ಹಾಡು ಹಳೆಯದಾದರೇನು – ಕಣಗಾಲ್ ಪ್ರಭಾಕರ ಶಾಸ್ತ್ರಿ – ಭಾಗ – 1

ಹಾಡು ಹಳೆಯದಾದರೇನು – ಕಣಗಾಲ್ ಪ್ರಭಾಕರ ಶಾಸ್ತ್ರಿ – ಭಾಗ – 1

ಕಣಗಾಲ್ ಪ್ರಭಾಕರ ಶಾಸ್ತ್ರಿಗಳು ರಚಿಸಿದ ಅತ್ಯಂತ ಪ್ರಸಿದ್ಧಿ ಪಡೆದ ಗೀತೆಗಳಲ್ಲಿ “ಒಲವೆ ಜೀವನ ಸಾಕ್ಷಾತ್ಕಾರ…” ವೂ ಒಂದು..
ಸಾಕ್ಷಾತ್ಕಾರ ಎಂದರೆ ನಮ್ಮ ಬದುಕಿನ ಆವಿರ್ಭಾವ ಮತ್ತು ಆ ಮೂಲಕ ನಮ್ಮನ್ನು ಅರಿತುಕೊಳ್ಳುವ ಪ್ರಕ್ರಿಯೆ.

ಕಣಗಾಲ್ ಪ್ರಭಾಕರ ಶಾಸ್ತ್ರಿ

ಇದಕ್ಕೆ ಅಡಿಪಾಯವೇ ಒಲವೆಂಬ ಜೀವನ ಪ್ರೀತಿ! ಅದಕ್ಕೆಂದೇ ಹೇಳುತ್ತೇವೆ; ಒಲವೆಂಬ ಶಕ್ತಿಗೆಲುವಿನ ಮೂಲವೆಂದು. ಒಲವಿನ ಮಾತು, ನುಡಿ, ಕೃತಿಯಿಂದ ಎಲ್ಲವನ್ನೂ ಸಿದ್ದಿಸಿ ಕೊಳ್ಳಬಹುದು; ಜಗವನ್ನೇ ಜಯಿಸಬಹುದು. ಸಕಲ ಜೀವ ರಾಶಿಗಳಲ್ಲಿ ಒಲವಿನ ಒಳಹರಿವೊಂದು ಇಲ್ಲದಿದ್ದರೆ ಬದುಕು ಶೂನ್ಯವಾಗಿರುತ್ತಿತ್ತು. ಒಲವಿನ ಅರ್ಥ ಮತ್ತು ತಾತ್ಪರ್ಯ ನಮ್ಮನ್ನು ಕಾಡುವ ಮೂಲ ಪ್ರಶ್ನೆ, ಒಲವು ಎಂಬ ಪದ ಹಲವು ಸಮಾನಾರ್ಥಕ ಪದಗಳಿಂದ ವಿವಿಧ ಹಂತಗಳಲ್ಲಿ, ನಾನಾ ರೂಪ ಗಳಲ್ಲಿ, ಪ್ರಕಟವಾಗುತ್ತಾ ಜೀವನದ ಎಲ್ಲಾ ಘಟ್ಟಗಳಲ್ಲಿ ತನ್ನಿರುವನ್ನು ಸಾಬೀತು ಪಡಿಸುತ್ತ ಹೋಗುತ್ತದೆ.

ಒಲವು ಮತ್ತು ಗೆಲುವು…! ಓದಿದ ತತ್ ಕ್ಷಣ ನಮಗೆ ಹೊಳೆಯುವ ಅರ್ಥ, ಒಲವೆಂದರೆ ಪ್ರೀತಿ. ಅದರಲ್ಲೂ ಮೇಲ್ನೋಟಕ್ಕೆ ನೋಡಿದಾಗ ನೆನಪಾಗುವುದು, ಗಂಡು ಮತ್ತು ಹೆಣ್ಣಿನ ಪ್ರೀತಿ ಮಾತ್ರವಲ್ಲ, ಆಕರ್ಷಣೆ.

