ಹಕ್ಕಿ ಹಾರುತಿರಲಿ, ಸದಾ!

ಎಲ್ಲ ಓದುಗ ಪ್ರಭುಗಳಿಗೆ ಪ್ರೀತಿ, ಗೌರವಪೂರ್ವಕ ನಮಸ್ಕಾರಗಳು!

ಒಂದಾರು ತಿಂಗಳ ಹಿಂದೆ ಸಹೋದರಿ ಶ್ರೀಮತಿ ನಿಖಿತಾ ಅಡವೀಶಯ್ಯ ಅವರು ಒಂದು ವೈರಲ್‍ ಆಗಿದ್ದ ಹಕ್ಕಿ ವಿಡಿಯೋವನ್ನು ಕಳಿಸಿ ಮಾಹಿತಿ ಕೇಳಿದ್ದರು. ವಿವರಿಸಿದೆ. ಅವರ ಭ್ರಾತೃ ಸಂಬಂಧಿ ಒಂದು ಸಾಹಿತ್ಯಕ ಪತ್ರಿಕೆಯನ್ನು ಜಾಲತಾಣದಲ್ಲಿ ನಡೆಸುತ್ತಿರುವುದಾಗಿಯೂ ಅದರಲ್ಲಿ ಇದನ್ನು ಪ್ರಕಟಿಸಬಹುದೇ ಎಂದು ಕೇಳಿದರು. ಹಾಗೆ ಈ ಅಂಕಣ ಆರಂಭವಾಗಿದ್ದು! ಆಗ ನಾನು ಇನ್ನೊಂದು ಜಾಲತಾಣ ಪತ್ರಿಕೆಗೆ ಹಕ್ಕಿಗಳನ್ನು ಕುರಿತ ಅಂಕಣವನ್ನು ಬರೆಯುತ್ತಲೇ ಇದ್ದೆ. ಅದನ್ನು ಇಲ್ಲಿಯೂ ಪ್ರಕಟಿಸುವುದಾಗಿ ಪ್ರಿಯ ಸಂಪಾದಕ ಮಿತ್ರರಾದ ಶ್ರೀ ಚಂದ್ರಶೇಖರ್‍ ಹೇಳಿದರು. ಆ ಪತ್ರಿಕೆಯ ಸಂಪಾದಕರೂ ಈ ಏರ್ಪಾಡಿಗೆ ಒಪ್ಪಿದರಾದರೂ ಒಂದೇ ಲೇಖನವನ್ನು ಎರಡೆರೆಡು ಕಡೆ ಕೊಡುವುದು ನನಗೇ ಇಷ್ಟವಾಗಲಿಲ್ಲ. ಹಾಗಾಗಿ, ತುಸು ಹೆಚ್ಚು ಮಾಹಿತಿ ಸೇರಿಸಿಯೇ ಕಳಿಸಲು ಆರಂಭಿಸಿದೆ. ಒಂದು ಇಪ್ಪತ್ತೈದು ವಾರ ಈ ಅಂಕಣವನ್ನು ನಡೆಸುವುದು ಎಂದುಕೊಂಡಿದ್ದೆ. ಒಟ್ಟು ಇಪ್ಪತ್ತೇಳು ವಾರ ನಡೆದಿದೆ. ಬಹಳ ಸಂತೋಷ. ಈ ಲೇಖನದೊಂದಿಗೆ ಈ ಅಂಕಣವನ್ನು ನಿಲ್ಲಿಸುತ್ತಿದ್ದೇನೆ. ಎಲ್ಲರಿಗೂ ಧನ್ಯವಾದಗಳು!

ಸಂಪಾದಕರಾದ ಶ್ರೀ ಚಂದ್ರಶೇಖರ್ ಇನ್ನೊಂದು ಪ್ರಸ್ತಾವವನ್ನಿಟ್ಟಿದ್ದಾರೆ: ಒಂದು ಹಕ್ಕಿಗಳನ್ನು ಕುರಿತಾದ ಚಂದದ ಪುಸ್ತಕ ತರುವುದು ಎಂದು. ಸಂತೋಷವೇ! ಆ ಕುರಿತಾಗಿ ಮಾತು ಕತೆ ನಡೆಯುತ್ತಿದೆ. ಎಲ್ಲವೂ ಸರಿಯಾದರೆ ಕನ್ನಡಕ್ಕೇ ಅನನ್ಯವಾದ ಹಕ್ಕಿ ಪುಸ್ತಕ ನಿಮ್ಮ ಮಡಿಲಿಗೆ ಬರಲಿದೆ. ಹಾಗಾಗಲಿ ಎಂದು ಹಾರೈಸಿರಿ.

