ಹದಿನಾಲ್ಕು ವರ್ಷದ ಸಂಭ್ರಮದಲ್ಲಿ ‘ವ್ಯಾಸ್ಪ್ ಥಿಯೇಟರ್’- VAPS

ಹದಿನಾಲ್ಕು ವರ್ಷದ ಸಂಭ್ರಮದಲ್ಲಿ ‘ವ್ಯಾಸ್ಪ್ ಥಿಯೇಟರ್’- VAPS

ಈ ಕಾಲ ಘಟ್ಟದಲ್ಲಿ ರಂಗಭೂಮಿಯ ತಂಡಗಳು ಹೆಚ್ಚೆಚ್ಚು ರಂಗ ಪ್ರಕಾರಗಳಲ್ಲಿ ತೊಡಗಿಕೊಂಡು ನಾಡಿನ ಜನರಲ್ಲಿ ರಂಗಾಸಕ್ತಿಯನ್ನು ಬೆಳೆಸುತ್ತಿವೆ.

ಈ ನಿಟ್ಟಿನಲ್ಲಿ ‘ವ್ಯಾಸ್ಪ್ ಥಿಯೇಟರ್’ ಸತತವಾಗಿ ಹದಿಮೂರು ವರ್ಷಗಳು ರಂಗ ಪ್ರಯೋಗಗಳನ್ನೂ ಹಾಗೂ ಹಲವಾರು ರಂಗ ಚಟುವಟಿಕೆಗಳನ್ಬು ನಡೆಸುತ್ತಾ ಹದಿನಾಲ್ಕನೇ ವರ್ಷಕ್ಕೆ ಕಾಲಿಟ್ಟಿದೆ.

ನಾಡಿನ ಖ್ಯಾತ ನಾಟಕ ರಚನೆಕಾರ, ನಟ ಹಾಗೂ ನಿರ್ದೇಶಕ ರಾಜೇಂದ್ರ ಕಾರಂತರ ರಚನೆ ಹಾಗೂ ನಿರ್ದೇಶನದ ‘ಮರಿಯಂಳ ಮೂರನೇ ಮದುವೆ’ ನಾಟಕದ ಪ್ರರ್ದಶನದ ಮೂಲಕ 2010 ರಲ್ಲಿ ‘ವ್ಯಾಸ್ಪ್ ಥಿಯೇಟರ್’ ನ ರಂಗ ಕಾರ್ಯಕ್ರಮ ಆರಂಭಗೊಂಡಿತು.

ಅಲ್ಲಿಂದ ಆರಂಭಗೊಂಡು ಆ ಘಳಿಗೆ, ಸಂಜೆ ಹಾಡು, ಗಡಿಬಿಡಿ, ನಮ್ ತಿಮ್ಮತನ, ಅವನು ಗಜ಼ಲ್ ಅವಳು ಶಾಯರಿ, ಆಕಾಶಭೇರಿ, ಶ್ರೀರಂಗರ ‘ಕತ್ತಲೆ ಬೆಳಕು’, ಗಾಂಪರ ಗುಂಪು, ಸುದ್ದಿ ಇದು ಸುದ್ದಿ, ಸಾಹೇಬರು ಬರುತ್ತಾರೆ, ಪಿ ಲಂಕೇಶರ ಕವಿತೆ ಆಧಾರಿತ ‘ಅವ್ವ’, ಪೌರಾಣಿಕ ಹಿನ್ನೆಲೆಯ ‘ಬಕ’, ಬಿಯಾಂಡ್ ದ ಲ್ಯಾಂಡ್ ಆಫ್ ಹಟ್ಟಮಾಲ, ಪರ್ವತವಾಣಿ ಅವರ ‘ಗಲಿಬಿಲಿ’, ಪುಮ್ಮಾದಿರ ಪೊನ್ನಪ್ಪ, ನೀ ನಾನಾದರೆ ನಾ ನೀನೇನಾ?, ಯಮಳ ಪ್ರಶ್ನೆ, ಗಿರೀಶ್ ಕಾರ್ನಾಡ್ ರ ‘ಮಾ ನಿಶಾದ’, ದ ರಾ ಬೇಂದ್ರೆ ಅವರ ‘ಆ ಥರ ಈ ಥರ’ ಹೀಗೇ ವಿಭಿನ್ನ ಪ್ರಯೋಗಗಳನ್ನು ಪ್ರರ್ದಶಿಸಿದ್ದಾರೆ.

ಅವುಗಳಲ್ಲಿ ಅವನು ‘ಗಜ಼ಲ್ ಅವಳು ಶಾಯರಿ’ 29, ‘ಸಂಜೆ ಹಾಡು’ ಹಾಗೂ ‘ನೀ ನಾನಾದರೆ, ನಾ ನೀನೇನಾ’ ನಾಟಕಗಳು 19, ‘ಕತ್ತಲ ಬೆಳಕು’ ಹಾಗೂ ‘ಸಾಹೇಬರು ಬರುತ್ತಾರೆ’ 16, ‘ಸುದ್ದಿ ಇದು ಸುದ್ದಿ’ 14, ‘ಬಕ’ 13 ಪ್ರದರ್ಶನಗಳನ್ನು ಕಂಡು ಯಶಸ್ವಿಯಾಗಿದೆ.

