ಹದ್ದು – Black Kite

“…ಸಾವಿಗೆ ಆತುರ! ಹದ್ದಿನಂತೆ ಬಂದು ಹಾರಿಸಿಕೊಂಡು ಹೋಯಿತು!” ಎಂಬುದು ನಮ್ಮ ಸಾಹಿತ್ಯದಲ್ಲಿ ಆಗಾಗ್ಗೆ ಕಂಡುಬರುತ್ತದೆ. ಹದ್ದು ಅಂತಹ ಶುಭದ ಸಂಕೇತವೇನೂ ಅಲ್ಲ. ಆದರೆ, ವಿಜ್ಞಾನದ-ಪರಿಸರದ ದೃಷ್ಟಿಯಿಂದ ಯಾವುದೂ ಮೇಲಲ್ಲ, ಕೀಳಲ್ಲ. ಎಲ್ಲಕ್ಕೂ ಅದರದೇ ಆದ, ಯುಕ್ತವಾದ ಸ್ಥಾನವಿರುತ್ತದೆ.

ಜಗತ್ತಿನ ಬಹುತೇಕ ರಾಷ್ಟ್ರಗಳಲ್ಲಿ ಸಾವಿರ ಸಾವಿರ ಅಥವಾ ಲಕ್ಷದ ಸಂಖ್ಯೆಯಲ್ಲಿ ಕಂಡುಬರುವ ಹಕ್ಕಿ ಹದ್ದು! ಆದರೆ, ಇದರ ಸಂಖ್ಯೆಯೂ ಕಡಿಮೆಯಾಗುತ್ತಿದೆ ಎಂಬ ಆತಂಕಕಾರಿ ಸುದ್ದಿ ಬರುತ್ತಿದೆ.

ಇರಲಿ, ಹದ್ದು ನಮ್ಮ ಬಹು ಸಾಮಾನ್ಯವಾದ ಮಧ್ಯಮಗಾತ್ರದ ಹಕ್ಕಿ. ಮಾಸಲು ಕಂದು ಬಣ್ಣದ, ಕೊಕ್ಕಿನ ಬಳಿ ಹಳದಿ ಬಣ್ಣವಿರುವ ಹಕ್ಕಿ. ಇದರ ಕವಲಾದ ಬಾಲದಿಂದ ಇದನ್ನು ಸುಲಭವಾಗಿ ಗುರುತಿಸಬಹುದು. ಆಕಾಶದಲ್ಲಿ ಅತಿ ಎತ್ತರದಲ್ಲಿ ಬಿಸಿಗಾಳಿ ಉಂಟುಮಾಡುವ ಪ್ಲವನವನ್ನು ಬಳಸಿಕೊಂಡು ತೇಲುತ್ತಾ ಆಹಾರ ಅರಸುತ್ತಿರುತ್ತದೆ. ಆಹಾರ ಕಂಡಕೂಡಲೆ ಆಕಾಶದಿಂದ ಬರಸಿಡಿಲಿನಂತೆ ಎರಗಿ ಆಹಾರವನ್ನು ಹಾರಿಸಿಕೊಂಡು ಹೋಗುತ್ತದೆ. ಇದು ಕಪ್ಪೆ, ಕೋಳಿಮರಿ, ಇತರ ಹಕ್ಕಿಗಳಾಗಿರಬಹದು. ಒಮ್ಮೆ ಬಾವಲಿಯನ್ನು ಹಿಡಿದ ದಾಖಲೆಯೂ ಇದೆ. ನಗರ ಪ್ರದೇಶಗಳ ಟ್ರಾಫಿಕ್‍, ವಿದ್ಯುತ್, ಟೆಲಿಫೋನ್ ಇತ್ಯಾದಿ ವೈರುಗಳ ಬೊಂತೆಗಳ ನಡುವೆ ಸುಲಭವಾಗಿ ನುಸುಳಿ ಬಲಿಪ್ರಾಣಿಯ ಮೇಲೆ ಎರಗುವ ಕಲೆ ಇದಕ್ಕೆ ದತ್ತವಾಗಿದೆ. ಮನುಷ್ಯರ ಕೈಯಿಂದಲೂ ಆಹಾರವನ್ನು ಕಸಿದುಕೊಂಡ ದಾಖಲೆಗಳಿವೆ. ಜೊತೆಗೆ ಎರೆಹುಳುಗಳನ್ನು ಹಾಗೂ ಮೃತದೇಹಗಳನ್ನು ಸಹ ತಿನ್ನುತ್ತದೆ. ಪರಿಸರದ ಜಾಡಮಾಲಿಯೂ ಹೌದು. ಇದರ ಕೂಗು ಒಂದು ಬಗೆಯ ಶಿಳ್ಳೆ. ಸಾಕಷ್ಟು ದೀರ್ಘವಾಗಿರುತ್ತದೆ. ಕಾಗೆಗಿಂತ ಗಾತ್ರದಲ್ಲಿ ತುಸು ದೊಡ್ಡದೂ ಶಕ್ತಿಯುತವಾದರೂ ಸಹ ಕಾಗೆ ಇದನ್ನು ಕೆಣಕುವುದು, ಅಟ್ಟಿಸಿಕೊಂಡು ಹೋಗುವುದೂ ಉಂಟು..

