ಸ್ವಾರ್ಥವಿಲ್ಲದ ಸಹಾಯ

ಸ್ವಾರ್ಥವಿಲ್ಲದ ಸಹಾಯ

ಹಸ್ತಿನಾಪುರದ ಯುವರಾಜನಾದ ದುರ್ಯೋಧನನು ದುರಾಸೆಯಿಂದ ಪಾಂಡುವಿನ ಪುತ್ರರಾದ ಪಾಂಡವರನ್ನು ಇಂದ್ರಪ್ರಸ್ಥ ಅರಮನೆಯಿಂದ ಓಡಿಸಿ ಅವರ ಆಸ್ತಿಯನ್ನೂ ಕಬಳಿಸುವ ಉದ್ದೇಶದಿಂದ ಮಾವ ಶಕುನಿಯ ಕುತಂತ್ರದಂತೆ ಹಸ್ತಿನಾವತಿಗೆ ಪಗಡೆಯಾಟಕ್ಕೆ ಆಹ್ವಾನಿಸುತ್ತಾನೆ.

ಶಕುನಿಯ ಹೆಣೆದ ಕುತಂತ್ರದಿಂದ ಧರ್ಮರಾಯನು ಪಗಡೆಯಾಟದಲ್ಲಿ ಸೋತು, ತಾನು ಗಳಿಸಿದ ಅಷ್ಟೂ ಸಂಪತ್ತು, ಗಳಿಸಿದ್ದ ಆಸ್ತಿ, ತನ್ನ ಸೈನ್ಯ, ಸಾವಿರಾರು ಕುದುರೆಗಳನ್ನು ಕಳೆದುಕೊಳ್ಳುತ್ತಾನೆ. ನಂತರದಲ್ಲಿ ಇಂದ್ರಪ್ರಸ್ಥ ಅರಮನೆ, ಸಹೋದರರಾದ ನಕುಲ, ಸಹದೇವ, ಅರ್ಜುನ, ಭೀಮ ಕೊನೆಗೆ ತನ್ನನ್ನೇ ತಾನು ಪಂದ್ಯಕ್ಕಿಟ್ಟು ಯುಧಿಷ್ಠಿರನು ಎಲ್ಲವನ್ನೂ ಕಳೆದುಕೊಳ್ಳುತ್ತಾನೆ. ಪಗಡೆಯಾಟದಲ್ಲಿ ಕೊನೆಯದಾಗಿ ತನ್ನ ಮಡದಿ ದ್ರೌಪದಿಯನ್ನೂ ಪಂದ್ಯಕ್ಕೆ ಇಟ್ಟು ಆಕೆಯನ್ನೂ ಪಂದ್ಯದಲ್ಲಿ ಕಳೆದುಕೊಂಡು ಪಾಂಡವರು ಕೌರವನ ದಾಸನಾಗುತ್ತಾರೆ.

