ಅಪಾಯ
ಎಲ್ಲರೂ ಒಂದೇ ಎನ್ನುವ ಭಾವನೆ
ಮೂಡಿಸಿತ್ತು ಕೊರೊನಾ ಹಬೆ
ಧಸಕ್ಕನೆ ಎಲ್ಲವನ್ನೂ ಹಾಳುಗೆಡವಿದ್ದು
ಈ ಹಿಜಾಬ್ ಕೇಸರಿ ಗಲಭೆ
ಜಾಣತನ
ಹೆಚ್ಚಿಸಿದಳು, ಕುಚ್ಚಿಸಿದಳು
ನನ್ನಾಕೆ ಬಹಳ
ಜಾಣೆ.
ಈಗ ನಾನೇ ಒರೆಸಬೇಕಂತೆ
ಪೂರ್ತಿ
ಮನೆ.
ಚಾಣಾಕ್ಷತನ
ಹೆಣ್ಣು ಕಲಿತದ್ದು
ಎಲ್ಲಿ ?
ಎಲ್ಲವನ್ನೂ ತಿಳಿಸುವ ವಿದ್ಯೆ
ಕಣ್ಣಲ್ಲಿ ?
ದಂಧೆ
ದುಡ್ಡು ಮಾಡುವವರ
ಕಣ್ಣಿಗೆ ಎಲ್ಲವೂ
ಒಂದೇ
ಶಾರದೆಯನ್ನು ಇಟ್ಟಿದ್ದಾರೆ
ಮಾರಾಟಕ್ಕೆ
ಶಿಕ್ಷಣವು ಈಗ
ದಂಧೆ
ಶಿಕ್ಷಣ
ಅಂದಿನ ಶಿಕ್ಷಣ
ಬ್ಯಾಗು ಹಗುರ
ವಿದ್ಯೆಯಲ್ಲಿತ್ತು ತೂಕ
ಇಂದಿನ ಶಿಕ್ಷಣ
ಬ್ಯಾಗಿನಲ್ಲಿದೆ ತೂಕ
ವಿದ್ಯೆ ಹಗುರ
ಸಂಸ್ಕೃತಿ
ಅಂದು ಪ್ರಕೃತಿಯ ಮಡಿಲಲ್ಲಿ
ಮರದ ಕೆಳಗೆ ಪಡೆದಿದ್ದು
ಸಂಸ್ಕೃತಿ.
ಇಂದು ಸಿಮೆಂಟಿನ ಅಡಿಯಲ್ಲಿ
ಆಂಗ್ಲ ಭಾಷೆಯ ಸಿಕ್ಕಿಕೊಂಡದ್ದು
ವಿಕೃತಿ.
ಯಮ
ಹಳ್ಳಿ ಅಂದ್ರೆ
ಸುಂದರ ತಾಣ.
ಪಟ್ಟಣ ?
ಲಾರಿ ಗಾಲಿ ಕೆಳಗೆ
ಹಾರಿ ಹೋಗುವುದು
ಪ್ರಾಣ.
ಕೊಡುಗೆ
ಕನ್ನಡ ಲಿಪಿಯನ್ನು
ವಿಶ್ವ ಲಿಪಿಗಳ ರಾಣಿ ಅಂದವರು
ಮಹಾರಾಷ್ಟ್ರದ ವಿನೋಬಾ ಭಾವೆ.
ಕನ್ನಡವನ್ನೇ ಬಳಸದೆ
ಮೂಲೆಗುಂಪು ಮಾಡಿದವರು
ಕನ್ನಡದವರಾದ
ನಾವೇ.
ಪುನಾರಂಭ
ಎಲ್ಲರಿಗಿಂತ ಮೊದಲೇ
ತಯಾರಾಗಿದ್ದಾನೆ ಮಗ ಯಾಕೋ,
ಉಂಟು ಭಾರೀ
ಲವಲವಿಕೆ.
ಇರಬೇಕು ಶಾಲೆಯ ಕಾಂಪೌಂಡ್ ಮೇಲೆ ಕೂತು ಚೆಲುವೆಯರ ಲೆಕ್ಕ
ಹಾಕೋಕೆ.
ಶ್ರೀಧರ ಕಾಡ್ಲೂರು