ಪುದೀನ ಸಸ್ಯವು ಸಹಜವಾಗಿ ಎಲ್ಲೆಲ್ಲೂ ನೋಡಲ್ಪಡುವ ಗಿಡಮೂಲಿಕೆ. ಬರಿಯ ನೀರಿನಲ್ಲಿಯೂ ಸಹ ಬೆಳೆಯುವ ಸಾಮರ್ಥ್ಯ ಉಳ್ಳಂತಹ ಸಸ್ಯ. ದೀರ್ಘ ಕಾಲಿಕ ಮೂಲಿಕೆಯಾಗಿರುವ ಪುದೀನ ಸಸ್ಯವು ಅತ್ಯಂತ ಪರಿಮಳಯುಕ್ತ.
ಮೆಂಥಾ ಆರ್ವೆನ್ಸಿಸ್ ಎಂಬ ವೈಜ್ಞಾನಿಕ ಹೆಸರುಳ್ಳ ಪುದೀನ ಸಸ್ಯವು ಲ್ಯಾಮಿನೇಸಿ ಕುಟುಂಬಕ್ಕೆ ಸೇರಿದ್ದು, ಸಮಶೀತೋಷ್ಣ ಪ್ರದೇಶಗಳಾದ ಏಷ್ಯಾ, ಸೈಬೀರಿಯಾ, ಉತ್ತರ ಅಮೇರಿಕಾ, ಯುರೋಪ್ ಖಂಡ ಹಾಗು ದೇಶಗಳಲ್ಲಿ ಕಂಡು ಬರುತ್ತದೆ. ಗಾಢ ಹಸುರಿನ ಬಣ್ಣದ ಎಲೆಯುಳ್ಳ ಈ ಗಿಡಮೂಲಿಕೆಯಲ್ಲಿ ಎಳೆಯ ನೇರಳೆ ಬಣ್ಣದ ಹೂಗಳು ಕಂಗೊಳಿಸುತ್ತವೆ. ಸಣ್ಣದೊಂದು ಸಸಿಯ ಕಾಂಡವನ್ನು ಮಣ್ಣಿಗೆ ಇರಿಸಿದರೆ ಸಾಕು ಬೇರೂರಿ ಹಬ್ಬುತ್ತದೆ. ಇದರ ಸುಗಂಧಕ್ಕೆ ಬೆರಗಾಗದೆ ಇರಲು ಸಾಧ್ಯವಿಲ್ಲ.
ಪುದೀನವನ್ನು ಅದರ ಸುಗಂಧಕ್ಕೆ ಮಾರುಹೋಗಿ ಬಹಳಷ್ಟು ಖಾದ್ಯಗಳನ್ನು ತಯಾರಿಸಲು ಉಪಯೋಗಿಸುತ್ತಾರೆ. ಪುದೀನ ದಿಂದ ಚಟ್ನಿ, ತೊಕ್ಕು, ಪೆಪ್ಪೆರ್ಮಿಂಟ್, ಪಲಾವ್, ಪಾನಿಪುರಿ, ಸ್ಯಾಂಡ್ವಿಚ್ ಗಳನ್ನು ತಯಾರಿಸುತ್ತಾರೆ. ಖಾದ್ಯಗಳನ್ನು ಸೇವಿಸುವಾಗ ಅದರ ಸುಗಂಧವು ರುಚಿಯನ್ನು ಮತ್ತಷ್ಟು ಹೆಚ್ಚಿಸುತ್ತದೆ.
ರುಚಿ ಹಾಗು ಪರಿಮಳಕ್ಕೆ ಹೆಸರುವಾಸಿಯಾಗಿರುವ ಪುದೀನ ಸಸ್ಯವು ಬಹಳಷ್ಟು ಔಷಧೀಯ ಗುಣಗಳನ್ನು ಹೊಂದಿವೆ. ಆಹಾರದಲ್ಲಿ ಪುದೀನ ಸೇರಿದಷ್ಟು ಜೀರ್ಣಕ್ರಿಯೆಯನ್ನು ವೃದ್ಧಿಸುತ್ತದೆ. ದೇಹದಲ್ಲಿನ ಕೊಬ್ಬಿನ ಅಂಶಗಳನ್ನು ಕರಗಿಸಿ ದೇಹದ ತೂಕವನ್ನು ಕಡಿಮೆ ಮಾಡಲು ಸಹಾಯಕಾರಿ. ಅಜೀರ್ಣ, ಹೊಟ್ಟೆ ಉಬ್ಬರ, ಗ್ಯಾಸ್ಟ್ರಿಕ್ ನಂತಹ ಸಮಸ್ಯೆಗಳನ್ನು ನಿವಾರಣೆ ಮಾಡುತ್ತದೆ. ಗರ್ಭಿಣಿಯರಲ್ಲಿ ವಾಂತಿ ನಿವಾರಣೆಗೂ ಸಹಕಾರಿ.
ಹಸಿ ಪುದೀನ ಎಲೆಗಳನ್ನು ಜಗಿದು ತಿನ್ನುವುದರಿಂದ ಬಾಯಲ್ಲಿನ ದುರ್ವಾಸನೆ, ಹುಳುಕುಗಳನ್ನು ತಡೆದು, ಒಸಡುಗಳನ್ನು ಬಲಪಡಿಸಿ ದಂತರಕ್ಷಣೆ ನೀಡುತ್ತದೆ. ಶೀತ, ಗಂಟಲು ತುರಿಕೆ, ಕೆಮ್ಮಿನಂತಹ ಭಾದೆಗಳನ್ನು ನಿವಾರಿಸುತ್ತದೆ. ಪುದೀನವನ್ನು ಅಡಿಗೆಯಲ್ಲಿ ಬಳಸುವುದರಿಂದ ಹೊಟ್ಟೆಯಲ್ಲಿನ ಜಂತು ಹುಳುಗಳನ್ನು ಹೊರಹಾಕಲು ಉಪಯುಕ್ತವಾಗಿದೆ.
ಪುದೀನವನ್ನು ಹೆಚ್ಚಾಗಿ ಅಡುಗೆಯಲ್ಲಿ ಬಳಸುವ ಕಾರಣ ಈ ಗಿಡಮೂಲಿಕೆಯನ್ನು ರೈತರು ಬೆಳೆದು ಮಾರುಕಟ್ಟೆಯಲ್ಲಿ ಹೆಚ್ಚಾಗಿ ಮಾರಾಟ ಮಾಡುತ್ತಾರೆ. ಹಾಗಾದರೆ ಇಷ್ಟೆಲ್ಲಾ ಔಷಧೀಯ ಗುಣವುಳ್ಳ ಸುಗಂಧಿತ ಗಿಡಮೂಲಿಕೆಯಾದ ಪುದೀನ ಬೆಳೆಯಲು ಹಾಗು ಬಳಸಲು ಸುಲಭವಾಗಿದೆ.
ಇನ್ನೇಕೆ ತಡ ನಾವು ಕೂಡ ನಮ್ಮ ಮನೆಯ ಅಂಗಳದಲ್ಲಿ ಪುದೀನ ಸಸ್ಯವನ್ನು ಬೆಳೆಸೋಣವೇ ?
ಶಿಲ್ಪ
3 Comments
Good article about Pudina (mint)
Wow 👏 so many information about mint
Thank you for sharing information shilpa good job
Super article….