ಸ್ಟಾರ್ಟ್ ಅಪ್….ನೀವೂ ಕಟ್ಟಬಹುದು
ಪುಸ್ತಕ :ಸ್ಟಾರ್ಟ್ ಅಪ್….ನೀವೂ ಕಟ್ಟಬಹುದು
ಲೇಖಕರು : ಸತ್ಯೇಶ್ ಎನ್ ಬೆಳ್ಳೂರ್
ಪ್ರಕಾಶಕರು :ಮೈಲ್ಯಾಂಗ್ ಬುಕ್ಸ್
ಇಂದಿನ ಹೈಟೆಕ್ ಯುಗದಲ್ಲಿ ಮಾಹಿತಿ ತಂತ್ರಜ್ಞಾನ ಹಾಗೂ ಅದಕ್ಕೆ ಸಂಬಂಧಿಸಿದ ಮಾಹಿತಿಗಳನ್ನು ಒಳಗೊಂಡ ಪುಸ್ತಕಗಳು ಸ್ಥಳೀಯ ಭಾಷೆಯಲ್ಲೂ ಬರಲಾರಂಭಿಸಿವೆ…ಕನ್ನಡ ಭಾಷೆಗೆ ಇತ್ತೀಚಿನ ಸೇರ್ಪಡೆ ಸ್ಟಾರ್ಟಪ್ ನೀವೂ ಕಟ್ಟಬಹುದು ಎಂಬ ವಿಶಿಷ್ಟವಾದ ಪುಸ್ತಕ.
ಯಾರಾದರೂ ಒಂದು ತನ್ನದೇ ಸ್ವಂತ ಉದ್ದಿಮೆ ಅಥವಾ ವ್ಯಾಪಾರವನ್ನು ಪ್ರಾರಂಭಿಸಿದರೆ ಅಂತಹ ಕಂಪನಿಗಳನ್ನು ಸ್ಟಾರ್ಟಪ್ ಎಂದು ಕರೆಯಲಾಗುತ್ತದೆ.
ಇಂತಹ ಸ್ಟಾರ್ಟಪ್ಗಳ ಸ್ವರೂಪ ಎಂತಾದ್ದು!?
ಯಾರು ಬೇಕಾದರೂ ಕಟ್ಟಬಹುದೇ!?
ಬಂಡವಾಳ ಕ್ರೋಢೀಕರಣ ಹೇಗೆ!?
ಹೀಗೆ ಮನಸಿನಲ್ಲಿ ಉದ್ಭವಿಸುವ ನೂರಾರು ಪ್ರಶ್ನೆಗಳಿಗೆ ತಮ್ಮದೇ ಅನುಭವದ ಮೂಸೆಯಿಂದ ಉತ್ತರಗಳನ್ನು ಕೊಡುವ ಪ್ರಯತ್ನ -ಬಹುಶಃ ಕನ್ನಡ ಭಾಷೆಯಲ್ಲಿ ಅಪರೂಪದ ಪ್ರಯತ್ನ ಎಂದರೂ ತಪ್ಪಾಗಲಾರದು- ಸ್ಟಾರ್ಟ್ ಅಪ್ ನೀವೂ ಕಟ್ಟಬಹುದು ಎಂಬ ವಿಶಿಷ್ಟವಾದ ಪುಸ್ತಕ.
ಟೆಲಿಕಮ್ಯೂನಿಕೇಶನ್ ಕ್ಷೇತ್ರದಲ್ಲಿ ಮೂರುದಶಕಗಳಿಗೂ ಹೆಚ್ಚಿನ ಶ್ರೀಮಂತ ಅನುಭವವನ್ನು ಹೊಂದಿರುವ ಚಿಂತಕ,ಲೇಖಕ ಶ್ರೀ ಸತ್ಯೇಶ್ ಎನ್ ಬೆಳ್ಳೂರ್ ಅವರು ಬರೆದಿರುವ ಈ ಪುಸ್ತಕ ಸ್ಟಾರ್ಟಪ್ ಕಟ್ಟುವ ಕನಸು ಕಾಣುತ್ತಿರುವವರಿಗೆ ದಾರಿದೀಪವಾಗಬಲ್ಲದು.
