ಸೋಯಿಚಿರೋ ಹೋಂಡಾ

ಸೋಯಿಚಿರೋ ಹೋಂಡಾ

‘ಬೆಂಕಿಯಲ್ಲಿ ಅರಳಿದ ಹೂವು’ ಎಂಬ ಚಲನಚಿತ್ರದಲ್ಲಿ ಕಷ್ಟಗಳು ನೋವುಗಳು ಅದೆಷ್ಟೇ ಬಂದರೂ ಸೋಲನ್ನೊಪ್ಪಿಕೊಳ್ಳದೇ ಧೈರ್ಯದಿಂದ ಮುಂದಕ್ಕೆ ಸಾಗಿದಾಗ ಸುಖ ಸಂತೋಷಗಳು ದೊರೆಯುತ್ತವೆ ಎಂಬ ಸಂದೇಶವನ್ನು ನೀಡಿದ್ದಾರೆ. ಧನಾತ್ಮಕವಾಗಿ ಯೋಚಿಸುವ ವ್ಯಕ್ತಿಯು ಹತ್ತು ಬಾರಿ ಸೋತರೂ ಹನ್ನೊಂದನೆಯ ಬಾರಿ ಮತ್ತೆ ಎದ್ದು ನಿಂತು ಗೆಲ್ಲಲು ಪ್ರಯತ್ನಿಸುತ್ತಾನೆ, ಕಷ್ಟಗಳಿದ್ದಾಗಲೇ ಸಾಧನೆಯ ಹಸಿವು ಹೆಚ್ಚಿ ಯಶಸ್ಸನ್ನೂ ಗಳಿಸಿಕೊಳ್ಳುತ್ತಾನೆ. . ಋಣಾತ್ಮಕ ಧೋರಣೆಯ ವ್ಯಕ್ತಿಯು ಒಂದೆರಡು ಬಾರಿ ಪ್ರಯತ್ನಿಸಿ ಸೋಲನ್ನು ಒಪ್ಪಿಕೊಂಡು ಬಿಡುತ್ತಾನೆ. ಅಟೋಮೊಬೈಲ್ ಕ್ಷೇತ್ರದಲ್ಲಿ ವಿಶ್ವವಿಖ್ಯಾತಿಯನ್ನು ಪಡೆದಿರುವ ಹೋಂಡಾ ಕಂಪನಿಯ ಸಂಸ್ಥಾಪಕ “ಸೋಯಿಚಿರೋ ಹೋಂಡಾ” ತನ್ನದೇ ಆದ ಅಟೋಮೊಬೈಲ್ ಸಾಮ್ರಾಜ್ಯವನ್ನು ಕಟ್ಟಿ ಬೆಳೆಸಲು ಪಟ್ಟ ಶ್ರಮವನ್ನು ಊಹಿಸಲೂ ಸಾಧ್ಯವಿಲ್ಲ. ನೋವುಗಳ ನಂತರವೇ ಸುಖವಿರುವುದು ಎನ್ನುವುದಕ್ಕೆ ಇವರೇ ಉತ್ತಮ ಉದಾಹರಣೆ.

