್ರಿಕೆಟಿಗನಾಗಲು ಸಾಧ್ಯವಾಗದೇ ಇದ್ದಾಗ ತನ್ನ ಗುರಿಯನ್ನು ಅರ್ಧದಲ್ಲಿ ಕೈಬಿಡದೆ ಗುರಿಗೆ ಪೂರಕವಾದ ಸಾಧನೆಯನ್ನು ಮಾಡಬೇಕೆಂದು ಪಣತೊಟ್ಟು ಭಾರತೀಯ ತಂಡದ ಆಟಗಾರರಿಗೆ ಸಹಾಯಕನಾಗಿ ಕರ್ತವ್ಯ ನಿರ್ವಹಿಸುವುದರೆಡೆಗೆ ಗಮನ ಹರಿಸುತ್ತಾರೆ. ನೆಟ್ಸ್ನಲ್ಲಿ ಆಟಗಾರರಿಗೆ ನಿಮಿಷಕ್ಕೆ 6 ರಿಂದ 7 ಬಾಲ್‌ಗಳನ್ನು ಥ್ರೋ ಡೌನ್ ಮಾಡುವ ಈತ ಗಂಟೆಗೆ ಸುಮಾರು 350 ಬಾಲ್‌ಗಳನ್ನು ನಿರಂತರವಾಗಿ ಹಾಗೂ ದಿನದಲ್ಲಿ ಸುಮಾರು 1,200 ಬಾಲ್‌ಗಳನ್ನು ಎಸೆಯುವಷ್ಟು ಬದ್ಧತೆಯನ್ನು ಹೊಂದಿದ್ದಾರೆ.
ಎಂದೂ ಆಟಗಾರರ ಮುಂದೆ ಸುಸ್ತಾಗಿ ಕೂರದೆ ತನ್ನ ಲವಲವಿಕೆಯ ಮನೋಭಾವದಿಂದ ಆಟಗಾರರಿಗೆ ಸದಾ ಸ್ಪೂರ್ತಿಯ ಸೆಲೆಯಾಗಿರುವ ಈತ ಸಚಿನ್‌ ರಷ್ಟೇ ಅಲ್ಲದೆ ಅವರ ಪುತ್ರ ಅರ್ಜುನ್‌ ರವರಿಗೂ ಥ್ರೋಡೌನ್ ಮಾಡಿದ ಹೆಗ್ಗಳಿಕೆ ಇವರದು.
ಆಟಗಾರರು ಧಣಿವಾದಾಗ ನೀರು ನೀಡುವುದು, ಆಟಗಾರರನ್ನು ಉಪಚರಿಸುವಿಕೆ, ನೆಟ್ ಅಣಿಗೊಳಿಸುವಿಕೆ, ಆಟಗಾರರಿಗೆ ಅಗತ್ಯವಿರುವ ಆಟದ ಸಾಮಾಗ್ರಿಗಳ ಪೂರೈಕೆ ಇವೇ ಮೊದಲಾದ ವೈವಿಧ್ಯಮಯ ಕೆಲಸಗಳಲ್ಲೂ ಎತ್ತಿದ ಕೈ ರಘು ರವರದು.
ಈತ ತಂಡಕ್ಕಾಗಿ ಬೌಲಿಂಗ್ ಯಂತ್ರದಂತೆ ದಣಿವಿಲ್ಲದೇ ನಿರಂತರವಾಗಿ ಬೌಲಿಂಗ್ ಮಾಡಬಲ್ಲ, ಜೊತೆಗೆ ಬ್ಯಾಟ್ಸ್ಮನ್‌ಗಳು ಹೊಡೆತಗಳಲ್ಲಿ ಪರಿಪೂರ್ಣವಾಗುವವರೆಗೂ ಛಲಬಿಡದ ತ್ರಿವಿಕ್ರಮನಂತೆ ಅವರನ್ನು ಕಾಡುವ ಥ್ರೋಡೌನ್ ಬೌಲರ್ ಇವರು.
ತನಗೆಷ್ಟು ದಣಿವಾದರೂ ಅದನ್ನು ಆಟಗಾರರಿಗೆ ತೋರ್ಪಡಿಸದೆ ಆಟಗಾರರು ಹೊಡೆತಗಳಲ್ಲಿ ಪಕ್ವವಾಗುವವರೆಗೂ ಬೌಲಿಂಗ್ ಮಾಡುತ್ತಾರೆ.

