ಸೌರಶಕ್ತಿ ಚಾಲಿತ ರೊಟ್ಟಿ ತಯಾರಿಕೆ ಯಂತ್ರ

ಸೌರಶಕ್ತಿ ಚಾಲಿತ ರೊಟ್ಟಿ ತಯಾರಿಕೆ ಯಂತ್ರ

ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಶ್ರೀಮಂತರಿಂದ ಕೂಡಿದ ಬಡ ರಾಷ್ಟ್ರವೆಂದು ಕರೆಯಲಾಗುತ್ತಿದ್ದು, ಈ ದೇಶದಲ್ಲಿ ಹೇರಳವಾಗಿ ಲಭ್ಯವಿರುವ ನೈಸರ್ಗಿಕ ಸಂಪನ್ಮೂಲವನ್ನು ಸಮರ್ಪಕವಾಗಿ ಬಳಸಿಕೊಳ್ಳದೇ (ತಾಂತ್ರಿಕತೆ ಹಾಗೂ ಜ್ಞಾನದ ಕೊರತೆಯಿಂದ) ಇಲ್ಲಿನ ಕಚ್ಚಾವಸ್ತುಗಳನ್ನು ಇತರ ದೇಶಗಳಿಗೆ ಕಡಿಮೆ ಬೆಲೆಗೆ ಮಾರಾಟ ಮಾಡಿ ಅಲ್ಲಿಂದ ಅಧಿಕ ಬೆಲೆಗೆ ಸಿದ್ಧ ಉತ್ಪನ್ನಗಳನ್ನು ಖರೀದಿಸುತ್ತಿರುವುದು ದುರದೃಷ್ಟಕರ. ಇದರೊಂದಿಗೆ ನಮ್ಮ ದೇಶದ ಒಟ್ಟು ಜನಸಂಖ್ಯೆಯು ಸುಮಾರು 136 ಕೋಟಿಯಷ್ಟಿದ್ದು, ನೈಸರ್ಗಿಕ ಸಂಪನ್ಮೂಲದೊಂದಿಗೆ ಮಾನವ ಸಂಪನ್ಮೂಲವೂ ಈ ದೇಶದ ದೊಡ್ಡ ಆಸ್ತಿಯೆಂದೇ ಪರಿಗಣಿಸಬಹುದು.

ಸೂರ್ಯನ ಕಿರಣಗಳ ಶಾಖ ಮತ್ತು ಬೆಳಕಿನಿಂದ ಸಿಗುವ ಚೈತನ್ಯವನ್ನು ವಿವಿಧ ತಂತ್ರಜ್ಞಾನಗಳನ್ನು ಬಳಸಿ ಮಾನವನ ಉಪಯೋಗಕ್ಕೆ ಅನುಕೂಲವಾಗುವಂತೆ ಮಾರ್ಪಡಿಸಿ ಪಡೆಯುವುದೇ ಸೌರಶಕ್ತಿ. ಸೌರಶಕ್ತಿಯು ನವೀಕರಿಸಬಹುದಾದ ಸಂಪನ್ಮೂಲವಾಗಿದ್ದು, ಅದು ಬಳಕೆಯಾಗುವ ದರದಲ್ಲಿಯೇ ಪುನಃ ಉತ್ಪತ್ತಿಯಾಗುತ್ತದೆ. ಸೌರದ್ಯುತಿ ವಿದ್ಯುಜ್ಜನಕ ಕೋಶಗಳು (ಎಸ್.ಪಿ.ವಿ-ಸೋಲಾರ್ ಪೋಟೋ ವೋಲ್ಟಾಯಿಕ್ ಕೋಶ) ನೇರವಾಗಿ ಸೂರ್ಯನ ಬೆಳಕನ್ನು ನೇರವಾಗಿ ವಿದ್ಯುತ್ ಆಗಿ ಪರಿವರ್ತಿಸುತ್ತದೆ. ಕೇಂದ್ರೀಕೃತ ಸೌರಶಕ್ತಿ (ಸಿ.ಎಸ್.ಪಿ) ವ್ಯವಸ್ಥೆಗಳು ಪರಿವರ್ತನೆ ಪ್ರಕ್ರಿಯೆಗೆ ಪರೋಕ್ಷ ವಿಧಾನವನ್ನು ಬಳಸುತ್ತವೆ. ಎಸ್.ಪಿ.ವಿ ಮತ್ತು ಸಿ.ಎಸ್.ಪಿಗಳನ್ನು ಹೊರತುಪಡಿಸಿ, ಡೈ-ಸೆನ್ಸಿಟೈಜ್ಡ್ ಸೌರಕೋಶಗಳು, ದೀಪಕ ಸೌರ ಸಾಂದ್ರತೆಗಳು, ಜೈವಿಕ-ಹೈಬ್ರಿಡ್ ಸೌರಕೋಶಗಳು, ಫೋಟಾನ್ ವರ್ಧಿತ ಥರ್ಮೋನಿಕ್ ಹೊರಸೂಸುವಿಕೆ ವ್ಯವಸ್ಥೆಗಳು ಇನ್ನೂ ಮುಂತಾದ ಇತರ ಹೊಸ ತಂತ್ರಗಳು ಕೂಡ ಇವೆ.

