ಸ್ವಾತಂತ್ರ್ಯ ಸಮರ ಕರುನಾಡು ಅಮರ

ಸ್ವರಾಜ್ಯ ನಮ್ಮ ಜನ್ಮ ಸಿದ್ದ ಹಕ್ಕು ಎಂದು ಆಂಗ್ಲರ ಗುಲಾಮಗಿರಿಗೆ ತಲೆಬಾಗದ ನಮ್ಮ ನಾಡಿನ ಜನರ ನರನಾಡಿಗಳಲ್ಲಿ ಮಿಡಿಯುವ ದೇಶಭಕ್ತಿ, ಸ್ವಾತಂತ್ರ್ಯ ಹೋರಾಟದ ಮಹತ್ತರ ಆಶಯಗಳನ್ನು ತುಂಬಿಕೊಂಡಿರುವ ಕರ್ನಾಟಕ ವೀರ ವನಿತೆಯರ, ವೀರಯೋಧರ ಮತ್ತು ಮಹತ್ತರ ಘಟನಾವಳಿಗಳನ್ನು ಸರಳವಾಗಿ ಹಾಗು ಸಮರ್ಪಕವಾಗಿ ತಿಳಿಯಪಡಿಸುವ ಹೊಸ ನಾಟಕ “ಸ್ವಾತಂತ್ರ್ಯ ಸಮರ ಕರುನಾಡು ಅಮರ“.

ಕನ್ನಡ ನಾಡಿನ ರಾಣಿ ಅಬ್ಬಕ್ಕನಿಂದ ಮೊದಲುಗೊಂಡು ಕಿತ್ತೂರು ರಾಣಿ ಚೆನ್ನಮ್ಮ, ಕಾಳು ಮೆಣಸಿನ ರಾಣಿ ಚೆನ್ನಬೈರಾದೇವಿ, ಬೆಳವಡಿ ಮಲ್ಲಮ್ಮ, ಕೆಳದಿ ಚೆನ್ನಮ್ಮ ಹಾಗೆಯೇ, ಸಂಗೊಳ್ಳಿ ರಾಯಣ್ಣ, ಮದಕರಿ ನಾಯಕ, ಬಿಚ್ಚುಗತ್ತಿ ಭರಮಣ್ಣ ಮೊದಲಾದವರ ಕೆಚ್ಚೆದೆಯ ವೀರ ಹೋರಾಟ, ಪರಂಗಿಗಳ ವಿರುದ್ಧವಾಗಿ ತನ್ನ ತಾಯಿನಾಡಿನ ಉಳಿವಿಗಾಗಿ ದೇಶದ ರಕ್ಷಣೆಗಾಗಿ ಹೊಮ್ಮಿದ ಕ್ರಾಂತಿಯ ಕಿಡಿಯಲ್ಲಿ ಸ್ವಾತಂತ್ರ್ಯದ ಶಕೆ ಪ್ರಾರಂಭವಾಯಿತು.