ಪುಟ್ಟಣ್ಣ ಕಣಗಾಲ್ ನಿರ್ದೇಶನದಲ್ಲಿ ರಾಜ್-ಜಮುನಾ ತಾರಾ ಜೋಡಿಯಲ್ಲಿ ತಯಾರಾಗಿದ್ದ ಚಿತ್ರ ‘ಸಾಕ್ಷಾತ್ಕಾರ’, 1971 ರಲ್ಲಿ ಬಿಡುಗಡೆಯಾಗಿತ್ತು. ಆ ಕಾಲದ ಹಿಂದಿಯ ಸುಪ್ರಸಿದ್ಧ ನಟ ಪೃಥ್ವಿರಾಜ್ ಕಪೂರ್ ಅವರು ಪ್ರಮುಖ ಪಾತ್ರದಲ್ಲಿದ್ದರು. ಚಿತ್ರದ ಕಥೆ-ಚಿತ್ರಕಥೆ-ಸಂಭಾಷಣೆ ಹಾಗೂ ಗೀತರಚನೆಗಳೆಲ್ಲ ಪ್ರಭಾಕರ ಶಾಸ್ತ್ರಿ ಅವರದ್ದೇ.

‘ಸಾಕ್ಷಾತ್ಕಾರ’ ಚಿತ್ರ ಬಿಡುಗಡೆಯಾದ 25 ವರ್ಷಗಳ ನಂತರ ಒಮ್ಮೆ ಡಾಕ್ಟರ್ ರಾಜ್ ಕುಮಾರ್ ಅವರು‌ “ಸಾಕ್ಷಾತ್ಕಾರ” ಎಂದರೆ ಅರ್ಥವೇನು ಎಂದು ಮುಗ್ಧವಾಗಿ ಕೇಳಿದ್ದರಂತೆ.
ರಾಜ್ ಅವರ ಕೈಗಳನ್ನು ತಮ್ಮ ಕೈಯೊಳಗೆ ತೆಗೆದುಕೊಂಡು ಕಣಗಾಲ್ ಪ್ರಭಾಕರ ಶಾಸ್ತ್ರಿಗಳು ಹೇಳಿದ್ದು: “ಮುತ್ತುರಾಜಾ, ಸಾಕ್ಷಾತ್ಕಾರ ಅಂದ್ರೆ ನೀನು!’
ಈ ಅನಿರೀಕ್ಷಿತ ಮಾತುಗಳಿಂದ ರಾಜ್ ಕಕ್ಕಾಬಿಕ್ಕಿಯಾದರಂತೆ. ಅದನ್ನು ಗಮನಿಸಿದ ಶಾಸ್ತ್ರಿಗಳು ಹೇಳಿದರಂತೆ: ‘ಕಲೆಯ ಎಲ್ಲಆಯಾಮವೂ ಒಟ್ಟಾಗಿ ಪ್ರಕಟವಾಗುತ್ತದಲ್ಲ;
ಅದೇ ಸಾಕ್ಷಾತ್ಕಾರ.

ಬದುಕು ತನ್ನ ಎಲ್ಲ ಸೌಂದರ್ಯದೊಂದಿಗೆ ಒಬ್ಬನ ಬಾಳು ಬೆಳಗುತ್ತದಲ್ಲ; ಅದು ಸಾಕ್ಷಾತ್ಕಾರ. ಗೌರವವನ್ನೆಲ್ಲ ವಿನಯವಂತಿಕೆ ಎಂಬುದು ಒಬ್ಬ ವ್ಯಕ್ತಿಗೆ ಸಿಗಬಹುದಾದ ನಿನ್ನೊಳಗೆ ಈಗ ದೊರಕಿಸುತ್ತದೆಯಲ್ಲ – ಅದು ಸಾಕ್ಷಾತ್ಕಾರ. ಈ ಎಲ್ಲ ಗುಣಗಳೂ ಕಣಪ್ಪಾ ಮುತ್ತುರಾಜಾ, ಹಾಗಾಗಿ ಸಾಕ್ಷಾತ್ಕಾರ’ ಎಂಬ ಮಾತಿಗೆ ಈಗ ನೀನೇ ಉದಾಹರಣೆ…’ ಎಂದರಂತೆ.

” ಶರಪಂಜರ” ಚಿತ್ರಕ್ಕಾಗಿ ರಚಿಸಿದ
“ಕೊಡಗಿನ ಕಾವೇರಿ ನೀ ಬೆಡಗಿನ ವೈಯಾರಿ
ಕನ್ನಡ ಕುಲನಾರಿ ಕಾವೇರಿ ನೀ ಒಲವಿನ ಸಿಂಗಾರಿ…”

ಹನಿಮೂನಿಗೆಂದು ಮಡಿಕೇರಿಗೆ ಬರುವ ನವದಂಪತಿ ಹಾಡುವ ಹಾಡಿದು. ಸಹಜವಾಗಿಯೇ, ನಾಯಕನಿಗೆ ಮಡದಿಯ ಮೇಲೆ ಅತಿಯಾದ ಮೋಹವಿರುತ್ತದೆ. ಆತ ಅದನ್ನೆಲ್ಲ ಹಾಡಾಗಿಸುತ್ತಾನೆ. ಆದರೆ ನಾಯಕಿ, ಅವನನ್ನು ಹೊಗಳುವ, ಉಬ್ಬಿಸುವ, ಪೂಸಿ ಹೊಡೆವ ಸಾಲುಗಳನ್ನು ಹೇಳುವುದೇ ಇಲ್ಲ!