ಇಂದಿನ ದಿನದಲ್ಲಿ ಸೌರಶಕ್ತಿಯು ಕೇವಲ ಬೆಳಕಿಗಾಗಿ ಮತ್ತು ಸ್ನಾನಕ್ಕೆ ನೀರನ್ನು ಬಿಸಿ ಮಾಡುವ ಉದ್ದೇಶಗಳಿಗಷ್ಟೇ ಬಳಕೆಯಾಗದೇ ರೈತರ ಜೀವನಾಡಿಗಳಾದ ವಿವಿಧ ಯಂತ್ರೋಪಕರಣಗಳ ಚಾಲನೆಗೆ ಹಾಗೂ ಕೃಷಿಯೇತರ ಜೀವನೋಪಾಯ ಚಟುವಟಿಕೆಗಳಿಗೆ ಸಂಬಂಧಿಸಿದ ವಿವಿಧ ಯಂತ್ರೋಪಕರಣಗಳ ಚಾಲನೆಗೂ ಬಳಸಲಾಗುತ್ತಿದೆ. ಅವುಗಳ ಪೈಕಿ ಸೋಲಾರ್ ಚಾಲಿತ ಹಾಲು ಕರೆಯುವ ಯಂತ್ರ, ಜೆರಾಕ್ಸ್ ಯಂತ್ರಗಳು, ಕಮ್ಮಾರಿಕೆ ಕುಲುಮೆ, ಮೊಟ್ಟೆಗೆ ಕಾವು ಕೊಡುವ ಯಂತ್ರ, ಸೋಲಾರ್ ಚಾಲಿತ ಸಿದ್ಧ ಉಡುಪು ತಯಾರಿಕಾ ಯಂತ್ರ, ಕುಂಬಾರರು ಮಡಿಕೆ ತಯಾರಿಸುವ ಚಕ್ರ, ಶೀತಲೀಕರಣ ಯಂತ್ರ, ದೂರದರ್ಶನ, ಅಕ್ಕಿ ಮಾಡುವ ಯಂತ್ರ, ಖಾರ ಕುಟ್ಟುವ ಯಂತ್ರ, ಸಬ್ ಮರ್ಸಿಬಲ್ ಪಂಪ್, ನೀರೆತ್ತುವ ಯಂತ್ರಗಳು, ಹತ್ತಿ ಬಿಡಿಸುವ ಯಂತ್ರಗಳು ಮತ್ತು ರೊಟ್ಟಿ ತಯಾರಿಸುವ ಯಂತ್ರಗಳು ಇಂದು ವಿದ್ಯುತ್ ಶಕ್ತಿಗೆ ಪರ್ಯಾಯವಾಗಿ ಸೌರಶಕ್ತಿಯಿಂದ ನಿರ್ವಹಿಸಲ್ಪಡುತ್ತಿದ್ದು, ಜೀವನೋಪಾಯ ಚಟುವಟಿಗಳ ಕ್ಷೇತ್ರದಲ್ಲಿ ಬಹುವಾಗಿ ಮಿಂಚುತ್ತಿದೆ. ಅವುಗಳ ಪೈಕಿ ಸೋಲಾರ್ ಚಾಲಿತ ರೊಟ್ಟಿ ರೋಲಿಂಗ್ ಯಂತ್ರಕ್ಕೆ ಹೆಚ್ಚಿನ ಬೇಡಿಕೆ ಉತ್ತರ ಕರ್ನಾಟಕ ಭಾಗದಲ್ಲಿದೆ.

