ಸ್ವಯಂ ಕಾಳಜಿ

ಸ್ವಯಂ ಕಾಳಜಿ

ಇತರರ ಬಗೆಗಿನ ಕಾಳಜಿಯು ಮನುಷ್ಯನ ಪರಮ ಧರ್ಮ; ಆದರೆ ಇತರರ ಕಾಳಜಿಯಲ್ಲಿ ಸ್ವಯಂ ನಿರ್ಲಕ್ಷ್ಯ ಬೇಡ.

ಒಂದು ಕಾಡಿನಲ್ಲಿ ಹೆಣ್ಣು ಕೋತಿಯೊಂದು ತನ್ನ ಮರಿಯೊಂದಿಗೆ ವಾಸವಾಗಿದ್ದು, ಮರಿಯನ್ನು ಅತಿಯಾಗಿ ಪ್ರೀತಿಸುತ್ತಿತ್ತು. ಮರಿಯನ್ನು ತಾನು ಕಣ್ಣಲ್ಲಿ ಕಣ್ಣಿಟ್ಟು ಕಾಯುತ್ತಾ ತನಗೆ ತಿನ್ನಲು ಏನು ಸಿಕ್ಕಿದರೂ ಮೊದಲಿಗೆ ತನ್ನ ಮರಿಗೇ ತಿನ್ನಲು ನೀಡುತ್ತಿತ್ತು. ತಾನು ಎಲ್ಲೇ ಹೋದರೂ ಮರಿಯನ್ನು ತನ್ನ ಹೊಟ್ಟೆಯ ಅಡಿಯಲ್ಲಿಯೇ ಹಿಡಿದುಕೊಂಡು ತಿರುಗುತ್ತಿತ್ತು. ಇದರಿಂದಾಗಿ ಗುಂಪಿನಲ್ಲಿದ್ದ ಇತರ ಕೋತಿಗಳಿಗೂ ಆ ತಾಯಿ ಕೋತಿಯ ತನ್ನ ಮರಿಯ ಮೇಲಿನ ಪ್ರೀತಿಯ ಕುರಿತು ಅಸೂಯೆಯಿತ್ತು.ಒಮ್ಮೆ ಆಕಾಶವಿಡೀ ಕಾರ್ಮೋಡದಿಂದ ಕಪ್ಪಿಟ್ಟುಕೊಂಡು ಜೋರಾಗಿ ಗಾಳಿಯು ಬೀಸಲಾರಂಭಿಸಿತು. ಮಳೆಯು ಜೋರಾಗಿ ಸುರಿಯಲಾರಂಭಿಸಿ ಊರಿನ ಹಳ್ಳಕೊಳ್ಳಗಳು, ನದಿ ತೊರೆಗಳು ತುಂಬಿ ಹರಿಯಲು ಪ್ರಾರಂಭಿಸಿದವು.

