ಸೌರವ್ಯೂಹ – 10 – ನೆಪ್ಚೂನ್

–ನೆಪ್ಚೂನ್–

ನೆಪ್ಚೂನ್ ಸೌರಮಂಡಲದ ಎಂಟನೇ ಮತ್ತು ಸೂರ್ಯನಿಂದ ಅತೀ ಹೆಚ್ಚು ದೂರವಿರುವ ಗ್ರಹ. ಇದು ವ್ಯಾಸದಲ್ಲಿ 4 ನೆಯ ಮತ್ತು ದ್ರವ್ಯರಾಶಿಯಲ್ಲಿ 7 ನೇ ಅತೀ ದೊಡ್ಡ ಗ್ರಹವಾಗಿದೆ. ಈ ಗ್ರಹಕ್ಕೆ ರೋಮನ್ನರ ಸಾಗರ ದೇವತೆಯ ಹೆಸರನ್ನು ಇಡಲಾಗಿದೆ. ಸೆಪ್ಟೆಂಬರ್ 23 1846 ರಂದು ಕಂಡು ಹಿಡಿಯಲಾದ ನೆಪ್ಚೂನ್ ನೇರ ವೀಕ್ಷಣೆಯಲ್ಲದೆ ಗಣಿತದ ಲೆಕ್ಕಾಚಾರಗಳಿಂದ ಕಂಡು ಹಿಡಿಯಲಾದ ಮೊದಲ ಗ್ರಹ. ಯುರೇನಸ್ ಕಕ್ಷೆಯಲ್ಲಿನ ಸೂಕ್ಷ್ಮ ಬದಲಾವಣೆಗಳಿಂದ ಖಗೋಳ ಶಾಸ್ತ್ರಜ್ಞರು ನೆಪ್ಚೂನ್ ನ ಅಸ್ತಿತ್ವವನ್ನು ತರ್ಕಿಸಿದರು. ಆಗಸ್ಟ್ 25, 1989 ರಂದು ನೆಪ್ಚೂನ್ ಬಳಿ ಹಾರಿಹೋದ ವೋಯೇಜರ್ 2 ನೌಕೆಯು ಇದುವರೆಗೂ ಈ ಗ್ರಹವನ್ನು ಸಮೀಪಿಸಿರುವ ಏಕೈಕ ನೌಕೆ. ಭಾರತದಲ್ಲಿ ಈ ಗ್ರಹಕ್ಕೆ ಹಿಂದೂ / ವೈದಿಕ ಪುರಾಣದಲ್ಲಿ ಸಾಗರಗಳ ದೇವನಾದ ವರುಣನ ಹೆಸರನ್ನು ಹಿಡಲಾಗಿದೆ.

ನೆಪ್ಚೂನಿನ ವಾಯುಮಂಡಲವು ಮುಖ್ಯವಾಗಿ ಜಲಜನಕ ಮತ್ತು ಹೀಲಿಯಂ ಗಳಿಂದ ಕೂಡಿದ್ದು ಗ್ರಹಕ್ಕೆ ನೀಲಿ ಬಣ್ಣವನ್ನು ಕೊಡುವ ಮಿಥೇನ್ ನನ್ನು ಸ್ವಲ್ಪ ಪ್ರಮಾಣದಲ್ಲಿ ಹೊಂದಿದೆ. ಯುರೇನಸ್ ಕೂಡ ಸುಮಾರು ನೆಪ್ಚೂನಿನಷ್ಟೇ ಹೀಲಿಯಂ ಹೊಂದಿದ್ದರು ನೆಪ್ಚೂನ್ ನ ನೀಲಿ ಬಣ್ಣವು ಯುರೇನಸ್ ಗಿಂತ ಹೆಚ್ಚು ಗಾಢವಾಗಿದೆ. ಆದ್ದರಿಂದ ಇನ್ನು ತಿಳಿದಿಲ್ಲದ ಯಾವುದೋ ವಸ್ತುವು ಈ ತೀವ್ರ ನೀಲಿ ಬಣ್ಣವನ್ನು ಉಂಟುಮಾಡುತ್ತದೆಂದು ಹೇಳಲಾಗಿದೆ.

ಸೂರ್ಯನಿಂದ ಬಹಳ ದೂರದಲ್ಲಿರುವುದರಿಂದ ನೆಪ್ಚೂನ್ ನ ಮೋಡದ ಪದರದ ತಾಪಮಾನವು ಸೌರಮಂಡಲದಲ್ಲಿ ಅತೀ ಕಡಿಮೆ ತಾಪಮಾನಗಳಲ್ಲಿ ಸೇರಿದೆ. ಆದರೆ ನೆಪ್ಚೂನ್ ನ ಒಳಭಾಗವು ಸೂರ್ಯನ ಮೇಲ್ಮೈಗಿಂತ ಬಿಸಿಯಾಗಿದೆ. ಇದರ ಕಾರಣ ನೆಪ್ಚೂನ್ ನ ಒಳಭಾಗದಲ್ಲಿ ಕಲ್ಲು ಬಂಡೆಗಳು ಮತ್ತು ಅನಿಲಗಳು ಅಪಾರ ಶಾಖವನ್ನು ಹೊಂದಿರುವುದು.