ಈ ಹಾಡಿನಲ್ಲಿ ನಾಯಕಿ- ‘ಋಷಿಜನ ಜೀವನ ತಪೋನಿಧಿ’ ಎಂದರೆ, ನಾಯಕ ‘ಕಾವೇರಿ, ನೀನೇ ಜೇನಿನ ಜೀವನದಿ’ ಅನ್ನುತ್ತಾನೆ! ನಾಯಕಿ ಮುಂದುವರಿದು- ‘ಗಂಧದ ಸೀಮೆಯ ಸೌಂದರ್ಯ ಲಹರಿ’ ಎಂದರೆ, ಈ ನಾಯಕನೆಂಬ ಮಹರಾಯ- ‘ಕಾವೇರಿ, ನೀ ನವರಸ ವಾಹಿನಿ ಗಿರಿಬಾಲೆ’ ಎನ್ನುತ್ತಾನೆ! ತಕ್ಷಣಕ್ಕೆ ನೋಡಿದರೆ, ಈ ಹಾಡೇಕೆ ಹೀಗಿದೆ? ಅವರಲ್ಲಿರುವ ಕೆಲವು ಸಾಲುಗಳಿಗೆ ಅರ್ಥವೇ ಸಿಗುವುದಿಲ್ಲವಲ್ಲ ಅನಿಸುತ್ತದೆ ನಿಜ. ಆದರೆ, ಹುಶಾರಾಗಿ ಗಮನಿಸಿದರೆ, ಈ ಹಾಡಿನೊಳಗಿರುವ ಎರಡೆರಡು ಅರ್ಥ ಕಂಡು ಖುಷಿಯೂ, ಅಚ್ಚರಿಯೂ ಒಟ್ಟಿಗೇ ಆಗುತ್ತದೆ. ಏಕೆಂದರೆ, ಈ ಹಾಡಿನಲ್ಲಿ ಒಂದು ಸಾಲು ಕಾವೇರಿ ನದಿಯ ಹಿರಿಮೆಯನ್ನು ಸಾರಿದರೆ, ಮತ್ತೊಂದು ಸಾಲು ನಾಯಕಿಯ (ಶರಪಂಜರ ಚಿತ್ರದಲ್ಲಿ ನಾಯಕಿಯ ಹೆಸರೂ ಕಾವೇರಿ!) ಚೆಲುವನ್ನು ವರ್ಣಿಸುತ್ತದೆ!

ಕಾವೇರಿ ನದಿಯ ವರ್ಣನೆಯಲ್ಲಿ ಆಕೆ ಮೈಮರೆತಿದ್ದಾಗಲೇ, ನಾಯಕ ಆಸೆಯಿಂದ ಓಡೋಡಿ ಬಂದು ಆಕೆಯ ಮೇಲೆ ಹಾಡು ಹೇಳಿಬಿಡುತ್ತಾನೆ. ಆ ಮೂಲಕ ಹಾಡಿಗೊಂದು ತಿರುವು ಕೊಡುತ್ತಾನೆ! ಅವಳು ಹಾಡುವ ಸಂದರ್ಭದಲ್ಲಿ ಬೆಳ್ಳಿ ತೆರೆಯ ಮೇಲೆ ಕಾವೇರಿ ನದೀ ಬಯಲು, ಅದು ಧುಮ್ಮಿಕ್ಕಿ ಹರಿಯುವಾಗಿನ ಸೊಗಸು, ತೀಥದ್ಭವದ ಸಂದರ್ಭ, ತಲಕಾವೇರಿಯ ಹಸಿರು ವೈಭವ ತೆರೆದುಕೊಳ್ಳುತ್ತದೆ. ನಾಯಕ ಹಾಡಲು ಆರಂಭಿಸಿದಾಗ ಮಾತ್ರ, ನಾಯಕಿಯ ಬೆಳದಿಂಗಳಂಥ ಸೊಬಗು, ಬಿನ್ನಾಣ, ಅವಳ ಥೈಥೈಥೈ ನೃತ್ಯ, ಜತೆಗಿರುವ ನರ್ತಕಿಯರ ಒನಪು, ವೈಯ್ಯಾರ, ನಾಚಿಕೆ ಕಣ್ತುಂಬುತ್ತದೆ.

