ಹಮ್ಮಿಂಗ್ ಬರ್ಡ್

ಹಮ್ಮಿಂಗ್ ಬರ್ಡ್

ಗಾಳಿಯಲ್ಲಿ ಹಿಂದಕ್ಕೂ ಮುಂದಕ್ಕೂ ಮೇಲಕ್ಕೂ ಕೆಳಗೂ ನಿರಂತರವಾಗಿ ರೆಕ್ಕೆ ಬಡಿಯುತ್ತಾ ಹಾರಾಟವನ್ನ ನಿಯಂತ್ರಿಸಿಕೊಂಡು ಹಾರಾಟದ ದಿಕ್ಕನ್ನ ಬದಲಾಯಿಸುತ್ತಾ ಹಾರಾಡಬಲ್ಲ ಜಗತ್ತಿನ ಏಕೈಕ ಹಕ್ಕಿ ಹಮ್ಮಿಂಗ್ ಬರ್ಡ್.

ಈ ಪಕ್ಷಿಗಳ ರೆಕ್ಕೆಗಳ ರಚನೆಯೇ ಇದಕ್ಕೆ ಮುಖ್ಯ ಕಾರಣ. ಇವುಗಳಿಗೆ ಇತರೇ ಪಕ್ಷಿಗಳಂತೆ ಟೊಳ್ಳಾದ ಮೂಳೆ ವಿಶಾಲ ಎದೆ ಎಲ್ಲ ಇದ್ದರೂ ರೆಕ್ಕೆಗಳ ಚಲನೆಯ ದಿಕ್ಕು ಮಾತ್ರ ಅವುಗಳಂತಿಲ್ಲ. ಸಾಮಾನ್ಯವಾಗಿ ಎಲ್ಲ ಪಕ್ಷಿಗಳು ತಮ್ಮ ರೆಕ್ಕೆಗಳನ್ನ ಮೇಲಕ್ಕೂ ಕೆಳಕ್ಕೂ ಬಡಿದು ಹಾರಾಟ ಮಾಡಲು ಬೇಕಾಗುವ ಒತ್ತಡ ಪಡೆದುಕೊಳ್ಳುತ್ತವೆ ( up and down movement) ಆದರೇ ಈ ಹಮ್ಮಿಂಗ್ ಬರ್ಡ್ ನ ರೆಕ್ಕೆಯ ಚಲನೆ ಸಮಾನಾಂತರವಾಗಿ ಹಿಂದಕ್ಕೂ ಮುಂದಕ್ಕೂ ಇರುತ್ತದೆ ( to and fro movement). ಬೆನ್ನು ಮೂಳೆಯಿಂದ ಸಮಾನಾಂತರವಾಗಿ ( Horizontal) ಹೊರಹೊಮ್ಮಿ ಸ್ನಾಯುಗಳಿಂದ ಗಟ್ಟಿಯಾಗಿ ಹಿಡಿದುಕೊಂಡಿರುವ ರೆಕ್ಕೆಗಳು ಬುಜದಿಂದ 180 ಡಿಗ್ರಿ ಹಿಂದಕ್ಕೂ ಮುಂದಕ್ಕೂ ಅನಾಯಾಸವಾಗಿ ಚಲಿಸುತ್ತವೆ. ರೆಕ್ಕೆಗಳಲ್ಲಿನ ಪುಕ್ಕಗಳು ಗಾಳಿಯಲ್ಲಿ ಹಾರಾಟದ ದಿಕ್ಕನ್ನ ನಿರ್ದೇಶಿಸಿಲು ಸಹಾಯಕವಾಗುತ್ತವೆ .ಇದರಿಂದಾಗಿ ಈ ಹಕ್ಕಿಗೆ ಹೆಲಿಕ್ಯಾಪ್ಟರ್ ಗಿಂತಲೂ ಹೆಚ್ಚು ನಿಖರವಾಗಿ ಹಾರಟ ಮಾಡಲು ಸಹಾಯಕವಾಗುತ್ತದೆ.