ಫೋಟೋ ಕೃಪೆ : ಪ್ರಜಾವಾಣಿ

ಜೋಳದ ರೊಟ್ಟಿ ಉತ್ತರ ಕರ್ನಾಟಕ ಪ್ರಮುಖ ಆಹಾರವಾಗಿದ್ದು, ಇದು ಇಲ್ಲಿನ ಜನರ ದಿನನಿತ್ಯದ ಊಟದ ಒಂದು ಅವಿಭಾಜ್ಯ ಅಂಗವಾಗಿದೆ. ಮುಂದುವರಿದು ನೆರೆಹೊರೆಯ ಗ್ರಾಮಗಳಿಗೆ, ಹೋಟೆಲ್‌ಗಳಿಗೆ ಮತ್ತು ದೊಡ್ಡ ಕಾರ್ಯಕ್ರಮಗಳಿಗೆ ಜೋಳದ ರೊಟ್ಟಿಯನ್ನು ತಯಾರಿಸಿ ಮಾರಾಟ ಮಾಡುವುದು ಉತ್ತರ ಕರ್ನಾಟಕದ ಹಲವಾರು ಸಣ್ಣ ಪುಟ್ಟ ಕುಟುಂಬಗಳು ಮತ್ತು ಸಣ್ಣ ಉದ್ಯಮಿಗಳ ಜೀವನೋಪಾಯ ವೃತ್ತಿಯಾಗಿಯೂ ಆಗಿದೆ. ಬಹಳಷ್ಟು ಸಣ್ಣ ಉದ್ಯಮಿಗಳು ಕೈಯಿಂದ ತಟ್ಟುವ ಮೂಲಕ ರೊಟ್ಟಿ ತಟ್ಟುತ್ತಿದ್ದು, ಇದಕ್ಕೆ ಹೆಚ್ಚಿನ ಶ್ರಮ ಮತ್ತು ಆಳುಗಳೂ ಅವಶ್ಯಕತೆಯಿದೆ. ಇದರೊಂದಿಗೆ ವಿದ್ಯುತ್ ಚಾಲಿತ ರೊಟ್ಟಿ ತಯಾರಿಕೆ ಯಂತ್ರವನ್ನೂ ಒಂದಷ್ಟು ಮಂದಿ ಬಳಸುತ್ತಿದ್ದು ಇಲ್ಲಿನ ನಿರಂತರ ವಿದ್ಯುತ್ ವ್ಯತ್ಯಯದಿಂದ ಈ ಉದ್ಯಮಕ್ಕೂ ದೊಡ್ಡ ಹೊಡೆತ ಬಿದ್ದಿದೆ.