ಇಡೀ ದೇಶವೇ ಹೋರಾಟದ ಓಟದಲ್ಲಿ ಪರಕೀಯರನ್ನು ನಮ್ಮ ದೇಶದಿಂದ ಬಡಿದು ಓಡಿಸುವ ಹಲವಾರು ಕ್ರಾಂತಿಗಳು, ದಂಗೆಗಳು, ಹೋರಾಟಗಳಲ್ಲಿ ನಮ್ಮ ನಾಡಿನ ಕೊಡುಗೆಗಳನ್ನು ಬಿಂಬಿಸುವ ಅದರಲ್ಲಿನ ಮೊದಲ ದಂಗೆ ಅಂಕೋಲಾ ಉಪ್ಪಿನ ಸತ್ಯಾಗ್ರಹದೊಂದಿಗೆ ಮಹಾತ್ಮ ಗಾಂಧಿ ಯುಗದ ಪ್ರಾರಂಭ, ಶಿವಪುರದ ಧ್ವಜ ಕ್ರಾಂತಿ, ವಿದುರಾಶ್ವತದ ಮಾರಣ ಹೋಮ, ಏಸೂರು ಕೊಟ್ಟರು ಈಸೂರು ಬಿಡೆವು ಎಂಬ ಘೋಷ ವಾಕ್ಯದೊಂದಿಗೆ ಕ್ವಿಟ್ ಇಂಡಿಯಾ ಚಳುವಳಿಗೆ ನಾಂದಿ ಹಾಡಿದ ಈಸೂರು ದಂಗೆ ಮೊದಲಾದ ಶಾಂತಿ ಸಮರಗಳಲ್ಲಿ ಸ್ವಾತಂತ್ರ್ಯದ ಸಮರಗಳಲ್ಲಿ ಸ್ವಾತಂತ್ರ್ಯದ ಜ್ಯೋತಿಗೆ ಹವಿಸ್ಸಾದ ನಾಡಕರ್ಣಿ, ಸೀತಾಭಾಯಿ ಸರಾಫ, ಸ್ವಾಮಿ ವಿದ್ಯಾನಂದರು, ಸಿದ್ದಲಿಂಗಯ್ಯ, ಎಂ ಎನ್ ಜೋಯಿಸ್, ಸುನಂದಮ್ಮ, ಗಂಗಸಂದ್ರ ಗೌರಮ್ಮ, ಭಜಂತ್ರಿ ಭೀಮಯ್ಯ, ನಾಮ ಅಶ್ವಥನಾರಾಯಣ ಶೆಟ್ಟಿ ಅನೇಕ ಮಹಾಚೇತನಗಳ ಹೋರಾಟಗಳನ್ನು ಈ ನಾಟಕ ಬಿಂಬಿಸುತದ್ದೆ.

1947 ಆಗಸ್ಟ್ 15 ರ ನಂತರದಲ್ಲಿ ರೂಪುಗೊಂಡ ಅಶೋಕ ಚಕ್ರವರ್ತಿಯ ಧರ್ಮ ಚಕ್ರ ಹಾಗು ಸತ್ಯ ಮೇವ ಜಯತೆ ಧೇಯವಾಕ್ಯ ಇಂದಿಗೂ ಅಜರಾಮರಾಗಿ ಸ್ವಾತಂತ್ರ್ಯದ ಘನತೆ ಹಾಗು ದೇಶಭಕ್ತಿಯನ್ನು ಜನಮನದಲ್ಲಿ ನಿಲ್ಲುವಂತೆ ನಿರೂಪಿಸುತ್ತದೆ ಈ ನಾಟಕ.

ಸ್ವಾತಂತ್ರ್ಯ ಹೋರಾಟದ ಮಹತ್ತರ ಆಶಯಗಳನ್ನು ತುಂಬಿಕೊಂಡಿರುವ ಈ ನಾಟಕವು ಕರ್ನಾಟಕದ ವೀರ ವನಿತೆಯರ, ವೀರ ಯೋಧರ ಮತ್ತು ಮಹತ್ತರ ಘಟನಾವಳಿಗಳನ್ನು ಮೇಳೈಸಿಕೊಂಡು ನಿರೂಪಣೆಯಾಗಿದೆ. ಪ್ರೇಕ್ಷಕರಲ್ಲಿ ಹೊಸ ಚಿಂತನಾಲಹರಿ ಮತ್ತು ಮತ್ತು ಭರವಸೆಯ ಅಂಶಗಳನ್ನು ಮೂಡಿಸುವ ಈ ನಾಟಕವು ರಂಗ ವಿಜಯ ತಂಡಕ್ಕೆ ವಿಶೇಷ ವಿಶ್ವಾಸವನ್ನು ತಂದುಕೊಟ್ಟಿದೆ. ಇವರ ಕಲ್ಪನೆಯ ಮೂಸೆಯಲ್ಲಿ ಮೂಡಿದ ಈ ನಾಟಕವು ಸ್ವಾತಂತ್ರ್ಯ ಜ್ಯೋತಿಗೆ ಹವಿಸ್ಸಾದ ಕನ್ನಡ ನಾಡಿನ ಅನೇಕ ಮಹಾಚೇತನಗಳ ವಿಷಯಗಳನ್ನು ಮತ್ತು ಹೋರಾಟಗಳನ್ನು ಚಿತ್ರಿಸುತ್ತದೆ. ಇಂಥ ಅಪರೂಪವಾದ ಆಲೋಚನೆಗಳ ಜೊತೆಗೆ ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ನಮ್ಮ ಕರ್ನಾಟಕದ ಕೊಡುಗೆಯನ್ನು ಸರಳವಾಗಿ ತಿಳಿಸಲು ಪ್ರಯತ್ನಿಸುತ್ತದೆ.