ಸುಯಿಚಿರೋ ಹೋಂಡಾ ಹುಟ್ಟಿದ್ದು ಜಪಾನ್ ದೇಶದಲ್ಲಿ. ಬಡತನದಿಂದ ಕೂಡಿದ ಕೆಳ ಮಧ್ಯಮ ವರ್ಗದಲ್ಲಿ ಇವರು ಜನಿಸುತ್ತಾರೆ. ದಿನದಲ್ಲಿ ಎರಡು ಹೊತ್ತಿನ ಊಟವಷ್ಟೇ ಇವರಿಗಿದ್ದ ಆಸ್ತಿ. ತನ್ನ ಸಣ್ಣ ವಯಸ್ಸಿನಲ್ಲೇ ತಾನು ಜಗತ್ತೇ ಗುರುತಿಸುವಂತಹ ಸಾಧನೆ ಮಾಡಬೇಕೆಂಬ ಅದಮ್ಯ ಹಂಬಲವಿತ್ತು. ಸಣ್ಣ ವಯಸ್ಸಿನಿಂದಲೇ ಯಂತ್ರಗಳೆಂದರೆ ಅದೇನೋ ಆಸಕ್ತಿ ಈತನಿಗೆ. ಇದಕ್ಕಾಗಿ ತನ್ನ 20 ನೇ ವಯಸ್ಸಿನಲ್ಲೇ ಇಂಜಿನಿಯರಿಂಗ್ ಕಾಲೇಜು ಸೇರುತ್ತಾರೆ. ಅಲ್ಲಿ ತನಗೆ ಹೊಳೆದಿದ್ದು ವಾಹನಗಳ ಇಂಜಿನ್ ಒಳಗಿರುವ ಪಿಸ್ಟನ್ ರಿಂಗ್ ತಯಾರಿಸುವ ಯೋಚನೆ. ಅದಕ್ಕಾಗಿ ತನ್ನ ಕಾಲೇಜಿನ ಲ್ಯಾಬ್’ನಲ್ಲಿ ರಾತ್ರಿ ಹಗಲು ಶ್ರಮವಹಿಸಿ ಕೆಲಸ ಮಾಡಲಾರಂಭಿಸಿದ. ಅದೆಷ್ಟೋ ಬಾರಿ ಲ್ಯಾಬ್ ಒಳಗಡೆಯೇ ನಿದ್ರಿಸಿದ್ದೂ ಇದೆ. ತಾನು ಮುಂದೊಂದು ದಿನ ಅತ್ಯತ್ತಮವಾದ ಪಿಸ್ಟನ್ ರಿಂಗ್ ತಯಾರಿಸಿ ಪ್ರಖ್ಯಾತ ಟೊಯೋಟಾ ಕಂಪೆನಿಗೆ ಪೂರೈಕೆದಾರನಾಗಬೇಕು ಎಂಬ ಆಶಯ ಈತನದ್ದು. ಈ ಸಮಯಕ್ಕೆ ಹೋಂಡಾಗೆ ಮದುವೆಯೂ ಆಗಿತ್ತು. ಪಿಸ್ಟನ್ ತಯಾರಿಗೆ ಬಂಡವಾಳದ ಕೊರತೆಯಾದಾಗ ಹೆಂಡತಿಯ ಚಿನ್ನವನ್ನೇ ಒತ್ತಯಿಟ್ಟಿದ್ದನೆಂದರೆ ಈತನ ಛಲದ ಅರಿವಾಗುತ್ತದೆ.

ಅಂತಿಮವಾಗಿ ತನ್ನ ಕನಸಿನ ಪಿಸ್ಟನ್ ರಿಂಗ್ ಮಾದರಿಯನ್ನು ತಯಾರಿಸಿ, ಟೊಯೋಟಾ ಕಂಪೆನಿ ತನ್ನ ರಿಂಗ್’ಗಳನ್ನು ಖರೀದಿಸುತ್ತದೆ ಎಂಬ ಆಶಾಭಾವನೆಯೊಂದಿಗೆ ಟೊಯೋಟಾ ಕಂಪೆನಿಯ ಕದ ಬಡಿಯುತ್ತಾರೆ. ಆದರೆ ತನ್ನ ಗುಣಮಟ್ಟವೇ ಬೇರೆ ಎಂದು ಖರೀದಿಸಲು ಟೊಯೋಟಾ ನಿರಾಕರಿಸುತ್ತದೆ. ಹೋಂಡಾ ವಾಪಾಸು ಲ್ಯಾಬ್‌ಗೆ ಬಂದಾಗ ಸಹಪಾಠಿಗಳು ಗೇಲಿಮಾಡಿದರು. ‘ನಗುವವರು ನಗುತ್ತಿರಿ, ನಾನು ಪ್ರಯತ್ನಿಸುವೆ’ ಎಂದು ಇನ್ನು ಹೆಚ್ಚಿನ ಗುಣಮಟ್ಟದ ಹೊಸ ವಿನ್ಯಾಸ ತಯಾರಿಸಲಾರಂಭಿಸಿದ. ಎರಡು ವರ್ಷಗಳ ಪರಿಶ್ರಮದ ನಂತರ ಹೊಸ ವಿನ್ಯಾಸದೊಂದಿಗೆ ಮತ್ತೆ ಟೊಯೋಟಾ ಕಂಪೆನಿಯ ಕದ ತಟ್ಟುತ್ತಾರೆ ಸೋಯಿಚಿರೋ ಹೋಂಡಾ. ಈತನ ಹೊಸ ವಿನ್ಯಾಸದಿಂದ ಖುಷಿಗೊಂಡ ಟೊಯೋಟಾ ಈತನ ಪಿಸ್ಟನ್ ರಿಂಗ್ ತಯಾರಿಕಾ ಕಾರ್ಖಾನೆ ತೆರೆಯಲು ಹಣಕಾಸಿನ ನೆರವು ನೀಡಿತು. ಟೋಯೋಟಾದ ಪ್ರೋತ್ಸಾಹದಿಂದ ಉತ್ಸಾಹದಿಂದ ಹೋಂಡಾ ಕಾರ್ಖಾನೆ ಪ್ರಾರಂಭವಾಯಿತು.