ಸಣ್ಣ ಉದ್ಯಮಿಗಳ ಜೋಳದ ರೊಟ್ಟಿ ತಯಾರಿಕೆ ಮತ್ತು ಮಾರಾಟದ ಮೂಲಕ ನಿರಂತರ ಆದಾಯ ಗಳಿಕೆಗೆ ತೊಡಕಾಗಿರುವ ವಿದ್ಯುತ್ ವ್ಯತ್ಯಯದ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಸೆಲ್ಕೋ ಸೋಲಾರ್ ಸಂಸ್ಥೆಯು ಈಗಾಗಲೇ ಇರುವ ವಿದ್ಯುತ್ ಚಾಲಿತ ರೊಟ್ಟಿ ತಯಾರಿಸುವ ಯಂತ್ರಕ್ಕೆ ಸೌರಚಾಲಿತ ಹೆಚ್ಚು ದಕ್ಷತೆ ಇರುವ ಡಿ.ಸಿ ಮೋಟಾರ್ ಅಳವಡಿಸುವ ಮೂಲಕ ಪರಿಹಾರೋಪಾಯವನ್ನು ಕಂಡುಹಿಡಿದಿದೆ. ಈ ಮೂಲಕ ರೊಟ್ಟಿ ತಯಾರಿಕಾ ಉದ್ದಿಮೆದಾರರಿಗೆ ನಿರಂತರ ರೊಟ್ಟಿ ಉತ್ಪಾದನೆ ಮತ್ತು ಅದರ ಮೂಲಕ ನಿರಂತರ ಆದಾಯವನ್ನು ಹೆಚ್ಚಿಸಿಕೊಳ್ಳಲು ಅನುಕೂಲ ಮಾಡಿಕೊಟ್ಟಿದೆ. ರೊಟ್ಟಿ ತಯಾರಿಕೆಗೆ ತಗುಲುತ್ತಿದ್ದ ದೈಹಿಕ ಶ್ರಮ ಮತ್ತು ಸಮಯ ಫೋಲಾಗುವುದನ್ನು ಹಾಗೂ ಆಯಾಸ ಮತ್ತು ಬಳಲಿಕೆಯನ್ನು ಕಡಿಮೆ ಮಾಡಲು ಈ ಯಂತ್ರವು ಸಹಾಯಕವಾಗಿದೆ.

ರೊಟ್ಟಿ ತಯಾರಿಕೆ ಯಂತ್ರವನ್ನು ಖರೀದಿ ಮಾಡಲು ಇಚ್ಚಿಸುವವರಿಗೆ ವಿವಿಧ ಸ್ವಸಹಾಯ ಸಂಘಗಳ ಸದಸ್ಯರಿಗೆ ರಾಷ್ಟ್ರೀಕೃತ ಮತ್ತು ಇತರ ಬ್ಯಾಂಕ್‌ಗಳು ಸ್ವ – ಉದ್ಯೋಗ ಯೋಜನೆಯಡಿಯಲ್ಲಿ ಸಾಲವನ್ನು ನೀಡುತ್ತಿದ್ದು, ಸುಲಭ ವಾರದ ಮತ್ತು ಮಾಸಿಕ ಕಂತುಗಳ ರೂಪದಲ್ಲಿ ಮರುಪಾವತಿಸಲು ಅವಕಾಶವಿದೆ. ಉತ್ತರ ಕರ್ನಾಟಕದಲ್ಲಿ ರೊಟ್ಟಿ ತಯಾರಿಕೆಯು ಪ್ರಮುಖ ಗೃಹೋದ್ಯಮವಾಗಿದ್ದು, ರೊಟ್ಟಿಗಳನ್ನು ಬಹಳಷ್ಟು ಮಂದಿ ಕುಳಿತುಕೊಂಡು ಒಟ್ಟಾಗಿ ಕೈಯಿಂದ ತಟ್ಟಿ ತಯಾರಿಸುತ್ತಾರೆ. ಪ್ರಸ್ತುತ ವಿದ್ಯಮಾನದಲ್ಲಿ ಅನಿಯಮಿತವಾದ ವಿದ್ಯುತ್ ಕಡಿತದ ಕಾರಣದಿಂದಾಗಿ ನಿರಂತರವಾಗಿ ರೊಟ್ಟಿ ತಯಾರಿಸಲು ಗ್ರಿಡ್ ವಿದ್ಯುತ್ ಚಾಲಿತ ಯಂತ್ರದ ಬಳಕೆ ಕಷ್ಟ ಸಾಧ್ಯವಾಗಿದೆ. ದೊಡ್ಡ ವಸತಿ ಸಮುಚ್ಚಯಗಳು ದೇವಸ್ಥಾನಗಳು ಹಾಗೂ ಇತರ ಧಾರ್ಮಿಕ ಸ್ಥಳಗಳಲ್ಲಿ ದೊಡ್ಡ ಪ್ರಮಾಣದ ಅಡುಗೆ ತಯಾರಿಕೆ ಸಂದರ್ಭದಲ್ಲಿ ಬೃಹತ್ ಪ್ರಮಾಣದ ರೊಟ್ಟಿ ತಯಾರಿಕೆಗೆ ಉತ್ತಮ ಅವಕಾಶವಿದೆ.