ರಾಘವೇಂದ್ರರವರ ವೃತ್ತಿ ಬದುಕಿನಲ್ಲಿ ಭಾರತ ಕ್ರಿಕೆಟ್ ತಂಡದ ಆಸ್ಟ್ರೇಲಿಯಾ ಪ್ರವಾಸವು ಮಹತ್ವದ ತಿರುವನ್ನು ಪಡೆಯುತ್ತದೆ. ಇವರ ಕ್ರೀಡಾ ಸ್ಪೂರ್ತಿ, ಬದ್ಧತೆ ಹಾಗೂ ಕಠಿಣ ಪರಿಶ್ರಮಗಳನ್ನು ಗಮನಿಸಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು ರಘು ರವರನ್ನು ಭಾರತೀಯ ಕ್ರಿಕೆಟ್ ತಂಡದ ಜೊತೆಯಲ್ಲಿ ಸಹಾಯಕನಾಗಿ ಕಳುಹಿಸುವ ನಿರ್ಧಾರವನ್ನು ಮಾಡುತ್ತದೆ. ಈ ರೀತಿ ಭಾರತೀಯ ತಂಡದ ಜೊತೆ ಆಸ್ಟ್ರೇಲಿಯಾ ಪ್ರವಾಸ ಮಾಡುವ ಅವಕಾಶ ಪಡೆದ ರಾಘವೇಂದ್ರರವರಿಗೆ ಈ ಸಿಹಿ ಸುದ್ದಿ ತಿಳಿಸುವ ಸಲುವಾಗಿ ಬಿ.ಸಿ.ಸಿ.ಐ ದೂರವಾಣಿ ಕರೆ ಮಾಡಿದಾಗ ಇವರು ಸಂಪರ್ಕಕ್ಕೆ ಸಿಗುವುದಿಲ್ಲ. ಆಗ ಇರ್ಫಾನ್ ಸೇಠ್‌ ರವರೇ ಖುದ್ದಾಗಿ ರಾಘವೇಂದ್ರರವರನ್ನು ಭೇಟಿಯಾಗಿ ವಿಷಯವನ್ನು ತಿಳಿಸಿದಾಗ ಇವರ ಮನಸ್ಸು ತುಂಬಿ ಧನ್ಯತಾ ಭಾವ ಕಣ್ಣೀರಿನ ರೂಪದಲ್ಲಿ ಹರಿದಿತ್ತು.

ರಾಘವೇಂದ್ರರವರು ತಂಡದಲ್ಲಿ ಕೇವಲ ಥ್ರೋ ಡೌನ್ ಬೌಲರ್ ಮಾತ್ರ ಆಗಿರದೇ ಆಟಗಾರರಲ್ಲಿ ಲವಲವಿಕೆ, ಕಳಕಳಿ, ಬದ್ಧತೆ ಮತ್ತು ಉತ್ತಮ ಬಾಂಧವ್ಯವನ್ನು ಬೆಸೆಯುವ ಅಪರೂಪದ ವ್ಯಕ್ತಿತ್ವ ಹೊಂದಿದ್ದು, ತಂಡದ ಆಟಗಾರರೂ ಇವರನ್ನು ಬಹಳವಾಗಿ ಆತ್ಮೀಯವಾಗಿ ಕಾಣುತ್ತಾರೆ. ಈತನ ಕ್ರಿಕೆಟ್ ಪ್ರೇಮವನ್ನು ಗಮನಿಸಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು ಭಾರತೀಯ ತಂಡದ ಮುಖ್ಯ ದೈಹಿಕ ತರಬೇತುದಾರರಾಗಿರುವ ಪ್ಯಾಡಿ ಆಪ್ಟನ್‌ರ ಗರಡಿಯಲ್ಲಿ ಸಹಾಯಕ ತರಬೇತುದಾರರನ್ನಾಗಿ ನೇಮಿಸಿದ್ದು, ಇಂದು ಇವರು ಭಾರತೀಯ ಕ್ರಿಕೆಟ್ ತಂಡದ ಅವಿಭಾಜ್ಯ ಅಂಗವಾಗಿ ಬೆಳೆದಿದ್ದಾರೆ. ಇವರು ಹಣದ ವ್ಯಾಮೋಹಕ್ಕೊಳಗಾಗಿ ತನ್ನ ಪ್ರತಿಭೆಯನ್ನು ಎಂದಿಗೂ ಮಾರಾಟ ಮಾಡಿಕೊಂಡವರಲ್ಲ. ಇವರನ್ನು ವಿವಿಧ ಐ.ಪಿ.ಎಲ್ ಫ್ರಾಂಚೈಸಿಗಳು ತಮ್ಮ ತಂಡದ ಮುಖ್ಯ ಕೋಚ್ ಹುದ್ದೆಯನ್ನು ನಿರ್ವಹಿಸುವ ಬೇಡಿಕೆಯನ್ನು ಇಟ್ಟಾಗಲೂ ಅದನ್ನು ನಯವಾಗಿ ತಿರಸ್ಕರಿಸಿ “ನಾನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ಒಬ್ಬ ಸಹಾಯಕ ತರಬೇತುದಾರನಾಗಿರಲು ಬಯಸುತ್ತೇನೆಯೇ ವಿನಃ ಹಣಕ್ಕಾಗಿ ಯಾವುದೇ ಐ.ಪಿ.ಎಲ್ ಫ್ರಾಂಚೈಸಿಗಳ ಕೋಚ್ ಆಗಿ ಅಲ್ಲ” ಎನ್ನುವ ಮೂಲಕ ತಮ್ಮ ಕ್ರೀಡಾ ಸ್ಪೂರ್ತಿಯನ್ನು ಎತ್ತಿ ಹಿಡಿದಿದ್ದಾರೆ.