ರಂಗ ವಿಜಯ ತಂಡ

ರಂಗಭೂಮಿ ನನ್ನುಸಿರು ಎಂಬ ಅಡಿ ಶೀರ್ಷಿಕೆಯೊಂದಿಗೆ ಪ್ರಾರಂಭವಾದ ರಂಗವಿಜಯ ತಂಡ, ನಾಟಕ ಪ್ರಯೋಗ, ಅಭಿನಯ ತರಬೇತಿ ಶಿಬಿರ, ಕಾರ್ಯಾಗಾರ ಹೀಗೆ ರಂಗಭೂಮಿಯ ಪ್ರತಿ ಆಯಾಮದಲ್ಲೂ ನಿರಂತರವಾಗಿ ರಂಗ ಚಟುವಟಿಕೆಗಳನ್ನು ನಿರ್ವಹಿಸುತ್ತಿದೆ. ಈ ಮೂಲಕ ಮುಂದಿನ ಪೀಳಿಗೆಯ ಯುವಕರನ್ನು ರಂಗಭೂಮಿಯ ಕಡೆ ಸೆಳೆಯುವ ನಿಟ್ಟಿನಲ್ಲಿ ಈ ತಂಡ ಶಾಲಾ ಮಟ್ಟದಲ್ಲಿ, ಕಾಲೇಜು ಹಂತದಲ್ಲಿ ರಂಗಾಸಕ್ತಿಯನ್ನು ಬೆಳೆಸಲು ಶ್ರಮಿಸುತ್ತಿದೆ. ಮುಂದಿನ ತಲೆಮಾರಿನ ಕಲಾವಿದರಿಗೆ ರಂಗಭೂಮಿಯನ್ನು ಶೈಕ್ಷಣಿಕವಾಗಿ ತೆಗೆದುಕೊಂಡು ಹೋಗುವ ಮಹತ್ತರ ಉದ್ದೇಶ ತಂಡದ್ದಾಗಿದೆ. ಈಗಾಗಲೇ ಪಠ್ಯಗಳಲ್ಲಿನ ನಾಟಕಗಳನ್ನು ಪ್ರಯೋಗಕ್ಕೆ ಅಳವಡಿಸಿ ಶಾಲಾ ಕಾಲೇಜುಗಳಲ್ಲಿ ಪ್ರದರ್ಶಿಸುವ ಮೂಲಕ ಅಗತ್ಯವಾದ ರಂಗ ವಾತಾವರಣವನ್ನು ನಿರ್ಮಿಸುವ ಕಾರ್ಯವನ್ನು ರಂಗವಿಜಯ ನಿರ್ವಹಿಸುತ್ತಿದೆ. ಮುಂದೆಯೂ ಈ ಕಾರ್ಯಗಳನ್ನು ಮತ್ತಷ್ಟು ವಿಸ್ತರಿಸುವ ಕನಸುಗಳನ್ನು ಹೊಂದಿದೆ. ಜಾನಪದ ಕಲೆಗಳಲ್ಲಿ ತೀವ್ರವಾದ ಆಸಕ್ತಿಯನ್ನು ಹೊಂದಿರುವ ಈ ತಂಡ ಈಗಾಗಲೇ ದೇಶಾದ್ಯಂತ ಹಾಗು ವಿದೇಶಗಳಲ್ಲಿಯು ಹಲವಾರು ಕಾರ್ಯಕ್ರಮಗಳನ್ನು ನೀಡಿದೆ.