ಒಗಟನ್ನೂ ಮೀರಿಸಿದ ಒಗಟಿನಂತಿರುವ ಈ ಹಾಡು ಬರೆದವರು ಕಣಗಾಲ್ ಪ್ರಭಾಕರ ಶಾಸ್ತ್ರಿ. ಇಂಥದೊಂದು ಹಾಡು ಬರೆಯಲು ಅವರಿಗೆ ಪ್ರೇರಣೆ ಏನು? ಈ ಹಾಡಿನ ಹಿಂದಿರುವ ಕಥೆ ಏನು ಎಂಬುದನ್ನು ತಿಳಿಯುವ ಮೊದಲು ಕಣಗಾಲ್ ಪ್ರಭಾಕರ ಶಾಸ್ತ್ರಿಗಳ ವ್ಯಕ್ತಿತ್ವದ ಬಗ್ಗೆ ಒಂದಷ್ಟು ಹೇಳಿಬಿಡಬೇಕು.

ಪ್ರಭಾಕರ ಶಾಸ್ತ್ರಿಗಳು, ನಿರ್ದೇಶಕ ಪುಟ್ಟಣ್ಣ ಕಣಗಾಲರ ಅಣ್ಣ. ಚಿತ್ರರಂಗಕ್ಕೆ ಬರುವುದಕ್ಕೂ ಮುನ್ನ ರಂಗಭೂಮಿಯಲ್ಲಿ ನಾಟಕ, ಗೀತೆರಚನೆಯಲ್ಲಿ ದೊಡ್ಡ ಹೆಸರು ಮಾಡಿದ್ದ ಶಾಸ್ತ್ರಿಗಳು ಬಿ.ಆರ್. ಪಂತುಲು ಅವರ ಬಲಗೈ ಎಂಬಂತಿದ್ದರು. ಆ ದಿನಗಳಲ್ಲೇ ’ಪ್ರಚಂಡ ರಾವಣ’ ಎಂಬ ನಾಟಕ ಬರೆದರು. ಆ ನಾಟಕದಲ್ಲಿ ರಾವಣನ ಪಾತ್ರ ಮಾಡಿದ ಯುವಕನ ಹೆಸರು ಸದಾನಂದ ಸಾಗರ್. ರಾವಣನ ಪಾತ್ರದಲ್ಲಿ ಆತ ಅದೆಷ್ಟು ಪ್ರಚಂಡ ಅಭಿನಯ ನೀಡಿದನೆಂದರೆ, ಆ ಅಬ್ಬರದ ಅಭಿನಯ ಕಂಡು ಬೆರಗಾದ ಪುಟ್ಟಣ್ಣ ಕಣಗಾಲ್, ಆತನನ್ನು ಕರೆದು, ತಮ್ಮ ಸಿನಿಮಾದಲ್ಲಿ ಅವಕಾಶ ನೀಡಿದರು. ರಾವಣನ ಪಾತ್ರದಲ್ಲಿ ಮೆರೆದ ಸದಾನಂದ ಸಾಗರ್ ಬೇರೆ ಯಾರೂ ಅಲ್ಲ, ‘ನಟಭೈರವ’ ಎಂದು ಹೆಸರು ಮಾಡಿದ ವಜ್ರಮುನಿ! ವಜ್ರಮುನಿಯವರಿಗೆ ಪ್ರಭಾಕರ ಶಾಸ್ತ್ರಿಗಳ ಮೇಲೆ ಅದೆಂಥ ಗೌರವವಿತ್ತೆಂದರೆ, ಖಳನಾಯಕನಾಗಿ ಖ್ಯಾತಿಯ ತುತ್ತತುದಿಯಲ್ಲಿ ಇದ್ದಾಗ ಕೂಡ- ‘ನಾನು ಪ್ರಭಾಕರ ಶಾಸ್ತ್ರಿಗಳ ಶಿಷ್ಯ. ಅವರು ನನ್ನ ಮಹಾಗುರು’ ಎಂದು ಭಾವುಕರಾಗಿ ಹೇಳಿಕೊಳ್ಳುತ್ತಿದ್ದರು.

ಮುಂದುವರೆಯುವುದು…..

ಸುನೀಲ್ ಹಳೆಯೂರು

ಆಧಾರ: ವಿವಿಧ ಮೂಲಗಳಿಂದ ಹಾಗು
ಎ ಆರ್ ಮಣಿಕಾಂತ್ ಅವರ ಲೇಖನ

Related post

Leave a Reply

Your email address will not be published. Required fields are marked *