ಜನವರಿಯಿಂದ ಏಪ್ರಿಲ್‍, ಕೆಲವೊಮ್ಮೆ ಮಾನ್‍ಸೂನ್ ಆರಂಭದವರೆಗೂ ಮರಿ ಮಾಡುವ ಇವುಗಳ ಗೂಡು ದೊಡ್ಡ ಮರದ ಭದ್ರವಾದ ಕವಲು. ಅಲ್ಲಿ ಸಾಕಷ್ಟು ಕಡ್ಡಿ, ಸಸ್ಯ ಸಾಮಗ್ರಿಯನ್ನು ಒಟ್ಟಿ ಅದರ ಮೇಲೆ ಮೊಟ್ಟಿಯಿಡುತ್ತವೆ. ಒಂದು ಗೂಡನ್ನು ಅನೇಕ ವರ್ಷಗಳ ಕಾಲ ಬಳಸುವುದೂ ಉಂಟು.

ಬೆಂಕಿಯಿಂದ ತಪ್ಪಿಸಿಕೊಳ್ಳುವ ಜೀವಿಗಳನ್ನು ಹಿಡಿಯಬಹುದು ಎಂದು ಇದು ಬೆಂಕಿಗೆ ಆಕರ್ಷಿತವಾಗುತ್ತದೆ. ಕಾಸಾಯಿಖಾನೆಗಳ ಎದುರೂ ಇವು ದೊಡ್ಡ ಸಂಖ್ಯೆಯಲ್ಲಿ ಕುಳಿತಿರುತ್ತವೆ. ಮಾನವ ವಸಹಾತುಗಳನ್ನು ತನ್ನ ಆವಾಸವನ್ನಾಗಿ ಮಾಡಿಕೊಂಡಿದೆ.

ಭಾರತದಲ್ಲಿ ಎರಡು ಉಪಪ್ರಭೇದಗಳಿವೆ. ಒಂದು ಸಾಮಾನ್ಯವಾಗಿ ಕಂಡುಬರುವ ಹದ್ದು. ಮತ್ತೊಂದು ವಲಸೆ ಬರುವುದು. ವಲಸೆ ಬರುವ ಹದ್ದಿನ ತಳಭಾಗದಲ್ಲಿ ಬಿಳಿಯ ಮಚ್ಚೆಯಿರುತ್ತದೆ. ಜಗತ್ತಿನಾದ್ಯಂತ ಇದರ ಐದು ಉಪಪ್ರಭೇದಗಳು ಕಂಡುಬರುತ್ತವೆ. ಭಾರತ, ನೇಪಾಳ, ಪಾಕಿಸ್ತಾನ, ಶ್ರೀಲಂಕ, ಮಾಯನ್ಮಾರ್, ಬಾಂಗ್ಲಾದೇಶಗಳಲ್ಲಿ ಕಂಡುಬರುತ್ತದೆ. ಹಾಗೆಯೇ ಯೂರೋಪ್‍, ಏಷ್ಯಾದ ಇತರ ಭಾಗಗಳು ಹಾಗೂ ಆಪ್ರಿಕಾ, ಆಸ್ಟ್ರೇಲಿಯಾಗಳಲ್ಲಿಯೂ ಇದರ ಉಪಪ್ರಭೇದಗಳು ಕಂಡುಬರುತ್ತದೆ.