ನಾಟಕ ರಚನೆ : ಶ್ರೀ ಟಿ. ಲಕ್ಷ್ಮೀನಾರಾಯಣ

ಕೆಲವು ವ್ಯಕ್ತಿತ್ವಗಳು ಹೀಗೆಯೇ ಎಂದು ಹೇಳಲು ಬರುವುದಿಲ್ಲ. ಅಂಥ ವ್ಯಕ್ತಿತ್ವ ಶ್ರೀ ಟಿ. ಲಕ್ಷ್ಮೀನಾರಯಣನವರದ್ದು. ಇವರು ಮೂಲತಃ ಚಿತ್ರಕಲಾವಿದರಾಗಿದ್ದು ರಂಗಭೂಮಿ, ಸಾಹಿತ್ಯ, ಸಂಗೀತ, ಸಿನಿಮಾ ಮೊದಲಾದ ಕಲಾತ್ಮಕ ಅಂಶಗಳನ್ನು ಮೈಗೂಡಿಸಿಕೊಂಡಿದ್ದು ನಿರಂತರವಾಗಿ ಅವುಗಳ ಜೊತೆಯಲ್ಲಿ ದುಡಿಯುತ್ತಿರುವ ದೇಸಿ ಕಲಾವಿದರಾಗಿದ್ದು ಚಿತ್ರಕಲಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಾ, ಸಂಗೀತ ಕ್ಷೇತ್ರದಲ್ಲಿ ಅಸಂಖ್ಯ ಸಂಗೀತ ಕಾರ್ಯಕ್ರಮಗಳನ್ನು ನೀಡುತ್ತಾ ರಂಗಭೂಮಿಯಲ್ಲಿ ನಟನೆ, ಸಂಗೀತ, ವಿನ್ಯಾಸ, ನಿರ್ದೇಶನ ಮೊದಲಾದ ಭಾಗಗಳಲ್ಲಿ ನಿರೂಪಿಸಿಕೊಂಡು ಸಕ್ರಿಯವಾಗಿ ದುಡಿಯುತ್ತಿರುವ ಬಿಡುವಿಲ್ಲದ ಕಲಾವಿದ.

ಸಂಗೀತ, ಅಭಿನಯ ಹಾಗು ತಮ್ಮ ಅಮೋಘ ಚಿತ್ರಕಲೆಗಳಿಗಾಗಿ ಅನೇಕ ಪ್ರಶಸ್ತಿಯನ್ನು ಪಡೆದುಕೊಂಡ್ಡಿದ್ದಾರೆ.

ಪ್ರಸ್ತುತ ದ್ರಾವಿಡ ವಿಶ್ವವಿದ್ಯಾಲಯದಲ್ಲಿ ಪಿ ಎಚ್ ಡಿ ವಿದ್ಯಾರ್ಥಿಯಾಗಿ ಜಾನಪದ ಚಿತ್ರಕಲೆಗಳ ಆಳವಾದ ಅಧ್ಯಯನದಲ್ಲಿ ತೊಡಗಿರುವ ಇವರು ಸ್ವಾತಂತ್ರ್ಯ ಬಂದ 75 ವರ್ಷಗಳು ತುಂಬಿದ ಸಂದರ್ಭದಲ್ಲಿ ಸ್ವಾತಂತ್ರ್ಯ ಸಮರ ಕರುನಾಡು ಅಮರ ಎಂಬ ನಾಟಕವನ್ನು ರಚಿಸಿದ್ದಾರೆ.