ಸಾಮಾನ್ಯ ಹಾರಾಟದ ಸಂಧರ್ಬದಲ್ಲಿ ಸೆಕೆಂಡಿಗೆ 10 ರಿಂದ 15 ಸರ್ತಿ ಬಡಿದುಕೊಳ್ಳುವ ರೆಕ್ಕೆಗಳು ವೇಗದ ಹಾರಟದ ಸಂಧರ್ಭದಲ್ಲಿ ಸೆಕೆಂಡಿಗೆ ಗರಿಷ್ಟ 53 ರಿಂದ 80 ರ ವರೆಗೂ ತಲುಪಬಲ್ಲವು .ಗಂಟೆಗೆ ಗರಿಷ್ಟ 53 ಕಿಮಿ ದೂರ ಕ್ರಮಿಸಬಲ್ಲವು. ಈಶಾನ್ಯ ಅಮೇರಿಕದಿಂದ ಮಧ್ಯ ಅಮೇರಿಕಾಗೆ ವಲಸೆ ಹೋಗುವ ಹಮ್ಮಿಂಗ್ ಬರ್ಡ್ ಗುಂಪುಗಳು ವಲಸೆಯ ಕೊನೆಯ ಹಾರಾಟದಲ್ಲಿ ಮಧ್ಯದಲ್ಲಿ ಎಲ್ಲಿಯೂ ನಿಲ್ಲದೇ ಒಂದೇ ನೆಗೆತಕ್ಕೆ 1300 ಕಿಮಿ ಹಾರಿ ಸಾಗರ ಕ್ರಮಿಸಿ ತಮ್ಮ ಗುರಿ ತಲುಪುತ್ತವೆ. ( Single flight) ಮೂರ್ತಿ ಚಿಕ್ಕದಾದರೂ ಸಾಹಸ ಅಪರಿಮಿತ.

ಆದರೇ ನಿದ್ರಿಸುವಾಗ ಮಾತ್ರ ಇವು ಅಕ್ಷರಶಃ ಕುಂಭಕರ್ಣ.ಹಾರಾಟದ ಸಮಯದಲ್ಲಿ ಇವುಗಳ ಹೃದಯದ ಬಡಿತ ನಿಮಿಷಕ್ಕೆ 1260 ಇರುತ್ತದೆ.ಆದರೇ ನಿದ್ರಿಸುವಾಗ 50 ರಿಂದ 180 ರ ತನಕ ತಗ್ಗುತ್ತದೆ. ನಿದ್ರೆಯಲ್ಲಿದ್ದಾಗ ಹಮ್ಮಿಂಗ್ ಬರ್ಡ ಹಿಬರ್ನೇಶನ್ ಮೋಡ್ ನಲ್ಲಿರುತ್ತದೆ. ಆಗ ಇದರ ದೇಹದ ಹೆಚ್ಚಿನ ಶಕ್ತಿ ಅಪವ್ಯಯವಾಗುವುದಿಲ್ಲ. ನಿದ್ರೆಯಲ್ಲಿದ್ದಾಗ ಇದು ತೀರಾ ನಿಸ್ಸಹಾಯಕವಾಗಿರುತ್ತದೆ. ಮಾರ್ಜಾಲದಂತಹ ಭಕ್ಷಕಗಳು ಬಂದರೂ ಇವು ತಪ್ಪಿಸಿಕೊಳ್ಳಲಾರವು. ಅವುಗಳಿಗೆ ಸುಲಭವಾಗಿ ತುತ್ತಾಗುತ್ತವೆ .ನಿದ್ರೆಯಿಂದ ಮರಳಿ ಎದ್ದಾಗ ಇವುಗಳ ಹೃದಯಬಡಿತ ಸಾಮಾನ್ಯ ಸ್ಥಿತಿಗೆ ಮರಳಲು ಇಪ್ಪತ್ತು ನಿಮಿಷಗಳ ಸಮಯ ಹಿಡಿಯುತ್ತದೆ.