ಪರಿಸರದಲ್ಲಿ ಶಕ್ತಿ ವರ್ಗಾವಣೆಯ ಕಾರ್ಯ ಇವುಗಳಿಂದ ಸಮರ್ಥವಾಗಿ ಆಗುತ್ತದೆ. ಸತ್ತ ಪ್ರಾಣಿಗಳ ದೇಹವನ್ನು ಇವು ತಿನ್ನುತ್ತವೆಯಾಗಿ, ಇದರಿಂದಾಗಿ ಪರಿಸರದಲ್ಲಿ ದೇಹ ಕೊಳೆತು, ರೋಗಕಾರಕವಾಗುವುದು ತಪ್ಪಿ, ಶಕ್ತಿ ವರ್ಗಾವಣೆಯ ಬೇರೊಂದು ರೂಪ ಪಡೆಯುತ್ತದೆ. ಆಹಾರ ಸೇವನೆಯೇ ಶಕ್ತಿ ವರ್ಗಾವಣೆಯ ಕಾರ್ಯ. ಅಂದರೆ, ಒಂದು ಜೀವಿ ಅಥವಾ ಜೈವಿಕ ವಸ್ತುವಲ್ಲಿನ ಶಕ್ತಿ ಇನ್ನೊಂದು ಜೀವಿಯ ಜೀರ್ಣಾಂಗ ವ್ಯವಸ್ಥೆಯ ಮೂಲಕ ಶಕ್ತಿಯಾಗಿ ಪರಿವರ್ತನೆಯಾಗುವುದು. (ಉದಾಹರಣೆಗೆ ನಾವು ಆಹಾರ ಸೇವಿಸಿದಾಗ ಅದು ದೇಹದಲ್ಲಿ ಪಚನಗೊಂಡು ಗ್ಲೂಕೋಸ್ ಆಗಿ ಪರಿವರ್ತನೆಯಾಗುವುದು). ಈ ಕಾರ್ಯವನ್ನು ಮಾಡುವ ಹಕ್ಕಿಗಳ ಸಂಖ್ಯೆ ಕಡಿಮೆಯಾಗುತ್ತಿರುವುದು ಏಕೆಂದು ಅಧ್ಯಯನ ಮಾಡಿ ತಿಳಿಯಬೇಕಾಗಿದೆ. ಇಂತಹ ಹಕ್ಕಿಗಳನ್ನು ಗಮನಿಸುತ್ತಿರಿ, ಕಂಡಾಗ ನಮಗೆ kalgundi.naveen@yahoo.com ಮೇಲ್ ಐಡಿ ಗೆ ಬರೆದು ತಿಳಿಸಿ.

ಕಲ್ಗುಂಡಿ ನವೀನ್

ವನ್ಯ ಜೀವಿ ಸಂರಕ್ಷಣೆ ತಜ್ಞರು

ಚಿತ್ರಗಳು: ಶ್ರೀ ಜಿ ಎಸ್ ಶ್ರೀನಾಥ

ಈ ಶತಮಾನ ವನ್ಯಜೀವಿ ಮತ್ತು ಸಂರಕ್ಷಣೆಯ ಸುವರ್ಣ ಪರ್ವ

Related post

Leave a Reply

Your email address will not be published. Required fields are marked *