ದ್ರೌಪದಿಯ ಮೇಲಿದ್ದ ದ್ವೇಷದ ಕಾರಣದಿಂದ ತನ್ನ ತಮ್ಮನಾದ ದುಶ್ಶಾಸನನಲ್ಲಿ ದ್ರೌಪದಿಯನ್ನು ತುಂಬಿದ ರಾಜ ಸಭೆಗೆ ಎಳೆದು ತರುವಂತೆ ಆದೇಶಿಸುತ್ತಾನೆ. ಅಣ್ಣನ ಆದೇಶದಂತೆ ದುಶ್ಶಾಸನನು ದ್ರೌಪದಿಯನ್ನು ರಾಜಸಭೆಗೆ ದರದರನೆ ಎಳೆದುಕೊಂಡು ಬರುತ್ತಾನೆ. ಧುರ್ಯೋಧನನ ಆದೇಶದಂತೆ ದುಶ್ಶಾಸನನು ದ್ರೌಪದಿಯ ವಸ್ತ್ರವನ್ನು ಎಳೆದು ವಿವಸ್ತ್ರಗೊಳಿಸಲು ಪ್ರಯತ್ನಿಸುತ್ತಾನೆ. ಅದಾಗಲೇ ಕೌರವನ ದಾಸರಾಗಿದ್ದ ತನ್ನ ಐವರು ಗಂಡಂದಿರು ಅಸಹಾಯಕರಾಗಿರುವುದನ್ನು ನೋಡಿ ದುಖಿಃತಳಾದ ದ್ರೌಪದಿಯು ಅಂತಿಮವಾಗಿ ಶ್ರೀಕೃಷ್ಣನನ್ನು ಮನತುಂಬಿ ಪ್ರಾರ್ಥಿಸುತ್ತಾಳೆ. ದ್ರುಪದ ಕನ್ಯೆಯ ಪ್ರಾರ್ಥನೆಗೆ ಓಗೊಟ್ಟ ಶ್ರೀಕೃಷ್ಣನು ದ್ರೌಪದಿಯ ಸೀರೆಯನ್ನು ಅಕ್ಷಯವಾಗಿಸುತ್ತಾನೆ. ದುಶ್ಶಾಸನನು ಸೀರೆಯನ್ನು ಎಳೆದು ಎಳೆದು ಸುಸ್ತಾಗಿ ತುಂಬಿದ ರಾಜಸಭೆಯಲ್ಲಿ ಬೀಳುತ್ತಾನೆ.

ದ್ವಾರಕೆಯಲ್ಲಿ ಶಿಶುಪಾಲನೊಂದಿಗಿನ ಯುದ್ಧದಲ್ಲಿ ಕೃಷ್ಣನ ಕೈಯ ಬೆರಳಿಗೆ ಗಾಯವಾದಾಗ ದ್ರೌಪದಿಯು ಕೃಷ್ಣನ ಕೈಯ ಗಾಯವನ್ನು ಶುಚಿಗೊಳಿಸಿರುತ್ತಾಳೆ. ಗಾಯಕ್ಕೆ ಕಟ್ಟಲು ತನ್ನ ಬೆಲೆಬಾಳುವ ಸೀರೆಯ ಅಂಚನ್ನೇ ಹರಿದು ಕೈಬೆರಳಿನ ಗಾಯಕ್ಕೆ ಸುತ್ತಿರುತ್ತಾಳೆ. ಆಗ ಶ್ರೀಕೃಷ್ಣನು ದ್ರೌಪದಿಗೆ ‘ನೀನಿವತ್ತು ಉಟ್ಟಿರುವ ನಿನ್ನ ಸೀರೆಯ ಅಂಚನ್ನೇ ಹರಿದು ನನ್ನ ಕೈಯ ಗಾಯಕ್ಕೆ ಕಟ್ಟಿರುವೆ, ಮುಂದೊಂದು ದಿನ ನಿನಗೆ ಅಂತ್ಯವೇ ಇಲ್ಲದ ಸೀರೆಯನ್ನು ನಾನು ಕೊಡುತ್ತೇನೆ’ ಎಂದು ಅಭಯವನ್ನು ನೀಡಿರುತ್ತಾನೆ.