ನೆಪ್ಚೂನ್ ನ ಸುತ್ತ ಮಂದವಾದ ತಿಳಿ ನೀಲಿಬಣ್ಣದ ಉಂಗುರಗಳನ್ನು ಕಂಡು ಹಿಡಿಯಲಾಗಿದ್ದರು ಇವು ಶನಿಯ ಉಂಗುರಗಳಿಗಿಂತ ಬಹಳ ಕ್ಷುಲ್ಲಕವಾಗಿವೆ. ಈ ಉಂಗುರಗಳನ್ನು ಮೊದಲು ಕಂಡುಹಿಡಿದಾಗ ಇವು ಪೂರ್ಣ ವೃತ್ತಾಕಾರದಲ್ಲಿ ಇಲ್ಲವೆಂದು ಭಾವಿಸಲಾಗಿತ್ತು. ನಂತರದ ವೋಯೇಜರ್ 2 ರ ಮಾಹಿತಿಯ ಪ್ರಕಾರ ಈ ಉಂಗುರಗಳು ಪೂರ್ಣ ವೃತ್ತಗಳೇ ಎಂದು ತಿಳಿದು ಬಂದಿತು.

ನೆಪ್ಚೂನ್ ಮತ್ತು ಯುರೇನಸ್ ಗಳ ನಡುವೆ ಒಂದು ವ್ಯತಾಸವೆಂದರೆ ನೆಪ್ಚೂನ್ ನ ಹವಾಮಾನದ ಚಟುವಟಿಕೆ. ಯುರೇನಸ್ ನ ಹವೆಯು ಬಹುಪಾಲು ಶಾಂತವಾಗಿರುತ್ತದೆ. ಆದರೆ ನೆಪ್ಚೂನ್ ನ ವೇಗದ ಮಾರುತಗಳೊಂದಿಗೆ ಅದರ ಹವಾಮಾನದಲ್ಲೂ ತೀವ್ರ ಚಟುವಟಿಕೆಗಳು ಉಂಟಾಗುತ್ತದೆ.

ನೆಪ್ಚೂನ್ ನ ಮೇಲೆ ಗಾಢ ಚುಕ್ಕೆಯನ್ನು ಕಂಡುಹಿಡಿದಿದ್ದು ವೋಯೇಜರ್ ೨ ನೌಕೆ. ಈ ಚುಕ್ಕೆಯು ವಾಸ್ತವದಲ್ಲಿ ಸುಮಾರು ಯುರೇಷಿಯ ಗಾತ್ರದ ಒಂದು ಚಂಡಮಾರುತ ಈ ಚಂಡಮಾರುತವು ಗುರು ಗ್ರಹದ ಬೃಹತ್ ಕೆಂಪು ಚುಕ್ಕೆಯನ್ನು ಹೋಲುತ್ತದೆ. ನವೆಂಬರ್ 2 1994 ರಂದು ಹಬಲ್ ದೂರದರ್ಶಕಕ್ಕೆ ಗ್ರಹದ ಮೇಲೆ ಬೃಹತ್ ಗಾಢ ಚುಕ್ಕೆಯು ಕಾಣಲಿಲ್ಲ.

ಬದಲಿಗೆ ಅದೇ ರೀತಿಯ ಹೊಸದೊಂದು ಚಂಡಮಾರುತವು ಗ್ರಹದ ಉತ್ತರಾರ್ಧಗೋಳದಲ್ಲಿ ಕಾಣಿಸಿಕೊಂಡಿತು. ಬೃಹತ್ ಗಾಢ ಚುಕ್ಕೆಯು ಕಣ್ಮರೆಗೆ ಕಾರಣವೇನೆಂದು ಇನ್ನು ತಿಳಿದುಬಂದಿಲ್ಲ. ಇದರ ಬಗ್ಗೆ ಇರುವ ಒಂದು ವಾದದ ಪ್ರಕಾರ ಗ್ರಹದ ಒಳಭಾಗದಿಂದ ಬಂದ ಉಷ್ಣ ಪ್ರವಾಹವು ವಾಯುಮಂಡಲದ ಸಮತೋಲನವನ್ನು ಮತ್ತು ವಾಯು ಪರಿಚಲನೆಯ ವಿನ್ಯಾಸಗಳನ್ನು ಭಂಗ ಮಾಡಿದೆ. ‘ಸ್ಕೂಟರ್’ ಎಂಬ ಇನ್ನೊಂದು ಬಿಳಿ ಬಣ್ಣದ ಚಂಡಮಾರುತವು ಬೃಹತ್ ಗಾಢ ಚುಕ್ಕೆಯ ದಕ್ಷಿಣಕ್ಕಿದೆ. ಮಾಂತ್ರಿಕನ ಕಣ್ಣು ಎಂದು ಕರೆಯಲಾಗುವ ಒಂದು ಚಂಡಮಾರುತವು ಗ್ರಹದ ಮೇಲೆ ಎರಡನೇ ಅತೀ ತೀವ್ರವಾದ ಚಂಡಮಾರುತವಾಗಿದೆ.