ಯಂತ್ರದ ಪ್ರಯೋಜನಗಳು

ಸೌರಚಾಲಿತ ರೊಟ್ಟಿ ತಯಾರಿಕೆ ಯಂತ್ರದಲ್ಲಿ ವಿದ್ಯುತ್ ಕಡಿತದ ಸಂದರ್ಭದಲ್ಲಿ ವಿಶ್ವಾಸಾರ್ಹವಾದ ಬ್ಯಾಟರಿ ಬ್ಯಾಕಪ್ ಲಭ್ಯವಿದೆ. ಇಂದಿನ ದಿನಗಳಲ್ಲಿ ಅತ್ಯಂತ ಆದ್ಯತೆಯಿರುವ ಸೌರಶಕ್ತಿಗೆ ಪ್ರಾಶಸ್ತ್ಯ ನೀಡಿರುವ ಹೈಬ್ರಿಡ್ ಸಿಸ್ಟಂನ್ನು ಇದರಲ್ಲಿ ಅಳವಡಿಸಲಾಗಿದೆ. ಕೈಯಿಂದ ರೊಟ್ಟಿ ತಯಾರಿಸುವುದಾದರೆ ಒಂದು ರೋಟಿ ತಯಾರಿಕೆಗೆ 5-6 ನಿಮಿಷಗಳ ಅವಶ್ಯಕತೆಯಿದ್ದು, ಈ ಯಂತ್ರದ ಸಹಾಯದಿಂದ ಪ್ರತಿ ನಿಮಿಷಕ್ಕೆ 5-6 ರೊಟ್ಟಿಗಳನ್ನು ತಯಾರಿಸಬಹುದು. ಸೌರಚಾಲಿತ ಯಂತ್ರವಾಗಿರುವುದರಿಂದ ನಿರಂತರವಾಗಿ ಉತ್ಪಾದನೆಯನ್ನು ಮಾಡಿ ಹೂಡಿದ ಬಂಡವಾಳವನ್ನು ಅತ್ಯಂತ ಶೀಘ್ರವಾಗಿ ವಾಪಸ್ ಪಡೆಯಬಹುದು. ಯಂತ್ರಗಳ ಸುದೀರ್ಘ ಬಾಳಿಕೆಗಾಗಿ ಉತ್ತಮ ಗುಣಮಟ್ಟದ ಬಿಡಿಭಾಗಗಳನ್ನು ಈ ಯಂತ್ರಗಳಿಗೆ ಅಳವಡಿಸಲಾಗಿದೆ. ನಿರಂತರವಾಗಿ ಉತ್ಪಾದನೆಯನ್ನು ಈ ಯಂತ್ರದ ಮೂಲಕ ಮಾಡುವುದರಿಂದ ಆದಾಯದಲ್ಲಿ ಗಣನೀಯ ಹೆಚ್ಚಳ ಸಾಧ್ಯವಿದೆ. ಈ ಯಂತ್ರದ ಮೂಲಕ ರೊಟ್ಟಿ ತಯಾರಿಕೆಯನ್ನು ಮನೆಯಲ್ಲಿಯೇ ಮಾಡಬಹುದು ಅಥವಾ ಗುಂಪಿನ ಸದಸ್ಯೆರೆಲ್ಲರೂ ಸೇರಿಕೊಂಡು ಅಥವಾ 2-3 ಸಂಘದ ಸದಸ್ಯೆರೆಲ್ಲರೂ ಒಂದೆಡೆ ಸೇರಿ ಗುಂಪು ಉದ್ಯಮವನ್ನಾಗಿಯೂ ಮಾಡಲು ಅವಕಾಶವಿದೆ.