ಇಲ್ಲಿ ದ್ರೌಪದಿಯು ತಾನು ಮಾಡಿದ ಅತೀ ಸಣ್ಣ ಸಾಂದರ್ಭಿಕ ಸಹಾಯವು ಆಕೆಯ ಪಾಲಿಗೆ ಬಲು ದೊಡ್ಡ ವರವಾಯಿತು. ಸಹಾಯ ಮಾಡುವ ನಿರ್ಧಾರವು ಮನಸ್ಸಿನಾಳದಿಂದ ಬಂದಾಗ ಅದಕ್ಕೆ ಸಮಯ, ಸಂದರ್ಭ ಅಥವಾ ಅದರಿಂದ ದೊರೆಯುವ ಲಾಭದ ಯೋಚನೆಯೂ ಇರುವುದಿಲ್ಲ. ನೀರಿನಲ್ಲಿ ಕೊಚ್ಚಿಕೊಂಡು ಹೋಗುತ್ತಿರುವವನಿಗೆ ಹುಲ್ಲುಕಡ್ಡಿಯೂ ವರವಾಗುವಂತೆ ಕಷ್ಟದಲ್ಲಿ ಇರುವವರಿಗೆ ಮನಃಪೂರ್ವಕವಾಗಿ ಸಹಾಯವನ್ನು ಮಾಡಬೇಕು. ಅದಕ್ಕಾಗಿ ಎಂದಿಗೂ ಯಾರಿಂದಲೂ ಯಾವ ಪ್ರತಿಫಲವನ್ನು ನಿರೀಕ್ಷಿಸಬಾರದು. ಕೃಷ್ಣನ ಕೈಯಿಂದ ಸೋರುತ್ತಿದ್ದ ರಕ್ತವನ್ನು ತಡೆಯುವ ಏಕೈಕ ಉದ್ದೇಶವನ್ನು ಹೊಂದಿದ್ದ ದ್ರೌಪದಿಯು ಆ ಸನ್ನಿವೇಶದಲ್ಲಿ ತಾನು ಉಟ್ಟಿದ್ದ ಅತ್ಯಂತ ಬೆಲೆಬಾಳುವ ಸೀರೆಯ ಅಂಚನ್ನು ಹರಿದು ಕೈಗೆ ಕಟ್ಟಿದ್ದಳು. ಸಹಾಯವನ್ನು ಯಾರಿಗೆ, ಯಾವಾಗ ಯಾವ ಪ್ರಮಾಣದಲ್ಲಿ ಮಾಡುತ್ತಿದ್ದೇವೆ ಎನ್ನುವುದು ಮುಖ್ಯವಲ್ಲ, ಬದಲಿಗೆ ಆ ಸಹಾಯವು ಆ ವ್ಯಕ್ತಿಗೆ ಎಷ್ಟು ಸಹಕಾರಿಯಾಗುತ್ತದೆ ಎನ್ನುವುದು ಮುಖ್ಯ. ದುಶ್ಶಾಸನು ತುಂಬಿದ ರಾಜ ಸಭೆಯಲ್ಲಿ ದ್ರೌಪದಿಯ ವಸ್ತ್ರವನ್ನು ಎಳೆಯುತ್ತಿದ್ದಾಗ ಅದನ್ನು ತಡೆಯುವ ಶಕ್ತಿಯಿದ್ದವರೆಲ್ಲ ನೋಡಿ ಆನಂದಿಸುತ್ತಿದ್ದರು. ಇಂತಹ ಸಮಯದಲ್ಲಿ ದ್ರೌಪದಿಯ ಮಾನವನ್ನು ಕಾಪಾಡಿದ್ದು, ಅಂದು ಆಕೆ ಹರಿದು ಕೃಷ್ಣನ ಕೈಗೆ ಕಟ್ಟಿದ ತುಂಡು ಸೀರೆಯೇ. ಇತರರಿಗೆ ಮಾಡುವ ಸಣ್ಣ ಸಹಾಯವಾದರೂ ಅದರಲ್ಲಿ ಸ್ವಲ್ಪವೂ ಸ್ವಾರ್ಥವಿರದೇ ಮನಃಪೂರ್ವಕವಾಗಿ ಮಾಡಬೇಕು.

ಸಂತೋಷ್ ರಾವ್ ಪೆರ್ಮುಡ
ಪೆರ್ಮುಡ ಮನೆ, ಪಟ್ರಮೆ ಗ್ರಾಮ ಮತ್ತು ಅಂಚೆ
ಬೆಳ್ತಂಗಡಿ ತಾಲೂಕು,
ದ.ಕ ಜಿಲ್ಲೆ-574198
ದೂ:9742884160

Related post