ಇದೇ ವೇಳೆಗೆ ಜಪಾನ್‌ನ ವಿವಿದೆಡೆ ಅಪ್ಪಳಿಸಿದ ಭೂಕಂಪದಿಂದಾಗಿ ಹೋಂಡಾನ ಕನಸಿನ ಕಾರ್ಖಾನೆ ಧರೆಗುರುಳಿತು. ತನ್ನ ತಂಡ ಕಣ್ಣೀರಿಟ್ಟಾಗ ಮಂದಹಾಸದಿಂದ ‘ಆದದ್ದಾಯಿತು, ಮತ್ತೆ ಕಟ್ಟೋಣ ಬನ್ನಿ’ ಎಂದ. ಎರಡನೇ ಬಾರಿ ಕಾರ್ಖಾನೆ ನಿರ್ಮಾಣ ಸಾಗಿದ್ದಾಗಲೇ ಜಪಾನ್ ಎರಡನೇ ವಿಶ್ವಯುದ್ಧ ಪ್ರವೇಶಿಸಿ ದೇಶಾದ್ಯಂತ ಸಿಮೆಂಟ್ ಪೂರೈಕೆ ನಿಂತಿತು. ಏನು ಮಾಡುವುದೆಂದು ಯೋಚಿಸುತ್ತಲೇ ‘ಸಿಮೆಂಟ್ ಸಿಗುತ್ತಿಲ್ಲ ಎಂದರೆ, ನಾವೇ ಸಿಮೆಂಟ್ ತಯಾರಿಸೋಣ’ ಎಂದು ಈತನ ತಂಡ ಸಿಮೆಂಟ್ ತಯಾರಿಸುವ ಹೊಸ ತಂತ್ರಜ್ಞಾನವನ್ನೇ ಕಂಡುಹಿಡಿಯಿತು. ಈ ಮೂಲಕ ತನ್ನ ಕಾರ್ಖಾನೆಯ ಕೆಲಸವನ್ನು ಪೂರ್ಣಗೊಳಿಸಿತು. ಆದರೆ ಅಮೆರಿಕನ್ ವಾಯುಪಡೆಗಳು ಜಪಾನ್ ಮೇಲ್ ನಡೆಸಿದ ವಾಯು ಧಾಳಿಯಲ್ಲಿ ಈತನ ಕಾರ್ಖಾನೆ ಧ್ವಂಸಗೊಂಡಿತು. ಆಗ ಜಪಾನ್‌ನಲ್ಲಿ ಸ್ಟೀಲ್ ಕೊರತೆಯಾದರೂ ಹೋಂಡಾ ಕೈಚೆಲ್ಲಿ ಕುಳಿತುಕೊಳ್ಳಲಿಲ್ಲ.