ಇಡೀ ಊರಿಗೆ ಪ್ರಳಯವು ಆವರಿಸಿ ಕಾಡನ ಮರಗಿಡಗಳೆಲ್ಲವೂ ನದಿಯ ನೀರಿಗೆ ಕೊಚ್ಚಿಕೊಂಡು ಹೋಗಲಾರಂಭಿಸಿತು. ಅದೇ ರೀತಿ ಈ ಕೋತಿಯಿದ್ದ ಕಾಡೂ ಪ್ರಳಯಕ್ಕೆ ತುತ್ತಾಗಿ ಅಲ್ಲಿನ ಪ್ರಾಣಿಗಳೆಲ್ಲಾ ದಿಕ್ಕುಪಾಲಾಗಿ ಒಡಲಾರಂಭಿಸಿದವು. ಕೆಲವು ಪ್ರವಾಹದ ನೀರಿಗೆ ಕೊಚ್ಚಿಕೊಂಡು ಹೋದರೆ ಕೆಲವು ಅಲ್ಲೋ ಇಲ್ಲೋ ಓಡಲಾರಂಭಿಸಿದವು. ಅದೇ ರೀತಿ ಈ ತಾಯಿ ಕೋತಿಯೂ ಪ್ರವಾಹದ ನೀರಿಗೆ ಹೆದರಿ ತನ್ನ ಮರಿಯನ್ನು ಹಿಡಿದುಕೊಂಡು ಕಾಡಿನ ಅತ್ಯಂತ ದೊಡ್ಡದಾದ ಮರವನ್ನೇರಿ ಕುಳಿತಿತು. ಕಾಡು ಸಂಪೂರ್ಣವಾಗಿ ನೀರಿನಿಂದ ಆವೃತವಾಗಿ ಮರಗಳೆಲ್ಲವೂ ಉರುಳಲಾರಂಭಿಸಿದವು. ದೊಡ್ಡದಾದ ಮರವಾದ್ದರಿಂದ ತಾಯಿ ಕೋತಿಯು ಮಗುವನ್ನು ಅಪ್ಪಿಕೊಂಡು ಮರವನ್ನು ಗಟ್ಟಿಯಾಗಿ ಹಿಡಿದುಕೊಂಡು ಕುಳಿತಿತು.

ಪ್ರವಾಹವು ಮತ್ತಷ್ಟು ಹೆಚ್ಚಾಗಿ ತಾಯಿ ಕೋತಿ ಕುಳಿತಿದ್ದ ಮರವು ಅರ್ಧದಷ್ಟು ಮುಳುಗಿದಾಗ ತಾಯಿ ಕೋತಿಯು ಮತ್ತಷ್ಟು ಎತ್ತರಕ್ಕೆ ಹೋಗಿ ಕುಳಿತಿತು. ಆದರೆ ಪ್ರವಾಹವು ಮತ್ತೂ ಹೆಚ್ಚಾಗಿ ತಾಯಿ ಕೋತಿ ಕುಳಿತಿದ್ದ ಮರವು ಬಹುತೇಕ ಮುಳುಗಿ ಮರದ ಕೊಂಬೆಗಳಷ್ಟೇ ಕಾಣಿಸುತ್ತಿದ್ದವು. ತಾಯಿ ಕೋತಿಯು ಮರಿಯನ್ನು ಹಿಡಿದುಕೊಂಡು ತಾನಿದ್ದ ಮರದ ಅತ್ಯಂತ ಉದ್ದದ ಕೊಂಬೆಯನ್ನೇರಿತು. ಪ್ರವಾಹದ ನೀರು ಮತ್ತಷ್ಟು ಮೇಲೇರಿತು. ಕೋತಿಯು ಕೊಂಬೆಯ ತುತ್ತ ತುದಿಗೆ ಏರಿ ಕುಳಿತರೂ ನೀರಿನ ಮಟ್ಟ ಇಳಿಯಲೇ ಇಲ್ಲ. ತಾಯಿ ಕೋತಿಯ ದೇಹವು ಅರ್ಧಷ್ಟು ನೀರಿನಲ್ಲಿ ಮುಳುಗಿದಾಗ ತಾಯಿಯು ತನ್ನ ಮರಿಯನ್ನು ನೀರಿನಲ್ಲಿ ಕೊಚ್ಚಿಹೋಗದಿರಲಿ ಎಂದು ಎತ್ತಿ ಹಿಡಿದುಕೊಂಡಿತು. ಪ್ರವಾಹ ಮತ್ತಷ್ಟು ಮೇಲೇರಿ ನೀರು ತನ್ನ ಮೂಗಿನವರೆಗೆ ಬಂದಾಗ ತಾಯಿಯು ತನ್ನ ತುದಿಕಾಲಲ್ಲಿ ನಿಂತುಕೊಂಡು ತನ್ನ ಮರಿಯನ್ನು ರಕ್ಷಿಸುವ ಪ್ರಯತ್ನವನ್ನು ಮಾಡಿತು. ಪ್ರವಾಹ ಕಮ್ಮಿಯಾಗದೇ ಮತ್ತಷ್ಟು ಹೆಚ್ಚಾಗಿ ಪೂರ್ತಿ ತಾಯಿ ಕೋತಿಯು ಮುಳುಗುವ ಹಂತಕ್ಕೆ ಬಂದಾಗ ತಾನೂ ಇನ್ನು ಬದುಕಲಾರೆನೆಂದು ಅರಿತ ತಾಯಿ ಕೋತಿಯು ತಾನೆತ್ತಿ ಹಿಡಿದುಕೊಂಡಿದ್ದ ತನ್ನ ಮರಿಯನ್ನೆ ತನ್ನ ಕಾಲಿನ ಅಡಿಗೆ ಇಟ್ಟು ಮರಿಯ ಮೇಲೆ ನಿಂತಿತು. ಪ್ರವಾಹದ ನೀರು ಮತ್ತಷ್ಟು ಹೆಚ್ಚಿ ತಾಯಿ ಮತ್ತು ಮರಿ ಕೋತಿಗಳೂ ಪ್ರವಾಹದಲ್ಲಿ ಕೊಚ್ಚಿಕೊಂಡು ಹೋದವು.ಮರಿಯನ್ನು ಅತಿಯಾಗಿ ಪ್ರೀತಿಸುತ್ತಿದ್ದ ತಾಯಿ ಕೋತಿಯು ತನ್ನ ಅಳಿವು ಯಾ ಉಳಿವಿನ ಪ್ರಶ್ನೆ ಬಂದಾಗ ತನ್ನ ಉಳಿವಿನ ಯೋಚನೆಯನ್ನೇ ಮಾಡಿ ತನ್ನ ಮರಿಯನ್ನು ಕಾಲಿನ ಅಡಿಗಿಟ್ಟು ನಿಂತಿತು.

