ಹರಿದ ಲುಂಗಿ

ಹರಿದ ಲುಂಗಿ

*****

ಅವ್ವ

ನನ್ನ ಕಾಚ ಹರಿದು

ಚಿಂದಿ ಚಿಂದಿ

ತುಂಬ ತುಂಬಾ ಹಳೆಯದು

ಅಣ್ಣ ಕೊಟ್ಟೇ ವರುಷಕ್ಕು ಮಿಗಿಲು

ಅವನಿಗೆ ಚಿಕ್ಕದೆಂದು

ಆಗಲೇ ಅದಕೆ ಅರ್ಧ ಜೀವ

ಈಗ ಬಣ್ಣ ಪೂರ್ತಿ ಕಳೆದು

ಹುಡುಕಬೇಕು ಹರಿಯದೆ ಉಳಿದ

ಜಾಗ!

ಇದ್ದರೆ ಕೊಡು ಬೇರೆ

ಎಲ್ಲಿ ತರಲಿ ಮಗಾ

ಕಾಚ ಚಡ್ಡಿ ಎಲ್ಲ ನಮಗಾ

ನಿಜ ಅಲ್ಲ ಎಂದೂ ಅಲ್ಲ!

ನಾವು ನೇಯುವುದು ನಮ್ಮ

ಹೊಟ್ಟೆಗೆ

ಇತರರ ಬಟ್ಟೆಗೆ

ಅವರ ಎಲ್ಲ ನಮೂನೆಯ

ಉಡುಗೆ ತೊಡುಗೆಗೆ…

ಬಾ ಅಟ್ಟ ಹತ್ತಿ ಹುಡುಕುವೆ

ಅಲ್ಲೆಲ್ಲಾದರೂ ಕಣ್ಣು ತಪ್ಪಿ

ಬಿದ್ದಿದ್ದರೆ

ನಿಮ್ಮಪ್ಪನ ಹಳೆಯ ಲುಂಗಿ

ನೆಲ ಒರೆಸಲಿಟ್ಟ ಚಿಂದಿ

ಸಿಕ್ಕರೆ ನಿನ್ನ ನಸೀಬು

ಅದರಲ್ಲೇ ಸಾಹಸಪಟ್ಟು

ಹೊಲೆದುಕೊಡುವೆ

ಒಂದು ಕಾಚ

ಇಲ್ಲ ಕಟ್ಟಿಕೊಡುವೆ

ನಿನಗೊಂದು ಕಚ್ಚೆ!

ಡಾ. ಅರಕಲಗೂಡು ನೀಲಕಂಠ ಮೂರ್ತಿ, ಮೈಸೂರು

Related post