ಬಡತನದ ಹಿನ್ನೆಲೆಯಿಂದ ಬಂದಂತಹ ರಾಘವೇಂದ್ರ ರವರಿಗೆ ತಂಡದ ಆಟಗಾರರು ಹಲವಾರು ಬಾರಿ ಸಹಾಯ ಹಸ್ತವನ್ನು ಚಾಚಿದ್ದರೂ ಅವರಲ್ಲಿ ಸಹಾಯವನ್ನು ಯಾಚಿಸದೇ “ತಂಡಕ್ಕೆ ಕರ್ತವ್ಯ ನಿರ್ವಹಿಸುವಲ್ಲಿ ನಿಮ್ಮ ಸಹಕಾರವೊಂದಿದ್ದರೆ ಸಾಕೆಂದು” ಕೇಳಿಕೊಳ್ಳುತ್ತಾರೆ. ಭಾರತೀಯ ಕ್ರಿಕೆಟ್ ತಂಡದ ಆರಂಭಿಕ ಆಟಗಾರರಾದ ಶಿಖರ್ ಧವನ್‌ರವರು ಇವರ ಕುರಿತಂತೆ “ನನಗೆ ರಘುರವರ ಪರಿಚಯ ಮುಂಬೈ ಕ್ರಿಕೆಟ್ ಸಂಸ್ಥೆಯಲ್ಲಿ ಆಗಿದ್ದು, ಅವರು ತಂಡದ ಪರವಾಗಿ ಅಭ್ಯಾಸ ಶಿಬಿರಗಳಿಗೆ ಥ್ರೋ ಡೌನ್ ಬೌಲರ್ ಆಗಿ ಆಗಮಿಸುತ್ತಿದ್ದು ಬ್ಯಾಟ್ಸ್ಮನ್‌ಗಳು ಬೆಚ್ಚಿಬೀಳಿಸುವ ವಿವಿಧ ರೀತಿಯ ಎಸೆತಗಳನ್ನು ವಿವಿಧ ಕೋನಗಳಲ್ಲಿ ಎಸೆಯುತ್ತಿದ್ದು ನಿರಂತರವಾಗಿ ಬೌಲಿಂಗ್ ಮಾಡುವ ಮೂಲಕ ನಮ್ಮನ್ನು ಸುಸ್ತಾಗದಂತೆ ನೋಡಿಕೊಳ್ಳುತ್ತಾರೆ. ಬದ್ದತೆಗೆ ಇನ್ನೊಂದು ಹೆಸರೇ ರಾಘವೇಂದ್ರ” ಎನ್ನುತ್ತಾರೆ. ಇನ್ನೊಬ್ಬ ಆರಂಭಿಕ ಆಟಗಾರ ರೋಹಿತ್ ಶರ್ಮ ಹೇಳುವಂತೆ “ಈತನ ಪರಿಚಯ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಾಗಿದ್ದು ಈತನ ನಿರಂತರ ಬೌಲಿಂಗ್ ಮಾಡುವ ರೀತಿ ನಮ್ಮನ್ನು ಮತ್ತಷ್ಟು ಮಾನಸಿಕವಾಗಿ ಗಟ್ಟಿಗೊಳಿಸುತ್ತದೆ” ಎಂದು ಹೆಮ್ಮೆಯಿಂದ ಹೇಳುತ್ತಾರೆ.