ನಾಟಕ ನಿರ್ದೇಶನ – ಮಾಲೂರು ವಿಜಿ

ತಮ್ಮ 12 ನೇ ವಯಸ್ಸಿನಲ್ಲಿಯೇ ಬಾಲನಟನಾಗಿ ದಿವಂಗತ ಸಿ.ಜಿ.ಕೆ ಅವರ ಗರಡಿಯಲ್ಲಿ ರಂಗಭೂಮಿಗೆ ಪಾದಾರ್ಪಣೆ ಮಾಡಿದ ಎಂ ಎಸ್ ವಿಜಯಕುಮಾರ್ (ಮಾಲೂರು ವಿಜಿ) ಅವರ ರಂಗ ಪಯಣ ನಿರಂತರವಾಗಿ ಸಾಗುತಿದ್ದೆ. ನಾಟಕಗಳ ಪ್ರದರ್ಶನ, ಕೋಲಾರ ಮತ್ತು ತುಮುಕೂರು ಜಿಲ್ಲಾ ಸಾಕ್ಷರತಾ ಸಮಿತಿಯ ಸಂಚಾಲಕರಾಗಿ ಕಾರ್ಯ ನಿರ್ವಹಣೆ ಮಾಡಿದ ಮಾಲೂರು ವಿಜಿ ಸಾಮಾನ್ಯ ವ್ಯಕ್ತಿಯಾಗಿ ಕಾಣುವ ಬಹುಮುಖ ಪ್ರತಿಭೆ. ರಾಜ್ಯ ಸಂಪನ್ಮೂಲ ಕೇಂದ್ರ ಆಯೋಜಿಸಿದ ನಾಟಕಗಳಿಗೆ ನಿರ್ದೇಶಕರಲ್ಲಿ ಒಬ್ಬರಾಗಿ ಆಯ್ಕೆಯಾಗಿ ಹಲವು ವರ್ಷ ತರಬೇತಿ ನೀಡಿದ ಅನುಭವ. ನೀನಾಸಂ ನೆಡೆಸುವ ಸಂಸ್ಕೃತಿ ಶಿಬಿರದಲ್ಲಿ ಭಾಗವಹಿಸಿ ಹಲವು ನಾಟಕಗಳ ರಚನೆ ಮತ್ತು ನಿರ್ದೇಶನ ಮಾಡಿದ್ದಾರೆ.

1987 ರಲ್ಲಿ ಭಾರತ ವಿಜ್ಞಾನ ಜಾಥಾ ಮೂಲಕ ಹಲವಾರು ಬೀದಿ ನಾಟಕಗಳ ಪ್ರದರ್ಶನ ನೀಡಿದ ಕಾರ್ಯಶೀಲ ವ್ಯಕ್ತಿ. 1990 ಜ್ಞಾನ ವಿಜ್ಞಾನ ಜಾಥಾದಲ್ಲಿ ಕೋಲಾರದ 3000 ಹಳ್ಳಿಗಳಲ್ಲಿ ಬೀದಿ ನಾಟಕ ಪ್ರದರ್ಶನ ಮಾಡಿ 1992 ರಲ್ಲಿ ನೆಡೆದ ನಿರ್ದೇಶಕರ ತರಬೇತಿ ಶಿಬಿರದಲ್ಲಿ ನಿರ್ದೇಶಕರಾಗಿ ತರಬೇತಿ ನೀಡಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ರಂಗಭೂಮಿ ನಟರಾಗಿ ಒಡಲಾಳ, ಪ್ರೇತ ದ್ವೀಪ, ಕನಸಿನವರು, ಸಾಕ್ಷಿಕಲ್ಲು ಮಂಟೇಸ್ವಾಮಿ ಕಥಾ ಪ್ರಸಂಗ, ಚಿದಂಬರ ರಹಸ್ಯ, ರಾಜಭೇಟೆ, ಒಂದು ಸಾವಿನ ಸುತ್ತ, ಪ್ರಚಂಡ ರಾವಣ, ಸಂಗೊಳ್ಳಿ ರಾಯಣ್ಣ, ಶರಣ ಜೀವನ ವಚನ ಹೂರಣ, ಕನಕ ವೈಭವ, ಬಾ ಇಲ್ಲಿ ಸಂಭವಿಸು, ಮುಂತಾದ ನಾಟಕಗಳಲ್ಲಿ ಅಭಿನಯಿಸಿದ್ದಾರೆ.

ವಸ್ತ್ರವಿನ್ಯಾಸಕರಾಗಿ ಎಂ ಎಸ್ ಸತ್ಯುರವರ ಸಂಸ್ಥೆಯಲ್ಲಿ ಗಿರೀಶ್ ಕಾಸರವಳ್ಳಿ, ನಾಗೇಂದ್ರಪ್ಪ, ಪಿ ಶೇಷಾದ್ರಿಯವರ ಕಿರು ಧಾರಾವಾಹಿಗಳಿಗೆ ದುಡಿದ ಕೀರ್ತಿ ಮಾಲೂರು ವಿಜಿ ರವರದ್ದು.