ಇನ್ನು ಈ ಅಂಕಣಕ್ಕೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆಗಳನ್ನು ಸಮರ್ಪಿಸುವುದು ನನ್ನ ಪ್ರೀತಿಯ ಕರ್ತವ್ಯ. ಮೊತ್ತಮೊದಲಿಗೆ ಈ ಪ್ರಸ್ತಾವವನ್ನಿಟ್ಟ ಸಹೋದರಿ ಶ್ರೀಮತಿ ನಿಖಿತಾ ಅಡವೀಶಯ್ಯ ಅವರಿಗೆ ಧನ್ಯವಾದಗಳು. ವಾರವಾರವೂ ನೋಡಿ ಪ್ರಕಟಿಸಿದ, ಬೇಗ ಕಳಿಸಿ ಎಂದು ಒತ್ತಾಯ ಮಾಡಿ ಬರೆಸಿ ಪ್ರಕಟಿಸಿದ ಸಂಪಾದಕ ಮಿತ್ರರಾದ ಶ್ರೀ ಚಂದ್ರಶೇಖರರಿಗೆ ಧನ್ಯವಾದಗಳು ಎನ್ನುವುದು ಕೇವಲ ಔಪಚಾರಿಕವಾಗುತ್ತದೆ. ಅವರಿಗೆ ಹೃತ್ಪೂರ್ವಕ ಧನ್ಯವಾದಗಳು! ಹಾಗೆಯೇ ಮತ್ತೊಂದು ಜಾಲಪತ್ರಿಕೆಯ ಸಂಪಾದಕಾದ ಶ್ರೀ ಪರಮೇಶ್ವರ ಭಟ್‍ ಅವರಿಗೂ ಧನ್ಯವಾದಗಳು! ಇನ್ನು ಬರಹಕ್ಕೆ ಕಿರೀಟ, ಕಳಸವಿಟ್ಟವರು ಮಿತ್ರ ಶ್ರೀ ಜಿ ಎಸ್ ಶ್ರೀನಾಥ. ಅವರು ನಿರಂತರವಾಗಿ ಚಿತ್ರಗಳನ್ನು ಒದಗಿಸಿದ್ದರಿಂದ ಈ ಅಂಕಣಕ್ಕೆ ಒಂದು ಮೆರುಗು ಬಂತು. ಅವರಿಗೂ ಧನ್ಯವಾದಗಳು ಎನ್ನುವುದು ಔಪಚಾರಿಕವಾಗುತ್ತದೆ. ಕೃತಜ್ಞ.

ಮಿತ್ರ ಜಿ ಎಸ್ ಶ್ರೀನಾಥ

ಇನ್ನು ಬರೆಯಲು ನನ್ನ ಕ್ಷೇತ್ರಕಾರ್ಯವಲ್ಲದೆ ಅಧ್ಯಯನವೂ ಕಾರಣ. ಆ ಎಲ್ಲ ಪುಸ್ತಕಗಳ ಲೇಖಕರು, ಸಲೀಂ ಅಲಿಯಿಂದ ರಾಸ್ಮುಸನ್‍ವರೆಗೆ ಹೆಸರಿಸದ ಎಲ್ಲರಿಗೆ ಹೃತ್ಪೂರ್ವಕ ಧನ್ಯವಾದಗಳು!

ಇನ್ನು ಓದುಗ ಪ್ರಭುಗಳು. ನೀವಿಲ್ಲದೆ ಏನುಂಟು! ಬರೆಯುವುದು ಯಾರಿಗಾಗಿ?! ಪ್ರತೀವಾರ ಓದಿದ, ಓದಿಪ್ರತಿಕ್ರಯಿಸಿದ ಎಲ್ಲರಿಗೂ ಮನದಾಳದ ವಂದನೆಗಳು, ಕೃತಜ್ಞ.

ನಾವು ಮನುಷ್ಯರು ಹಕ್ಕಿಗಳ ಸಹಜೀವಿಗಳು. ಈ ಜೀವಜಾಲದಲ್ಲಿ ಮನುಷ್ಯನೂ ಒಂದು ಜೀವಿ ಮಾತ್ರ. ವಿಕಾಸದ ದೆಸೆಯಿಂದಾಗಿ ಅವನಿಗೆ ಜೀವಜಾಲವನ್ನಾಳುವಂತಹ ಸ್ಥಾನ ದಕ್ಕಿಬಿಟ್ಟಿದೆ. ಆದರೆ, ಅವನು ಸದಾ ಪ್ರಕೃತಿಗೆ ಅಧೀನ! ಇದನ್ನು ಅರಿತ ದಿನ ಅವನು ಮಾನವನಾಗುತ್ತಾನೆ. ಆ ದಿನ ಬೇಗಬರಲಿ ಎಂದು ಆಶಿಸುತ್ತೇನೆ. ಹಕ್ಕಿ ಹಾರುತಿರಲಿ, ಸದಾ!

ಕಲ್ಗುಂಡಿ ನವೀನ್

ಈ ಶತಮಾನ ವನ್ಯಜೀವಿ ಮತ್ತು ಸಂರಕ್ಷಣೆಯ ಸುವರ್ಣ ಪರ್ವ

Related post

Leave a Reply

Your email address will not be published. Required fields are marked *