ಯಂತ್ರದ ತಾಂತ್ರಿಕ ವಿವರಣೆಗಳು

ಸೌರಚಾಲಿತ ರೊಟ್ಟಿ ತಯಾರಿಕೆ ಯಂತ್ರದಲ್ಲಿ ಒಟ್ಟು ಮೂರು ವಿಧದ ಸಾಮರ್ಥ್ಯದ ಯಂತ್ರಗಳಿದ್ದು, ಅವುಗಳಲ್ಲಿ ಪ್ರಥಮ ಮಾದರಿಯ ಯಂತ್ರದಲ್ಲಿ 500 ರೊಟ್ಟಿ ಒಂದು ದಿನದಲ್ಲಿ ತಯಾರಿಸುವಂತೆ ರೂ.56,000/-, ಎರಡನೇ ಮಾದರಿಯಲ್ಲಿ 1,000 ರೊಟ್ಟಿ ದಿನದಲ್ಲಿ ತಯಾರಿಸುವಂತೆ ರೂ.65,000/- ಹಾಗೂ ಮೂರನೇ ಮಾದರಿಯ ಯಂತ್ರದಲ್ಲಿ ದಿನದಲ್ಲಿ 2,000 ರೊಟ್ಟಿಗಳನ್ನು ತಯಾರಿಸುವಂತೆ ರೂ.75,000/- ದರಗಳ ಯಂತ್ರಗಳು ಲಭ್ಯವಿದೆ. ಪ್ರಥಮ ಮಾದರಿಯಲ್ಲಿ 40Wಠಿ, 12ಗಿx2, ದ್ವಿತೀಯ ಮಾದರಿಯಲ್ಲಿ 75Wಠಿ,12ಗಿx2, ತೃತೀಯ ಮಾದರಿಯಲ್ಲಿ 300Wಠಿ, 24ಗಿx2 ಸಾಮರ್ಥ್ಯದ ಸೋಲಾರ್ ಮಾಡ್ಯೂಲ್ ಅಳವಡಿಸಲಾಗಿದೆ. ಅದೇ ರೀತಿ ಪ್ರಥಮ ಮಾದರಿಯಲ್ಲಿ 60ಂh, 12ಗಿx2, ದ್ವಿತೀಯ ಮಾದರಿಯಲ್ಲಿ 80ಂh, 12ಗಿx2 ಮತ್ತು ತೃತೀಯ ಮಾದರಿಯಲ್ಲಿ 100ಂh, 12ಗಿx2 ಸಾಮರ್ಥ್ಯದ ಸೌರಶಕ್ತಿಯನ್ನು ಹಿಡಿದಿಟ್ಟುಕೊಳ್ಳುವ ಬ್ಯಾಟರಿಗಳನ್ನು ಅಳವಡಿಸಲಾಗಿದೆ. ಪ್ರಥಮ ಮಾದರಿಯಲ್ಲಿ 40W, 1ಒx2, ದ್ವಿತೀಯ ಮಾದರಿಯಲ್ಲಿ 75W, 1ಒx2, ತೃತೀಯ ಮಾದರಿಯಲ್ಲಿ 300W, 1ಒx1 ಸಾಮರ್ಥ್ಯದ ಎಂ.ಎA.ಎಸ್‌ನ್ನು ಅಳವಡಿಸಲಾಗಿದೆ. ಇದಕ್ಕೆ 10ಂ, 12ಗಿx1 ಸಾಮರ್ಥ್ಯದ ಸೌರಶಕ್ತಿಯನ್ನು ಚಾರ್ಜ್ ಮಾಡುವ ಹೈಬ್ರಿಡ್ ಚಾರ್ಜರ್, 150W, 24ಗಿ, 1500ಖPಒx1 ಸಾಮರ್ಥ್ಯದ ರೋಟಿ ರೋಲರ್ ಯಂತ್ರವನ್ನು ಜೋಡಿಸಲಾಗಿದೆ. 5W, 12ಗಿx1 ಸಾಮರ್ಥ್ಯದ ಎಲ್‌ಇಡಿ ಬಲ್ಬನ್ನು ಅಳವಡಿಸಲಾಗಿದ್ದು, 6sq mm (30mx2) ಸಾಮರ್ಥ್ಯದ ಮತ್ತು 10sq mm (1.5mx2) ಸಾಮರ್ಥ್ಯದ ಕೆಂಪು ಮತ್ತು ಕಪ್ಪು ಬಣ್ಣದ ವಿದ್ಯುತ್ ಪ್ರವಹಿಸುವ ತಂತಿಗಳನ್ನು ಅಳವಡಿಸಲಾಗಿದೆ.