ಯುದ್ಧ ಸಂದರ್ಭ ಅಮೆರಿಕದ ಯುದ್ಧ ವಿಮಾನಗಳು ಇಂಧನದ ಟ್ಯಾಂಕ್‌ಗಳನ್ನು ಹೊತ್ತು ಹಾರುತ್ತಿದ್ದರಿಂದ ಟ್ಯಾಂಕ್‌ಗಳಲ್ಲಿದ್ದ ಇಂಧನವನ್ನು ಬಳಸಿದ ನಂತರ, ಟ್ಯಾಂಕ್‌ಗಳನ್ನು ಆಗಸದಿಂದ ಕೆಳಕ್ಕೆ ಹಾಕುತ್ತಿದ್ದವು (ವಿಮಾನದ ಭಾರ ಕಡಿಮೆಯಾಗಲಿ ಎಂದು). ಹೀಗೆ ಯುದ್ಧ ವಿಮಾನಗಳು ಜಪಾನಿನಲ್ಲಿ ಪೂರ್ತಿ ಸ್ಟೀಲ್ ಟ್ಯಾಂಕ್‌ಗಳನ್ನು ಎಸೆದಿದ್ದವು. ಹೋಂಡಾ ಅವುಗಳನ್ನೆಲ್ಲ ಸಂಗ್ರಹಿಸಿ, ಕರಗಿಸಿ ತನ್ನ ಕಾರ್ಖಾನೆ ನಿರ್ಮಾಣಕ್ಕೆ ಬಳಸಿ, ಈ ಸ್ಟೀಲ್ ಟ್ಯಾಂಕ್‌ಗಳು ‘ಅಮೆರಿಕದ ಅಧ್ಯಕ್ಷ ಟ್ರೂಮನ್‌ರ ಕೊಡುಗೆ’ ಎಂದು ಹೋಂಡಾ ಹೇಳಿದ.

ಈತನ ಸಮಸ್ಯೆ ಇಷ್ಟಕ್ಕೇ ನಿಲ್ಲದೇ, ಯುದ್ಧಾನಂತರ ಜಪಾನ್‌ನಲ್ಲಿ ತೀವ್ರ ಇಂಧನದ ಅಭಾವ ಉಂಟಾಯಿತು. ದೇಶದಲ್ಲಿ ಇಂಧನವಿಲ್ಲವಾದ ಮೇಲೆ ಕಾರುಗಳನ್ನೂ ಕೊಳ್ಳುವವರಿಲ್ಲದಾಗಿ ಟೊಯೋಟಾ ಕಂಪನಿ ಕಾರ್ ಉತ್ಪಾದನೆಯನ್ನು ನಿಲ್ಲಿಸಿತು. ಇದರಿಂದಾಗಿ ಹೋಂಡಾನ ಪಿಸ್ಟನ್ ರಿಂಗುಗಳಿಗೆ ಬೇಡಿಕೆಯೂ ಇಲ್ಲವಾಯಿತು. ದೇಶದಲ್ಲಿದ್ದ ತೀವ್ರ ಇಂಧನದ ಕೊರತೆಯ ಕಾರಣದಿಂದ ಜನರು ಕಾಲ್ನಡಿಗೆ ಮತ್ತು ಸೈಕಲ್‌ಗಳ ಮೂಲಕ ಓಡಾಟ ನಡೆಸುತ್ತಿದ್ದರು.