ಹಮ್ಮಿಂಗ್ ಬರ್ಡ್ ಅಮೇರಿಕಾ ಖಂಡದ ಅತಿ ಚಿಕ್ಕ ಸ್ಥಳೀಯ ಪಕ್ಷಿ ಮತ್ತು “ಟ್ರೋಚಿಲಿಡೆ” ಎಂಬ ಜೈವಿಕ ಕುಟುಂಬಕ್ಕೆ ಸೇರುತ್ತವೆ. ಕನ್ನಡದಲ್ಲಿ ಕೊರಳ ಝೇಂಕಾರದ ಹಕ್ಕಿ ಎಂದು ಕರೆಯುತ್ತಾರೆ. ಇದರ ಸಾಮಾನ್ಯ ಗಾತ್ರ ಕೇವಲ 7.5 ರಿಂದ 13 ಸೆಂಟಿಮೀಟರುಗಳು. ಹಮ್ಮಿಂಗ್ ಬರ್ಡ್ ಪಕ್ಷಿಗಳ ವರ್ಗದಲ್ಲೇ ಇನ್ನು ಚಿಕ್ಕದಾದ ಹಕ್ಕಿಯೆಂದರೆ ಅದು ಜೇನುನೊಣ ಹಮ್ಮಿಂಗ್ ಬರ್ಡ್ (Bee Humming Bird) ಜಗತ್ತಿನ ಅತ್ಯಂತ ಚಿಕ್ಕ ಹಕ್ಕಿ. ಗಾತ್ರದಲ್ಲಿ ಹೆಚ್ಚುಕಮ್ಮಿ ಒಂದು ದಪ್ಪ ಜೇನುನೊಣ ದಷ್ಟೇ ಇರುವ ಇವುಗಳಲ್ಲಿ ಹೆಣ್ಣು ಹಮ್ಮಿಂಗ್ ಬರ್ಡ ನ ಗಾತ್ರ 61 ಮಿ ಮಿ ಮತ್ತು ಗಂಡು ಹಮ್ಮಿಂಗ್ ಬರ್ಡ್ ನ ಗಾತ್ರ 55 ಮಿ ಮಿ ಇರುತ್ತವೆ.
( 5.5 cm to 6 .1 cm ).

ಸ್ಥಳಿಯವಾಗಿ ಕ್ಯೂಬಾ ಮತ್ತು ವೆಸ್ಟ್ ಇಂಡೀಸ್ ನಲ್ಲಿ ಮಾತ್ರ ಕಂಡುಬರುವ ಇವು 1.6 ಗ್ರಾಮ್ ನಿಂದ 1.9 ಗ್ರಾಮ್ ವರೆಗೆ ತೂಗುತ್ತವೆ. ಈ ಹಮ್ಮಿಂಗ್ ಬರ್ಡ್ ಗಳನ್ನ ಜೇನುಹಮ್ಮಿಂಗ್ ಬರ್ಡ್ ಎಂತಲೇ ಕರೆಯುತ್ತಾರೆ . ಸೆಕೆಂಡಿಗೆ 80 ಸರ್ತಿ ರೆಕ್ಕೆ ಬಡಿದುಕೊಳ್ಳುವ ಈ ಜೇನುನೊಣ ಹಮ್ಮಿಂಗ್ ಬರ್ಡ್ ಗಳು ವಲಸೆ ಸಮಯದಲ್ಲಿ ಸುದೀರ್ಘವಾಗಿ ಇಪ್ಪತ್ತು ಗಂಟೆಗಳ ವರೆಗೂ ಬಿಟ್ಟೂಬಿಡದೇ ಹಾರಾಟ ನಡೆಸಬಲ್ಲವು . ಹಾರಾಟದ ಸಮಯದಲ್ಲಿ ಇವುಗಳ ಹೃದಯಬಡಿತ ಒಂದು ನಿಮಿಷಕ್ಕೆ 1260 (1260/min) ಇರುತ್ತದೆ.

ಇದರ ಗೂಡು ಒಂದು ರೂಪಾಯಿ ಗಾತ್ರಕ್ಕಿಂತಲೂ ಚಿಕ್ಕದಾಗಿದ್ದು ಮೊಟ್ಟೆಗಳ ಗಾತ್ರ ಜೀರಂಗಿಗಳ ಮೊಟ್ಟೆಯಷ್ಟೇ ಚಿಕ್ಕದಾಗಿರುತ್ತದೆ . (ನಮ್ಮಲ್ಲಿ ಬೋರಂಗಿ ಅಂತಾರೆ) ಗಾತ್ರವನ್ನ ಹೊರತುಪಡೆಸಿ ಇತರೇ ಸಾಮಾನ್ಯ ಹಮ್ಮಿಂಗ್ ಬರ್ಡ್ ಗಳಿಗೂ ಇವುಗಳಿಗೂ ಹೆಚ್ಚಿನ ವ್ಯತ್ಯಾವೇನು ಇಲ್ಲ ..

ಮೃತ್ಯುಂಜಯ ನ.ರಾ

Related post

Leave a Reply

Your email address will not be published. Required fields are marked *