ಅಂಚೆ
ಸಂದೇಶ ಕಳುಹಿಸಲು
ಮಾರ್ಗವಾಗಿದ್ದ ಟಪಾಲು.
ಎಲ್ಲರ ಜೀವನದಲ್ಲಿ
ಪಡೆದಿತ್ತು ಬಹು ದೊಡ್ಡಪಾಲು.
ಸೋತಿತು, ಮೊಬೈಲ್ ಮುಂದೆ
ಮಾಡಲಾಗದೆ ಡೀಲು.
ದಾಯಾದಿಗಳು
ಹುಟ್ಟಿನಿಂದಲೂ ಜೀವಕೆ ಜೀವ,
ತೃಪ್ತಿಯಿಂದ ಕುಡಿದು ಬೆಳೆದರು
ಒಂದೇ ಬಟ್ಟಲಲ್ಲಿ ಹಾಲು.
ಈಗ ಕಚ್ಚಾಟ,
ಹೆತ್ತವರ ನೋಡಿಕೊಳ್ಳಲು
ನನಗೆ ಆಸ್ತಿಯ
ಆ ಪಾಲು ಈ ಪಾಲು.
ಮತ್ತು
ಬೆಳಗ್ಗೆ ಹೋರಾಟಗಾರರು
ಪುರಭವನದ ಮುಂದೆ ಸೇರಿದ್ದರು
ಕಿಕ್ಕಿರಿದು.
ಬರಬರುತ್ತಾ ಹೋರಾಟದಲ್ಲಿ
ಒಬ್ಬೊಬ್ಬರಾಗಿ ಕಡಿಮೆ ಆಗುತ್ತಿದ್ದರು ಎಣ್ಣೆಯ
ಕಿಕ್ಕಿಳಿದು.
ನಂಬಿಕೆ
ಕೆಲವೊಮ್ಮೆ ತುಂಬಾ ಕಷ್ಟ
ನಮ್ಮ ಬೆನ್ನ ಹಿಂದೆ ಇರುವವರ
ನಂಬುವುದು.
ಉದಾಹರಣೆಗೆ, ಮರ ಕಡಿಯುವ ಕೊಡಲಿ
ಹಿಂದೆ ಕಟ್ಟಿಗೆ
ಇರುವುದು.
ಶ್ರೀಧರ ಕಾಡ್ಲೂರು