ಇದನ್ನೆಲ್ಲ ಸೂಕ್ಷ್ಮವಾಗಿ ಗಮನಿಸಿದ ಹೋಂಡಾಗೆ, ಸೈಕಲ್‌ಗೆ ಚಿಕ್ಕದಾದ ಇಂಜಿನ್ ಕೂರಿಸಿದರೆ ಅದು ಹೆಚ್ಚು ಇಂಧನವನ್ನು ಕುಡಿಯದು ಎನ್ನುವ ಐಡಿಯಾ ಬಂತು. ತಕ್ಷಣವೇ ಆ ಐಡಿಯಾವನ್ನು ಹೋಂಡಾ ಕಾರ್ಯ ರೂಪಕ್ಕೂ ತಂದರು. ಹೋಂಡಾ ಮತ್ತು ಅವರ ತಂಡ ಬೈಕ್ ಇಂಜಿನ್ ತಯಾರಿಸಿತು. ಕೆಲವೇ ವರ್ಷಗಳಲ್ಲಿ ಹೋಂಡಾ ಕಂಪನಿಯ ಬೈಕ್ ಇಂಜಿನ್‌ಗಳು ಎಷ್ಟು ಪ್ರಖ್ಯಾತವಾದವು ಎಂದರೆ, ಅವುಗಳನ್ನು ಯೂರೋಪ್ ಮತ್ತು ಅಮೆರಿಕಕ್ಕೂ ರಫ್ತು ಮಾಡಲಾಯಿತು. ಇದರ ನಂತರದ್ದು ಎಲ್ಲವೂ ಇತಿಹಾಸ, 1970 ರ ವೇಳೆಗೆ ಹೋಂಡಾ ಕಂಪೆನಿ ಚಿಕ್ಕ ಕಾರುಗಳ ಉತ್ಪಾದನೆಯನ್ನು ಆರಂಭಿಸಿತು. ಈತನ ಬೈಕ್‌ಗಳಷ್ಟೇ ಅಲ್ಲದೇ, ಕಾರುಗಳೂ ಜಗತ್ಪ್ರಸಿದ್ಧವಾದವು.

ಸೋಯಿಚಿರೋ ಹೋಂಡಾ ಜಾಗದಲ್ಲಿ ನಾವಿದ್ದಿದ್ದರೆ ಏನು ಮಾಡುತ್ತಿದ್ದೆವು ಎಂದು ನಾವೆಲ್ಲರೂ ಯೋಚಿಸಬೇಕಿದೆ. ಟೊಯೋಟಾ ಕಂಪನಿಯು ಹೋಂಡಾನ ಪಿಸ್ಟನ್ ರಿಂಗ್ ಡಿಸೈನ್‌ ನನ್ನು ನಿರಾಕರಿಸಿದಾಗ, ಕಾರ್ಖಾನೆಯು ಕುಸಿದುಬಿದ್ದಾಗ ಮತ್ತು ಸತತ ಸೋಲುಗಳು ಬಂದೊದಗಿದರೂ ಸೋಲುಗಳಿಗೆ ಜಗ್ಗದೇ ಯಶಸ್ಸಿನೆಡೆಗೆ ಸಾಗಿದ ಛಲಗಾರಿಕೆಯು ಎಲ್ಲರಿಗೂ ಮಾದರಿ. ಸೋಲಾಯಿತು ಎಂದು ಹಣೆಬರಹವನ್ನು ಹಳಿದು ಕೈ ಚೆಲ್ಲುತ್ತಿವ ಜಾಯಮಾನಕ್ಕೆ ಕಟ್ಟು ಬಿದ್ದಿದ್ದರೆ ವಿಶ್ವವಿಖ್ಯಾತ ಹೋಂಡಾ ಕಂಪೆನಿ ಹೊರಬರಲು ಸಾಧ್ಯವೇ ಇರಲಿಲ್ಲ. ಅದಕ್ಕೇ ಹೇಳುವುದು, ಜೀವನವೇ ಮುಗಿದು ಹೋಯಿತು ಎನ್ನುವಂತಹ ಸೋಲಾಗಬೇಕು, ಅದೇ ಸೋಲಿನಿಂದ ಪಾಠ ಕಲಿತು ಅದೇ ಸ್ಥಳದಲ್ಲಿ ಗೆದ್ದು ಬೀಗಬೇಕೆಂದು.

ಸಂತೋಷ್ ರಾವ್ ಪೆರ್ಮುಡ
ಪೆರ್ಮುಡ ಮನೆ, ಪಟ್ರಮೆ ಗ್ರಾಮ ಮತ್ತು ಅಂಚೆ
ಬೆಳ್ತಂಗಡಿ ತಾಲೂಕು, ದ.ಕ ಜಿಲ್ಲೆ-574198
ದೂ: 9742884160

Related post

Leave a Reply

Your email address will not be published. Required fields are marked *