ಶ್ರೇಷ್ಠ ಕ್ರಿಕೆಟಿಗನಾಗಬೇಕೆಂಬ ಕನಸನ್ನು ಹೊತ್ತ ರಾಘವೇಂದ್ರ ರವರಿಗೆ ಕ್ರಿಕೆಟ್‌ನ ದಂತಕಥೆಗಳ ಸಾಧನೆಗಳನ್ನು ಮಾಡಲಾಗದಿದ್ದರೂ, ಇತ್ತೀಚಿನ ಹೊಡೆಬಡಿಯ ದಾಂಡಿಗರ ಸಾಧನೆಯ ಹಿಂದೆ ಎಲೆ ಮರೆಯ ಕಾಯಿಯಂತೆ ಎದ್ದು ಕಾಣುವುದು ರಾಘವೇಂದ್ರ ದೇವ್ಗಿ ರವರ ಪರಿಶ್ರಮ ಎಂದರೆ ಅತಿಶಯೋಕ್ತಿಯಾಗಲಾರದು. “ಸಚಿನ್ ಕ್ರಿಕೆಟ್‌ನ್ನು ಬಾಲ್ಯದಿಂದಲೇ ಆಡುತ್ತಾ ಬೆಳೆದು ಸಾಧನೆಯ ಮೂಲಕ ಕ್ರಿಕೆಟ್‌ನ ದೇವರು ಎಂದು ಕರೆಸಿಕೊಂಡವರು, ರಾಘವೇಂದ್ರರವರು ಕ್ರಿಕೆಟ್‌ನ್ನೇ ತನ್ನ ದೇವರಾಗಿ ಸ್ವೀಕರಿಸಿ ಅದರಲ್ಲೇ ಸಾಧನೆಯನ್ನು ಮಾಡಿದವರು”. “ನಿದ್ದೆಯಲ್ಲಿ ಕಾಣುವುದು ಕನಸಲ್ಲ, ಬದಲಾಗಿ ನಿದ್ದೆಯಿಲ್ಲದಂತೆ ಮಾಡುವುದೇ ನಿಜವಾದ ಕನಸು” ಎಂಬ ಅಬ್ದುಲ್ ಕಲಾಂರ ಮಾತಿನಂತೆ ತನ್ನ ಕನಸನ್ನು ನನಸಾಗಿಸುವ ಸಾಧನೆಯ ಹಾದಿಯಲ್ಲಿ ಸಾಗುವಾಗ ಎದುರಾಗುವ ಹಲವಾರು ಕಠಿಣ ಸವಾಲುಗಳಿಗೆ ಅಂಜಿ ಕನಸನ್ನೇ ಕೈ ಬಿಡುವ ಬದಲು ಕನಸಿನ ಪೂರಕ ಸಾಧನೆಯನ್ನು ಮಾಡುವಲ್ಲಿ ಪ್ರಯತ್ನಿಸಿ ಯಶಸ್ವಿಯಾಗಿರುವ ರಘು ರವರು ಇಂದು ತನ್ನಂತೆಯೇ ಸಾಧಿಸ ಹೊರಟಿರುವ ಅನೇಕ ಯುವ ಜನತೆಗೆ ದಾರಿ ದೀಪವಾಗುವ ಮೂಲಕ ವಿಶಿಷ್ಟ ಸಾಧಕರ ಸಾಲಿನಲ್ಲಿ ಅಗ್ರಮಾನ್ಯರಾಗಿ ನಿಲ್ಲುತ್ತಾರೆ.

ಸಂತೋಷ್ ರಾವ್. ಪೆರ್ಮುಡ
ಪಟ್ರಮೆ ಗ್ರಾಮ & ಅಂಚೆ,
ಬೆಳ್ತಂಗಡಿ ತಾಲೂಕು ದೂ: 9742884160
ಚಿತ್ರ ಕೃಪೆ: ಅಂತರ್ಜಾಲ

Related post

Leave a Reply

Your email address will not be published. Required fields are marked *