ರಾಜ್ಯಮಟ್ಟದ ನಾಟಕ ಸ್ಪರ್ಧೆಯನ್ನು ಏರ್ಪಡಿಸುವ ಖ್ಯಾತಿಯ ‘ರಂಗಶ್ರೀ ಥಿಯೇಟರ್ ಫೆಸ್ಟಿವಲ್’ ನಲ್ಲಿ ರಾಜೇಂದ್ರ ಕಾರಂತರ ‘ಸಂಜೆ ಹಾಡು’ ನಾಟಕಕ್ಕೆ ಉತ್ತಮ ನಾಟಕ, ಉತ್ತಮ ನಟ, ಉತ್ತಮ ಖಳ ನಟ ಹಾಗೂ ಉತ್ತಮ ಬೆಳಕಿನ ವಿನ್ಯಾಸಗಳಿಗೂ, ‘ಅವನು ಗಜ಼ಲ್ ಅವಳು ಶಾಯರಿ’ ನಾಟಕಕ್ಕೆ ಎರಡನೇ ಉತ್ತಮ ನಾಟಕ, ಉತ್ತಮ ನಟಿ, ಉತ್ತಮ ನಿರ್ದೇಶನ ಹಾಗೂ ಉತ್ತಮ ಬೆಳಕಿನ ವಿನ್ಯಾಸಗಳಿಗೂ ಪ್ರಶಸ್ತಿಗಳು ಲಭ್ಯವಾಗಿವೆ. ಇದು ತಂಡದ ಗುಣಮಟ್ಟ ಹಾಗೂ ನಿರಂತರ ಪರಿಶ್ರಮಕ್ಕೆ ಸಂದ ಗೌರವ ಎನ್ನಬಹುದು.

ನಾಟಕ ಪ್ರರ್ದಶನವಷ್ಟೇ ಅಲ್ಲದೇ ರಂಗ ತರಬೇತಿ, ಶಾರ್ಟ್ ಪಿಲ್ಮ್ ಹಾಗೂ ಹಲವು ರಂಗ ಚಟುವಟಿಕೆಗಳ‌ ಮೂಲಕ ಯುವ ಮನಸ್ಸುಗಳನ್ನು ಸೆಳೆದಿದೆ ಹಾಗೂ ಬೆಳೆಸುತ್ತಿದೆ. ರಂಗಪ್ರತಿಭೆ ಮತ್ತು ರಂಗಾಸಕ್ತಿ ಇರುವ ಹೊಸಬರಿಗೆ ಅವಕಾಶ ಮಾಡಿ ಕೊಡುತ್ತಾ ಯುವ ಪ್ರತಿಭೆಗಳನ್ನು ನಾಡಿಗೆ ಪರಿಚಯಿಸುತ್ತಿದ್ದಾರೆ.

ವ್ಯಾಸ್ಪ್ ತಂಡದಲ್ಲಿ ವಿನಯ್ ಶಾಸ್ತ್ರಿ, ಅರುಣ್, ಸಂತೋಷ್, ಪಾರ್ಥ ಹಾಗೂ ದೀಪಿಕಾ ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತೆ ಹಾಗಾಗಿ ಇಲ್ಲಿ ಯಾರೂ‌ ಮುಖ್ಯರಲ್ಲಾ ಯಾರೂ ಅಮುಖ್ಯರಲ್ಲ ಎಂಬಂತೆ ಎಲ್ಲರೂ ಎಲ್ಲ ರೀತಿಯ – ರಂಗದ ಮೇಲಿನ, ನೇಪಥ್ಯದ, ರಂಗಾಭಿವೃದ್ಧಿಯ ಕಾರ್ಯಗಳಲ್ಲಿ ತೊಡಗಿದ್ದಾರೆ. ಖ್ಯಾತ ರಂಗ ನಿರ್ದೇಶಕರ ಕೊಡುಗೆಯೂ ಈ ತಂಡಕ್ಕೆ ದೊಡ್ಡ ಬಲವಾಗಿದೆ.

ಈ ಹದಿನಾಲ್ಕರ ಸಂಭ್ರಮದ ಪ್ರಯುಕ್ತ ಈ ಸೆಪ್ಟೆಂಬರ್ 22,ರ ಸಂಜೆ 7-30 ಕ್ಕೆ ರಂಗಶಂಕರದಲ್ಲಿ ಎಸ್ ಸುರೇಂದ್ರನಾಥ್ ಅವರ ರಚನೆಯ ವಿನಯ್ ಶಾಸ್ತ್ರಿ ಅವರ ನಿರ್ದೇಶನದ ಹಾಸ್ಯ ಪ್ರಧಾನ ನಾಟಕ ‘ನೀ ನಾನಾದರೆ, ನಾ ನೀನೇನಾ’ ವನ್ನು ಪ್ರದರ್ಶಿಸಿದರು. ಇದು ತಂಡದ ಇಪ್ಪತ್ತನೇ ಪ್ರರ್ದಶನವಾಗಿತ್ತು.

‘ವ್ಯಾಸ್ಪ್ ಥಿಯೇಟರ್’ ತಂಡದಿಂದ ಇನ್ನೂ ಮತ್ತಷ್ಟು ಮಗದಷ್ಟು ಉತ್ತಮ ಪ್ರಯೋಗಗಳು ಬರಲಿ. ಹೊಸ ಹೊಸ ಪ್ರತಿಭೆಗಳು ನುರಿತ ನಿರ್ದೇಶಕರ ಗರಡಿಯಲ್ಲಿ ಪಳಗುವ ತಾಣವಾಗಲಿ.

ಸಂಭ್ರಮಾಚರಣೆಗಳು ಇಮ್ಮಡಿಯಾಗಲಿ. ತಂಡವೂ ಸಪ್ತಸಾಗರದಾಚೆಗೂ ಹೋಗಿ ಹೆಸರು ಕೀರ್ತಿ ಸಂಪಾದಿಸಿ ಕನ್ನಡ ರಂಗಭೂಮಿಯ ಪತಾಕೆಯನ್ನು ಎಲ್ಲೆಲ್ಲೂ ಹಾರಿಸಲಿ…

ತುಂಕೂರ್ ಸಂಕೇತ್

Related post

Leave a Reply

Your email address will not be published. Required fields are marked *