ಉಪಗ್ರಹಗಳು

ನೆಪ್ಚೂನ್ 13 ನೈಸರ್ಗಿಕ ಉಪಗ್ರಹಗಳನ್ನು ಹೊಂದಿದೆ. ಇವುಗಳಲ್ಲಿ ಅತೀ ದೊಡ್ಡ ಮತ್ತು ಗೋಳಾಕಾರದಲ್ಲಿರುವಷ್ಟು ಭಾರಿಯಾದ ಏಕೈಕ ಉಪಗ್ರಹ ‘ಟ್ರಿಟಾನ್’. ನೆಪ್ಚೂನ್ ನ ಆವಿಷ್ಕಾರದ ಕೇವಲ 17 ವರ್ಷಗಳ ನಂತರ ವಿಲಿಯಂ ಲ್ಯಾಸೆಲ್ ಈ ಉಪಗ್ರಹವನ್ನು ಕಂಡುಹಿಡಿದನು. ಟ್ರಿಟಾನ್ ಪ್ರತಿಗಾಮಿ ಚಲನೆಯನ್ನು ಹೊಂದಿರುವುದಲ್ಲದೆ ವಿಪರೀತ ಶೀತ ಮತ್ತು ಅತೀ ವಿರಳವಾದ ವಾಯುಮಂಡಲಕ್ಕೂ ಪ್ರಸಿದ್ಧವಾಗಿದೆ. ಈ ಉಪಗ್ರಹವು ಪ್ರತಿಗಾಮಿ ಕಕ್ಷೆಯನ್ನು ಹೊಂದಿದ್ದು ಬಹುಷಃ ಹೊರಗಿನಿಂದ ಬಂದು ನೆಪ್ಚೂನ್ ನ ಗುರುತ್ವದಲ್ಲಿ ಸೆರೆಸಿಕ್ಕಿ ಬಿದ್ದಿದೆ ಎಂದು ಸೂಚಿಸುತ್ತದೆ.

ದೂರದ ಆಧಾರದ ಮೇಲೆ ಉಪಗ್ರಹವಾದ ‘ನೆರೀಡ್’ ಸೌರಮಂಡಲದಲ್ಲೇ ಕೆಲವು ಅತೀ ಹೆಚ್ಚು ಕಕ್ಷೆಯ ಕೇಂದ್ರ ಚ್ಯುತಿ ಹೊಂದಿರುವ ಉಪಗ್ರಹಗಳಲ್ಲಿ ಸೇರಿದೆ. ಇವುಗಳಲ್ಲಿ ವಿಲಕ್ಷಣ ರೂಪದ ಪ್ರೋಟಿಯಸ್ ಉಪಗ್ರಹವು ಎಷ್ಟು ದೊಡ್ಡದಾಗಿದೆಯೆಂದರೆ ಇದು ಇನ್ನು ಸ್ವಲ್ಪ ಹೆಚ್ಚು ಭಾರಿಯಾಗಿದ್ದರೆ, ತನ್ನದೇ ಬಾರದಿಂದ ಕುಸಿದು ಗೋಳಾಕಾರಕ್ಕೆ ಮಾರ್ಪಾಡುತಿತ್ತು.

ನೆಪ್ಚೂನ್ ಗ್ರಹವು ಬರಿಗಣ್ಣಿಗೆ ಎಂದು ಕಾಣುವುದಿಲ್ಲ. ಇದನ್ನು ನೋಡಲು ದೂರದರ್ಶಕ ಅಥವ ದುರ್ಬಿನಿನ ಬಳಕೆ ಅನಿವಾರ್ಯ. ದೂರದರ್ಶಕದಿಂದ ನೋಡಿದಾಗ ನೆಪ್ಚೂನ್ ಗ್ರಹವು ಒಂದು ಸಣ್ಣ ನೀಲಿ – ಹಸಿರು ತಟ್ಟೆಯಂತೆ ಕಂಡುಬರುತ್ತದೆ.

ಕನಸು

Related post

Leave a Reply

Your email address will not be published. Required fields are marked *