ಈ ಮೂಲಕ ತಾಯಿ ಕೋತಿಯು ಎಲ್ಲಕ್ಕಿಂತ ತನ್ನ ಅಸ್ಥಿತ್ವವೇ ಮುಖ್ಯವೆಂದು ಸಾರಿತು. ಜೀವನದಲ್ಲಿ ಎಲ್ಲರ ಬಗೆಗೆ, ಎಲ್ಲದರ ಬಗೆಗೆ, ತನ್ನವರ ಬಗೆಗೆ ಕಾಳಜಿ ಇರಬೇಕಾದುದು ವ್ಯಕ್ತಿಯ ಪರಮ ಧರ್ಮ. ಆದರೆ ತನ್ನ ಕುರಿತಾಗಿ ಕೊಂಚವಾದರೂ ಕಾಳಜಿ ಇಲ್ಲವೆಂದಾದರೆ ಜೀವನಕ್ಕೆ ಅರ್ಥವೂ ಇರುವುದಿಲ್ಲ. ನಮ್ಮ ಅಸ್ಥಿತ್ವ ಇದ್ದರೆ ಮಾತ್ರ ಎಲ್ಲವೂ ಇದ್ದು, ಎಲ್ಲರ ಕುರಿತೂ ಕಾಳಜಿವಹಿಸಬಹುದು. ತನ್ನನ್ನು ತಾನೇ ನಿರ್ಲಕ್ಷಿಸಿಕೊಳ್ಳುವುದು ಸಲ್ಲದು.

ಸಂತೋಷ್ ರಾವ್ ಪೆರ್ಮುಡ
ಪೆರ್ಮುಡ ಮನೆ, ಪಟ್ರಮೆ ಗ್ರಾಮ ಮತ್ತು ಅಂಚೆ
ಬೆಳ್ತಂಗಡಿ ತಾಲೂಕು, ದ.ಕ ಜಿಲ್ಲೆ-574198
ಮೊಬೈಲ್ : 9742884160

Related post