ನಾಟಕ ರಚನಾಕಾರರಾಗಿ, ಹೀಗೊಂದು ದುರಂತ, ಯಾರೇ ಬಂದರು, ರಾಷ್ಟ್ರ ಕವಿ ಕುವೆಂಪು ಬದುಕು ಬರಹ ಆಧಾರಿತ ಬಾ ಇಲ್ಲಿ ಸಂಭವಿಸು, ಮುಂತಾದ ನಾಟಕಗಳಲ್ಲಿ ರಚಿಸಿದ್ದಾರೆ.

ನಿರ್ದೇಶಕರಾಗಿ ಅಪ್ಪ, ಹೀಗೊಂದು ದುರಂತ, 36 ರಲ್ಲಿ 63, ಕನಸಿನವರು, ಸಾಕ್ಷಿಕಲ್ಲು, ಪ್ರಚಂಡ ರಾವಣ, ಸಂಗೊಳ್ಳಿ ರಾಯಣ್ಣ, ಸಾವು, ಮಳೆ ನಿಲ್ಲುವವರೆಗೂ, ಪತನ, ಕಕೇಶಿಯನ್ ಚಾಕ್ ಸರ್ಕಲ್, ಅಲಿಬಾಬಾ ಮತ್ತು 40 ಕಳ್ಳರು ನಾಟಕಗಳನ್ನು ನಿರ್ದೇಶನ ಮಾಡಿದ್ದಾರೆ. ಕಿರುತೆರೆ ನಟರಾಗಿ ಬದುಕು ಜಟಕಾ ಬಂಡಿ, ಸೈಲೆನ್ಸ್ ಪೀಸ್, ಮಕ್ಕಳಿಗೆ ಸ್ಕೂಲ್ ಮನೇಲಿ ಅಲ್ವೇ, ತೇಲಿ ಹೋದ ನೌಕೆ ಗಳಲ್ಲಿ ತನ್ನ ನಟನ ನೈಪುಣ್ಯವನ್ನು ಮೆರೆದಿದ್ದಾರೆ.

ರಾಜ್ಯಮಟ್ಟದ ಉತ್ತಮ ನಿರ್ದೇಶಕ, ಶಂಕರನಾಗ್ ಪ್ರಶಸ್ತಿ, ರಾಜ್ಯ ಮಟ್ಟದ ಕಾಲೇಜು ರಂಗಸ್ಪರ್ಧೆಯಲ್ಲಿ ವಿದ್ಯಾರ್ಥಿ ವಿರಚಿತ ಅತ್ತುತ್ಯಮ ನಾಟಕ ಪ್ರಶಸ್ತಿ, ರಾಜ್ಯಮಟ್ಟದ ಅತ್ಯುತ್ತಮ ನಟ, ಗೌರವ ಪ್ರಶಸ್ತಿಗಳು ಮಾಲೂರು ವಿಜಿ ಅವರಿಗೆ ಸಂದಿವೆ.

ನಾಟಕದಲ್ಲಿನ ಕಲಾವಿದರು

ನಾಟಕ ಹಿನ್ನಲೆ ತಂಡ ಹಾಗು ಸಂಸ್ಥೆಯ ಪೋಷಕರು

ಕೋವಿಡ್ ಮೂರನೇ ಅಲೆಯ ಭೀತಿಯ ಕಾರಣ ಬೆಂಗಳೂರಿನಲ್ಲಿ ನಾಟಕ ಪ್ರದರ್ಶನದ ದಿನಾಂಕ ಇನ್ನು ನಿಗದಿಯಾಗಿಲ್ಲ.

ರಂಗಕಲಾವಿದರನ್ನು ಗೌರವಿಸಿ ಹಾಗು ರಂಗಭೂಮಿಯನ್ನು ಉಳಿಸಿ ಬೆಳಸಿ.

ಡಾ. ನರಸಿಂಹ ಪ್ರಸಾದ್

ದ್ರಾವಿಡ ವಿಶ್ವವಿದ್ಯಾಲಯ ಕುಪ್ಪಂ, ಆಂಧ್ರಪ್ರದೇಶ

ನಿಮ್ಮ ಅನಿಸಿಕೆಗಳನ್ನು ಕಮೆಂಟ್ ಮೂಲಕ ಮಾಡಬೇಕಾಗಿ ವಿನಂತಿ

Related post

1 Comment

  • Very good efforts interesting to watch in Bangalore

Leave a Reply

Your email address will not be published. Required fields are marked *