ಮುಗಿದು ಹೋಗುವ ಇಂಧನಗಳ ಲಭ್ಯತೆಯು ಅತ್ಯಂತ ಕನಿಷ್ಠ ಮಟ್ಟದಲ್ಲಿ ಇರುವುದರಿಂದ ಮುಂದಿನ ದಿನಗಳಲ್ಲಿ ಕಡ್ಡಾಯವಾಗಿ ಹಾಗೂ ಅನಿವಾರ್ಯವಾಗಿ ಪರ್ಯಾಯ ಇಂಧನ ಮೂಲಗಳನ್ನು ಬಳಸಬೇಕಾದ ಜವಾಬ್ದಾರಿಯಲ್ಲಿ ನಾವೆಲ್ಲರೂ ಇದ್ದೇವೆ. ಈ ನಿಟ್ಟಿನಲ್ಲಿ ಸೆಲ್ಕೊ ಸೋಲಾರ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯು ಅತ್ಯುತ್ತಮವಾದ ಹೆಜ್ಜೆಯನ್ನಿಟ್ಟಿದ್ದು ಗ್ರಾಮೀಣ ಜನರ ವಿದ್ಯುತ್ ವ್ಯತ್ಯಯದ ಬಲುದೊಡ್ಡ ಸಮಸ್ಯೆ ಮಧ್ಯೆಯೂ ತಮ್ಮ ಜೀವನೋಪಾಯ ಚಟುವಟಿಕೆಯನ್ನು ಇನ್ನಷ್ಟು ಉತ್ತಮವಾಗಿ ಹಾಗೂ ಅರ್ಥಪೂರ್ಣವಾಗಿ ನಿರ್ವಹಿಸುವಲ್ಲಿ ಸೋಲಾರ್ ಚಾಲಿತ ರೊಟ್ಟಿ ತಯಾರಿಸುವ ಯಂತ್ರ ಅತ್ಯುತ್ತಮವಾದ ಪರಿಹಾರೋಪಾಯವಾಗಬಲ್ಲದು.

ಸಂತೋಷ್ ರಾವ್ ಪೆರ್ಮುಡ
ಪೆರ್ಮುಡ ಮನೆ, ಪಟ್ರಮೆ ಗ್ರಾಮ ಮತ್ತು ಅಂಚೆ
ಬೆಳ್ತಂಗಡಿ ತಾಲೂಕು, ದ.ಕ ಜಿಲ್ಲೆ-574198
ದೂ: 9742884160

Related post

Leave a Reply

Your email address will not be published. Required fields are marked *