ಪುಸ್ತಕದ ಮೊದಲ ಭಾಗದಲ್ಲಿ ವಿಶ್ವದ ಪ್ರಾಚೀನ ಅದ್ಭುತಗಳ ಕುರಿತು ಮಾತನಾಡುತ್ತಾ ಗಣಕಯುಗದ ಅದ್ಭುತಗಳ ಕಡೆಗೂ ಬೆಳಕು ಚೆಲ್ಲುವ ಲೇಖಕರು ಅವುಗಳ ಸೂಕ್ಷ್ಮ ಪರಿಚಯವನ್ನು ಮಾಡಿಕೊಡುತ್ತಾರೆ.
ಮನೆ ಕಟ್ಟುವ ಮೊದಲು ಹಾಕುವ ಅಡಿಪಾಯದಂತೆ ಸ್ಟಾರ್ಟಪ್ ಕಟ್ಟುವ ಮೊದಲು ನಮಗೆ ಬೇಕಾದ ಸಂಪನ್ಮೂಲಗಳ ಬಗ್ಗೆಯೂ ಗಮನಹರಿಸುತ್ತಾರೆ. ಇತಿಹಾಸದ ಒಂದಷ್ಟು ಘಟನೆಗಳ ಮೆಲುಕು ಹಾಕುತ್ತಾ ಸ್ಟಾರ್ಟ್ ಅಪ್ ಪರಿಕಲ್ಪನೆಯನ್ನು ಚಾಣಕ್ಯ-ಚಂದ್ರಗುಪ್ತರ ಕಾಲಕ್ಕೆ ಕೊಂಡೊಯ್ಯುತ್ತಾರೆ.
ಎರಡನೆಯ ಭಾಗದಲ್ಲಿ
ನಮ್ಮ ಏಳಿಗೆಗೆ ನಾವೇ ಹೇಗೆ ಶಿಲ್ಪಿಗಳಾಗಬಹುದು!!
ಸ್ಟಾರ್ಟ್ ಅಪ್ ಕಟ್ಟುವಾಗಿನ ತಂಡ ಮತ್ತು ಅದರ ಮನಸ್ಥಿತಿ ಹೇಗಿರಬೇಕು!!
ನಮ್ಮ ಸಂಸ್ಕೃತಿಗಳ ಮೇಳೈಕೆಯಿಂದ ಯಶಸ್ಸು ಹೇಗೆ ಕಾಣಬಹುದು!!
ಬಂಡವಾಳದ ಕ್ರೋಢೀಕರಣ ಯಾವ ರೀತಿ ಮಾಡಬಹುದು!!
ಹೀಗೆ ಸಾಲು ಸಾಲು ಚಿಂತನೆಗಳ ಜೊತೆಗೆ ಪರಿಹಾರೋಪಾಯಗಳನ್ನು ಒದಗಿಸುವ ಮೂಲಕ ಈ ಪುಸ್ತಕವನ್ನು ಶ್ರೀಮಂತಗೊಳಿಸಿದ್ದಾರೆ ಲೇಖಕರು.
ಕೇವಲ ತಂತ್ರಜ್ಞಾನ ಕ್ಷೇತ್ರದ ಕಂಪನಿಗಳ ಸ್ಟಾರ್ಟ್ ಅಪ್ ಗೆ ಮಾತ್ರ ಈ ಪುಸ್ತಕ ಸಂಬಂಧಪಟ್ಟಿದ್ದು ಎಂದು ನೀವು ಊಹಿಸಿದ್ದರೆ ಅದು ತಪ್ಪಾದೀತು!!!
ಪುಸ್ತಕವನ್ನು ಓದಿದರೆ ನಿಮಗೆ ಸಿಗಬಹುದಾದ ಮಾಹಿತಿಗೆ ಮತ್ತು ಆತ್ಮಸ್ಥೈರ್ಯಕ್ಕೆ ಬೆಲೆ ಕಟ್ಟಲಾಗದು.
ಒಂದು ಅಪರೂಪದ ಮತ್ತು ಓದಲೇಬೇಕಾದ ಪುಸ್ತಕವನ್ನು ಕನ್ನಡ ಭಾಷೆಗೆ ನೀಡಿದ ಶ್ರೀ ಸತ್ಯೇಶ್ ಎನ್ ಬೆಳ್ಳೂರ್ ಅವರಿಗೆ ಶುಭ ಹಾರೈಸೋಣ.
ಸುನೀಲ್ ಹಳೆಯೂರು